ಮಹಿಳೆ ಜೊತೆ ಅಕ್ರಮ ಸಂಬಂಧ, ಕೊಲೆಯ ಪ್ರಕರಣವೇ ನಿವೃತ್ತ ಡಿವೈಎಸ್ಪಿ ಆತ್ಮಹತ್ಯೆಗೆ ಪ್ರೇರಣೆ?

Team Newsnap
2 Min Read

ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿ ಕೊಂಡ ನಿವೃತ್ತ ಡಿವೈಎಸ್ಪಿ ಹನುಮಂತಪ್ಪ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ನಿವೃತ್ತ ಡಿವೈಎಸ್ಪಿ ಹನುಮಂತಪ್ಪನವರ ಆತ್ಮಹತ್ಯೆ ಹಿಂದೆ ಮಹಿಳೆಯ ಜೊತೆಯಲ್ಲಿ ಅಕ್ರಮ ಸಂಬಂಧ ಇಟ್ಟು ಕೊಂಡಿದ್ದರು ಹಾಗೂ ಆಕೆಯನ್ನು ಕೊಲೆ ಮಾಡಿರುವುದರಲ್ಲೂ ಕೈವಾಡ ಇರುವ ಶಂಕೆ ಇದೆ.

ಮಂಡ್ಯ ಎಸ್ಪಿ ಕೆ ಪರಶುರಾಮ್, ನ್ಯೂಸ್ ಸ್ನ್ಯಾಪ್ ಗೆ ಪ್ರಕರಣ ಕುರಿತಂತೆ ತನಿಖೆ ನಡೆಯುತ್ತಿರುವ ಬಗ್ಗೆ ಖಚಿತ ಪಡಿಸಿದರು.

ಶವ ಪರೀಕ್ಷಾ ವರದಿಯಲ್ಲಿ ಕೊಲೆ ಸ್ಪಷ್ಟನೆ :

ಮಹಿಳೆಯೊಬ್ಬರ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗಿತ್ತು. ಆ ವೇಳೆ ಶಂಕೆಯಿಂದ ಹನುಮಂತಪ್ಪ ನನ್ನು ವಿಚಾರಣೆ ಮಾಡಿದಾಗ ನಿರ್ದಿಷ್ಟವಾಗಿ ಏನನ್ನೂ ಹೇಳಿರಲಿಲ್ಲ ಎನ್ನಲಾಗಿದೆ.‌

ಆದರೆ ಶವ ಪರೀಕ್ಷಾ ವರದಿಯಲ್ಲಿ ಸ್ಪಷ್ಟವಾಗಿ ಮಹಿಳೆಯನ್ನು ಉಸಿರು ಕಟ್ಟಿಸಿ ಸಾಯಿಸಲಾಗಿದೆ ಎಂದು ಹೇಳಲಾಗಿತ್ತು. ಈ ಮಾಹಿತಿ ಆಧರಿಸಿ ಮತ್ತೆ ನಿವೃತ್ತ ಡಿವೈಎಸ್ಪಿ ಗೆ ನೋಟಿಸ್ ಜಾರಿ ಮಾಡಲಾಗಿತ್ತು. ಅಲ್ಲದೆ ತನಿಖಾ ಅಧಿಕಾರಿಗಳು ಕೂಡ ಅವರನ್ನು ಹುಡುಕಿಕೊಂಡು ಹೋದಾಗ ಸಿಕ್ಕಿರಲಿಲ್ಲ ಎಂದು ಹೇಳಲಾಗಿದೆ.

ಯಾರು ಆ ಮಹಿಳೆ ?

ಮೈಸೂರಿನ ಎನ್ ಆರ್ ಮೊಹಲ್ಲಾ ವಿಭಾಗದ ಎಸಿಪಿ ಆಗಿ ಹನುಮಂತಪ್ಪ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಅದೇ ವಿಭಾಗದ ಕಚೇರಿಯಲ್ಲಿ ಸರಸ್ವತಿ ಎಂಬಾಕೆ ಡಿ ಗ್ರೂಪ್ ನೌಕರಳಾಗಿ ಕೆಲಸ ಮಾಡುತ್ತಿದ್ದಳು.

ಈ ವೇಳೆ ಹನುಮಂತಪ್ಪ ಹಾಗೂ ಸರಸ್ವತಿ ನಡುವೆ ಸ್ನೇಹ, ಸಂಬಂಧ ಆಳವಾಗಿ ಬೇರೂರಿದೆ.ಹನುಮಂತಪ್ಪ ನಿವೃತ್ತಿಯಾದ ನಂತರವೂ ಬೆಂಗಳೂರಿನಲ್ಲಿದ್ದರೂ ಆಗಿಂದಾಗ್ಗೆ ಮೈಸೂರಿಗೆ ಬಂದು ಸರಸ್ವತಿಯೊಡನೆ ವಾಸ ಮಾಡುತ್ತಿದ್ದರೆಂದು ಹೇಳಲಾಗಿದೆ.

ಅಗಸ್ಟ್ .27ರಂದು ಮೈಸೂರಿಗೆ ಆಗಮಿಸಿದ್ದಾಗ ಇಬ್ಬರು ಕಾರಿನಲ್ಲಿ ಚಾಮುಂಡಿಬೆಟ್ಟ ಸೇರಿದಂತೆ ಇತರ ಪ್ರವಾಸಿ ತಾಣ ಸುತ್ತಾಡಿದ್ದಾರೆ.

ಈ ನಡುವೆ ಸರಸ್ವತಿ ಹೆಸರಿನಲ್ಲಿ ನಿವೃತ್ತ ಡಿವೈಎಸ್ಪಿ ಹನುಮಂತಪ್ಪ ಒಂದಷ್ಟು ಬೇನಾಮಿ ಆಸ್ತಿ ಮಾಡಿದ್ದರು ಎಂದು ಹೇಳಲಾಗಿದೆ. ಈ ವಿಚಾರದಲ್ಲೂ ತನಿಖೆ ನಡೆಯುತ್ತಿದೆ. ಹೀಗಾಗಿ ಪ್ರವಾಸ ವೇಳೆಯಲ್ಲಿ ಯಾವುದೋ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಸಾಂದರ್ಭಿಕ ಸಾಕ್ಷಿಗಳು ಹೇಳಿವೆ.
ಈ ಗಲಾಟೆ ತಾರಕಕ್ಕೇರಿ ಸರಸ್ವತಿ ಯನ್ನು ಕಾರಿನಲ್ಲೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆಂದು ತಿಳಿದು ಬಂದಿದೆ.

ಅದೇ ವೇಳೆ ಮಳವಳ್ಳಿ ತಾಲೂಕಿನ ಶಿವನಸಮುದ್ರ ಸಮೀಪ ಅ.28ರಂದು ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು.

ಪ್ರಕರಣ ಬೇಧಿಸಿದ ಬೆಳಕವಾಡಿ ಪೊಲೀಸರಿಗೆ ಹನುಮಂತಪ್ಪ ಮೇಲೆ ಅನುಮಾನ ಬಂದಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ ನಂತರ ನಿವೃತ್ತ ಅಧಿಕಾರಿ ಬೆದರಿ ಹೋಗಿದ್ದರು. ಮೊದಲ ಬಾರಿ ವಿಚಾರಣೆಯ ವೇಳೆ ತಪ್ಪು ಮಾಹಿತಿ ನೀಡಿ ಬಚಾವ್ ಆಗಿದ್ದರು. ನಂತರ ಸಾಕ್ಷಗಳು ಸಿಕ್ಕ ಮೇಲೆ ಮತ್ತೆ ವಿಚಾರಣೆಗೆ ಕರೆದಾಗ ಮಾನಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಹೇಳಲಾಗುತ್ತಿದೆ.

ಸರಸ್ವತಿ ವಿಷಯದಲ್ಲಿ ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತದೆ. ಹನುಮಂತಪ್ಪ ಅವರ ಆಸ್ತಿ ಹಾಗೂ ವೈಯಕ್ತಿಕ ವಿವರಗಳನ್ನು ಕೂಡ ಪರಿಶೀಲನೆ ಮಾಡಲಾಗುತ್ತದೆ. ಆದರೂ ನಿವೃತ್ತ ಡಿವೈಎಸ್ಪಿ ಆತ್ಮಹತ್ಯೆ ಮಾಡಿಕೊಂಡಿದ್ದು ಏಕೆ ಮತ್ತು ಸರಸ್ವತಿ ಕೊಲೆ ಹಿಂದಿನ ರಹಸ್ಯ ವನ್ನು ತನಿಖೆ ಮಾಡಲಾಗುತ್ತಿದೆ.

Share This Article
Leave a comment