ಆರೋಗ್ಯ ಕ್ಷೇತ್ರದ ಆಮೂಲಾಗ್ರ ಬದಲಾವಣೆಗೆ ಖಾಸಗಿ ಸಹಯೋಗ: ಸಚಿವ ಡಾ.ಕೆ.ಸುಧಾಕರ್ ಪ್ರಕಟ

Team Newsnap
2 Min Read
  • ರಾಜ್ಯದ ಆರೋಗ್ಯ ಕ್ಷೇತ್ರದ ಭವಿಷ್ಯದ ದೃಷ್ಟಿಯಿಂದ ಹೊಸ ಕ್ರಮ
  • ಖಾಸಗಿ ಸಹಭಾಗಿತ್ವದಲ್ಲಿ ಆರೋಗ್ಯ ವಲಯದ ಪ್ರಗತಿ

ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಹೆಚ್ಚಿಸುವುದು ಸೇರಿದಂತೆ ಸೇವೆಯಲ್ಲಿ ಆಮೂಲಾಗ್ರ ಸುಧಾರಣೆ ತರಲು ಖಾಸಗಿ ಸಹಭಾಗಿತ್ವದ ವ್ಯವಸ್ಥೆ ತರಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್ ಆರ್) ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲು ಸಿಎಸ್ ಆರ್ ಸಮಿತಿ ರಚಿಸಿದೆ. ವಿಧಾನಸೌಧದಲ್ಲಿ, ಸಮಿತಿಯ ಮುಖ್ಯಸ್ಥೆಯಾಗಿ ನೇಮಕಗೊಂಡ ಗೀತಾಂಜಲಿ ಕಿರ್ಲೋಸ್ಕರ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ವಾಗತ ಕೋರಿದರು.

sudhakar

ಈ ವೇಳೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರಲು, ಕೋವಿಡ್ ಬಂದ ಹಂತದಲ್ಲೇ ಆಮೂಲಾಗ್ರ ಬದಲಾವಣೆ ತಂದು ಮೂಲಸೌಕರ್ಯ ಹೆಚ್ಚಿಸಲು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ ಅಭಿವೃದ್ಧಿ ತರಲಾಗುತ್ತಿದೆ. ನಮ್ಮಲ್ಲಿ ಅನೇಕ ಕಂಪನಿಗಳಿದ್ದು, 2014-15 ನೇ ಸಾಲಿನಲ್ಲಿ ಈ ಕಂಪನಿಗಳು ಸಿಎಸ್ ಆರ್ ಗೆ 4-5 ಸಾವಿರ ಕೋಟಿ ರೂ. ಹೂಡಿಕೆ ಮಾಡುತ್ತಿದ್ದವು. ಕಳೆದ ವರ್ಷ ಇದು ದುಪ್ಪಟ್ಟಾಗಿದೆ. ಇದರಿಂದಾಗಿ ಸಾಮಾಜಿಕ ಚಟುವಟಿಕೆಗೆ ಒತ್ತು ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಆರೋಗ್ಯ ಕ್ಷೇತ್ರ ಸಿಎಸ್ ಆರ್ ನಿಂದ ಅಭಿವೃದ್ಧಿಯಾಗಬೇಕು. ಮುಖ್ಯವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೇರಬೇಕು ಎಂಬ ಉದ್ದೇಶವನ್ನು ಕಂಪನಿಗಳಿಗೆ ತಿಳಿಸಲಾಗಿದೆ. ಈ ಬಗ್ಗೆ ಗೀತಾಂಜಲಿ ಕಿರ್ಲೋಸ್ಕರ್ ಅವರನ್ನು ಕೇಳಿದಾಗ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಅನೇಕ ಕಂಪನಿಗಳು ಜನೋಪಕಾರಿ ಕೆಲಸಗಳನ್ನು ಮಾಡುತ್ತಿವೆ. ಆರೋಗ್ಯ ಕ್ಷೇತ್ರಕ್ಕೆ 25% ರಷ್ಟು ಖರ್ಚು ಮಾಡಬೇಕು ಎಂದು ಕೇಂದ್ರ ಸರ್ಕಾರ ಕಾನೂನಿನಲ್ಲಿ ತಿದ್ದುಪಡಿ ತಂದಿದೆ. ಸಮುದಾಯ ಆರೋಗ್ಯ ಕೇಂದ್ರ, ಪಿಎಚ್ ಸಿಗಳನ್ನು ಅಭಿವೃದ್ಧಿಪಡಿಸಬೇಕಿದೆ. ಆರೋಗ್ಯ ಮಾತ್ರವಲ್ಲದೆ, ಸ್ವಚ್ಛತೆ ಮೊದಲಾದ ಕೆಲಸಗಳಿಗೆ ಹಣ ಖರ್ಚು ಮಾಡಬಹುದು. ಈ ಹೊಸ ಸಮಿತಿಯು ಒಂದು ತಜ್ಞರ ತಂಡವಾಗಿ ಸರ್ಕಾರೊಂದಿಗೆ ಕಾರ್ಯನಿರ್ವಹಿಸಲಿದೆ. ಈಗಿನ ಸ್ಥಿತಿಯಲ್ಲಿ ಸಿಎಸ್ ಆರ್ ಹಣ ಅಗತ್ಯ ಎಂದರು.

ರಾಜ್ಯದಲ್ಲಿ 2,500 ಪಿಎಚ್ ಸಿಗಳಿವೆ. ಇದನ್ನು ಮೇಲ್ದರ್ಜೆಗೇರಿಸಲು ಸಾವಿರಾರು ಕೋಟಿ ರೂ. ಬೇಕು. ಇದಕ್ಕಾಗಿ ಸಿಎಸ್ ಆರ್ ಅಗತ್ಯ. 40% ಐಟಿ ರಫ್ತು ಕರ್ನಾಟಕದಿಂದಲೇ ಆಗುತ್ತಿದೆ. ಇದಲ್ಲದೆ, ಬೇರೆ ಕ್ಷೇತ್ರದ ಕಂಪನಿಗಳೂ ಇವೆ. ಈ ಎಲ್ಲ ಕಂಪನಿಗಳೊಂದಿಗೆ ಈ ಸಮಿತಿ ಮಾತುಕತೆ ನಡೆಸಲಿದೆ. ಇದು ಹೆಚ್ಚು ಫಲ ಕೊಡಲಿದೆ ಎಂದರು.

ಮೊದಲ ಹಂತದಲ್ಲಿ ಗ್ರಾಮೀಣ ಪ್ರದೇಶಗಳ ಪಿಎಚ್ ಸಿಗಳ ಅಭಿವೃದ್ಧಿಗೆ ಸಂಪೂರ್ಣ ಒತ್ತು ನೀಡಲಾಗಿದೆ. ಇಂತಹ ಸುಮಾರು 900 ಪಿಎಚ್ ಸಿಗಳಿವೆ ಎಂದರು.

Share This Article
Leave a comment