November 16, 2024

Newsnap Kannada

The World at your finger tips!

deepa1

ಬೆಲೆ ಏರಿಕೆ, ಮಾಧ್ಯಮಗಳ ಕಪಟತನ- ಜನಸಾಮಾನ್ಯರ ಮೌನ

Spread the love

ದೀರ್ಘಕಾಲದ ಕೋವಿಡ್ ಎಂಬ ಸಾಂಕ್ರಾಮಿಕ ರೋಗದ ಹೊಡೆತವು ಇನ್ನೂ ಕಾಡುತ್ತಲೇ ಇರುವಾಗ, ಲಾಕ್ ಡೌನ್ ಪರಿಣಾಮದಿಂದ ಇನ್ನೂ ಚೇತರಿಸಿಕೊಳ್ಳಲು ಪರದಾಡುತ್ತಿರುವಾಗ, ಜೀವ ಜೀವನದ ಆಯ್ಕೆಯಲ್ಲಿ ಇನ್ನೂ ಗೊಂದಲದಲ್ಲಿ ಇರುವಾಗ, ಬಹುತೇಕ ಮಧ್ಯಮ ವರ್ಗದ ಆರ್ಥಿಕ ಪರಿಸ್ಥಿತಿ ಇನ್ನೂ ಹದಗೆಡುತ್ತಲೇ ಇರುವಾಗ, ದಿನನಿತ್ಯದ ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೆ ಏರುತ್ತಲೇರುವಾಗ………

ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂದು ಕರೆಯಲ್ಪಡುವ ಮಾಧ್ಯಮ ಲೋಕ, ಜನಸಾಮಾನ್ಯರ ಧ್ವನಿಯಾಗಬೇಕಿದ್ದ ಪತ್ರಕರ್ತರುಗಳು ಈ ಕ್ಷಣದಲ್ಲಿ ಭಾರತಕ್ಕೆ ಅಷ್ಟೇನೂ ಮಹತ್ವವಲ್ಲದ, ಭಾರತದ ವಿದೇಶಾಂಗ ಸಚಿವಾಲಯ ನಿರ್ವಹಿಸುವ ಸಾಮರ್ಥ್ಯ ಇರುವ ತಾಲಿಬಾನ್ ಬಗ್ಗೆಯೇ ಹೆಚ್ಚು ಮಾತನಾಡುತ್ತಾ ಬೆಲೆ ಏರಿಕೆಯ ಪರಿಣಾಮಗಳನ್ನು ನಿರ್ಲಕ್ಷಿಸುತ್ತಿರುವುದು ತುಂಬಾ ನೋವಿನ ಸಂಗತಿ……

ನಮ್ಮ ಸುತ್ತಮುತ್ತಲಿನ ಜನರ ಬದುಕು ಬವಣೆ, ಅವರು ಎದುರಿಸುತ್ತಿರುವ ಅನೇಕ ಸಮಸ್ಯೆಗಳು, ವ್ಯಾಪಾರ ಉದ್ಯೋಗದ ಕುಸಿತದಿಂದ ಅನುಭವಿಸುತ್ತಿರುವ ಮಾನಸಿಕ ಹಿಂಸೆ ಮುಂತಾದ ಎಲ್ಲವೂ ನಮ್ಮ ಅರಿವಿಗೆ ಬರಲು ದೊಡ್ಡ ಅಧ್ಯಯನದ ಅವಶ್ಯಕತೆ ಇಲ್ಲ. ಮನುಷ್ಯತ್ವ ಇರುವ ಎಲ್ಲರಿಗೂ ಅದು ಅರ್ಥವಾಗುತ್ತದೆ. ಅದಕ್ಕೆ ಧ್ವನಿಯಾಗಿ ಆಡಳಿತ ವ್ಯವಸ್ಥೆಯನ್ನು ಅದರ ಜವಾಬ್ದಾರಿಯನ್ನು ಸದಾ ಎಚ್ಚರಿಸಬೇಕಾದ ಮಾಧ್ಯಮಗಳ ದಿವ್ಯ ನಿರ್ಲಕ್ಷ್ಯ ಮತ್ತು ತೋರಿಕೆಯ ಕೆಲವು ಸಾಲುಗಳು ಅವು ಹಾದಿ ತಪ್ಪುತ್ತಿರುವ ಸ್ಪಷ್ಟ ಸೂಚನೆ ಸಿಗುತ್ತಿದೆ……..

ಕಾರಣಗಳು ಏನೇ ಇರಲಿ, ಸರ್ಕಾರಗಳು ಯಾವುದೇ ಇರಲಿ ಬೆಲೆ ಏರಿಕೆಯನ್ನು ಸಾಮಾನ್ಯರ ಹಿತದೃಷ್ಟಿಯಿಂದ ಸಹಿಸಿಕೊಳ್ಳುವುದ ತುಂಬಾ ಕಷ್ಟ. ಅದರ ಪರೋಕ್ಷ ದುಷ್ಪರಿಣಾಮ ಇಡೀ ವ್ಯವಸ್ಥೆ ದಾರಿ ತಪ್ಪಿ ಬದುಕು ನಲುಗುವಂತೆ ಮಾಡುತ್ತದೆ. ಕೌಟುಂಬಿಕ ಜೀವನ ಖಂಡಿತ ನೆಮ್ಮದಿಯನ್ನು ಕಳೆದುಕೊಳ್ಳುತ್ತದೆ. ಆರೋಗ್ಯ ಕುಸಿಯುತ್ತದೆ. ಮಕ್ಕಳ ಭವಿಷ್ಯಕ್ಕೆ ಮಾರಕವಾಗುತ್ತದೆ. ಸಮಾಜದಲ್ಲಿ ಮೋಸ ವಂಚನೆ ಕಳ್ಳತನಗಳು ಸೇರಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತದೆ. ಇದರ ಪರಿಣಾಮ ಕಷ್ಟಗಳ ಮೇಲೆ ಕಷ್ಟಗಳು ಎಂಬ ಮನೋಭಾವ ವ್ಯಕ್ತಿಯನ್ನು ಸಂಪೂರ್ಣ ಆವರಿಸುತ್ತದೆ. ದಾರಿ ಕಾಣದೆ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಇರುತ್ತವೆ………

ಈ ಬಗ್ಗೆ ಹೆಚ್ಚು ಹೆಚ್ಚು ಗಮನಸೆಳೆಯುವ ಸುದ್ದಿಗಳನ್ನು ಪ್ರಸಾರ ಮಾಡದೆ ಕಪಟತನ ಪ್ರದರ್ಶಿಸುತ್ತಿರುವ ಮಾಧ್ಯಮಗಳ ನೈತಿಕತೆ ಮತ್ತು ಅವು ಜನರ ಭಾವನೆಗಳನ್ನು ಸರಿಯಾಗಿ ಗುರುತಿಸುವಲ್ಲಿ ಸಂಪೂರ್ಣ ವಿಫಲವಾಗಿರುವುದು ಕಾಣಬರುತ್ತದೆ. ಜನಪ್ರಿಯತೆಯೇ ಸತ್ಯವಲ್ಲ, ಕಣ್ಣಿಗೆ ಕಾಣುವುದು ಮಾತ್ರ ಸುದ್ದಿಯಲ್ಲ ಎಂಬ ಸೂಕ್ಷ್ಮವನ್ನು ಮಾಧ್ಯಮಗಳ ಗ್ರಹಿಸುತ್ತಿಲ್ಲ.

ಹಾಗೆಯೇ……..

ಇನ್ನೂ ಆಶ್ಚರ್ಯಕರ ವೆಂದರೆ ಜನಸಾಮಾನ್ಯರ ಮೌನ…..

ಬಹುಶಃ ಆಲ್ಬರ್ಟ್ ಐನ್ಸ್ಟೈನ್ ಹೇಳಿದಂತೆ ನೆನಪು ” ಸಮಾಜದ ಕೆಡುಕು ಕೇವಲ ಕೆಟ್ಟವರ ಕೆಟ್ಟತನದಿಂದ ಮಾತ್ರವಲ್ಲ ಒಳ್ಖೆಯವರ ಮೌನವೂ ಕಾರಣವಾಗುತ್ತದೆ “

ಈ ಮಾತುಗಳು ಈಗ ನಿಜವಾಗುವ ಲಕ್ಷಣಗಳು ಗೋಚರಿಸುತ್ತಿದೆ. ತಮಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಧ್ವನಿ ಎತ್ತದ ಪ್ರತಿಭಟನೆ ಮಾಡದ ಅಸಹಾಯಕ ಸ್ಥಿತಿಗೆ ಜನಸಾಮಾನ್ಯರು ತಲುಪಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ. ರಾಜಕೀಯ ಏನೇ ಇರಲಿ ಸರ್ಕಾರಗಳು ಸದಾ ಜಾಗೃತಾವಸ್ಥೆಯಲ್ಲಿ ಇದ್ದು ತಮ್ಮ ದುಂದುವೆಚ್ಚಗಳನ್ನು ಕಡಿಮೆ ಮಾಡಿಕೊಂಡು ಆದಾಯದ ವಿವಿಧ ಮೂಲಗಳನ್ನು ಸರಿಯಾಗಿ ಗುರುತಿಸಿ, ದುರುಪಯೋಗವಾಗುತ್ತಿರುವ ಅನೇಕ ಯೋಜನೆಗಳನ್ನು ಗುರುತಿಸಿ, ನಿಷ್ಪ್ರಯೋಜಕವಾದ ವಿಷಯಗಳಿಗೆ ಹಣದ ಹರಿವು ನಿಲ್ಲಿಸಿ ಜೀವನಾವಶ್ಯಕ ವಸ್ತುಗಳ ಬೆಲೆ ನಿಯಂತ್ರಿಸುವ ಬಹುದೊಡ್ಡ ಜವಾಬ್ದಾರಿ ಮತ್ತು ಕರ್ತವ್ಯ ಪಾಲನೆ ಮಾಡಬೇಕಿದೆ…..

ಜನರು ಕೂಡ ದಿವ್ಯ ಮೌನವನ್ನು ಮುರಿದು ಸರ್ಕಾರಕ್ಕೆ, ಆಡಳಿತ ವ್ಯವಸ್ಥೆಗೆ ತಮ್ಮ ಆಕ್ರೋಶವನ್ನು ವಿವಿಧ ಮಾರ್ಗಗಳ ಮೂಲಕ ವ್ಯಕ್ತಪಡಿಸಬೇಕಿದೆ. ತಮ್ಮ ಸ್ವಾರ್ಥ ಸಣ್ಣತನ ಮರೆತು ಸಮಾಜದ ಹಿತಕ್ಕಾಗಿ ಮಾತನಾಡಬೇಕಿದೆ. ಸಾವು ಸೋಲಿನ ಭಯದಿಂದ ಹೊರಬಂದು ಧೈರ್ಯವಾಗಿ ಅಭಿಪ್ರಾಯ ವ್ಯಕ್ತಪಡಿಸಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಂಕಷ್ಟಕ್ಕೆ ಸಿಲುಕಬಹುದು……

ಜನರ ಜೀವನಮಟ್ಟ ಸುಧಾರಣೆಯಾಗಬೇಕಾದರೆ ಜನಸಾಮಾನ್ಯರು ಸದಾ ಜಾಗೃತಾವಸ್ಥೆಯಲ್ಲಿ ಇರಬೇಕು.
ಇಲ್ಲದಿದ್ದರೆ ಸರ್ಕಾರಗಳು ನಮ್ಮನ್ನು ನಿರಂತರ ಶೋಷಿಸುತ್ತಿರುತ್ತವೆ. ದಯವಿಟ್ಟು ಎಚ್ಚರಗೊಳ್ಳಿ……

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!