- ದ.ರಾ. ಬೇಂದ್ರೆ ನೆನೆದು ಹೀಗೊಂದು ನಮನ
ವರಕವಿ ಬೇಂದ್ರೆ ಅವರ ಸಾಹಿತ್ಯ ಸರಳವಾಗಿ ಬರೆದ ಕ್ಲಿಷ್ಟಕರ ಜ್ಞಾನ ಎಂತಲೇ ಹೆಳಬಹುದು. ಓದಿದಷ್ಟೂ ಚಿಂತನೆಯ ಆಳಕ್ಕೆ ಇಳಿಸಬಲ್ಲ ಶಕ್ತಿ ಆ ಸಾಹಿತ್ಯಕ್ಕಿದೆ. ಬದುಕಿನ ನೋವು ನಲಿವುಗಳನ್ನು ಹತ್ತಿರದಿಂದ ಅನುಭವಿಸಿದರೂ ಅವೆರಡನ್ನು ಸಮಾನವಾಗಿ ಕಂಡ ಅದ್ಭುತ ಕವಿ ಬೇಂದ್ರೆ ಗುರುಗಳು.
ನಿತ್ಯ ಜೀವನದ ಸತ್ವ ಸತ್ಯಗಳನ್ನು, ಬದುಕಿನ ಮಾರ್ಮಿಕತೆಯನ್ನೂ ಒಸರುವ ಹಾಗೂ ಬುದ್ದಿಗೆ ಚುರುಕು ಮುಟ್ಟಿಸುವ ಹಲವಾರು ಕವನಗಳನ್ನು ಈ ಕವಿಪುಂಗವ ನಮಗೆಲ್ಲ ಜ್ಞಾನ ಭಿಕ್ಷೆಯಾಗಿ ನೀಡಿದ್ದಾರೆ.
ಧಾರವಾಡದ ಸಾಧನಕೇರಿಯ ಸಾಧಕ ನಮ್ಮೆಲ್ಲರ ಬದುಕಿಗೆ ದೀಪಕ. ನಾನೂ ಧಾರವಾಡದಲ್ಲಿ ವಿದ್ಯಾರ್ಜನೆ ಮಾಡಿದವನು. ಬೇಂದ್ರೆ ಅವರ ಕೃತಿಗಳ ಓದುಗನೂ ಸಹ. ಬೇಂದ್ರೆಯವರ ಪಾದದ ಧೂಳಿಗೂ ಸಮಾನನಲ್ಲವಾದರೂ ಆ ಅದ್ಭುತ ಕವಿಹೃದಯವನ್ನು ಅರಿಯುವ ಆಸೆ. ಅವರ ಕವನಗಳನ್ನು ಓದುವುದು ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಭಗೀರಥ ಪ್ರಯತ್ನ ಮಾಡುವುದು ನನ್ನ ಜಿಜ್ಞಾಸೆ. ಅವರ ಕಾವ್ಯದಿಂದ ಬದುಕಿಗೆ ಸ್ಪೂರ್ತಿ ಪಡೆಯಬೆಕೆಂಬುದೊಂದೇ ನನ್ನ ಹಂಬಲ. ಅವರ ಒಂದು ದುಃಖಭರಿತ ಕವನದ ಭಾವಾರ್ಥ ಬರೆದೆ ಹಾಗೂ ಅದನ್ನೇ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ನೀ ಹಿಂಗ ನೋಡಬ್ಯಾಡ ನನ್ನ…….ಈ ಕವಿತೆ ಕೇಳದವರಿಲ್ಲಾ. ಸಂತಾನ ಶೋಕ ಅನುಭವಿಸಿದ ಕವಿಯ ಮನಸ್ಸಿನ ಭಾವನೆಗಳ, ಜೀವ ಹಿಂಡುವ ಸಾಲುಗಳು. ಮನ ಕಲುಕುವ, ಕಲ್ಲು ಹೃದಯಿಗಳನ್ನೂ ಗಳಗಳನೆ ಅಳುವಂತೆ ಮಾಡುವ ಈ ಕವಿತೆಯ ಭಾವವನ್ನು ಅರಿಯೋಣ.
ಶಿಶುವನ್ನು ಕಳೆದುಕೊಂಡು ಕಳೇಬರವನ್ನು ತನ್ನ ತೊಡೆಯ ಮೇಲಿರಿಸಿ ತನ್ನ ಪತಿಯನ್ನು ನೋಡಿದಾಗ ಮೂಡಿದೆ ಈ ಶೋಕಗೀತೆ. ಶೋಕದಿಂದ ಗದ್ಗದಿತಳಾದ, ಒಣಗಿದ ಬಾಯಿಂದ ಮಾತೂ ಹೊರಡದ ಸ್ಥಿತಿ ಪತ್ನಿಯದು.ಬೇಂದ್ರೆಯವರು ಬರೆಯುತ್ತಾರೆ…
” ನೀ ಹಿಂಗ ನೋಡಬ್ಯಾಡ ನನ್ನ
ನೀ ಹಿಂಗ ನೋಡಿದರ ನನ್ನ ತಿರುಗಿ ನಾ ಹ್ಯಂಗ ನೋಡಲೇ ನಿನ್ನ?”
ತೊಡೆ ಮೇಲೆ ಸತ್ತ ಮಗು, ಹೊಟ್ಟೆಯಲ್ಲಿ ಸಹಿಸಲಾರದ ಸಂಕಟ, ನೋಡುತ್ತಿರುವ ಪತಿಯ ವೇದನೆ, ಮನಸ್ಸಿನಲ್ಲಿ ಮಗು ಜೀವಂತವಿದ್ದಾಗ ಆಡಿ ನಲಿಸಿದ ಮಧುರ ನೆನಪುಗಳು ಇವೆಲ್ಲ ಸೇರಿಕೊಂಡು ಉಂಟಾದ ಆ ಭಾವ ಆ ನೋಟದಲ್ಲಿ ಇದ್ದಿರಬಹುದು. ಪತ್ನಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಲಾಗದ ಸ್ಥಿತಿ ಪತಿಯದ್ದು. ತನ್ನನ್ನು ಮದುವೆಯಾಗಿ ಈ ಪರಿಯನ್ನು ಅನುಭವಿಸುವಂತಾಯಿತೇನೊ ಎಂಬ ಅನಿವಾರ್ಯ ಭಾವ, ಹೇಳಿಕೊಳ್ಳಲಾಗದ ನೋವು. ಅದಕ್ಕೇ ಬೇಂದ್ರೆ ಹೆಳ್ತಾರೆ ನೀ ನನ್ನ ಈ ರೀತಿ ನೋಡಬೇಡಾ, ತಿರುಗಿ ನಿನ್ನ ನೋಡುವ ಶಕ್ತಿ ನನಗಿಲ್ಲ. ಮಾತನ್ನೇ ಮೀರಿದ ಸಂವಹನ ಇಲ್ಲಿದೆ. ಮುಂದೆ ಬರೆಯುತ್ತಾರೆ..
“ಸಂಸಾರ ಸಾಗರದಾಗ
ಲೆಕ್ಕವಿರದಷ್ಟು ದುಃಖದ ಬಂಡಿ ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ ನಾ ತಡೀಲಾರೆ ಅದು, ಯಾಕ ನೋಡುತೀ ಮತ್ತ ಮತ್ತ ನೀ ಇತ್ತ?”
ಹುಟ್ಟು ಸಾವು ಆ ದೇವರ ಚಿತ್ತ ನಾನೇನು ಮಾಡಿದರೂ ಅದನ್ನು ತಡೆದು ನಿನ್ನ ದುಃಖ ಭರಿಸಲಾರೆ. ನಾನೇನು ಮಾಡಲಾಗುತ್ತಿಲ್ಲವಲ್ಲಾ ಎಂಬ ಕಳವಳ ಹಾಗೂ ನಿಸ್ಸಹಾಯಕತೆ ಕವಿಯನ್ನು ಕಾಡುತ್ತಿದೆ. ಆದರೂ ಸಂಸಾರ ಅನೇಕ ಘಾಸಿಗೊಳಿಸುವ ಬಂಡೆಗಳಿಂದ ತುಂಬಿದ ದುಃಖಸಾಗರ. ಮಗು ಸಾಗರದ ಆಚೆ ದಡ ಸೇರಿದೆ, ಅಲ್ಲಿ ಮಲಗಿದೆ. ಅಲ್ಲಿಯೆ ಮಲಗಿರಲಿ ಬಿಡು ಎಂದು ಸಮಾಧಾನಪಡಿಸಿದಂತಿದೆ. ಮುಂದೆ ಬರೆಯುತ್ತಾರೆ….
” ತಾಂಬಲ ಹಾಕದ ತುಂಬ ಕೆಂಪು ಗಿಣಿಗಡಕ ಹಣ್ಣಿನ ಹಾಂಗ
ಇದ್ದಂತ ತುಟಿಯು ಬಣ್ಣೆಲ್ಲಿ ಹಾರಿತು? ಯಾವ ಗಾಳಿಗೆ ಹೀಂಗ
ಈ ಗದ್ದ , ಗಲ್ಲ, ಹಣಿ, ಕಣ್ಣು, ಕಂಡು ಮಾರೀಗೆ ಮಾರಿಯಾ ರೀತಿ ಸಾವನ ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ”
ಮಗುವನ್ನು ಕಳೆದುಕೊಂಡ ತಾಯಿಯ ಪರಿಸ್ಥಿತಿ. ಯಾವ ಸಾಂತ್ವನದಿಂದಲೂ ಭರಿಸಲಾಗದ ನೋವು ದೇಹದ ಚೆಲುವನ್ನೇ ಮಂಕಾಗಿಸಿಬಿಡುತ್ತದೆ. ಪತ್ನಿಯ ಮುಖ ನೋಡಿ ಕೆಂಪು ಚುಂಚಿನ ಗಿಳಿ ಕೆಂಪು ಹಣ್ಣನ್ನು ತಿನ್ನುವಾಗ ಒಸರಿದ ಆ ಕೆಂಬಣ್ಣದ ಓಕುಳಿಯಂತೆ ಇದ್ದ ಇವಳಾ ತುಟಿಗಳು ಬಣ್ಣಗೆಟ್ಟಿವೆ. ಅವಳಿಗೆ ತಾಂಬೂಲದ ಅವಶ್ಯಕತೆ ಇರಲಿಲ್ಲ ತುಟಿಯನ್ನು ಕೆಂಪಾಗಿಸಲು. ಮುಖವೆಲ್ಲ ಬಾಡಿ ಸೊರಗಿ ಕಳೆಗೆಟ್ಟಿದೆ. ಮುಖದ ಆ ಭಾವ ಯಾವುದೋ ಮಾರಿಯ ಮುಖವನ್ನು ಹೋಲುತ್ತಿದೆ. ಸಾವಿನ ಕರಿನೆರಳು ಇವಳ ಮುಖವನ್ನು ರಾವುಬಡಿಸಿದೆ. ಹೀಗೇ ಆದರೆ ಮುಂದೇನು ಕಾದಿದೆಯೋ ಎಂಬ ಅಳುಕು ಕವಿವಾಣಿಯಲ್ಲಿದೆ. ಅಂದರೆ ಮಗುವಿನ ಸಾವು ಅವಳನ್ನು ಎಷ್ಟು ಜರ್ಝರಿತಗೊಳಿಸಿದೆ?
ಇದನ್ನು ನೋಡಿದ ಮೇಲೆ ತನ್ನಿಂದಲೇ ಅವಳಿಗೆ ಈ ಪರಿಸ್ಥಿತಿ ಬಂದಿದೆ ಎನ್ನುವ ಅಳುಕು ಭಾವನೆ ವ್ಯಕ್ತಪಡಿಸುತ್ತಾರೆ. ತನ್ನನ್ನು ಮದುವೆಯಾಗಿ ಭರಿಸಲಾಗದ ದುಃಖ ಉಂಟಾಗಿದೆ. ಮದುವೆಗೂ ಮೊದಲು ಎನೇನು ಆಕಾಂಕ್ಷೆಗಳಿದ್ದವೋ ಏನೋ. ಪಾಪ ಎಂದೆನಿಸುವ ಭಾವ. ಮುಂದೆ ಹೇಳುತ್ತಾರೆ….
“ದಾರೀಲಿ ನೆನೆದ ಕೈ ಹಿಡಿದೆ ನೀನು ತಣ್ಣಗ ಅಂತನ ತಿಳಿದು
ಬಿಡಲೊಲ್ಲಿ ಇನ್ನೂನು ಬೂದಿಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನು
ಆ ಗಾದಿ ಮಾತ ನಂಬಿ ನಾನು ದೇವರಂತ ತಿಳಿದಿಯೇನ ನೀ ನನ್ನ?
ಜೀವನ ಸುಂದರ ಆಗಿರುತ್ತದೆ, ಸಂಸಾರ ತಣ್ಣಗಿರ್ತದೆ ಅಂತ ತಿಳಿದು ನನ್ನನ್ನೇನೋ ಮದುವೆಯಾದೆ. ಆದರೆ ಇದು ದುಃಖದ ಕೆಂಡ ಅಂತ ಈಗ ತಿಳಿದರೂ ಇನ್ನು ನನ್ನನ್ನು ಬಿಡಲಿಲ್ಲ. ಗಂಡ ಆಕಾಶ ಆದರೆ ಹೆಂಡತಿ ಭೂಮಿ ಇದ್ದಂತೆ. ಈಗ ಆಕಾಶವೇ ಕಳಚಿ ಬಿದ್ದಿರೆ ಭೂಮಿಗೆ ನೆಲೆ ಸಿಗಲು ಸಾಧ್ಯವೆ? ಅದೆಂತಾ ನಿನ್ನ ವಿಶ್ವಾಸ ನನ್ನ ಮೇಲೆ? ನಿನಗಿನ್ನೂ ಸಾಕಾಗಲಿಲ್ಲವೇ ಎಂದು ಪ್ರೀತಿಯಿಂದ ಕೇಳುತ್ತಾರೆ. ಎಂತಹ ಪ್ರಾಮಾಣಿಕತೆ ಈ ಪ್ರಶ್ನೆಯಲ್ಲಿ ಅಡಗಿದೆ. ಸಮಾಧಾನದ ಬದುಕನ್ನು ಕೊಡಲಾಗಲಿಲ್ಲವಲ್ಲ ಎಂಬ ನೋವು ಅದೆಷ್ಟು ಅವರನ್ನು ಕಾಡಿರಬಹುದು? ಪತಿಯೇ ಪರಮೇಶ್ವರ ಅಂತ ಇನ್ನೂ ತಿಳಿದಿದ್ದೀಯಾ ಎನ್ನುತ್ತಿದ್ದಾರೆ ಕವಿ.
ಇಲ್ಲಿ ಆ ದಂಪತಿಗಳ ಮಧ್ಯದಲ್ಲಿದ್ದ ಅಪಾರ ನಂಬಿಕೆಯ ದರ್ಶನವನ್ನು ಕಾಣಬಹುದು.ಆದರೂ ತನ್ನ ಪತ್ನಿಯ ಕಣ್ಣನ್ನು ನೋಡುವ ಸಾಹಸ ಮಾಡುತ್ತಾರೆ. ಹಾಗೆ ನೋಡಿದಾಗ ಅವರಿಗೆ ಕಂಡ ಆ ಕಣ್ಣುಗಳು ಏನನ್ನೋ ನೆನಪಿಸುತ್ತವೆ. ಸುಂದರ ಉಪಮೇಯವನ್ನ ಕೊಡುತ್ತ ಬರೆಯುತ್ತಾರೆ…..
“ಇಬ್ಬನಿ ತೊಳೆದರೂ ಹಾಲುಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡ ಒಮ್ಮಿಗಿಲ
ಹುಣಿವಿ ಚಂದಿರನ ಹೆಣಾ ಬಂತು ಮುಗಿಲಾಗ ತೇಲುತಾ ಹಗಲ.”
ಹೆಂಡತಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಅವು ಅವಳ ಕಣ್ಣೇ ಅಲ್ಲವೇನೋ ಎನಿಸುತ್ತದೆ. ಎಂತಹ ಕಣ್ಣುಗಳು ಅವು? ಕವಳಿ ಹಣ್ಣಿನಂತೆ ಕಡುನೀಲಿ ಬಣ್ಣ. ಚಳಿಗಾಲದಲ್ಲಿ ಕವಳಿ ಹಣ್ಣಿಗೆ ಬಿಳಿ ಹಾಲು ಮೆತ್ತಿರುತ್ತದೆ. ಕವಳಿ ಹಣ್ಣಿನ ಸುತ್ತಲೂ ಮೆತ್ತಿ ಮಧ್ಯದಲ್ಲಿ ವೃತ್ತಾಕಾರದಲ್ಲಿ ಹಣ್ಣು ಕಾಣಿಸುತ್ತಿರುತ್ತದೆ. ಕವಿ ಇಲ್ಲಿ ಹಾಲನ್ನು ಕಣ್ಣಿನ ಬಿಳಿ ಗುಡ್ಡೆಗೂ ಹಾಗೂ ಕಡುನೀಲಿ ಹಣ್ಣಿನ ಭಾಗವನ್ನು ಕಣ್ಣಿನ ಪಾಪೆಗೆ ಹೋಲಿಸುತ್ತಾರೆ. ಇಬ್ಬನಿಯ ನೀರು ಅದನ್ನು ತೊಳೆದಾಗ ಆ ಹಣ್ಣು ಹೊಳೆಯುತ್ತಿರುತ್ತದೆ. ಅಂತಹ ಕಣ್ಣುಗಳು ಇಂದು ಏನಾಗಿವೆ? ಇವು ನಿನ್ನವೇನಾ ? ಅಂತ ಪ್ರಶ್ನೆ ಮೂಡುತ್ತಿದೆ. ಒಮ್ಮೆಲೇ ನೋಡಿದರೆ ನನ್ನ ಜೀವ ಗಾಬರಿಗೊಂಡು ಕಾಂತಿ ಇಲ್ಲದ ಹುಣ್ಣಿಮೆ ಚಂದಿರನ ಹೆಣ ಬಿಸಿಲಲ್ಲಿ ಬಂದ ರೀತಿ ಎನಿಸುತ್ತದೆ. ಅಷ್ಟೊಂದು ನಿಸ್ತೇಜವಾಗಿದೆ ಎಂದು ತಮ್ಮ ಮನಸ್ಸಿನ ದುಗುಡ ಹಂಚಿಕೊಳ್ಳುತ್ತಾರೆ. ಹುಣ್ಣಿಮೆ ಚಂದಿರ ಎಂದೂ ಹಗಲಿನಲ್ಲಿ ಕಾಣುವುದಿಲ್ಲ. ಅಂದ್ರೆ ಅದು ಅನೈಸರ್ಗಿಕ.
ಮುಂದೆ ಗಂಡನ ದುಗುಡವನ್ನು ಅರಿತ ಸತಿ ಅವನನ್ನು ಸಮಾಧಾನಪಡಿಸಲು ಒಂದು ಹುಸಿನಗೆಯನ್ನು ಬೀರುವ ಪ್ರಯತ್ನ ಮಾಡುತ್ತಾಳೆ. ಗಂಡ ಹೆಂಡತಿಯರ ಸಂಬಂಧ ಇಂತಹ ಪರಸ್ಪರ ತಿಳುವಳಿಕೆಯಿಂದಲೇ ಸಮರಸವಾಗುವುದು. ಇಲ್ಲಿ ತಿಳುವಳಿಕೆಯೇ ಪ್ರಧಾನ್ಯ. ಗಂಡನ ನೋವನ್ನು ಕಡಿಮೆ ಮಾಡಲು ತನ್ನ ಉರಿಯುವ ಬೆಂಕಿಯಂತಿರುವ ಶೋಕವನ್ನು ಒತ್ತಿ ಬಿಗಿ ಹಿಡಿದು ನಗುವ ಪ್ರಯತ್ನ ಅವಳ ನಿರ್ಮಲ ಪ್ರೇಮವನ್ನು ತೋರುತ್ತದೆ. ಅದಕ್ಕೆ ಬೇಂದ್ರೆಯವರು ಒಂದು ಕಡೆ ಹೇಳುತ್ತಾರೆ ” ನನ್ನ ಕೈಯ ಹಿಡಿದಾಕೆ ಅಳು ನುಂಗಿ ನಗುವಾಕೆ” ಕವಿಗೆ ಇದು ಅರ್ಥವಾಗಿ ಹೆಂಡತಿಗೆ ದುಃಖವನ್ನು ತಡೆಯಬೇಡಾ ಎಂದು ಹೇಳುತ್ತಿದ್ದಾರೆ.
” ನಿನ್ನ ಕಣ್ಣಿನಾಗ ಕಾಲೂರಿ ಮಳೆಯು , ನಡನಡಕ ಹುಚ್ಚುನಗಿ ಯಾಕ?
ಹನಿ ಒಡೆಯಲಿಕ್ಕೆ ಬಂದಂತ ಮೋಡ ತಡೆದಾಂಗ ಗಾಳಿಯ ನೆವಕ
ಅತ್ತಾರೆ ಅತ್ತು ಬಿಡು ಹೊನಲು ಬರಲಿ ನಕ್ಯಾಕ ಮರೆಸತೀ ದುಃಖ?
ಎವೆ ಬಡಸಿ ಕೆಡವು ಬಿರಿಗಣ್ಣು ಬ್ಯಾಡ ತುಟಿಕಚ್ಚಿ ಹಿಡಿಯದಿರು ಬಿಕ್ಕ”
ನಿನ್ನ ಕಣ್ಣಿನಲ್ಲಿ ಮಹಾಮಳೆಯ ಮೋಡ ಇನ್ನೇನು ಜೊರಾಗಿ ಮಳೆ ಸುರಿಸಲು ತಯಾರಿದೆ. ನಿನ್ನಲ್ಲಿ ದುಃಖ ಉಮ್ಮಳಸಿ ಬಂದಿದೆ. ನನಗೋಸ್ಕರ ಅದನ್ನು ಬಿಗಿ ಹಿಡಿಯಬೇಡ. ತಡೆದು ನನಗೋಸ್ಕರ ನಗಬೇಡಾ ಅದೆಷ್ಟು ಅಳುವಿದೆಯೋ ಅದೆಲ್ಲವೂ ಹೊಳ್ಯೆಯಾಗಿ ಹರಿದು ಬಿಡಲಿ ಎನ್ನುತ್ತಾರೆ. ದುಃಖವನ್ನು ಒತ್ತಿಕ್ಕಿ ಹಿಡಿದರೆ ಕಣ್ಣುಗಳು ಬಿರಿಯುತ್ತವೆ, ತುಟಿ ಕಚ್ಚಬೇಡಾ ಎಂದು ಕವಿ ಸಮಾಧಾನ ಪಡಿಸುತ್ತಾರೆ. ಇಂತಹ ಸಂದರ್ಭದಲ್ಲಿ ಇನ್ನೇನು ಸಮಾಧಾನ ಮಾಡಲು ಸಾಧ್ಯ?ಈ ಕವನದಲ್ಲಿ ಬೇಂದ್ರೆಯವರು ಇನ್ನೆಷ್ಟೊ ವಿಷಯಗಳನ್ನು ಸಾಲಿನಲ್ಲಿ ಹೇಳದೆಯೇ ಹೇಳಿದ್ದಾರೆ. ಎಂತಹ ಅಭೂತಪೂರ್ಣ ಕವನ. ದುಃಖ, ಭಯ, ತತ್ವ,ಪರಸ್ಪರ ಸತಿ ಪತಿಗಳ ಪ್ರೀತಿ, ಒಲುಮೆ, ಎದೆಯ ಮಿಡಿತ ಮತ್ತು ಗಂಡಹೆಂಡತಿ ನಡುವಿನ ಪರಸ್ಪರ ತಿಳುವಳಿಕೆ, ಅರ್ಥ, ಕಾಳಜಿ ಹೀಗೆ ಹಲವಾರು ವಿಷಯಗಳು ಬಂದು ಹೋಗುತ್ತವೆ.
ಜೀವನದಲ್ಲಿ ಸುಖವಿರುವಾಗ ತಿಳುವಳಿಕೆ ಹಾಗೂ ಬದುಕಿನ ಅರ್ಥ ಅರ್ಥವಾಗುವುದಿಲ್ಲ. ದುಃಖವು ಎಲ್ಲವನ್ನು ಕಲಿಸುವ ಪರಮ ಗುರುವು. ತಮ್ಮ ಜೀವಿತಾವಧಿಯಲ್ಲಿ ಕೆಲವು ಮಕ್ಕಳನ್ನು ಬೇಂದ್ರೆಯವರು ಕಳೆದುಕೊಂಡರು. ಆದರೂ ಅಪಾರ ಸಾತ್ವಿಕತೆ, ಬುದ್ಧಿ ಹಾಗೂ ಜೀವನಪ್ರೀತಿ ಅವರನ್ನು ತುಂಬಾ ಎತ್ತರಕ್ಕೆ ಏರಿಸಿತು. ನಮ್ಮೆಲ್ಲರಿಗೂ ಸ್ಪೂರ್ತಿದಾಯಕರನ್ನಾಗಿಸಿತು. ವರಕವಿ ಬೇಂದ್ರೆಯವರಿಗೆ ಅನಂತಾನಂತ ನಮಸ್ಕಾರಗಳು.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಮೈಸೂರು ಜಿಲ್ಲೆಯ ಸಂಕ್ಷಿಪ್ತ ಮಾಹಿತಿಯ ಕವನ
ರಾಮನಗರ ಜಿಲ್ಲೆಯ ಸಂಕ್ಷಿಪ್ತ ಪರಿಚಯದ ಕವನ (ಜಿಲ್ಲೆ ೨೯)