ರಥ ಸಪ್ತಮಿ: ಸೂರ್ಯ ದೇವನ ಆರಾಧನೆಗೂ ಒಂದು ದಿನ

Team Newsnap
3 Min Read
Ratha Saptami: A day for the worship of Sun God ರಥ ಸಪ್ತಮಿ: ಸೂರ್ಯ ದೇವನ ಆರಾಧನೆಗೂ ಒಂದು ದಿನ

ರಥಸಪ್ತಮಿಯು ಜಗತ್ ಚಕ್ಷುವಾದ ಶ್ರೀಸೂರ್ಯದೇವ ನನ್ನು ಆರಾಧಿಸಲು ಮೀಸಲಾದ ದಿನ.ಆರೋಗ್ಯಕಾರಕನಾದ ಸೂರ್ಯದೇವ, ಚರ್ಮರೋಗಾದಿಗಳನ್ನು ನಿವಾರಿಸಿ, ನಮ್ಮ ದೇಹವನ್ನು ಸದೃಢಗೊಳಿಸುವ ದಿವಾಕರ ನೂ ಹೌದು.

ಇಂತಹ ಖಗ ಈ ದಿನದಿಂದ ಗತಿ ಬದಲಿಸಲಿದ್ದಾನೆ. ಮಕರ ಸಂಕ್ರಮಣದ ನಂತರ, ಉತ್ತರಕ್ಕೆ ಚಲಿಸುವ ಭಾನು ವಿನ ವೇಗ ಈ ದಿನದಿಂದ ಕ್ಷಿಪ್ರವಾಗಲಿದೆ.

ರಥಸಪ್ತಮಿಯ ಪರ್ವಕಾಲದ ನಂತರ ಮಿತ್ರ ನು, ಶಿಶಿರ ಋತುವಿನ ಚಳಿಯನ್ನು ಮಾಯಮಾಡಿ ಸುಡು ಬಿಸಿಲು ಹೆಚ್ಚಿಸಲಿದ್ದಾನೆ. ಸಕಲ ಜೀವರಾಶಿಗಳಿಗೂ ಲೇಸನ್ನೇ ಬಯಸುವ ಅರ್ಕ ನು ನಮ್ಮ ಆರೋಗ್ಯ ಹೆಚ್ಚಿಸಲೆಂದು ಈ ಪರ್ವಕಾಲದಲ್ಲಿ ಪ್ರಾರ್ಥಿಸೋಣ.

ಜಪಾಕುಸುಮ-ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ |
ತಮೋಽರೀಂ ಸರ್ವಪಾಪಘ್ನಂ ಪ್ರಣತೋಽಸ್ಮಿ ದಿವಾಕರಮ್ ||

ಈ ದಿನದ ಸ್ನಾನ ಅತಿ ವಿಶೇಷವಾದುದಾಗಿದೆ.
ವಿಷ್ಣುಸ್ಮೃತಿಃ ಪ್ರಕಾರ,
ಸೂರ್ಯಗ್ರಹಣತುಲ್ಯಾ ತು ಶುಕ್ಲಾ ಮಾಘಸ್ಯ ಸಪ್ತಮೀ | ಅರುಣೋದಯವೇಲಾಯಾಂ ತಸ್ಯಾಂ ಸ್ನಾನಂ ಮಹಾಫಲಮ್ || ಎಂಬಂತೆ ರಥಸಪ್ತಮಿ ದಿನ ಮಾಡುವ ಸ್ನಾನ ಹೆಚ್ಚಿನ ಫಲ ನೀಡುತ್ತದೆ.

ಈ ದಿನ ಸೂರ್ಯನಿಗೆ ಪ್ರಿಯವಾದ ಏಳು ಎಕ್ಕದ ಎಲೆ ಅಥವಾ ಬೋರೆ ಎಲೆಗಳನ್ನು ತಲೆಯ ಮೇಲಿಟ್ಟುಕೊಂಡು ಸ್ನಾನ ಮಾಡಬೇಕು.
(ಪಾದಗಳ ಮೇಲೆ ಒಂದೊಂದು, ಮಂಡಿಗಳ ಮೇಲೆ ಒಂದೊಂದು, ಭುಜಗಳ ಮೇಲೆ ಒಂದೊಂದು ಹಾಗೂ ತಲೆಯ ಮೇಲೆ ಒಂದನ್ನು ಇಟ್ಟುಕೊಂಡು ಸ್ನಾನ ಮಾಡುವ ಪದ್ಧತಿಯೂ ಇದೆ).

ನದಿ ಅಥವಾ ಸರೋವರದಲ್ಲಾದರೇ ಏಳು ಸಲ ಮುಳುಗಬೇಕು. ಮನೆಯಲ್ಲಾದರೆ ನೀರನ್ನು ದೇಹದ ಮೇಲೆ ಸುರಿದುಕೊಳ್ಳಬೇಕು.

ಧಾರ್ಮಿಕವಾಗಿ ಎಕ್ಕದೆಲೆಯ ಸ್ನಾನಕ್ಕೆ ಮನ್ನಣೆ ನೀಡಲಾಗಿದೆ. ಈ ದಿನ ಎಕ್ಕದೆಲೆಯ ಸ್ನಾನ ಸಪ್ತವಿಧದ ಪಾಪ ನಿವಾರಣೆ ಮಾಡುತ್ತದೆ ಎನ್ನುತ್ತದೆ ಧರ್ಮಶಾಸ್ತ್ರ (೧.ಈ ಜನ್ಮದಲ್ಲಿ ಮಾಡಿದ ಪಾಪ, ೨.ಹಿಂದಿನ ಆರು ಜನ್ಮದಲ್ಲಿ ಮಾಡಿದ ಪಾಪ, ೩.ದೈಹಿಕವಾಗಿ ಮಾಡಿದ ಪಾಪ, ೪.ಮಾತಿನ ಮೂಲಕ ಮಾಡಿದ ಪಾಪ, ೫.ಮನಸ್ಸಿನ ಮೂಲಕ ಮಾಡಿದ ಪಾಪ, ೬.ತಿಳಿದು ಮಾಡಿದ ಪಾಪ, ೭. ತಿಳಿಯದೇ ಮಾಡಿದ ಪಾಪ. ಇವು ಸಪ್ತವಿಧ ಪಾಪಗಳು).

ಇದರ ಜತೆ ವೈಜ್ಞಾನಿಕವಾಗಿಯೂ ಅರ್ಕ ಪತ್ರೆ ಸ್ನಾನ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಆಯುರ್ವೇದದ ಪ್ರಕಾರ ದೇಹದ ಕೀಲು, ಹಲ್ಲು ಹಾಗೂ ಹೊಟ್ಟೆ ನೋವು ನಿವಾರಣೆಗೆ ಎಕ್ಕದ ಎಲೆಗಳಲ್ಲಿರುವ ಔಷಧೀಯ ಗುಣಗಳು ಪ್ರಯೋಜನಕಾರಿ ಎನ್ನಲಾಗಿದೆ. ಹಾಗಾಗಿ ಎಕ್ಕದೆಲೆಯ ಸ್ನಾನಕ್ಕೆ ಮಹತ್ವ ನೀಡಲಾಗಿದೆ.

ಈ ದಿನ ಅರುಣೋದಯ ಕಾಲದಲ್ಲಿ ಎಕ್ಕದ ಎಲೆ ಸಹಿತ ಸ್ನಾನ ಮಾಡುವಾಗ,
ಯದಾಜನ್ಮಕೃತಂ ಪಾಪಂ ಮಯಾ ಜನ್ಮಸು ಜನ್ಮಸು |
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ ||
ಏತಜ್ಜನ್ಮಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಮ್ |
ಮನೋವಾಕ್ಕಾಯಜಂ ಯಚ್ಚ ಜ್ಞಾತಾಜಾತೆ ಚ ಯೇ ಪುನಃ ||
ಇತಿ ಸಪ್ತವಿಧಂ ಪಾಪಂ ಸ್ನಾನಾಮ್ನೇ ಸಪ್ತ ಸಪ್ತಿಕೇ |
ಸಪ್ತವ್ಯಾದಿಸಮಾಯುಕ್ತಂ ಹರ ಮಾಕರಿ ಸಪ್ತಮೀ ||
ಎಂಬ ಶ್ಲೋಕ ಪಠಿಸಬೇಕು.
ಸ್ನಾನಾನಂತರ ಒಂದು ಮಣೆ ಮೇಲೆ ರಂಗೋಲಿ ಹಿಟ್ಟಿನಿಂದ ಒಂಟಿ ಚಕ್ರದ ರಥದಲ್ಲಿ ಸೂರ್ಯದೇವನು ಕುಳಿತಿರುವಂತೆ ಬರೆದು
ಧ್ಯೇಯಃ ಸದಾ ಸವಿತೃಮಂಡಲಮಧ್ಯವರ್ತಿ ನಾರಾಯಣಃ ಸರಸಿಜಾಸನಸನ್ನಿವಿಷ್ಟ: | ಕೇಯೂರವಾನ್ ಮಕರಕುಂಡಲವಾನ್ ಕಿರೀಟಹಾರೀ ಹಿರಣ್ಮಯವಪುಃ ಧೃತಶಂಖಚಕ್ರಃ || ರಂದು ಧ್ಯಾನಿಸಬೇಕು.

ಜನನಿ ಸರ್ವ ಲೋಕಾನಾಂ ಸಪ್ತಮೀ ಸಪ್ತಸಪ್ತಿಕೆ l
ಸಪ್ತವ್ಯಾಹೃತಿಕೇ ದೇವಿ ನಮಸ್ತೇ ಸೂರ್ಯ ಮಂಡಲೇ ll
ಎಂದು ಪ್ರಾರ್ಥಿಸಬೇಕು.

ಓಂ ಮಿತ್ರಾಯ ನಮಃ | ಓಂ ರವಯೇ ನಮಃ |
ಓಂ ಸೂರ್ಯಾಯ ನಮಃ | ಓಂ ಖಗಾಯ ನಮಃ |
ಓಂ ಭಾನುವೇ ನಮಃ | ಓಂ ಪೂಷ್ಣೇ ನಮಃ |
ಓಂ ಹಿರಣ್ಯಗರ್ಭಾಯ ನಮಃ | ಓಂ ಮರೀಚಯೇ ನಮಃ | ಓಂ ಆದಿತ್ಯಾಯ ನಮಃ | ಓಂ ಸವಿತ್ರೇ ನಮಃ | ಓಂ ಅರ್ಕಾಯ ನಮಃ | ಓಂ ಭಾಸ್ಕರಾಯ ನಮಃ |ಓಂ ಸರ್ವರೋಗಹರಾಯ ನಮಃ | ಓಂ ಸರ್ವ ಸಂಪತ್ಪದಾಯ ನಮಃ | ಓಂ ಸರ್ವಲೋಕಹಿತಾಯ ನಮಃ | ಎಂದು ಅರ್ಚಿಸಬೇಕು.
ಹಾಲು ಮಿಶ್ರಿತ ಗೋಧಿ ಪಾಯಸವನ್ನು ನಿವೇದಿಸಿ ಪೂಜಿಸಬೇಕು.ಇದಾದ ಮೇಲೆ ಸೂರ್ಯಾಂತರ್ಗತ ಸವಿತೃನಾಮಕ ಲಕ್ಷ್ಮೀನಾರಾಯಣ ದೇವರಿಗೆ
ಸಪ್ತ ಸಪ್ತಿವಹಪ್ರೀತ ಸಪ್ತಲೋಕಪ್ರದೀಪನ |
ಸಪ್ತಮೀಸಹಿತೋ ದೇವ ಗೃಹಾಣಾರ್ಘಂ ದಿವಾಕರ ||
ಎಂದು ಅರ್ಘ್ಯವನ್ನು ನೀಡಬೇಕು.

ಇದರ ಜತೆ, ಮಿತ್ರಾಯನಮಃ ಇದಮರ್ಘ್ಯಂ ಎಂದು ಹೇಳಿ, ಇದೇ ರೀತಿ,
ರವಯೇ ನಮಃ |
ಸೂರ್ಯಾಯ ನಮಃ |
ಭಾನವೇ ನಮಃ |
ಖಗಾಯ ನಮಃ |
ಪೂಷ್ಣೇ ನಮಃ |
ಹಿರಣ್ಯಗರ್ಭಾಯ ನಮಃ |
ಮರೀಚಯೇ ನಮಃ |
ಆದಿತ್ಯಾಯ ನಮಃ |
ಸವಿತ್ರೇ ನಮಃ |
ಅರ್ಕಾಯ ನಮಃ |
ಭಾಸ್ಕರಾಯ ನಮಃ
ಇದಮರ್ಘ್ಯಂ | ಎಂದು 12 ಬಾರಿ ಅರ್ಘ್ಯ ನೀಡಬಹುದು.

ನಂತರ ದಿವಾಕರಂ ದೀಪ್ತಸಹಸ್ರರಶ್ಮಿಂ ತೇಜೋಮಯಂ ಜಗತಃ ಕರ್ಮಸಾಕ್ಷಿಮ್ | ಎಂದು ನಮಿಸಿ, ಪೂಜೆಯ ನಂತರ ಆರೋಗ್ಯಾದಿ ಸಕಲ ಭಾಗ್ಯ ನೀಡುವಂತೆ ಕುಟುಂಬ ಸಮೇತ ಪ್ರಾರ್ಥಿಸಬೇಕು. ಕೆಂಪು ಹೂವು, ಕೆಂಪು ಬಣ್ಣದ ಗಂಧವನ್ನು ಸಮರ್ಪಿಸುವುದು ವಿಶೇಷವಾಗಿದೆ.

ಸಪ್ತಾಶ್ವ ರಥಮಾರೂಢಂ ಪ್ರಚಂಡಂ ಕಶ್ಯಪಾತ್ಮಜಂ |
ಶ್ವೇತಪದ್ಮಧರಂ ದೇವಂ‌ ತಂ ಸೂರ್ಯಂ ಪ್ರಣಮಾಮ್ಯಹಂ ||

ಶ್ರೀ ಸೂರ್ಯಾಂತರ್ಗತ ಭಾರತಿರಮಣ ಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀನಾರಾಯಣದೇವರು ಎಲ್ಲರನ್ನೂ ಕಾಪಾಡಲಿ

-ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,ಆನೇಕಲ್.

Share This Article
Leave a comment