November 25, 2024

Newsnap Kannada

The World at your finger tips!

nagamangala a

ನಾಗಮಂಗಲದಲ್ಲಿ ರಸ್ತೆ ಅಪಘಾತ : ನವ ದಂಪತಿಗಳೂ ಸೇರಿ ಒಂದೇ ಕುಟುಂಬದ ಮೂವರ ಸಾವು

Spread the love

ಕಾರು ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ನವ ದಂಪತಿಗಳೂ ಸೇರಿ ಒಂದೇ ಕುಟುಂಬದ ಮೂರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ನಾಗಮಂಗಲ ತಾಲೂಕಿನ ಕೆಂಪನ ಕೊಪ್ಪಲು ಗೇಟ್ ಬಳಿ ಭಾನುವಾರ ಸಂಭವಿಸಿದೆ.

ಸೋಮವಾರಪೇಟೆ ಮೂಲದ ಮೈಸೂರು ವಾಸಿಗಳಾದ ಕಾರು ಚಾಲಕ ಸುದೀಪ್ (35 )ಪತ್ನಿ ಶ್ರೀಜಾ (28 )ತಾಯಿ ತಂಗಮ್ಮ( 55 )ಮೃತ ದುರ್ದೈವಿಗಳು.

ಕಾರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 15ವರ್ಷದ ಶ್ರೇಯ ಬಾಲಕಿಯನ್ನು ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೊಸ ವರ್ಷದ ಮೊದಲ ಅಮಾವಾಸ್ಯೆ ಪ್ರಯುಕ್ತ ಒಂದೇ ಕುಟುಂಬದ ನಾಲ್ವರು ತಮ್ಮ ಸ್ವಿಫ್ಟ್ ಕಾರಿನಲ್ಲಿ ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೇ ತೆರಳಿ ಪೂಜೆ ಮುಗಿಸಿಕೊಂಡು ಮೈಸೂರಿಗೆ ಹಿಂದಿರುಗುತ್ತಿದ್ದ ವೇಳೆ ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ಮೈಸೂರಿನಿಂದ ನಾಗಮಂಗಲ ಕಡೆಗೆ ಬರುತ್ತಿದ್ದ ಪ್ರವಾಸಿ ಬಸ್ ಗೆ ಮೈಸೂರು ರಸ್ತೆಯ ಕೆಂಪನ ಕೊಪ್ಪಲು ಗೇಟ್ ಬಳಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ ಘಟನೆ ಸಂಭವಿಸುತ್ತಿದ್ದಂತೆ ದೌಡಾಯಿಸಿ ಬಂದ ಸ್ಥಳೀಯರು ನೋಡುವಷ್ಟರಲ್ಲಿ ಕಾರು ಚಾಲಕ ಸುದೀಪ್ ಸೇರಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿ 15 ವರ್ಷದ ಶ್ರೇಯ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು.

ಮೃತ ಸುದೀಪ್ ಹಾಗೂ ಶ್ರೀಜಾಗೆ ಇತ್ತೀಚೆಗಷ್ಟೇ ಮದುವೆಯಾಗಿತ್ತು

ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕಾಗಮಿಸಿದ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಸತೀಶ್ ಮತ್ತು ಸಿಬ್ಬಂದಿಗಳು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಶ್ರೀಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ಮತ್ತು ಘಟನೆಯಲ್ಲಿ ಗಾಯಗೊಂಡಿದ್ದ ಬಸ್ ಚಾಲಕ ಹಾಗೂ ಬಸ್ ನಲ್ಲಿದ್ದ ನಾಲ್ವರು ಗಾಯಾಳುಗಳನ್ನು ನಾಗಮಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂವರ ಮೃತದೇಹಗಳನ್ನು ನಾಗಮಂಗಲ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದ ಬಳಿಕ ಅಪಘಾತಕ್ಕೊಳಗಾಗಿ ಜಖಂ ಆಗಿದ್ದ ಬಸ್ ಹಾಗೂ ಕಾರನ್ನು ವಶಕ್ಕೆ ಪಡೆದು ಠಾಣೆಗೆ ಸಾಗಿಸಿದರು.

ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ನಾಗಮಂಗಲ ಡಿವೈಎಸ್ಪಿ ನವೀನ್ಕುಮಾರ್ ಪರಿಶೀಲನೆ ನಡೆಸಿದರು

ಘಟನೆ ಹಿನ್ನೆಲೆಯಲ್ಲಿ ಹೆದ್ದಾರಿಯ ವಾಹನ ಸಂಚಾರದಲ್ಲಿ ಕೆಲಕಾಲ ಅಸ್ತವ್ಯಸ್ತ ಉಂಟಾಗಿತ್ತು ಈ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Copyright © All rights reserved Newsnap | Newsever by AF themes.
error: Content is protected !!