ಸ್ವಾತಂತ್ರ್ಯ ದಿನಾಚರಣೆ ಭಾರತೀಯರ ಪಾಲಿಗೆ ಸಂತೋಷ ಸಂಭ್ರಮದ ದಿನ, ದೇಶ ಪ್ರೇಮ ಪ್ರತಿಯೊಬ್ಬರಲ್ಲೂ ಪುಳಕಿತ ಗೊಳ್ಳುವ ಸುದಿನ, ಎಲ್ಲರೂ ಒಂದಾಗಿ ಆಚರಿಸುವ ಹಬ್ಬ, ಎಲ್ಲೆಡೆ ದೇಶ ಭಕ್ತಿ ಗೀತೆಗಳು, ಜಾಥಾ, ಮೆರವಣಿಗೆ ನೃತ್ಯ ಪ್ರದರ್ಶನ ಸಾಹಿತ್ಯ ,ಸಾಂಸ್ಕೃತಿಕ ಕಲೆ ಬರಹ ಭಾಷಣ ಅನೇಕ ತರಹದ ಚಟುವಟಿಕೆಗಳ ಮೂಲಕ ದೇಶ ಭಕ್ತಿ ಪ್ರಕಟಿಸಲು ವೇದಿಕೆಗಳನ್ನು ಸಜ್ಜುಗೊಳಿಸಿ ಪರಸ್ಪರ ಕುಣಿದು ಕುಪ್ಪಳಿಸಿ ಮಕ್ಕಳು, ಯುವಕರು, ವೃದ್ದರು ಜಾತಿ ಮತ ಧರ್ಮ ಭಾಷೆ ಬೇಧವಿಲ್ಲದೆ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿದು ಸಂತೋಷಕ್ಕೆ ಸಾಕ್ಷಿಯಾಗಿಸುವ ಸುಧಿನ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತ.
ಹಲವು ಧರ್ಮಗಳು, ಜಾತಿಗಳು ಪಂತ, ಪಂಗಡಗಳು ಎಲ್ಲವನ್ನೂ ಬದಿಗೊತ್ತಿ ನಮ್ಮೆಲ್ಲರನ್ನು ಒಂದಾಗಿಸುವ ಭಾರತೀಯರ ಹಬ್ಬ. ಈ ಮಣ್ಣಲ್ಲಿ ಹುಟ್ಟಿ ಬದುಕುವ ನಾವು ಧನ್ಯರು . ನಮ್ಮ ಶ್ವಾಸ ಇರುವವರೆಗೂ ನಾವು ಭಾರತೀಯರು.
ಪರಸ್ಪರ ಸಂತೋಷ ವಿನಿಮಯ ಮಾಡಿಕೊಂಡು ಸ್ವಾತಂತ್ರ್ಯ ದಿನಾಚರಣೆ ಮಾಡುತ್ತೇವೆ ಆದರೆ ಇದು ಕೇವಲ ಸಂತೋಷ ಮಾತ್ರ ಹಂಚಿಕೊಳ್ಳುವ ಸಮಯವಲ್ಲ ನಮ್ಮ ನಾಡಿನ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನರಾದ ದೇಶಕ್ಕಾಗಿ ಹೋರಾಡಿದ ಮಹಾತ್ಮರ ಸ್ಮರಣೆಯೂ ಆಚರಣೆಯ ಭಾಗವಾಗಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಹೇಗೆ ಲಭಿಸಿತು..? ಸ್ವಾತಂತ್ರ್ಯಕ್ಕಾಗಿ ಸಹಿಸಿಕೊಂಡ ತ್ಯಾಗವಾದರೂ ಏನು..? ಹಿನ್ನೆಲೆ ಇತಿಹಾಸ ತಿಳಿದು ಕೊಳ್ಳೂದು ಇಂದಿನ, ಮುಂದಿನ ಪೀಳಿಗೆಗೆ ತಿಳಿಸೂದು ಇವೆಲ್ಲವೂ ಆಚರಣೆಯ ಭಾಗವಾಗಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗಬೇಕಾದರೆ ಹಲವಾರು ಮಹಾತ್ಮರು ಜೀವನ್ಮರಣ ಹೋರಾಟ ನಡೆಸಬೇಕಾಯಿತು, ಕುಟುಂಬ ಆಸ್ತಿ ಸಂಪತ್ತು ಕಳೆದುಕೊಂಡರು ಬ್ರಿಟೀಷರ ಶಿಕ್ಷೆಗೆ ಬಲಿಯಾಗ ಬೇಕಾಯಿತು ಹೀಗೆ ಹಲವಾರು ನಷ್ಟ ಕಷ್ಟ ಕಾರ್ಪಣ್ಯಗಳನ್ನು ಸಹಿಸಿ ಯಾರಿಗೂ ಬಗ್ಗದೆ ಜಗ್ಗದೇ ಕೊನೆಗೂ ಸ್ವಾತಂತ್ರ್ಯ ತಂದು ಕೊಡುವಲ್ಲಿ ಯಶಸ್ವಿಯಾದರು. ಈ ಸಂಗ್ರಾಮದಲ್ಲಿ ಪಾಲ್ಗೊಂಡು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಎಲ್ಲರೂ ಒಂದಾಗಿ ಶ್ರಮವನ್ನು ಪಟ್ಟಿದ್ದಾರೆ. ಜಾತಿ ಧರ್ಮವಿಲ್ಲದೇ ಎಲ್ಲರೂ ಒಗ್ಗಟ್ಟಾಗಿ ನಿಂತು ದೇಶ ಸೇವೆಗೆ ಕಾರಣ ಕರ್ತರಾಗಿದ್ದಾರೆ. ಅಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಬುದ್ಧ, ಸಿಖ್ ಎಲ್ಲಾ ಧರ್ಮದ ನೇತಾರರು ಪಾಲ್ಗೊಂಡಿದ್ದರು. ಆದರೆ ಇತಿಹಾಸದ ಪುಟಗಳಲ್ಲಿ ಕೇವಲ ಕೆಲವೊಂದು ಜಾತಿಯ ಮೇಲೆ ಆಧಾರಿತವಾಗಿ ಇತಿಹಾಸವನ್ನು ತಿರುಚಲಾಗಿದೆ. ಇತಿಹಾಸದಲ್ಲಿ ನೈಜ ಘಟನೆಗಳನ್ನು ಮರೆಮಾಚಲಾಗಿದೆ. ಕೇವಲ ಒಬ್ಬರಿಂದ ಅಥವಾ ಒಂದು ಸಮಾಜ ಒಂದು ಜಾತಿ ಪಂಗಡಗಳಿಂದ ಮಾತ್ರ ಸ್ವಾತಂತ್ರ್ಯ ಲಭಿಸಿಲ್ಲ ಎಲ್ಲಾ ಜನರ ಒಗ್ಗಟ್ಟು ಶ್ರಮ ದೇಶ ಭಕ್ತಿಯೇ ಒಂದು ಶಕ್ತಿಯಾಗಿ ಯಶಸ್ಸು ತಂದುಕೊಟ್ಟಿತು.
ಭಾರತದ ಸ್ವಾತಂತ್ರ್ಯದಲ್ಲಿ ಭಗತ್ ಸಿಂಗ್, ಮಹಾತ್ಮಾ ಗಾಂಧಿ, ಸುಭಾಷ್ ಚಂದ್ರ ಬೋಸ್, ಜವಾಹರಲಾಲ್ ನೆಹರು, ಹೈದರ್ ಅಲಿ ಹಝ್ರತ್ ಟಿಪ್ಪು ಸುಲ್ತಾನ್ ಡಾ. ರಾಜೇಂದ್ರ ಪ್ರಸಾದ್, ಲಾಲಾ ಲಜಪತ್ ರಾಯ್, ಲಾಲ್ ಭಾದೂರ್ ಶಾಸ್ತ್ರಿ ಅಬುಲ್ ಕಲಾಂ ಅಜಾದ್ ಮೊಹಮ್ಮದ್ ಅಲಿ ಜಿನ್ನಾ ಮತ್ತು ಬಾಲಗಂಗಾಧರ ತಿಲಕ್ ಹಾಗೂ ಹಲವಾರು ಮಹಾತ್ಮರು ಈ ಸುಂದರ ದೇಶವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ದೆಹಲಿಯ ಇಂಡಿಯಾ ಗೇಟ್‌ನಲ್ಲಿ 95300 ಸ್ವಾತಂತ್ರ್ಯ ಹೋರಾಟಗಾರರ ಹೆಸರು ಇಂದಿಗೂ ಕಾಣಬಹುದಾಗಿದೆ.
“ನನ್ನ ಜೀವನವೇ ನನ್ನ ಸಂದೇಶ” ಎಂದು ಸಾರಿದ ಮಹಾತ್ಮ ಗಾಂಧಿಯವರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಷ್ಟ್ರೀಯ ನಾಯಕರಲ್ಲಿ ಒಬ್ಬರು. ವಾಸ್ತವವಾಗಿ, ಅವರು ಬ್ರಿಟಿಷ್ ಆಳ್ವಿಕೆಯಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ಯಶಸ್ವಿ ಅಭಿಯಾನವನ್ನು ಮುನ್ನಡೆಸಿದರು. ಗಾಂಧಿ ಕಾನೂನು ವಿದ್ಯಾರ್ಥಿಯಾಗಿದ್ದರು, ಆದರೆ ಅವರು ತಮ್ಮ ವೃತ್ತಿಯನ್ನು ತ್ಯಜಿಸಿ ತಮ್ಮ ರಾಷ್ಟ್ರಕ್ಕಾಗಿ ಹೋರಾಡಲು ನಿರ್ಧರಿಸಿದರು. ಉಪ್ಪಿನ ಸತ್ಯಾಗ್ರಹ ಸೇರಿದಂತೆ ಹಲವಾರು ಚಳವಳಿಗೆ ನೇತೃತ್ವ ಕೊಟ್ಟರು.
ಬ್ರಿಟಿಷರ ವಿರುದ್ಧ ಹೋರಾಡಿದ ಮೈಸೂರಿನ ದೊರೆ ಹೈದರ್ ಅಲಿ ಮತ್ತು ಅವರ ಮಗ ಟಿಪ್ಪು ಸುಲ್ತಾನ್. ಬ್ರಿಟೀಷರ ಗುಂಡಿಗೆ ಬಲಿಯಾದರು, ತಮ್ಮ ಮಕ್ಕಳನ್ನು ಬ್ರಿಟೀಷರ ಮುಂದೆ ದೇಶಕ್ಕಾಗಿ ಒತ್ತೆ ಇಟ್ಟರು. ಬೇಗಂ ಹಜರತ್ ಮಹಲ್ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಅಘೋಷಿತ ನಾಯಕಿಯಾಗಿದ್ದಳು, ಅವರು ಬ್ರಿಟಿಷ್ ದೊರೆ ಸರ್ ಹೆನ್ರಿ ಲಾರೆನ್ಸ್ ಅವರನ್ನು ಹೊಡೆದುರುಳಿಸಿದರು ಮತ್ತು ಬ್ರಿಟಿಷ್ ಸೈನ್ಯವನ್ನು ಸೋಲಿಸಿದರು. ಬ್ರಿಟಿಷ್ ರಾಜ್ ವಿರುದ್ಧ ಪಿತೂರಿ ಮಾಡಿದ್ದಕ್ಕಾಗಿ 27 ನೇ ವಯಸ್ಸಿನಲ್ಲಿ ಅಶ್ಫಾಕುಲ್ಲಾ ಖಾನ್ ಗಲ್ಲಿಗೇರಿಸಲ್ಪಟ್ಟ ಮೊದಲ ವ್ಯಕ್ತಿ. ಅಬುಲ್ ಕಲಾಂ ಆಜಾದ್, ಮೊಹಮ್ಮದ್ ಅಲಿ ಜಿನ್ನಾ, ಬಿಹಾರದ ನವಾಬ್ ಈ ಮೂವರು ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಯೋಜನೆಗಳನ್ನು ರೂಪಿಸಿದರು. ಸುರೈಯಾ ತೈಯಾಬ್ಬಿ ಎಂಬ ಮಹಿಳೆ ಪ್ರಸ್ತುತ ಭಾರತದ ರಾಷ್ಟ್ರೀಯ ಧ್ವಜವನ್ನು ವಿನ್ಯಾಸಗೊಳಿಸಿದವಳು. ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಗೌರವಾರ್ಥವಾಗಿ, ಗಾಂಧೀಜಿ ಹೇಳುತ್ತಾರೆ “ನಾನು 1920 ರಿಂದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರೊಂದಿಗೆ ರಾಷ್ಟ್ರೀಯ ಕೆಲಸದಲ್ಲಿ ಸಹಭಾಗಿತ್ವವನ್ನು ಹೊಂದಿದ್ದೇನೆ. ಅವರ ರಾಷ್ಟ್ರೀಯತೆಯು ಇಸ್ಲಾಂನಲ್ಲಿ ಅವರ ನಂಬಿಕೆಯಿಂದಾಗಿ ದೃಢವಾಗಿದೆ.
ಭಗತ್ ಸಿಂಗ್ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಧ್ವನಿ ಎತ್ತಲು ಭಾರತ್ ಮಾತಾ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು ಅಲ್ಲದೇ 23 ನೇ ವಯಸ್ಸಿನಲ್ಲಿ ತನ್ನ ಪ್ರಾಣವನ್ನೇ ಬಲಿ ನೀಡಿದರು. “ಶಹೀದ್ ಭಗತ್ ಸಿಂಗ್” ಎಂದು ಕರೆಯಲ್ಪಡುವ ಮೂಲಕ ಹೆಸರು ವಾಸಿಯಾದರು.
“ಆಜಾದ್ ಹಿಂದ್ ಫೌಜ್” ಸಂಸ್ಥೆಯನ್ನು ಸ್ಥಾಪಿಸಿ “ತುಮ್ ಮುಜೆ ಖೂನ್ ದೋ, ಮೈನ್ ತುಮ್ಮೆ ಆಜಾದಿ ಡುಂಗಾ”. ಎಂಬ ಘೋಷಣೆಯನ್ನು ಬ್ರಿಟೀಷರ ವಿರುದ್ಧ ಕೂಗಿದ ಸುಭಾಷ್ ಚಂದ್ರ ಬೋಸ್ ಅಸಾಧಾರಣ ನಾಯಕತ್ವದ ಗುಣಗಳನ್ನು ಹೊಂದಿದರು ಉತ್ತಮ ವಾಗ್ಮಿಯೂ ಆಗಿದ್ದರು.
“ಭಾರತದ ಕೋಗಿಲೆ” ಎಂದು ಖ್ಯಾತಿ ಪಡೆದ ಸರೋಜಿನಿ ನಾಯ್ಡು ಭಾರತ ಸ್ವಾತಂತ್ರ್ಯ ಹೋರಾಟಗಾರತಿ ಮತ್ತು ಕವಯಿತ್ರಿಯಾಗಿದ್ದರು. ಅವರು ಭಾರತೀಯ ಸ್ವಾತಂತ್ರ್ಯ ಹೋರಾಟದ ಅಪ್ರತಿಮ ದಿಗ್ಗಜರಾದ ಗೋಪಾಲ ಕೃಷ್ಣ ಗೋಖಲೆ ಮತ್ತು ಗಾಂಧಿಯವರಿಂದ ಭಾರತೀಯ ರಾಜಕೀಯ ಕ್ಷೇತ್ರಕ್ಕೆ ದೀಕ್ಷೆ ಪಡೆದಿದ್ದರು. ದಂಡಿಗೆ ಉಪ್ಪಿನ ಮೆರವಣಿಗೆಯ ನಂತರ ಗಾಂಧಿಯನ್ನು ಬಂಧಿಸಿದಾಗ, ಅವರು ಇತರ ನಾಯಕರೊಂದಿಗೆ ಧರಸನಾ ಸತ್ಯಾಗ್ರಹವನ್ನು ನಡೆಸಿದರು.
ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಇವರು ಮಹಾತ್ಮ ಗಾಂಧಿಯವರ ಮಾರ್ಗದರ್ಶನದಲ್ಲಿ ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದರು ಇದರಿಂದಾಗಿ ಹಲವಾರು ಬಾರಿ ಜೈಲಿಗೆ ಹೋಗಬೇಕಾಯಿತು ಜೈಲಿನಲ್ಲಿ ಇದ್ದು ಕೊಂಡೆ ” ದಿ ಡಿಸ್ಕವರಿ ಆಫ್ ಇಂಡಿಯಾ” ಎಂಬ ಪುಸ್ತಕವನ್ನು ಬರೆದಿದ್ದಾರೆ.
ಸ್ವಾತಂತ್ರ್ಯ ಭಾರತದ ಮೊದಲ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್. ವಕೀಲರು ಪ್ರಾಧ್ಯಾಪಕ ಮತ್ತು ವಿದ್ವಾಂಸರಾದ ಇವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಪ್ರಮುಖ ವ್ಯಕ್ತಿಯಾಗಿದ್ದರು.
ಸ್ವಾತಂತ್ರ್ಯ ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ. ಇವರನ್ನು ” ಶಾಂತಿಯ ಮನುಷ್ಯ ” ಎಂದು ಕರೆಯಲಾಗುತ್ತದೆ. “ಜೈ ಜವಾನ್ ಜೈ ಕಿಸಾನ್” ಎಂಬ ಪದವನ್ನು ಸ್ವಾವಲಂಬನೆ ಮತ್ತು ಸ್ವಾತಂತ್ರ್ಯದ ಮೂಲಾಧಾರಗಳ ಮಹತ್ವವನ್ನು ಮಹತ್ವವನ್ನು ಒತ್ತಿಹೇಳುವ ಮೂಲಕ ಸುಪ್ರಸಿದ್ಧರಾದರು. ಮಹಾತ್ಮ ಗಾಂಧೀಜಿಯವರ ಭಾಷಣ ಮಾರ್ಕ್ಸ್ ರಸೆಲ್ ಮತ್ತು ಲೆನಿನ್ ಇವರ ಬರಹಗಳು ಶಾಸ್ತ್ರಿಯವರನ್ನು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲು ಪ್ರೇರಣೆ ನೀಡಿತು.
ದೇಶದ ಸಂವಿಧಾನವನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಡಾ. ಬಿ,ಆರ್ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎಂದೂ ಖ್ಯಾತರಾದರೂ. ಅಸ್ಪೃಶ್ಯತೆಯನ್ನು ತಡೆದು ದೇಶ ವಾಸಿಗಳಲ್ಲಿ ಸಮಾನತೆಯನ್ನು ಸ್ಥಾಪಿಸಲು ತುಂಬಾ ಶ್ರಮ ಪಟ್ಟರು. ಮೊದಲ ಕಾನೂನು ಮಂತ್ರಿಯಾಗಿ ಭಾರತಕ್ಕೆ ಬಲವಾದ ಕಾನೂನನ್ನು ಕೊಟ್ಟರು. ಅಂಬೇಡ್ಕರ್ ರವರ ಅಭಿಪ್ರಾಯದಂತೆ ರಿಸರ್ವ್ ಬ್ಯಾಂಕ್ ಜಾರಿಗೆ ತರಲಾಯಿತು.
ಬ್ರಿಟಿಷರ ವಿರುದ್ಧ ಬಂಡಾಯವೆದ್ದ ಮೊದಲ ವೀರ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು ಕಿತ್ತೂರು ರಾಣಿ ಚೆನ್ನಮ್ಮ. ಈಸ್ಟ್ ಇಂಡಿಯಾ ಕಂಪನಿಯನ್ನು ಸೋಲಿಸಲು ಮತ್ತು ಕಿತ್ತೂರು ಬ್ರಿಟೀಷರ ಆಳ್ವಿಕೆಯನ್ನು ಸೋಲಿಸಲು ಬಹಳ ಹೋರಾಟವನ್ನು ನಡೆಸಬೇಕಾಯಿತು.
ವೀರ ಮಹಿಳಾ ಯೋಧ ಒನಕೆ ಓಬವ್ವ, ಚಿತ್ರದುರ್ಗ ಸಾಮ್ರಾಜ್ಯದ ಮೇಲೆ ಬ್ರಿಟಿಷ್ ಸೈನ್ಯ ದಾಳಿ ಮಾಡಿದಾಗ ಏಕಾಂಗಿಯಾಗಿ ಹೋರಾಡಿ ತನ್ನ ಶೌರ್ಯವನ್ನು ಜಗತ್ತಿಗೆ ತೋರಿಸಿದಳು.
ಕಿತ್ತೂರು ರಾಣಿ ಚೆನ್ನಮ್ಮ ಇವರ ಸೈನ್ಯದ ಮುಖ್ಯಸ್ಥನಾಗಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಯುದ್ಧ ಸಾರಿದ ಬ್ರಭಲ ನಾಯಕನಾಗಿದ್ದಾನೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ. ತನ್ನ 33 ನೇ ವರ್ಷದಲ್ಲಿ ಬ್ರಿಟೀಷರು ಗಲ್ಲಿಗೇರಿಸಿದರು, ದೇಶಕ್ಕಾಗಿ ಪ್ರಾಣ ಒತ್ತೆ ಇಟ್ಟರು.
ಕೇಶವ ಗಂಗಾಧರ ತಿಲಕ್ ಎಂಬ ಬಾಲಗಂಗಾಧರ ತಿಲಕ್ ಇವರನ್ನು ಬ್ರಿಟೀಷ್ ವಸಾಹತುಶಾಹಿ ಅಧಿಕಾರಿಗಳು ” ಭಾರತೀಯ ಅಶಾಂತೀಯ ಪಿತಾಮಹ ಎಂದು ಕರೆದರು ” ಬ್ರಿಟಿಷ್ ಉತ್ಪನ್ನಗಳನ್ನು ಬಹಿಷ್ಕರಿಸಿ ಅವರನ್ನು ಓಡಿಸಲು ಸಶಸ್ತ್ರ ದಂಗೆಯನ್ನು ಆರಂಬಿಸಿದರು. ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಅದನ್ನು ನಾನು ಪಡೆದೇ ತೀರುತ್ತೇನೆ ಎಂದು ಬ್ರಿಟೀಷರಲ್ಲಿ ನಡುಕ ಹುಟ್ಟಿಸಿದರು.
ಸತ್ಯಾಗ್ರಹ ಚಳುವಳಿಯಲ್ಲಿ ಸ್ವಯಂಸೇವಕರಾಗಿ ಮುಂಚೂಣಿಯಲ್ಲಿದ್ದ ವಲ್ಲಭಭಾಯ್ ಪಟೇಲ್ ಅವರನ್ನು ಜನರು ಸರ್ದಾರ್ ನಾಯಕ ಎಂದು ಕರೆಯಲು ಶುರು ಮಾಡಿದರು. ಗಾಂಧಿಯವರನ್ನು ಬೆಂಬಲಿಸಿ ಕ್ವಿಟ್ ಇಂಡಿಯಾ ಮತ್ತು ಹಲವು ಚಳುವಳಿಯಲ್ಲಿ ಬಾಗವಹಿಸಿದರು.
ಮಂಗಳೂರಿನ ಕಾರ್ನಾಡ್ ಸದಾಶಿವ ರಾವ್ ಅವರು ವಿಧವೆಯರು ಮತ್ತು ಬಡ ಮಹಿಳೆಯರಿಗೆ ಸಹಾಯ ಮಾಡಲು ಮಹಿಳಾ ಸಭಾವನ್ನು ಸ್ಥಾಪಿಸಿದರು. ಅವರು ಮಹಾತ್ಮ ಗಾಂಧಿಯವರ ಸತ್ಯಾಗ್ರಹ ಚಳವಳಿಗೆ ಸ್ವಯಂಸೇವಕರಾಗಿ ಹೋದ ಕರ್ನಾಟಕದ ಮೊದಲಿಗರು. ಮಂಗಳೂರಿನ ಮಹಾನ್ ಮಹಿಳಾ ಹೋರಾಟಗಾರ್ತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.ಹಿಂದಿನ ಭಯಾನಕ ಹೋರಾಟದ ಫಲವೇ ಇಂದಿನ ಸ್ವಾತಂತ್ರ್ಯ
ಹೀಗೆ ಜಾತಿ ಧರ್ಮವಿಲ್ಲದೇ ಲಕ್ಷಾಂತರ ಮಹನೀಯರು ಸ್ವಾತಂತ್ರ್ಯ ಚಳುವಳಿಯಲ್ಲಿ ಜೀವನ್ಮರಣ ಹೋರಾಟ ನಡೆಸಿದರು ಹಲವಾರು ಮಹನೀಯರ ಪರಿಚಯ ಅವರು ನಡೆಸಿದ ಹೋರಾಟಗಳು ಜೀವನ ಚರಿತ್ರೆಗಳು ಐತಿಹಾಸಿಕ ಘಟನೆಗಳು ಎಲ್ಲವೂ ಇತಿಹಾಸದ ಪುಟಗಳಲ್ಲಿ ಉಲ್ಲೇಖಿಸಲಾಗಿದೆ ಎಲ್ಲವನ್ನೂ ತಿಳಿದು ಮುಂದಿನ ಪೀಳಿಗೆಗೆ ನೈಜ ಸತ್ಯಾಂಶವನ್ನು ತಿಳಿಸಲು ನಾವು ಮುಂದಾಗಬೇಕು. ಕೊನೆಗೂ 200 ವರ್ಷಗಳ ಬ್ರಿಟಿಷ್ ಆಳ್ವಿಕೆಯೂ ಕೊನೆಗೊಂಡು 15 ಆಗಸ್ಟ್ 1947 ರಂದು ಭಾರತ ದೇಶವು ತನ್ನ ಸ್ವಾತಂತ್ರ್ಯವನ್ನು ಪಡೆದುಕೊಂಡಿತು. ಸ್ವಾತಂತ್ರವನ್ನು ಉಳಿಸಿಕೊಂಡು ಹೋಗುವುದು ಹಾಗೂ ದೇಶವನ್ನು ಶಕ್ತಿಯುತಗೊಳಿಸುವುದು ನಮ್ಮ ಕರ್ತವ್ಯ ಆಗಿದೆ .
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ