ನನ್ನ ಬೆಂಬಲ ಇವರುಗಳಿಗಾಗಿ.
ನೀವೂ ಸಹ ಒಮ್ಮೆ ಯೋಚಿಸಿ.ಬಂದ್ ಗಳಿಗಿಂತಲೂ ಜನ ಜಾಗೃತಿ ಇಂದಿನ ಅತ್ಯವಶ್ಯಕ ಅಗತ್ಯ………
ಅದಕ್ಕಾಗಿಯೇ…….ಭಾರತ್ ಬಂದ್ ಅನ್ನೂ ಬೆಂಬಲಿಸುವುದಿಲ್ಲ,
ನರೇಂದ್ರ ಮೋದಿಯನ್ನೂ ಬೆಂಬಲಿಸುವುದಿಲ್ಲ,
ಇವುಗಳನ್ನು ಬೆಂಬಲಿಸಲು ಕೋಟ್ಯಾನುಕೋಟಿ ಜನರಿದ್ದಾರೆ………
ಜೈಕಾರಗಳನ್ನೂ ಬೆಂಬಲಿಸುವುದಿಲ್ಲ,
ಧಿಕ್ಕಾರಗಳನ್ನೂ ಬೆಂಬಲಿಸುವುದಿಲ್ಲ,
ಬಲಪಂಥವನ್ನೂ ಬೆಂಬಲಿಸುವುದಿಲ್ಲ,
ಎಡಪಂಥವನ್ನೂ ಬೆಂಬಲಿಸುವುದಿಲ್ಲ,
ಇವುಗಳನ್ನು ಉಳಿಸಲು ಕೋಟ್ಯಾನುಕೋಟಿ ಹೋರಾಟಗಾರರಿದ್ದಾರೆ…………
ಯಾವ ಧರ್ಮವನ್ನೂ ಬೆಂಬಲಿಸುವುದಿಲ್ಲ,
ಯಾವ ದೇವರನ್ನೂ ಬೆಂಬಲಿಸುವುದಿಲ್ಲ,
ಯಾವ ಗ್ರಂಥವನ್ನೂ ಬೆಂಬಲಿಸುವುದಿಲ್ಲ,
ಯಾವ ಸಿದ್ಧಾಂತವನ್ನೂ ಬೆಂಬಲಿಸುವುದಿಲ್ಲ
ಇವುಗಳನ್ನು ರಕ್ಷಿಸಲೂ ಕೋಟ್ಯಾನುಕೋಟಿ ಭಕ್ತರಿದ್ದಾರೆ.
ಆದರೆ ನನ್ನ ಬೆಂಬಲ,…….
ಅಗೋ ಅಲ್ಲಿ ನೋಡಿ ನನ್ನ ಪುಟ್ಟ ಕಂದ ಸಮೋಸ ತಿನ್ನಲು ಕಾಸಿಲ್ಲದೆ ಬಾಯಲ್ಲಿ ಜೊಲ್ಲು ಸುರಿಸುತ್ತಾ ಆಸೆ ಕಣ್ಣುಗಳಿಂದ ನೋಡುತ್ತಾ ಬೇಕರಿಯ ಮುಂದೆ ನಿಂತಿದೆ. ಅದರ ಆಸೆ ಪೂರೈಸುವವರಿಗೆ ನನ್ನ ಬೆಂಬಲ……
ಚಳಿಗೆ ಮುದುಡಿ ಬೀದಿಯಲ್ಲಿ ಮಲಗಿದ ನನ್ನ ತಾತನಿಗೆ ಕಂಬಳಿ ಹೊದಿಸಿ ಬಿಸಿ ಕಾಫಿ ಕುಡಿಸುವವರಿಗೆ ನನ್ನ ಬೆಂಬಲ…….
ಹಳೆಯ ನೋಟಾದರೂ ಸಿಗಲಿ ಎಂದು ತನ್ನ ದೇಹ ಮಾರಿ ಕೆನ್ನೆ ಕಚ್ಚಿಸಿಕೊಂಡು ರಕ್ತ ಒರೆಸಿಕೊಳ್ಳುತ್ತಿರುವ ನನ್ನ ತಂಗಿಗೆ ಬಾಳು ಕೊಡುವವರಿಗೆ ನನ್ನ ಬೆಂಬಲ…….
ಹತ್ತು ವರ್ಷಗಳಿಂದಲೂ ಕೊನೆಗಾಲಕ್ಕೆ ಇರಲೆಂದು ಕೂಡಿಟ್ಟಿದ್ದ ನೂರರ 50 ನೋಟಿಡಿದು ಇನ್ನು ನನ್ನ ಅಂತ್ಯ ಸಮೀಪಿಸಿತು ಹಣವಿಲ್ಲದ ನಾನು ಹೆಣಕ್ಕೆ ಸಮಾನ ಎಂದು ಸಾವಿನ ನಿರೀಕ್ಷೆಯಲ್ಲಿ ಚಿಂತಾಕ್ರಾಂತಳಾದ ನನ್ನ ಅಜ್ಜಿಗೆ ಧೈರ್ಯ ಹೇಳಿ ನಾನಿದ್ದೇನೆಂದು ತಬ್ಬಿ ಸಮಾಧಾನ ಮಾಡುವವರಿಗೆ ನನ್ನ ಬೆಂಬಲ…..
ರೇಪ್ ಮಾಡಿದವನನ್ನು ಕತ್ತರಿಸುವವರಿಗಿಂತ ಅತ್ಯಾಚಾರಕ್ಕೆ ಒಳಗಾದ ನನ್ನ ಅಕ್ಕನ ನೋವಿಗೆ ಸ್ಪಂದಿಸಿ ಆಕೆಯ ಜೀವನಕ್ಕೆ ಆಧಾರವಾಗುವ ಮನಸುಗಳಿಗೆ ನನ್ನ ಬೆಂಬಲ……
ಅಕ್ಷರಗಳಲ್ಲಿ ಮಹಲುಗಳನ್ನು ಕಟ್ಟಿ, ಭಾವನೆಗಳಲ್ಲಿ ತೇಲಿ ಮೇರಾ ಭಾರತ್ ಮಹಾನ್ ಎನ್ನುವವರಿಗಿಂತ ತನ್ನ ಜೊತೆಗಾರರ ಸ್ನೇಹಿತರ ಕಷ್ಟಗಳಿಗೆ ಹೆಗಲಾಗುವ, ಅವರಿಗೆ ನಾವಿದ್ದೇವೆ ಎಂದು ಆತ್ಮವಿಶ್ವಾಸ ತುಂಬುವ ಮನುಜರಿಗೆ ನನ್ನ ಬೆಂಬಲ……
ಯಾವ ಕಾನೂನು ಬಂದರೂ ಅದರೊಳಗೆ ನುಸುಳಿ ತಮಗೆ ಅನುಕೂಲವಾಗುವಂತೆ ಅರ್ಥೈಸಿ ಈಗಾಗಲೇ ಇರುವ ಹಿಡಿತದಿಂದ ಅದರ ಮೇಲೆ ಸವಾರಿ ಮಾಡಿ ಬೇರೆ ರೀತಿ ಅದೇ ದಂಧೆಗೆ ಇಳಿಯುವವರಿಗಿಂತ,
ಆ ಕಾನೂನಿನಿಂದ ಬದುಕು ಕಳೆದುಕೊಳ್ಳುವವರಿಗೆ ಆಶ್ರಯವಾಗುವ ಆತ್ಮಗಳಿಗೆ ನನ್ನ ಬೆಂಬಲ…….
ಏಕೆಂದರೆ,
ಫಲಿತಾಂಶ ಮತ್ತು ಜನಪ್ರಿಯತೆಯ ಬಾಲದ ಹಿಂದೆ ಓಡಲು ನಾನು ಕುದುರೆ ವ್ಯಾಪಾರಿಯಲ್ಲ. ಬದುಕಿನ ಅರ್ಥ ಹುಡುಕ ಹೊರಟ ಜೀವಕೋಶಗಳ ರಾಶಿ…..
ಸಮಾಜದ ಕಟ್ಟಕಡೆಯ ವ್ಯಕ್ತಿಯ ಮುಖದಲ್ಲಿ ನಗು ನೋಡುವವರೆಗೂ ಪ್ರತಿ ಕ್ಷಣವೂ ಆಕ್ರೋಶದ ಕ್ಷಣವೇ……
- ವಿವೇಕಾನಂದ. ಹೆಚ್.ಕೆ.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!
ಹೆಂಗರುಳೇ ಕಲ್ಲಾದರೆ ನುಡಿವುದೇನು(ಬ್ಯಾಂಕರ್ಸ್ ಡೈರಿ)