ಪುನರ್ವಿವಾಹ

Team Newsnap
3 Min Read

ಮದುವೆ…ಮತ್ತೆ…!?

WhatsApp Image 2023 07 22 at 12.21.39 PM
ಭಾರ್ಗವಿ ಜೋಶಿ

ಪಾರ್ವತಿ…ಕಿಟಕಿ ಇಂದ ಆಚೆ ನೋಡುತ್ತಾ ನಿಂತಿದ್ದಾಳೆ… ಕಣ್ಣಳತೆ ದೂರವೆಲ್ಲ ಕಾರ್ಗತ್ತಲು. ಕತ್ತಲನ್ನು ದಿಟ್ಟಿಸುತ್ತಿದ್ದ ಅವಳಿಗೆ ಎಲ್ಲೆಡೆ ಕತ್ತಲೆ ಆವರಿಸಿದಂತೆ ಭಾಸವಾಗುತ್ತಿದೆ.. ಕಣ್ಣು ಕೆಂಪಗಾಗಿದೆ, ಗಂಟಲು ಬಿಗಿದಿದೆ ಆದರೆ ಅಳು ಬರುತ್ತಿಲ್ಲ ಅಥವಾ ಅಳಲು ಆಗುತ್ತಿಲ್ಲ…

ಗೊತ್ತಿಲ್ಲ
ಉತ್ತರ ಅವಳಿಗೆ ಗೊತ್ತಿಲ್ಲ..
ಅಳು ಬಂದರು ಯಾವುದಕ್ಕಾಗಿ ಅಳಬೇಕು? ಯಾರಿಗಾಗಿ ಅಳಬೇಕು? ತನ್ನನ್ನೇ ತಾನು ಪ್ರಶ್ನಿಸಿಕೊಳ್ಳುತ್ತಿದ್ದಾಳೆ.
ಸುಮಾರು ಹತ್ತು -ಹನ್ನೆರೆಡು ವರ್ಷಗಳೇ ಕಳೆದವು ಅವರು ನನ್ನ ಬದುಕಿನಿಂದ ದೂರ ಹೋಗಿ. ಹೇಳಿಕೊಳ್ಳಲು ಹೆಸರು ಇಲ್ಲದಷ್ಟು ದೂರ ಬಂದು ಬಿಟ್ಟಿರುವೆ ನಾನು ಆ ನರಕದಿಂದ. ಆದರೂ ಸತ್ಯ ಅವರ ಕೈಇಂದ ತಾಳಿ ಕಟ್ಟಿಸಿಕೊಂಡಿದ್ದು. ಜೊತೆಯಾಗಿ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದದ್ದು. ಬದುಕಿನ ಅದೆಷ್ಟೋ ಕನಸು ಕಂಡದ್ದು.
ಆದರೆ ಕಂಡ ಕನಸುಗಳು ಕಮರಿದ್ದು ಕೆಲವೇ ವರ್ಷಗಳಲ್ಲಿ. ಸಾಲು ಸಾಲಾಗಿ ಮೂರು ಹೆಣ್ಣುಮಕ್ಕಳನ್ನು ಹೆತ್ತ ನನಗೆ ಆ ಮನೆ ಅಕ್ಷರಸಹ ನರಕವೇ ಆಯ್ತು.

ಇನ್ನು ಜಗತ್ತನ್ನೇ ಕಾಣದ ನನ್ನ ಮಕ್ಕಳಿಗಂತೂ ಅದ್ಯಾವ ತಪ್ಪಿಗೆ ಶಿಕ್ಷೆಯೋ ಗೊತ್ತಿಲ್ಲ. ಅಮ್ಮ ಹಸಿವು ಅಮ್ಮ ಹಸಿವು ಎಂದು ನನ್ನ ಮಕ್ಕಳು ಅಳುವಾಗ ಅವುಗಳಿಗೆ ಒಂದು ತುತ್ತು ಅನ್ನ ಕೊಡಲಾಗದ ಕರುಣಾಜನಿಕ ಸ್ಥಿತಿ ಯಾವ ತಾಯಿಗೂ ಬೇಡ. ಆ ಸ್ಥಿತಿಗೆ ಕಾರಣ ಆದದ್ದು ಅವರೇ.. ನನಗೆ ತಾಳಿ ಕಟ್ಟಿದ ಮಹಾಶಯ. ಮನುಷ್ಯತ್ವವನ್ನೇ ಮೀರಿದ ರಾಕ್ಷಸ.
ಹಸಿವು, ಮಕ್ಕಳ ಕಣ್ಣೀರು ಸಹಿಸದೆ ತಿರುಗಿ ಮಾತನಾಡಿದ ದಿನ ಅವನು ಕೊಟ್ಟ ಏಟಿಗೆ ಕಣ್ಣಿನ ನರಕ್ಕೆ ಬಿದ್ದ ಏಟು ಇಂದಿಗೂ ಒಂದು ಕಣ್ಣಿನ ಶಕ್ತಿ ಕುಂದಿದೆ.
ಸಹಿಸಿದೆ ಅದೆಷ್ಟೋ ವರ್ಷಗಳು, ಸಹಿಸಲೇ ಬೇಕಲ್ಲವೇ ಯಾಕೆಂದರೆ ನಾನೊಂದು ಹೆಣ್ಣು. ಹೆಣ್ಣನ್ನು ಭೂತಾಯಿ ಗೆ ಹೋಲಿಸಿ ನೋವನ್ನೆಲ್ಲ ಸಹಿಸಲೇ ಬೇಕಾದ ಅನಿವಾರ್ಯತೆ ಸೃಷ್ಟಿಸಿಬಿಟ್ಟಿದೆ ಈ ಸಮಾಜ.

ಆದರೆ ಆ ಭೂಮಿ ತಾಯಿಗೂ ಸಹನೆಗೆ ಮಿತಿ ಇದೆ. ಅವಳು ಸಹನೆ ಮೀರಿದಾಗ ಸ್ಫೋಟಿಸಿಬಿಡುತ್ತಾಳೆ. ಅವಳು ಹೊಮ್ಮಿಸುವ ಜ್ವಾಲಾಮುಖಿಯ ಮುಂದೆ ಯಾರಾದರೂ ನಿಲ್ಲಲು ಸಾಧ್ಯವೇ?

ಹೌದು ಅದೊಂದು ದಿನ ಮೀರಿ ಬಿಟ್ಟಿತ್ತು ನನ್ನ ತಾಳ್ಮೆ, ನನ್ನ ಚಿಕ್ಕ ಮಗಳು ಹಸಿವು ಎಂದು ಅಳುತ್ತ ರಂಜಾನ್ ಹಬ್ಬಕ್ಕೆ ಬೀದಿ ಬದಿ ನೀಡುತ್ತಿದ್ದ ಸುರಕುರ್ಮ ಕ್ಕೆ ಕೈ ಚಾಚಿ ಬೇಡಿ ತಿಂದಾಗ.
ಮೀರಿ ಬಿಟ್ಟಿತ್ತು ನನ್ನ ಸಹನೆ ನನ್ನ ಹಿರಿ ಮಗಳು ಮೈನೆರೆತು ದೊಡ್ಡವಳಾಗಿ ತನ್ನ ಮಾನ ಮುಚ್ಚಿಕೊಳ್ಳಲು ತುಂಡು ಬಟ್ಟೆಗಾಗಿ ತಡಕಾಡುತ್ತಿರುವಾಗ.
ಮೀರಿ ಬಿಟ್ಟಿತ್ತು ನನ್ನೆಲ್ಲ ಸಹಿಸುವ ಶಕ್ತಿ ಎರೆಡನೆ ಮಗಳು ಜ್ವರಕ್ಕೆ ಔಷಧಿ ಸಿಗದೇ ಸಾವು ಬದುಕಿನ ಮಧ್ಯ ಹೊರಟ ನಡೆಸಿದಾಗ.

ಅಂದೇ ನಿರ್ಧರಿಸಿ ದಾಟಿದ್ದೆ ನಾನು ಆ ನರಕದ ಬಾಗಿಲ ಹೊತ್ಸಿಲ…
ಬದುಕು ಕಟ್ಟಿಕೊಳ್ಳಲು…
ಕತ್ತಲ್ಲಿದ್ದ ತಾಳಿ ಕಿತ್ತು ಎಸೆದು…

ಮನೆ ಹೊತ್ಸಿಲು ದಾಟಿದ ಹೆಣ್ಣು ಹೆಜ್ಜೆ ತಪ್ಪುವಳು ಎಂದು ಜರಿವ ಜನರ ಮಧ್ಯ ನನ್ನನ್ನು ರಕ್ಷಿಸಿದ್ದು ಈ ಕೈ.
ಪ್ರೀತಿ ಚಾಚಿತ್ತು..
ದೇವರು ನನಗಾಗಿಯೇ ಸೃಷ್ಟಿಸಿದ್ದ ಈ ಮನುಷ್ಯನನ್ನು ಎಂದು ಒಮ್ಮೆ ನನಗೆ ಅನಿಸುವಷ್ಟು ಪ್ರೀತಿಸಿದರು ವಿಶ್ವಾಸ ನನ್ನನ್ನು.
ನನ್ನೆಲ್ಲ ನ್ಯೂನ್ಯತೆ, ಮೂವರು ಹೆಣ್ಣು ಮಕ್ಕಳ ಸಹಿತ ನನ್ನನ್ನು ಒಪ್ಪಿಕೊಂಡರು.
ಅಗ್ನಿಸಾಕ್ಷಿ ಅಲ್ಲದಿದ್ದರೂ ಮನಃಸಾಕ್ಷಿಯಾಗಿ ಮತ್ತೊಮ್ಮೆ ಕತ್ತು ಒಡ್ಡಿದೆ ವಿಶ್ವಾಸ ಕಟ್ಟುವ ತಾಳಿಗೆ.
ನನ್ನ ಮಕ್ಕಳಿಗೆ ತಂದೆಯಾದರು, ನನ್ನ ಪಾಲಿಗೆ ದೇವರಾದರು…
ಇಷ್ಟು ವರ್ಷಗಳ ಕಾಲ ಒಂದು ಹನಿ ಕಣ್ಣೀರು ಬಾರದಂತೆ, ನೋವಿನ ದಿನಗಳನ್ನು ಹಿಂದುರುಗಿ ನೋಡದಂತೆ, ಹಳೆಯ ಸಂಬಂಧಗಳ ಯಾವ ಕುರುಹು ಉಳಿಸದಂತೆ ನೋಡಿಕೊಂಡರು ನನ್ನನ್ನು, ನನ್ನ ಮಕ್ಕಳನ್ನು..
ವಿದ್ಯೆ, ಉದ್ಯೋಗ, ಮದುವೆ ಹೀಗೆ ಮಕ್ಕಳಿಗೆ ಅವರ ಬದುಕು ಕಟ್ಟಿ ಕೊಟ್ಟರು, ಹೆತ್ತ ತಂದೆ ನೆನಪು ಕೂಡ ಬಾರದಂತೆ…!

ಆದರೆ ಇಂದು…
ಇಂದು ನನ್ನ ಬದುಕಿನಲ್ಲಿ ಮತ್ತೊಂದು ಅಗ್ನಿ ಪರೀಕ್ಷೆಯ ದಿನ…

ಅದೆಷ್ಟೇ ನೋವು ತಿಂದಿದ್ದರೂ ಮರೆಯಲು ಎತ್ನಿಸಿದರು ಸತ್ಯ ಸತ್ಯವೇ ಅಲ್ಲವೇ…
ನನ್ನ ಕತ್ತಿಗೆ ತಾಳಿ ಕಟ್ಟಿ, ನನ್ನ ಮಕ್ಕಳ ಜನನಕ್ಕೆ ಕಾರಣರಾದ ಆ ವ್ಯಕ್ತಿ ಇಂದು ಇಂದು ಜಗತ್ತನ್ನು ಬಿಟ್ಟು ಹೋದರಂತೆ…

ಬಿಟ್ಟು ಬಂದ ಬದುಕನ್ನು ಮತ್ತೆ ಹಿಂದಿರುಗಿ ನೋಡುವಂತಾಗಿದೆ.
ಬದುಕಿನ ಕೋಪ ಸಾವಿನಲ್ಲಿ ಸಾಧಿಸಲು ಸಾಧ್ಯವೇ…?
ಕೊಟ್ಟ ನೋವುಗಳಿಗಿಂತ ಕಂಡ ಸುಂದರ ಕನಸುಗಳು ನೆನಪಾಗಿ ಒಳಗೊಳಗೇ ಸುಡುತ್ತಿವೆ…

ಹಣೆಗೆ ಬೊಟ್ಟು ಇಡುವಾಗ ಕನ್ನಡಿ ನನ್ನ ನೋಡಿ ನಗುತ್ತಿದೆ ಅಗ್ನಿಸಾಕ್ಷಿಯಾಗಿ ನಿನ್ನ ಕೈ ಹಿಡಿದ ಗಂಡ ಸತ್ತಿದ್ದಾನೆ. ನಿನಗೆ ಕುಂಕುಮ ಇಡುವ ಯೋಗ್ಯತೆ ಇಲ್ಲವೆಂದು.

ಮನಃಸಾಕ್ಷಿ ಹೇಳುತಿದೆ ಬದುಕು ಕೊಟ್ಟವನಿಗಾಗಿ ನಿನ್ನ ಬದುಕು ಮುಡಿಪಾಗಿಡು, ಅವನ ಹೆಸರಲ್ಲಿ ಹಣೆಗೆ ಬೊಟ್ಟಿಡು ಎಂದು.ಜಲಾಶಯಗಳ ನೀರಿನ ಮಟ್ಟ

    ಯಾವುದು ತಿಳಿಯದೆ ದುಃಖ ಹೇಳಿಕೊಳ್ಳಲು ಆಗದೆ,  ಅಡಗಿಸಿಕೊಳ್ಳಲು ಆಗದೆ ಅಂತರಂಗವನ್ನು ಸುಡುತ್ತಿದೆ. 

ನಾನಿರುವ ವರೆಗೂ ನನ್ನನ್ನು ನನ್ನೊಳಗೆ ಕೊಲ್ಲುವ ನೋವು…
ಉತ್ತರವಿಲ್ಲದ ಪ್ರಶ್ನೆ…



Share This Article
Leave a comment