ಗಣಪತಿಯ ಸ್ತುತಿ

Team Newsnap
1 Min Read
purnima kulkarni
ಪೂರ್ಣಿಮಾ ಕುಲಕರ್ಣಿ

ಪರಶಿವಸುತನೇ ಪಾರ್ವತಿತನಯನೇ
ತಾಯಿಯಾಣತಿಗೆ ಕಾವಲು ಕಾಯ್ದವನೇ
ತಾಯಾಣತಿಗೆ ತಂದೆಯನೇ ತಡೆದವನೇ
ಶಿವ ಶಿರ ತರಿದಾಗುದಿಸಿದ ಗಜಾನನನೇ

ಪ್ರಥಮ ಪೂಜಿತನೆ ತ್ರಿಜಗ ವಂದ್ಯನೆ
ಸಿದ್ಧಿಬುದ್ಧಿ ಕರುಣಿಸೋ ವಿನಾಯಕನೆ
ದುರಿತ ನಿವಾರಣ ಭವಭಯ ಹರಣನೆ
ವಿಘ್ನವ ತೊಲಗಿಸಿ ಪೊರೆ ವಿಘ್ನೇಶ್ವರನೆ

ಮುತ್ತಿನಾರ ಹೇಮಕಂಕಣ ಧರಿಸಿದವನೆ
ರತ್ನಕಿರೀಟ ತೊಟ್ಟ ಪಾಶಾಂಕುಶಧಾರನೇ
ಹೊಟ್ಟೆ ಬಿರಿಯೆ ತಾ ಹಾವ ಬಿಗಿದವನೇ
ನೀ ಬಾರಯ್ಯಾ ಬಾ ಮೂಷಿಕವಾಹನನೇ

ಮೋದಕ ಪ್ರಿಯನೇ ತಿಂಡಿಪೋತನೇ
ಉಂಡೆ ಚಕ್ಕುಲಿಯ ಮೆಲ್ಲುವ ಗಣಪನೆ
ಕಡುಬು ಪ್ರಿಯ ನೀನು ಲಂಬೋದರನೆ
ಪಂಚಭಕ್ಷ್ಯ ನೀಡುವೆ ಬಾ ಕರಿಮುಖನೆ

ನೀ ಮೆಚ್ಚಲು ಗರಿಕೆಗೆ ಸಿಕ್ಕಿತು ಗರಿಮೆ
ಎಕ್ಕದ ಹೂವಿಗೆ ನೀ ನೀಡಿಹೆ ಹಿರಿಮೆ
ಪಾದಪಂಕದಲಿ ಪದ್ಮಕಿಹುದು ಮಹಿಮೆ
ಬೇರೇನೂ ಬೇಡ ಸಾಕು ನಿನ್ನೊಲುಮೆ

ಗಣೇಶನಿಂದ ಕಲಿಯುವ ಅದ್ಭುತ ಪಾಠಗಳು

ಅಪಹಾಸ್ಯಗೈದ ಚಂದ್ರನ ಶಿಕ್ಷಿಸಿದವನೇ
ಅಪವಾದಕೆ ಸಿಕ್ಕ ಕೃಷ್ಣನ ಬಿಡಿಸಿದವನೇ
ನಿನ್ನ ಅಭಯಹಸ್ತ ಒಂದಿರೆ ಸಾಕೆಮಗೆ
ಶಿರಬಾಗಿ ನಮಿಪೆ ಪಾದಾರವಿಂದಗಳಿಗೆ

Share This Article
Leave a comment