ಪಾರಿಜಾತ  (Parijat)

Team Newsnap
2 Min Read

ಶ್ರೀ ಕೃಷ್ಣ ಪರಮಾತ್ಮನಿಗೆ ಅತ್ಯಂತ ಪ್ರಿಯವಾದ ದೇವ ಪುಷ್ಪ ಪಾರಿಜಾತ ,ಈ ಹೂವಿಗೆ ನೈಟ್ ಜಾಸ್ಮಿನ್ (Night Jasmine) ಎಂಬ ಹೆಸರು ಕೂಡ ಇದೆ.

ಸಾಮಾನ್ಯವಾಗಿ ಕೆಳಗೆ ಬಿದ್ದ ಹೂವುಗಳನ್ನು ದೇವರಿಗೇರಿಸುವುದಿಲ್ಲ. ಆದರೆ, ಸ್ವರ್ಗದ ವೃಕ್ಷಗಳಾದ ಕಾರಣ ಪಾರಿಜಾತ ಹಾಗೂ ಬಕುಳದ ಹೂವುಗಳು ನೆಲಕ್ಕೆ ಬಿದ್ದರೂ ದೇವರ ಮುಡಿಗೇರಲು ಅರ್ಹವಾಗಿವೆ ಎಂಬ ನಂಬಿಕೆ ಇದೆ. 

ಪ್ರಕೃತಿ ನಮ್ಮ-ನಿಮ್ಮೆಲ್ಲರ ಜೀವನದ ಒಂದು ಪ್ರಮುಖ ಭಾಗವಾಗಿದೆ. ರಾತ್ರಿಯ ವೇಳೆ ಸುವಾಸನೆ ಸೂಸುವ ಸುಂದರ ಹೂವಿಗೆ ಕೆಂಪು ದಳ. ಬಿಳಿಯ ಮೃದುವಾದ ಹೂವಿನ ಎಸಳುಗಳು. ಮರದ ತುಂಬಾ ನಕ್ಷತ್ರಗಳಂತೆ ಹೊಳೆಯುವ ಪಾರಿಜಾತದ ಚೆಲುವು ಬಹಳ ಆಕರ್ಷಕ. ತುಂಬಾ ಕೋಮಲವಾದ ಹೂವು ಇದು.

parijath2

 ಪಾರಿಜಾತದ ಕುರಿತು ಇರುವ ಪುರಾಣದ ಸ್ವಾರಸ್ಯಕರ ಕಥೆ

ದೇವಾಸುರರು ಹಾಲಿನ ಕಡಲನ್ನು ಕಡೆದಾಗ ಮೇಲೆದ್ದು ಬಂದ ಹದಿನಾಲ್ಕು ರತ್ನಗಳ ಪೈಕಿ ಪಾರಿಜಾತವೂ ಒಂದು. ಪಾರಿಜಾತ ಮರವನ್ನು ಪಡೆಯಲು ರುಕ್ಮಿಣಿ ಸತ್ಯಭಾಮಾ ಇವರ ನಡುವೆ ಕಾದಾಟವಾಗುತ್ತದೆ. ಈ ಮರ ತನಗೆ ಬೇಕು ಎಂಬುದು ಇವರಿಬ್ಬರ ಬಯಕೆ. ಈ ಮರವನ್ನು ಯಾರಿಗೆಂದು ಕೊಡುವುದು!
ಶ್ರೀಕೃಷ್ಣನಾದರೋ ಬಲು ಚತುರ. ಸುರ ಲೋಕದಿಂದ ತಂದ ಪಾರಿಜಾತ ಮರವನ್ನು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟನು. ಅಲ್ಲಿ ಅಂಗಳದಲ್ಲಿ ಬೆಳೆದ ಪಾರಿಜಾತ ರುಕ್ಮಿಣಿಯ ಅಂಗಳದಲ್ಲಿ ಹೂವನ್ನು ಉದುರಿಸುತ್ತಿತ್ತು.

 ಇನ್ನೊಂದು ಕಥೆಯ ಪ್ರಕಾರ ಒಬ್ಬ ರಾಜಕುಮಾರಿಯ ಹೆಸರು ಪಾರಿಜಾತಕ. ಅವಳು ಸೂರ್ಯನನ್ನು ಪ್ರೀತಿಸಿದಳು. ಆದರೆ ಸೂರ್ಯ ದೇವರು ಮಾತ್ರ ಮಾತಿಗೆ ತಪ್ಪಿ ಆಕೆಯನ್ನು ತಿರಸ್ಕರಿಸಿದರು. ಮಾತು ತಪ್ಪಿದ ವಿರಹ ವೇದನೆಯಲ್ಲಿ ಪಾರಿಜಾತಕ ಅಗ್ನಿಗೆ ಆತ್ಮಾರ್ಪಣೆ ಮಾಡಿದಳು. ಪಾರಿಜಾತ ಮರವಾಗಿ ಜನಿಸಿದಳು. ಸೂರ್ಯನನ್ನು ಇನ್ನೆಂದಿಗೂ ನೋಡಲಾರೆ ಎಂಬ ತನ್ನ ಪ್ರತಿಜ್ಞೆಯನ್ನು ಇಂದಿಗೂ ಅದು ನೆರವೇರಿಸುತ್ತಲೇ ಇದೆ. ಇಂದಿಗೂ  ಸಂಜೆಯ ವೇಳೆ ಸೂರ್ಯ ಅಸ್ತಮಿಸಿದ ನಂತರವೇ ಇದು ಹೂವರಳಿಸುತ್ತದೆ. ಸೂರ್ಯ ಬರುವ ವೇಳೆ ಹೂವು ಮರದಿಂದ ಉದುರಿರುತ್ತದೆ.  

ಪುರಾಣ ಪುಣ್ಯ ಕತೆಗಳಲ್ಲಿ ಹಲವೆಡೆ ಸ್ಥಾನ ಪಡೆದಿರುವ ಪಾರಿಜಾತ ಪರಿಮಳಯುಕ್ತವಾದ ಹೂವು. ಬಿಳಿ ಬಣ್ಣದ ಹೂವಿಗೆ, ಕೇಸರಿ ಬಣ್ಣ ಸೇರಿದ್ದು, ಎಂತವರನ್ನು ಈ ಹೂವು ಆಕರ್ಷಿಸುತ್ತದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ರಾಮ ಜನ್ಮಭೂಮಿ ಭೂಮಿ ಪೂಜೆ ವೇಳೆ ಪಾರಿಜಾತ ಗಿಡ ನೆಟ್ಟು ಪೂಜೆ ನೆರವೇರಿಸಿದರು.

parijath

ಪಾರಿಜಾತ ಹೂವು ಕೇವಲ ಚೆಂದಕ್ಕೆ ಮಾತ್ರ ಸೀಮಿತವಾಗಿಲ್ಲ. ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಪಾರಿಜಾತ ಗಿಡದ ಕಾಂಡ, ಅದರ ಎಲೆಗಳ ಜೊತೆಗೆ, ಹೂವು ಬೀಜ ಕೂಡ ಔಷಧೀಯ ಗುಣಗಳನ್ನು ಹೊಂದಿದೆ. ಪಾರಿಜಾತ ಹೂವುಗಳು ಕಣ್ಣುಗಳ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಿಸುತ್ತದೆ.

ಪಾರಿಜಾತ ಗಿಡದ ಎಲೆಗಳು ಆಯುರ್ವೇದದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಇದರ ಎಲೆಗಳು ಕೆಮ್ಮನ್ನು ಕಡಿಮೆ ಮಾಡುತ್ತದೆ. ಕುದಿಯುವ ನೀರಿಗೆ ಇದರ ಎಲೆಗಳನ್ನು ಹಾಕಿ ಕುಡಿಯುವುದು ಉತ್ತಮ. ಇನ್ನು ಪಾರಿಜಾತದ ಗಿಡದ ತೊಗಟೆಯನ್ನು ಪುಡಿ ಮಾಡಿ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದಲೂ ಕೆಮ್ಮು ದೂರವಾಗುತ್ತದೆ.

ಪಾರಿಜಾತಕ್ಕೆ ಖಿನ್ನತೆಯನ್ನು ನಿವಾರಿಸುವ ಸಾಮರ್ಥ್ಯವಿದೆ. ಪಾರಿಜಾತ ಎಲೆಗಳ ಚಹಾ ಕುಡಿಯುವುದರಿಂದ ಒತ್ತಡ ಉಂಟಾಗುವುದಿಲ್ಲ.  

ಪಾರಿಜಾತ ಎಲೆಗಳ ಕಷಾಯವನ್ನು ಕುಡಿಯುವುದರಿಂದ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಕರ್ನಾಟಕ ಮುಖ್ಯಮಂತ್ರಿ ಆಯ್ಕೆ : ನಾಳೆ ಮಹತ್ವದ ಸಭೆ

ಮನೆಯಲ್ಲಿ ಪಾರಿಜಾತ ಗಿಡವನ್ನು ಬೆಳೆಸುವುದು ಅತ್ಯಂತ ಮಂಗಳಕರವೆಂದು ಹೇಳಲಾಗುತ್ತದೆ. ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಪಾರಿಜಾತ ಗಿಡವನ್ನು ನೆಟ್ಟರೆ ಮನೆಯಿಂದ ವಾಸ್ತು ದೋಷಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ.

Share This Article
Leave a comment