ಹಬ್ಬಗಳು ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕ. ನಮ್ಮಲ್ಲಿ ಹಬ್ಬಗಳಿಗೆ ತುಂಬ ಮಹತ್ವ ಇದೆ. ಹಬ್ಬಗಳು ನಮ್ಮ ಅಸ್ಮಿತೆ ಕೂಡ. ನಾವು ಆಚರಿಸುವಷ್ಟು ಹಬ್ಬ ಹರಿದಿನಗಳನ್ನು ಬೇರಾವುದೇ ದೇಶಗಳಲ್ಲಿ ಕಾಣಲು ಸಾಧ್ಯವಿಲ್ಲ. ಹಬ್ಬಗಳು ನಮ್ಮ ಸನಾತನ ಧರ್ಮದ ಹೆಮ್ಮೆ ಅದರಲ್ಲೂ ಶ್ರಾವಣ ಮಾಸ ಎಂದರೆ ಹಬ್ಬಗಳ ಮಾಸ.
ಇಂದು ದೇಶದಾದ್ಯಂತ ರಕ್ಷಾ ಬಂಧನದ (ರಾಖಿ ಹಬ್ಬ ) ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಅಂದರೆ ಶ್ರಾವಣ ಮಾಸದ ಹುಣ್ಣಿಮೆಯ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬ ಸಹೋದರ, ಸಹೋದರಿಯರ ನಡುವಿನ ಪವಿತ್ರ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಹಬ್ಬವನ್ನು ತುಂಬ ಭಾವನಾತ್ಮಕ ವಾಗಿ ಆಚರಿಸುತ್ತೇವೆ.
ಚಿಕ್ಕವರಿದ್ದಾಗ ಅಕ್ಕ ತಮ್ಮನನ್ನು ತಾಯಿಯಂತೆ ಕಾಳಜಿ ಮಾಡಿದರೆ, ಅಣ್ಣ ತಂಗಿಗೆ ಅಪ್ಪನಂತೆ ಭದ್ರತೆಯ ಭಾವ ತುಂಬುತ್ತಾನೆ.
ರಕ್ಷಾ ಬಂಧನ ಹಬ್ಬ ಇಂದು ನೆನ್ನೆಯದಲ್ಲ ಸಾವಿರಾರು ವರ್ಷಗಳಿಂದ ನಮ್ಮ ದೇಶದಲ್ಲಿ ಪ್ರಚಲಿತದಲ್ಲಿದೆ. ಪುರಾಣಗಳ ಕಾಲದಲ್ಲೇ ರಾಜರು, ಋಷಿ ಮುನಿಗಳು ಯಜ್ಞ ಮಾಡುವ ಮುಂಚೆ ರಕ್ಷೆಯ ಮೂಲಕ ದೀಕ್ಷೆ ತೊಡುತ್ತಿದ್ದ ಉಲ್ಲೇಖವಿದೆ ಮತ್ತು ಮಹಾಭಾರತದಲ್ಲಿ ಶ್ರೀಕೃಷ್ಣ ಶಿಶುಪಾಲನ ಸಂಹಾರ ಮಾಡುವಾಗ ಸುದರ್ಶನ ಚಕ್ರ ಬೆರಳಿಗೆ ತಾಗಿ ರಕ್ತ ಸುರಿಯುತ್ತಿದ್ದ ಸಂದರ್ಭದಲ್ಲಿ ದ್ರೌಪದಿಯು ತನ್ನ ಸೀರೆಯ ಒಂದು ಭಾಗವನ್ನು ಹರಿದು ಶ್ರೀ ಕೃಷ್ಣ ನ ಬೆರಳಿಗೆ ಕಟ್ಟುತ್ತಾಳೆ. ಆಗ ಅದನ್ನು “ರಕ್ಷಾ ಸೂತ್ರ” ಎಂದು ಕರೆಯುವ ಮೂಲಕ ನಿನ್ನ ಕಷ್ಟ ಕಾಲದಲ್ಲಿ ನಿನ್ನ ರಕ್ಷಣೆ ನನ್ನ ಹೊಣೆ ಎಂದು ಶ್ರೀ ಕೃಷ್ಣನು ವಾಗ್ಧಾನ ಮಾಡುತ್ತಾನೆ. ಅದರಂತೆ ದ್ರೌಪದಿಯ ವಸ್ತ್ರಾಪಹರಣ ಸಮಯದಲ್ಲಿ
ಶ್ರೀ ಕೃಷ್ಣ ಅವಳಿಗೆ ಅಂತ್ಯವಿಲ್ಲದ ಸೀರೆಯ ಕರುಣಿಸಿ ತುಂಬಿದ ಸಭೆಯಲ್ಲಿ ಅವಳ ಮಾನ ಕಾಪಾಡುತ್ತಾನೆ. ಅಂದಿನಿಂದ ಈ ರಕ್ಷಾ ಬಂಧನ ಹಬ್ಬ ಆರಂಭ ಆಯಿತು ಎನ್ನುವ ಪ್ರತೀತಿ ಇದೆ.
ರಕ್ಷಾ ಬಂಧನ ಹೆಸರೇ ಹೇಳುವಂತೆ, ರಕ್ಷಣೆ ಮತ್ತು ಸಂಬಂಧಗಳ ಬಂಧ. ಹಬ್ಬದ ದಿನ ಬೆಳಗ್ಗೆ ಶುಚಿರ್ಭೂತರಾಗಿ ಹಣೆಗೆ ತಿಲಕವಿರಿಸಿ ಅವರ ದೀರ್ಘಾಯಸ್ಸು, ಸಮೃದ್ದಿ ಕೋರಿ ಅಣ್ಣ ತಮ್ಮಂದಿರ ಕೈಗೆ ರಾಖಿ ಕಟ್ಟಿ, ಆರತಿ ಮಾಡಿ ಅವರ ಆಶೀರ್ವಾದ ಪಡೆಯುತ್ತಾರೆ. ಆ ಸಮಯದಲ್ಲಿ ಸಹೋದರ ಅವಳಿಗೆ ಉಡುಗೊರೆ ಕೊಡುವ ಮೂಲಕ ನಿನ್ನ ಸಂಪೂರ್ಣ ರಕ್ಷಣೆ(ಮಾನ, ಪ್ರಾಣ ಎಲ್ಲವೂ) ಹೀಗೆ ಸಂಕಲ್ಪ ಮಾಡುವ ಮೂಲಕ ಅವಳಿಗೆ ಆಶೀರ್ವದಿಸುತ್ತಾನೆ. ಇಂತಹ ಭಾವನಾತ್ಮಕತೆ ಮತ್ತು ಸಾರ್ಥಕತೆಯ ಕ್ಷಣವನ್ನು ಅನುಭವಿಸುವುದೇ ಒಂದು ಆನಂದ.
ಇಂತಹ ಆನಂದದ ಕ್ಷಣಗಳು ಎಲ್ಲರ ಬದುಕಲ್ಲಿಯು ಒಂದು ದಿನದ ಹಬ್ಬವಾಗದೆ ಒಂದೇ ಜೀವನದ ಕೊನೆಯವರೆಗೂ ನಿಲ್ಲುವ ಹಬ್ಬವಾಗಲಿ ಎಂದು ಆಶಿಸುತ್ತೇನೆ.
ಕಾಲ ಬದಲಾದಂತೆ ಆಯಾ ಕಾಲಘಟ್ಟಕ್ಕೆ ಸರಿಯಾಗಿ ರಾಖಿಯ ವಿನ್ಯಾಸಗಳೂ ಬದಲಾಗುತ್ತಾ ಬಂದಿವೆ. ಇದೇ ಆಗಸ್ಟ್ 23. ನಮ್ಮ ಹೆಮ್ಮೆಯ ಭಾರತ ಚಂದ್ರಯಾನ 3 ಯಶಸ್ಸು ಕಂಡ ಬಳಿಕ ಯಶಸ್ಸಿನ ದ್ಯೋತಕವಾಗಿ ರಾಖಿಯ ವಿನ್ಯಾಸ ಕೂಡ ಬದಲಾವಣೆ ಕಂಡಿರಬಹುದು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಲಿತ ಇರುವ ಹಬ್ಬ ಈ ರಕ್ಷಾ ಬಂಧನ. ಮುಖಪರಿಚಯವೇ ಇಲ್ಲದ ಇನ್ನೊಬ್ಬ ವ್ಯಕ್ತಿಯನ್ನು ಅಣ್ಣ, ತಮ್ಮ, ಅಕ್ಕ, ತಂಗಿ ಹೀಗೆ ಭಾವಿಸಿಕೊಂಡ ಎಷ್ಟೋ ಮನಸುಗಳು ರಾಖಿ ಹಾಗೂ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡ ಎಷ್ಟೋ ಪೋಸ್ಟ್ ಗಳನ್ನು ನೋಡಿದ್ದೇವೆ. ಹಾಗೆಯೇ ದೂರದೂರಿನಲ್ಲಿ ಇರುವ ಸಹೋದರರಿಗೆ ಹಬ್ಬದ ದಿನವೇ ಅವರಿಗೆ ತಲುಪುವಂತೆ ಪೋಸ್ಟ್, ಕೊರಿಯರ್ ಮೂಲಕ ಕಳುಹಿಸಿ ಆಶೀರ್ವಾದ ಪಡೆಯುವ ಎಷ್ಟೋ ಸಹೋದರ ಸಹೋದರಿಯರಿದ್ದಾರೆ.
ಇಂತಹ ಕಾಲದಲ್ಲಿ ಒಂದು ಹೆಣ್ಣಿನ ರಕ್ಷಣೆ ಬಹಳ ಮುಖ್ಯವಾಗುತ್ತದೆ. ಎಲ್ಲಾ ಹೆಣ್ಣು ಮಕ್ಕಳ ಬದುಕಲ್ಲೂ ಒಡ ಹುಟ್ಟಿದವರೇ ಅಗಬೇಕಿಲ್ಲ ಯಾವುದೋ ರೂಪದಲ್ಲಿ ಸಿಕ್ಕಿದ ಸಹೋದರರು ಅವಳ ಮಾನ, ಪ್ರಾಣದ ರಕ್ಷಣೆಯ ಹೊಣೆ ಹೊರುವ ಮಟ್ಟಿಗೆ ಬಾಂಧವ್ಯ ಉಳಿಯಲಿ ಎನ್ನುವುದು ನನ್ನ ಆಶಯ.
ಎಲ್ಲಾ ಸಹೋದರ ಸಹೋದರಿಯರಿಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು.
- ಮೀಸಲಾತಿ ಹಕ್ಕುಗಳಿಗೆ ಆಗ್ರಹಿಸಿ ರಾಯಚೂರಿನಲ್ಲಿ ಬಂದ್
- ದೇವಿ ಆರಾಧಕರ ವಿಶೇಷ ಪರ್ವ ನವರಾತ್ರಿ
- ಜರ್ಮನ್ ಏಕತಾ ದಿನ | German Unity Day in kannada
- ಡಿ.29ಕ್ಕೆ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮರುಪರೀಕ್ಷೆ
- ಮೈಸೂರು ದಸರಾ 2024: ನಾಳೆ ಉದ್ಘಾಟನೆ, ವಿಶೇಷ ಕಾರ್ಯಕ್ರಮಗಳ ವಿವರ
More Stories
ದೇವಿ ಆರಾಧಕರ ವಿಶೇಷ ಪರ್ವ ನವರಾತ್ರಿ
ಜರ್ಮನ್ ಏಕತಾ ದಿನ | German Unity Day in kannada
ಶೃಂಗೇರಿ ಸಂತ ಚಂದ್ರಶೇಖರ ಭಾರತೀ ತೀರ್ಥರ ಸ್ಮರಣೆ