ದಾಳಿ ಇಡುತ್ತಿದ್ದಾರೆ ಸೋಷಿಯಲ್ ಮೀಡಿಯಾ ಏಜೆಂಟ್ ಗಳು.
ದಿಕ್ಕು ತಪ್ಪಿಸುತ್ತಿದ್ದಾರೆ ಸಾಮಾಜಿಕ ಜಾಲತಾಣಗಳ ಮಧ್ಯವರ್ತಿಗಳು…..
ನಮ್ಮ ಜನರ ಮನಸ್ಸುಗಳನ್ನು ನಿಯಂತ್ರಿಸುತ್ತಿದ್ದಾರೆ ಈ ಮಾಧ್ಯಮದವರು.
ಇಡೀ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಅವರನ್ನು ಸುಲಭವಾಗಿ ಪತ್ತೆ ಹಚ್ಚುವುದು ಸಾಧ್ಯವಿಲ್ಲ. ನಮ್ಮ ನಿಮ್ಮೊಳಗೆ ಅವರೂ ಒಬ್ಬರಾಗಿದ್ದಾರೆ. ಎಚ್ಚರಿಕೆ.
ಸೋಷಿಯಲ್ ಮೀಡಿಯಾಗಳ ಪ್ರಭಾವ ಮತ್ತು ಬಹುಬೇಗ ಉದ್ವೇಗಕ್ಕೆ ಒಳಗಾಗುವ ಜನರ ಅಜ್ಞಾನ ಮತ್ತು ಮಾನಸಿಕ ಸ್ಥಿತಿಯನ್ನು ಚೆನ್ನಾಗಿ ಅರಿತಿರುವ ರಾಜಕೀಯ ಮತ್ತು ಧಾರ್ಮಿಕ ನಾಯಕರು ಇದರ ಸಂಪೂರ್ಣ ಉಪಯೋಗ ಪಡೆಯುತ್ತಿದ್ದಾರೆ.
ಹಣ ನೀಡಿಯೋ ಅಥವಾ ಹುಚ್ಚು ಭಾವನೆ ಕೆರಳಿಸಿಯೋ, ಟಿವಿ, ಪತ್ರಿಕೆ, ಟ್ವಿಟರ್, ಫೇಸ್‌ಬುಕ್, ವಾಟ್ಸ್ ಆಪ್ ಮುಂತಾದವುಗಳಲ್ಲಿ ತಮ್ಮ ಏಜೆಂಟ್ ಗಳನ್ನು ನುಗ್ಗಿಸಿ ಸುದ್ದಿಗಳನ್ನು ಹರಿಯಬಿಡುತ್ತಾರೆ.
ಅಲ್ಲಿ ಏನೋ ಆಗಿದೆ, ಇಲ್ಲಿ ಇನ್ನೇನೋ ಆಗುತ್ತದೆ, ಅವರು ಹಾಗೆ ಹೇಳಿದರು, ಇವರು ಹೀಗೆ ಮಾಡಿದರು……
ಹೀಗೆ ಸಾಲು ಸಾಲು ಸುದ್ದಿಗಳನ್ನು ಮತ್ತು ಚಿತ್ರಗಳನ್ನು ಬೇಕಂತಲೇ ತಿರುಚಿ ಪ್ರಚಾರ ಮಾಡಲಾಗುತ್ತದೆ.
ಸುದ್ದಿಗಳ ಸತ್ಯಾಸತ್ಯತೆಯನ್ನು ಅರಿಯಲು ಇನ್ನೂ ಸಾಧ್ಯವಾಗದ ಮನಸ್ಥಿತಿಯ ಜನ ಗೊಂದಲಕ್ಕೊಳಗಾಗಿ ಸತ್ಯ ಮತ್ತು ಸುಳ್ಳಿನ ವ್ಯತ್ಯಾಸವನ್ನೇ ಗುರುತಿಸಲಾರದಷ್ಟು ಸೂಕ್ಷ್ಮತೆ ಕಳೆದುಕೊಂಡಿದ್ದಾರೆ.
ಆ ಏಜೆಂಟ್ ಗಳು ಬಳಸುವ ಭಾಷೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ…….
ತಮ್ಮ ನಾಯಕ ಅಥವಾ ಪಕ್ಷ ಅಥವಾ ಧರ್ಮವನ್ನು ಅತಿಯಾಗಿ ಹೊಗಳುವ ಮತ್ತು ಅವರ ವಿರೋಧಿಗಳನ್ನು ಕೆಟ್ಟದಾಗಿ ನಿಂದಿಸುವ ರೀತಿಯಲ್ಲಿ ಇರುತ್ತದೆ. ಅದನ್ನು ಓದುವವರ ರಕ್ತ ಕುದಿಯುವಂತೆ ಪ್ರಚೋದಿಸುತ್ತಾರೆ. ಭಿನ್ನ ಅಭಿಪ್ರಾಯಯದ ಜನರ ವೈಯಕ್ತಿಕ ಮಾಹಿತಿಯನ್ನು ಕಲೆಹಾಕಿ ಅದಕ್ಕೆ ಮಸಾಲೆ ಬೆರೆಸಿ ದಾಳಿ ಮಾಡುತ್ತಾರೆ.
ವಿಷಯಗಳನ್ನು ಪರಿಶೀಲಿಸಿ ಸತ್ಯ ಸುಳ್ಳುಗಳನ್ನು ಬೇರ್ಪಡಿಸುವ ವ್ಯವಸ್ಥೆ ಮತ್ತು ಜ್ಞಾನ ಇಲ್ಲದಿರುವುದರಿಂದ ಅದನ್ನು ವಿಮರ್ಶಿಸುವ ತಾಳ್ಮೆ ಸಹ ಮಾಯವಾಗಿರುವುದರಿಂದ ಈ ಏಜೆಂಟ್ ಗಳು ಅಪಾಯಕಾರಿಯಾಗಿ ಬೆಳೆಯುತ್ತಿದ್ದಾರೆ.
ಹಿಂದೆಂದೂ ರಾಜಕೀಯ ಆರ್ಥಿಕ ಧಾರ್ಮಿಕ ಸಾಮಾಜಿಕ ವಿಷಯಗಳ ಬಗ್ಗೆ ಅಧ್ಯಯನ ಮಾಡದ, ಚಿಂತಿಸದ, ತಲೆ ಕೆಡಿಸಿಕೊಳ್ಳದ ಜನ ಈಗ ಏಕಾಏಕಿ ಎಲ್ಲವನ್ನೂ ಬಲ್ಲವರಂತೆ ಮಾತನಾಡತೊಡಗಿದ್ದಾರೆ. ಇದು ಸ್ವಾಗತಾರ್ಹವಾದರೂ, ಮನಸ್ಸಿನಲ್ಲಿ ವಿಷ ತುಂಬಿಕೊಂಡು ದ್ವೇಷ ಹರಡುತ್ತಾ ತಮಗರಿವಿಲ್ಲದೆ ವಿಧ್ವಂಸಕ ಕೃತ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ.
ಇದನ್ನು ತಡೆಯುವುದು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಆದರೆ ನಾವುಗಳು ಅತ್ಯಂತ ತಾಳ್ಮೆಯಿಂದ ಮತ್ತು ವಿವೇಚನೆ ಬಳಸಿ ನಮ್ಮ ನಡೆ ನುಡಿಗಳಲ್ಲಿ ಬದಲಾವಣೆ ಮಾಡಿ ಕೊಂಡರೆ ಇವರ ಹಾವಳಿಗಳನ್ನು ನಿಯಂತ್ರಿಸಬಹುದು.
ಸುದ್ದಿಗಳ ಸತ್ಯಾಸತ್ಯತೆಯನ್ನು ನಮ್ಮ ಮಿತಿಯಲ್ಲಿ ಅರಿತು ಅಥವಾ ಆತ್ಮೀಯರಿಂದ ಖಚಿತಪಡಿಸಿಕೊಂಡು ನಮ್ಮ ಅಭಿಪ್ರಾಯ ರೂಪಿಸಿಕೊಳ್ಳ ಬೇಕು.
ಈ ಏಜೆಂಟ್ ಗಳನ್ನು ಗುರುತಿಸಿ ನಿಧಾನವಾಗಿ ನಿರ್ಲಕ್ಷಿಸುವ ಕೆಲಸವನ್ನು ಪ್ರಾರಂಭಿಸೋಣ.
ವಿವೇಕಾನಂದ. ಹೆಚ್.ಕೆ.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!