ಪಿಎಸ್ಐ ಪರೀಕ್ಷಾ ಅಕ್ರಮ : ಮಹಿಳಾ ವಿಭಾಗದ ಟಾಪರ್ ರಚನಾ ವಿರುದ್ದ FIR

Team Newsnap
1 Min Read

ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮದ ಮಹಿಳೆಯರ ವಿಭಾಗದಲ್ಲಿ ಟಾಪರ್ ಆಗಿದ್ದ ಅಭ್ಯರ್ಥಿ ರಚನಾ ಹನುಮಂತ ಸೇರಿದಂತೆ 22 ಅಭ್ಯರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಎಫ್‌ಐಆರ್‌ನಲ್ಲಿ ಎ 17ನೇ ಆರೋಪಿ ರಚನಾ, ಮಹಿಳೆ ಎಸ್‌ಐ ಮೆರಿಟ್ ಪಟ್ಟಿಯಲ್ಲಿ ಮೊದಲನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಸಿಐಡಿ ತನಿಖೆ ವೇಳೆ ಓಎಂಆರ್ ಶೀಟ್ ಮತ್ತು ಕಾರ್ಬನ್ ಶೀಟ್‌ನಲ್ಲಿ ವ್ಯತ್ಯಾಸ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಿಐಡಿ ಡಿವೈಎಸ್‌ಪಿ ನರಸಿಂಹಮೂರ್ತಿ ನೀಡಿದ ದೂರಿನ ಆಧಾರದ ಮೇಲೆ ಈವರೆಗೆ 22 ಅಭ್ಯರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.

172 ಅಭ್ಯರ್ಥಿಗಳನ್ನು ಸಿಐಡಿ ವಿಚಾರಣೆಗೆ ಕರೆಯಲಾಗಿತ್ತು. 4 ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಎಲ್ಲರೂ ವಿಚಾರಣೆಗೆ ಹಾಜರಾಗಿದ್ದರು.

ಅಭ್ಯರ್ಥಿಗಳ ನಕಲಿ ಓಎಂಆರ್ ಶೀಟ್‌ಗಳನ್ನು ಪಂಚನಾಮೆ ಮಾಡಿ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆ ಬಳಿಕ ವೈಜ್ಞಾನಿಕವಾಗಿ ಪರಿಶೀಲಿಸಲು ಅಸಲು ಮತ್ತು ನಕಲಿ ಓಎಂಆರ್ ಪ್ರತಿಗಳನ್ನು ಎಫ್‌ಎಸ್‌ಎಲ್‌ಗೆ ಕಳಿಸಲಾಗಿತ್ತು.

ಏಪ್ರಿಲ್ 28 ರಂದು ಎಫ್‌ಎಸ್‌ಎಲ್‌ನಿಂದ ವರದಿ ಬಂದಿದ್ದು, 22 ಅಭ್ಯರ್ಥಿಗಳ ಓಎಂಆರ್ ಶೀಟ್‌ನಲ್ಲಿ ವ್ಯತ್ಯಾಸವಿದೆ ಎಂದು ತಿಳಿಸಿದೆ. ಅಕ್ರಮವೆಸಗಿರೊ 22 ಅಭ್ಯರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿತ್ತು. 22 ಅಭ್ಯರ್ಥಿಗಳು ಇತರ ವ್ಯಕ್ತಿಗಳೊಂದಿಗೆ ಸೇರಿ ಸಂಚು ರೂಪಿಸಿ ಅಕ್ರಮ ಎಸಗಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Share This Article
Leave a comment