ಆರ್ಥಿಕ ಚೇತರಿಕೆಯಲ್ಲಿ ಭಾರತಕ್ಕಿಂತ ಪಾಕಿಸ್ತಾನ ಅಫ್ಘಾನಿಸ್ತಾನ ಮುಂದೆ ರಾಹುಲ್ ಕಿಡಿ

Team Newsnap
2 Min Read
Madhya Pradesh Congress to power: Rahul Gandhi confident of winning 150 seats ಮಧ್ಯ ಪ್ರದೇಶ ಕಾಂಗ್ರೆಸ್ ಅಧಿಕಾರಕ್ಕೆ : 150 ಸ್ಥಾನಗಳ ಗೆಲುವು ಸಾಧ್ಯತೆ ರಾಹುಲ್ ಗಾಂಧಿ ವಿಶ್ವಾಸ

ಕೊರೋನಾ ಲಾಕ್​ಡೌನ್ ಸಂದರ್ಭದಲ್ಲಿ ಇಡೀ ವಿಶ್ವದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ.

ಈ ನಡುವೆ ಏಷ್ಯಾದ ಬಲಿಷ್ಟ ಆರ್ಥಿಕತೆ ಎನಿಸಿಕೊಂಡ ಭಾರತದ ಜಿಡಿಪಿ ಮೌಲ್ಯ ಸಹ ಶೇ.-23.8ಕ್ಕೆ ಕುಸಿದಿದೆ. ಆದರೆ, ಇದೇ ಸಂದರ್ಭದಲ್ಲಿ ನೆರೆಯ ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಆರ್ಥಿಕತೆ ಭಾರತದ ಜಿಡಿಪಿ ಗಿಂತ ಮುಂದಿದೆ ಎಂದು ಇತ್ತೀಚೆಗೆ ಎಂದು ಐಎಂಎಫ್​ (International Monetary Fund) ಒಂದು ವರದಿಯನ್ನು ಬಿಡುಗಡೆ ಮಾಡಿತ್ತು. ಇದೇ ವರದಿಯನ್ನು ಮುಂದಿಟ್ಟು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್​ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ, “ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಸಹ ಕೋವಿಡ್ ಬಿಕ್ಕಟ್ಟನ್ನು ಭಾರತಕ್ಕಿಂತ ಉತ್ತಮವಾಗಿ ನಿಭಾಯಿಸಿದೆ. ಇದು ಬಿಜೆಪಿ ಸರ್ಕಾರದ ಮತ್ತೊಂದು ಘನ ಸಾಧನೆ” ಎಂದು ಟ್ವೀಟ್​ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ವರದಿಗಳನ್ನು ಉಲ್ಲೇಖಿಸಿ ಐಎಂಎಫ್‌ ಸಂಸ್ಥೆ ಬಿಡುಗಡೆ ಮಾಡಿರುವ ಪ್ರೊಜೆಕ್ಷನ್ ಗ್ರಾಫ್ ಅನ್ನು ಟ್ವೀಟ್​ನಲ್ಲಿ ಹಂಚಿಕೊಳ್ಳುವ ಮೂಲಕ ಭಾರತದ ನೆರೆಹೊರೆಯ ದೇಶಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾ ದೇಶಗಳ ಆರ್ಥಿಕತೆಯ ಜೊತೆಗೆ ಹೋಲಿಕೆ ಮಾಡಿ ಅವುಗಳಿಗಿಂತ ಕೆಳಮಟ್ಟದಲ್ಲಿರುವ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ರಾಹುಲ್ ಗಾಂಧಿ, “ಈ ಹಣಕಾಸು ವರ್ಷದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನವು ತಮ್ಮ ಜಿಡಿಪಿ ಬೆಳವಣಿಗೆಯಲ್ಲಿ ಶೇ.0.40 ಮತ್ತು ಶೇ.5 ರಷ್ಟು ಕುಸಿಯುವ ನಿರೀಕ್ಷೆಯಿದ್ದರೆ, ಭಾರತದ ಜಿಡಿಪಿ ಶೇ.10.3 ರಷ್ಟು ಕುಸಿಯುವ ಸಾಧ್ಯತೆ ಇದೆ. ಇದು ಯಾವುದೇ ಪ್ರಮುಖ ಉದಯೋನ್ಮುಖ ರಾಷ್ಟ್ರಗಳ ಪೈಕಿ ಅತಿದೊಡ್ಡ ಕುಸಿತ. ಸ್ವಾತಂತ್ರ್ಯದ ನಂತರದ ಇದು ದೇಶದ ಆರ್ಥಿಕತೆಯಲ್ಲಿನ ಅತಿ ಕೆಟ್ಟ ಬೆಳವಣಿಗೆ” ಎಂದು ಕಿಡಿಕಾರಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿ “ಬಿಜೆಪಿಯ ದ್ವೇಷ ತುಂಬಿದ ಸಾಂಸ್ಕೃತಿಕ ರಾಷ್ಟ್ರೀಯತೆಯೇ 6 ವರ್ಷಗಳ ಘನ ಸಾಧನೆ, ಬಾಂಗ್ಲಾದೇಶ ಕೂಡ ಭಾರತವನ್ನು ಹಿಂದಿಕ್ಕಲಿದೆ” ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಿದ್ದಾರೆ.

ಆದರೆ, ಈ ಎಲ್ಲಾ ಆರೋಪಗಳನ್ನೂ ತಳ್ಳಿಹಾಕಿರುವ ಕೇಂದ್ರ ಸರ್ಕಾರ ಐಎಂಎಫ್ ಗ್ರಾಫ್‌ ಅನ್ನು ನಿರಾಕರಿಸಿದ್ದು, ದೇಶದ ತಲಾ ಆದಾಯ ಜಿಡಿಪಿ ಹೆಚ್ಚಾಗಿದೆ ಎಂದು ವಾದಿಸಿದೆ. 2014-15ರಲ್ಲಿ 83,091 ರೂಗಳಿಂದ 2019-20ರಲ್ಲಿ 1,08,620 ರೂಗಳಿಗೆ ಏರಿದೆ. ಇದು ಶೇ.30.7 ರಷ್ಟು ಹೆಚ್ಚಳವಾಗಿದೆ ಎಂದಿದೆ. 2019ರಲ್ಲಿ ಭಾರತದ ಜಿಡಿಪಿ ಬಾಂಗ್ಲಾದೇಶಕ್ಕಿಂತ 11 ಪಟ್ಟು ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಮುಂದಿನ ವರ್ಷ ಭಾರತದ ಜಿಡಿಪಿ ಶೇ.8.8 ರಷ್ಟು ಹೆಚ್ಚಾಗಲಿದೆ ಎಂದು ಐಎಂಎಫ್ ನಿರೀಕ್ಷಿಸಿದೆ. ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಆರ್ಥಿಕ ಚೇತರಿಕೆ ಮತ್ತು ಜಾಗತಿಕ ಆರ್ಥಿಕತೆ ಚೇತರಿಕೆಯ ಅನಿಶ್ಚಿತತೆ ಇದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆ ಎಚ್ಚರಿಸಿದೆ.

Share This Article
Leave a comment