ಕಣವಿ – ಕಾವ್ಯ ಕಸುಬಿ

Team Newsnap
1 Min Read

ಚನ್ನವೀರ ಕಣಿವಿ ನೆನೆದು ಕವಿ ಕಾವ್ಯ ನಮನ “ಕಣವಿ – ಕಾವ್ಯ ಕಸುಬಿ”

ಚೆಂಬೆಳಕಿನ ಹೊಂಬಿಸಿಲಿನ
ಮೆಲುನುಡಿಯ ಕಣಜ
ನುಡಿಭಕ್ತಿಯ ನಾಡಪ್ರೇಮದ
ಹೊಂಬೆಳಕದು ಸಹಜ

ವಿದ್ಯಾದಿಚೇತನ ಆತ್ಮವಿಕಾಸಿ
ಅಪ್ರತಿಮ ಹೃದಯ ಸಂಸ್ಕಾರಿ
ಸಮನ್ವಯ ಜೀವಧ್ವನಿಯ
ಕರುನಾಡಿನ ಭಾವ ಸಂಚಾರಿ

ಹೊರಳಿದ್ದು ನಡೆ ನುಡಿ
ಬೆಳಗಿ ಬೆಳಕಾಗಿಪ ಸೂರ್ಯನೆಡೆಗೆ
ಅರಳಿದ್ದು ನಾಸಿಕವ ಹಿಗ್ಗಿಸುವ
ಪರಿಮಳದ ಸಗ್ಗದೆಡೆಗೆ

ಲೆಕ್ಕಣಿ ತುಂಬೆಲ್ಲ ಮುತ್ತಿನಾಭರಣ
ಬರೆದದ್ದೆಲ್ಲ ಶಿಲ್ಪಕಲಾಕೃತಿ
ಅವ ಜೀವಂತ ಗತಿ
ನೆತ್ತರಿನ ಕೊಡುಗೆಯ ಸ್ಮೃತಿ

ಇನಿದನಿಯ ಜೇನ ಸುರಿಸಿದ
ಶಾಂತಿಯ ರೂಪ
ಗಗನದಿ ಸಾಗಿದ ಬಾಗಿದ ಮೋಡದ
ಸ್ನಿಗ್ಧತೆಯ ಭೂಪ

ವಿಶ್ವಭಾರತಿಗೆ ಕನ್ನಡದಾರತಿ
ಬೆಳಗಿದ ಭಾಗ್ಯದ ಕಾವ್ಯಾಕ್ಷಿ
ದಯೆ ಧರ್ಮಗಳ ಮೂಲ ತರಂಗ
ನುಡಿಸಿದ ನೀನೀಗ ಆಕಾಶಬುಟ್ಟಿ

ಕಿನ್ನರಿ ಲೋಕದ ಮಧು ಭಾವಜೀವಿ
ಬೆರಳು ನುಡಿಯಲು ನೀ ಕಾವ್ಯ ಕಸುಬಿ
ನೆಲಮುಗಿಲಿಗೆ ದಾರಿದೀಪದ ಬಣವಿ
ಕುಸುರಿಯ ಚಿರಂತನ ದಾಹದ ನೀ ಕಣವಿ

IMG 20180306 WA0008 1 edited
ಡಾ . ಶುಭಶ್ರೀಪ್ರಸಾದ್ ಮಂಡ್ಯ

Share This Article
Leave a comment