ಪಿಟಿಐ ಒಪ್ಪಂದ ಕಡಿದುಕೊಂಡ ಪ್ರಸಾರ ಭಾರತಿ?

Team Newsnap
1 Min Read

ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ (ಪಿಟಿಐ) ಸ್ವತಂತ್ರ ಪ್ರಸಾರದ ವರದಿಗಳ ಬಗ್ಗೆ ಅಸಮಾಧಾನ ಹೊಂದಿದ್ದ ಸರ್ಕಾರಿ ಸ್ವಾಮ್ಯದ ಪ್ರಸಾರ ಭಾರತಿಯು ಪಿಟಿಐನೊಂದಿಗೆ ಚಂದಾದಾರಿಕೆ‌ ಒಪ್ಪಂದವನ್ನು ಕಡಿದುಕೊಳ್ಳಲು ನಿರ್ಧರಿಸಿದೆ.

ಪ್ರಸಾರ ಭಾರತಿ ನ್ಯೂಸ್ ಸರ್ವೀಸಸ್ ಮತ್ತು ಡಿಜಿಟಲ್ ಪ್ಲಾಟ್ ಫಾರ್ಮನ ಮುಖ್ಯಸ್ಥ ಸಮೀರ್ ಕುಮಾರ್ ಸಹಿ ಮಾಡಿ ಹೊರಡಿಸಿದ ಪತ್ರದಲ್ಲಿ ‘ಪ್ರಸಾರ ಭಾರತಿಯು ಇಂಗ್ಲಿಷ್ ಪಠ್ಯ ಮತ್ತು ಎಲ್ಲಾ ದೇಶೀಯ ಸುದ್ದಿ ಸಂಸ್ಥೆಗಳಿಂದ ಸಂಬಂಧಿತ ಮಲ್ಟಿಮೀಡಿಯಾ ಸೇವೆಗಳಿಗೆ ಡಿಜಿಟಲ್ ಚಂದಾದಾರಿಕೆಗಾಗಿ ಹೊಸ ಪ್ರಸ್ತಾವನೆಗಳನ್ನು ಕರೆಯಲು ನಿರ್ಧರಿಸಿದೆ. ಈ ಟೆಂಡರ್ ಪ್ರಕ್ರಿಯೆಯಲ್ಲಿ ಪಿಟಿಐ ಕೂಡ ಭಾಗವಹಿಸಬಹುದು’ ಎಂದು ತಿಳಿಸಲಾಗಿದೆ.

ಈ ವರ್ಷಸ ಜೂನ್‌ನಲ್ಲಿ ಪಿಟಿಐ, ಲಡಾಖ್ ಗಡಿಯಲ್ಲಿ ಭಾರತ-ಚೀನಾ ಗಡಿ ಬಿಕ್ಕಟ್ಟಿನ ಕುರಿತು ಭಾರತದ ಚೀನಾದ ರಾಯಭಾರಿ ಮತ್ತು ಚೀನಾದ ಭಾರತೀಯ ರಾಯಭಾರಿಯೊಂದಿಗಿನ ಅವಳಿ ಸಂದರ್ಶನ ನಡೆಸಿತ್ತು. ಆದರೆ ಈ ಸಂದರ್ಶನವು ಸರ್ಕಾರಕ್ಕೆ ಅಸಮಾಧಾನ ತಂದಿತ್ತು. ಭಾರತೀಯ ಹಿರಿಯ ಅಧಿಕಾರಿಯೊಬ್ಬರು ಪಿಟಿಐನ ಈ ವರದಿಯನ್ನು ರಾಷ್ಟ್ರ ವಿರೋಧಿ ಪ್ರಸಾರ ಎಂದು ಕರೆದು ಖಂಡಿಸಿದ್ದರು.

ಅಲ್ಲದೇ ಪಿಟಿಐ ವರದಿಗಳ ಬಗ್ಗೆ ಅಸಮಾಧಾನ ಹೊಂದಿದ್ದ ಕೇಂದ್ರ ಸರ್ಕಾರ 2016ರಲ್ಲಿ ತಾನು ಪಾವತಿಸಲಿರುವ ಶುಲ್ಕದ ಶೇ. 75% ರಷ್ಟು‌ ಮಾತ್ರ ಪಿಟಿಐಗೆ ಪಾವತಿಸಲಾಗುವುದು ಎಂದಿತ್ತು.

ಮೂಲಗಳ ಪ್ರಕಾರ ಸದ್ಯ ಪ್ರಸಾರ ಭಾರತಿಯು ಪಿಟಿಐಗೆ ವಾರ್ಷಿಕ 11 ಕೋಟಿ ರೂಪಾಯಿಗಳಷ್ಟು ಚಂದಾ ಶುಲ್ಕ ನೀಡಬೇಕಿದೆ. ಹಾಗೆಯೇ ಕೆಲವು ಪಿಟಿಐನ ತೆರವಾದ ಸಂಪಾದಕ ಸ್ಥಾನಕ್ಕೆ ಅರುಣ್ ಜೇಟ್ಲಿ ಹೇಳಿದ್ದ ಸಂಪಾದಕರನ್ನು ಪಿಟಿಐ ಆಡಳಿತ ಮಂಡಳಿ ನೇಮಿಸಿರಲಿಲ್ಲ. ಹಾಗಾಗಿ ಕೇಂದ್ರಕ್ಕೆ ಪಿಟಿಐ ಮೇಲೆ ಅಸಮಾಧಾನ ಇರುವದರಿಂದ ಪಿಟಿಐ ಜೊತೆ ಸಂಬಂಧ ಕಡಿದುಕೊಳ್ಳಲು ನಿರ್ಧಾರ ಮಾಡಿದೆ.

Share This Article
Leave a comment