ಭೀಕರ ಮಳೆ, ಪ್ರವಾಹಕ್ಕೆ ತತ್ತರಿಸಿರುವ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ 85.49 ಕೋಟಿ ರೂ ಹಣ ಬಿಡುಗಡೆ ಮಾಡಿದೆ.
ಕಲಬುರ್ಗಿ, ಯಾದಗಿರಿ, ರಾಯಚೂರು, ಬೀದರ್, ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮಳೆಯ ರುದ್ರನರ್ತನಕ್ಕೆ ಜನರು ತತ್ತರಿಸಿದ್ದಾರೆ. ಮನೆ ಮಠ ಕಳೆದುಕೊಂಡು ಈಗಾಗಲೇ ಜನರು ನಿರಾಶ್ರಿತ ಶಿಬಿರಗಳನ್ನು ಸೇರಿದ್ದಾರೆ.
ಈ ಹಿನ್ನಲೆ ಅಗತ್ಯ ಸಂಪನ್ಮೂಲ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ.ಜಿಲ್ಲಾಧಿಕಾರಿಗಳಿಗೆ
ಪರಿಸ್ಥಿತಿ ಎದುರಿಸಲು ಸನ್ನದ್ಧರಾಗುವಂತೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ನಡೆಸಿ ಪರಿಸ್ಥಿತಿ ಅವಲೋಕಿಸಿದರು.
ಮಳೆಯಿಂದ ಉಪನದಿಗಳ ಒಳಹರಿವು ಹೆಚ್ಚಳವಾಗಿದ್ದು, ಭೀಮಾ ಮತ್ತು ಇತರೆ ಉಪನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹ ಹೆಚ್ಚಾಗಿದೆ. ಈಗಾಗಲೇ ಹಲವು ಗ್ರಾಮಗಳು ಪ್ರವಾಹದಲ್ಲಿ ಮುಳುಗಿದೆ. ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಅವರಿಗೆ, ಅಗತ್ಯ ಸೌಕರ್ಯ, ಉತ್ತಮ ಆಹಾರ ಪೂರೈಕೆ ಮಾಡಬೇಕು ಎಂದು ಆದೇಶಿಸಿದ್ದಾರೆ.
ಪ್ರವಾಹ ನಿರ್ವಹಣೆ ವಿಚಾರದಲ್ಲಿ ಯಾವುದೇ ದೂರು ಬರಬಾರದು. ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ. ಜನರ ನೋವಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಎನ್ಡಿಆರ್ಎಫ್ ತಂಡ:
ಪ್ರವಾಹ ಹೆಚ್ಚಿರುವ ಹಿನ್ನಲೆ ಜನರ ಸುರಕ್ಷತೆಗಾಗಿ ಈಗಾಗಲೇ kಲಬುರಗಿಯಲ್ಲಿ ಎರಡು, ಯಾದಗಿರಿಯಲ್ಲಿ 2, ರಾಯಚೂರಿನಲ್ಲಿ 1 ಎನ್ಡಿಆರ್ಎಫ್ ತಂಡ ಕಾರ್ಯನಿರ್ವಹಣೆ ಮಾಡುತ್ತಿದೆ. ಇದರ ಜೊತೆಗೆ ನಿನ್ನೆ ಕಲಬುರ್ಗಿ ಹಾಗೂ ಯಾದಗಿರಿಗೆ ಎರಡು ಹೆಚ್ಚುವರಿ ಎನ್ಡಿಆರ್ಎಫ್ ತಂಡವನ್ನು ನಿಯೋಜನೆ ಮಾಡಲಾಗಿದೆ. ಇಂದು ಕೂಡ ಹೆಚ್ಚುವರಿ ತಂಡವನ್ನು ನಿಯೋಜಿಸಲಾಗುತ್ತಿದ್ದು, ಪುಣೆ ಮತ್ತು ಚನ್ನೈ ರಾಜ್ಯಗಳಿಂದ ಆರು ಹೆಚ್ಚುವರಿ ತಂಡಗಳು ಆಗಮಿಸಿದ್ದು, ಒಟ್ಟು 12 ಎನ್.ಡಿ.ಆರ್.ಎಫ್ ತಂಡಗಳನ್ನು ಜನರ ರಕ್ಷಣಾ ಕಾರ್ಯಕ್ಕೆ ಮುಂದಾಗಲಿದೆ ಎಂದು ಮಾಹಿತಿ ಹಂಚಿಕೊಂಡರು.
ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ ಹಾಗೂ ಬಳ್ಳಾರಿ ಜಿಲ್ಲೆಗಳಿಂದ 14 ದೋಣಿಗಳನ್ನು ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಕಳುಹಿಸಲಾಗಿದೆ. ಜೊತೆಗೆ ನೆರೆ ಸಂತ್ರಸ್ತರ ರಕ್ಷಣೆಗಾಗಿ ರಕ್ಷಣಾ ಹೆಲಿಕಾಪ್ಟರ್ಗಳನ್ನು ಕಳುಹಿಸಲಾಗಿದೆ. ಇದೇ ವೇಳೆ ಸಂಘ ಸಂಸ್ಥೆಗಳನ್ನು, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಲಾಗುವುದು ಎಂದು ತಿಳಿಸಿದರು.
ಪ್ರವಾಹದಲ್ಲಿ ಈಗಾಗಲೇ 517 ಜಾನುವಾರು ಸಾವನ್ನಪ್ಪಿವೆ. ಬದುಕುಳಿದ ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅವುಗಳನ್ನು ಸುರಕ್ಷಿತ ತಂಡಕ್ಕೆ ಸ್ಥಳಾಂತರಿಸುವ ಕಾರ್ಯ ನಡೆದಿದ್ದು, ಅವುಗಳಿಗೆ ಮೇವು ಪೂರೈಕೆ ಮಾಡಲು ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.
More Stories
ತಿರುಪತಿ ದೇವಾಲಯದಲ್ಲಿ ಬೆಂಕಿ ಅವಘಡ: ಲಡ್ಡು ವಿತರಣಾ ಕೌಂಟರ್ನಲ್ಲಿ ಶಾರ್ಟ್ ಸರ್ಕ್ಯೂಟ್
ರಾಜ್ಯದಲ್ಲಿ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ನಿಶ್ಚಿತ
ರಸ್ತೆ ಅಪಘಾತ ಸಂತ್ರಸ್ತರಿಗೆ ನೆರವಾದವರಿಗೆ ₹25,000 ಬಹುಮಾನ: ಕೇಂದ್ರ ಸರ್ಕಾರ