November 19, 2024

Newsnap Kannada

The World at your finger tips!

deepa1

ಪರೋಪಕಾರಂ ಇದಂ ಶರೀರಂ……..

Spread the love

ಅನಾಥ ಮಕ್ಕಳು……….
ಅಮೆರಿಕಾದಲ್ಲಿ ಕೆಲವು ವರ್ಷಗಳು ವಾಸವಾಗಿದ್ದು ಹಿಂತಿರುಗಿದ ಹಿರಿಯ ಪರಿಚಿತರೊಬ್ಬರು ಭೇಟಿಯಾಗಿದ್ದರು…..

ಹೀಗೆ ಲೋಕಾಭಿರಾಮವಾಗಿ ಮಾತನಾಡುತ್ತಾ ಅನೇಕ ವಿಷಯಗಳನ್ನು ಚರ್ಚಿಸಿದೆವು.

ಭಾರತದ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಅಪಾರ ಕಾಳಜಿ ಮತ್ತು ವಿದೇಶಿ ಸಂಸ್ಕೃತಿಯ ಬಗ್ಗೆ ಒಂದಷ್ಟು ತಿರಸ್ಕಾರ ಮನೋಭಾವದ ವ್ಯಕ್ತಿ ಅವರು.

ಆ ಹೊತ್ತಿನಲ್ಲಿ ನಮ್ಮ ಮುಂದೆ ಇದ್ದ ಪತ್ರಿಕೆಯೊಂದರಲ್ಲಿ ಕೊರೋನಾ ಕಾರಣದಿಂದ ಅನಾಥರಾದ ಮಕ್ಕಳನ್ನು ಮಾರಾಟ ಮಾಡುವ ಜಾಲದ ಬಗ್ಗೆ ಒಂದು ವರದಿ ಇತ್ತು. ಅದರ ಬಗ್ಗೆ ತುಂಬಾ ವಿಷಾದನೀಯ ವ್ಯಕ್ತಪಡಿಸಿ ಮಾತು ಆರಂಭವಾಗುತ್ತಿದ್ದಂತೆ ಅವರು ಒಂದು ಮಾತು ಹೇಳಿದರು….

ಅಮೆರಿಕಾದಲ್ಲಿ ಮಗುವೊಂದು ಅನಾಥವಾಗುವುದು ವೈಯಕ್ತಿಕವಾಗಿ ತುಂಬಾ ನೋವಿನ ವಿಷಯವಾದರು ಸಾಮಾಜಿಕವಾಗಿ ಆ ಮಗುವನ್ನು ಅದೃಷ್ಟಶಾಲಿ ಎಂದು ಪರಿಗಣಿಸಬಹುದು ಎಂದರು.

ಕುತೂಹಲದಿಂದ ಅದು ಹೇಗೆ ಎಂದು ಕೇಳಿದೆ…….

ಅವರ ವಿವರಣೆ……

ಒಂದು ವೇಳೆ ಒಂದು ಮಗು ಯಾವುದೇ ಕಾರಣದಿಂದ ತಂದೆ ತಾಯಿ ಅಥವಾ ಪೋಷಕರನ್ನು ಕಳೆದುಕೊಂಡು ಅನಾಥವಾದರೆ ಇಡೀ ಅಮೆರಿಕಾದ ಸಮಾಜ ಮತ್ತು ಸರ್ಕಾರದ ಆಡಳಿತಾತ್ಮಕ ವ್ಯವಸ್ಥೆ ಆ ಮಗುವಿಗೆ ಅನಾಥ ಪ್ರಜ್ಞೆ ಕಾಡದಂತೆ ಮಗುವನ್ನು ಬೆಳೆಸುವ ನೈತಿಕ ಜವಾಬ್ದಾರಿ ಹೊರುತ್ತದೆ. ಅನಾಥ ಮಗುವಿಗೆ ಎಲ್ಲಾ ರೀತಿಯ ಗುಣಮಟ್ಟದ ಸೌಕರ್ಯಗಳನ್ನು ಕೊಡುವುದಲ್ಲದೆ ಅದಕ್ಕೆ ವಿಶೇಷ ಗೌರವ ಆತಿಥ್ಯ ನೀಡಲಾಗುತ್ತದೆ. ವಿಷಯ ತಿಳಿದಿರುವ ಪ್ರತಿಯೊಬ್ಬರು ತಮ್ಮ ಕರ್ತವ್ಯ ಎಂಬಂತೆ ಅನುಕಂಪಕ್ಕೆ ಬದಲಾಗಿ ಆತ್ಮೀಯತೆ ತೋರುತ್ತಾರೆ. ಮಗುವಿಗೆ ಯಾವುದೇ ಕೊರತೆ ಕಾಡದಂತೆ ಉತ್ತಮ ಪ್ರಜೆಯಾಗಿ ಬೆಳೆಯಲು ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತಾರೆ. ಇದೇ ಅಲ್ಲವೇ ಮಾನವೀಯ ಮೌಲ್ಯಗಳ ನಿಜವಾದ ಸಮಾಜ.

ಭಾರತದಲ್ಲಿ ಈ ರೀತಿಯ ಒಂದು ಮಗು ಅನಾಥವಾದರೆ ಏನಾಗಬಹುದು ಎಂಬುದನ್ನು ದಯವಿಟ್ಟು ಮುಕ್ತ ಮನಸ್ಸಿನಿಂದ ನಿಮ್ಮ ಅನುಭವದ ಆಧಾರದ ಮೇಲೆ ಊಹಿಸಿ.

ನನ್ನ ಅನುಭವದ ಪ್ರಕಾರ,

ಆ ಮಗುವನ್ನು ಅತ್ಯಂತ ಹೀನಾಯವಾಗಿ ಸಂಬಂಧಿಕರು, ಪರಿಚಿತರು ಅಧಿಕಾರಿಗಳು ನಡೆಸಿಕೊಳ್ಳುತ್ತಾರೆ. ಅದಕ್ಕೆ ಯಾರೂ ದಿಕ್ಕು ದೆಸೆ ಇಲ್ಲ ಎಂದು ತಿಳಿದರೆ ಆ ಮಗುವಿನ ಬಳಿ ಸಿಗರೆಟ್ ಮದ್ಯಪಾನ ತರಿಸಿಕೊಳ್ಳುವುದು, ಕೆಲವು ಸಣ್ಣ ಪುಟ್ಟ ಅಪರಾಧ ಮಾಡಿಸುವುದು, ಲೈಂಗಿಕ ದುರುಪಯೋಗ, ಸ್ವಲ್ಪ ಹಣ ನೀಡಿ ಏನೋ ಮಹಾ ಉಪಕಾರ ಮಾಡಿದಂತೆ ಮಾತನಾಡುವುದು ಹೀಗೆ ಅದನ್ನು ತುಂಬಾ ಕೀಳಾಗಿ ಕಾಣುತ್ತಾರೆ. ಸರ್ಕಾರಿ ವ್ಯವಸ್ಥೆಯ ಬಗ್ಗೆ ಹೆಚ್ಚು ಹೇಳುವುದು ಬೇಡ. ಎಲ್ಲಾ ಇರುವವರಿಗೇ ಸಿಕ್ಕಾಪಟ್ಟೆ ತೊಂದರೆ ಕೊಡುವಾಗ ಇನ್ನೂ ಅನಾಥ ಮಗುವಿಗೆ ದಿಕ್ಕು ತೋರುವುದು ಯಾರು…..

ಕೊನೆಗೆ ಇದು ಆ ಮಗುವಿನ ಕರ್ಮ ಎಂದು ಕರೆದು ಪಲಾಯನ ಸಿದ್ದಾಂತದ ಮೊರೆ ಹೋಗುವವರು ಹಲವರು.

ಇಲ್ಲಿ ಇದನ್ನು ಪ್ರಸ್ತಾಪಿಸಲು ಕಾರಣ, ಪಾಶ್ಚಾತ್ಯ ಸಂಸ್ಕೃತಿಯ ಅಮೆರಿಕ ದೇಶದ ಸಮಾಜ ಅನಾಥ ಮಗುವನ್ನು ಬೆಳೆಸುವ ಪರಿ, ಹಾಗೆಯೇ ಆಧ್ಯಾತ್ಮದ ತವರೂರು, ಧಾರ್ಮಿಕ ನಿಷ್ಠೆ, ಮಾನವೀಯ ಮೌಲ್ಯಗಳ ವಕ್ತಾರರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಭಾರತೀಯ ಸಮಾಜದಲ್ಲಿ ಅನಾಥ ಮಗುವನ್ನು ಬೆಳೆಸುವ ರೀತಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳೋಣ ಎಂದು.

ಅನಾಥ ಮಕ್ಕಳನ್ನು ಭಿಕ್ಷೆಗೆ ತಳ್ಳುವ, ಮಾರಿಕೊಳ್ಳುವ, ಅಪರಾಧಗಳನ್ನಾಗಿ ಮಾಡುವ, ದುಶ್ಚಟಗಳಿಗೆ ಉಪಯೋಗಿಸಿಕೊಳ್ಳುವ ಸಮಾಜ ನಮ್ಮದಾಗುವುದು ಬೇಡ. ಪ್ರಾಕೃತಿಕ ವಿಕೋಪಗಳು, ಕೊರೋನಾ ಮುಂತಾದ ಸಾಂಕ್ರಾಮಿಕ ರೋಗಗಳು, ಅಪಘಾತಗಳು ಇತ್ಯಾದಿ ಕಾರಣದಿಂದ ಬೃಹತ್ ಜನಸಂಖ್ಯೆಯ ಭಾರತದಲ್ಲಿ ಇತ್ತೀಚಿಗೆ ಅನಾಥರಾಗುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ.

ಇನ್ನು ಮುಂದೆ ಅಂತಹ ಮಕ್ಕಳಿಗೆ ಸಾಧ್ಯವಾದಷ್ಟು ಉತ್ತಮ ಬದುಕನ್ನು ರೂಪಿಸುವ ಕನಿಷ್ಠ ಜವಾಬ್ದಾರಿ ಸಮಾಜ ಮತ್ತು ಸರ್ಕಾರ ತೆಗೆದುಕೊಳ್ಳುಬೇಕಿದೆ. ಅದಕ್ಕೆ ಬೇಕಾದ ಕಾನೂನು ಇದೆ. ಆದರೆ ಅನುಷ್ಠಾನ ಮಾತ್ರ ಭ್ರಷ್ಟಗೊಂಡಿದೆ.

ನಾವುಗಳು ವೈಯಕ್ತಿಕ ನೆಲೆಯಲ್ಲಿ ನಮ್ಮ ಸುತ್ತಮುತ್ತಲಿನ ಈ ರೀತಿಯ ಮಕ್ಕಳ ಬಗ್ಗೆ ಇನ್ನು ಮುಂದೆ ಸ್ವಲ್ಪ ಹೆಚ್ಚಿನ ಕಾಳಜಿ ಮತ್ತು ಆಸಕ್ತಿ ವಹಿಸೋಣ. ಅನಾಥ ಮಗುವಿಗೆ ಅನಾಥ ಪ್ರಜ್ಞೆ ಕಾಡದಂತೆ ಕನಿಷ್ಠ ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಒಂದು ಸಣ್ಣ ಜವಾಬ್ದಾರಿ ನಿರ್ವಹಿಸೋಣ.

ಪರೋಪಕಾರಂ ಇದಂ ಶರೀರಂ……..

  • ವಿವೇಕಾನಂದ ಹೆಚ್ ಕೆ
Copyright © All rights reserved Newsnap | Newsever by AF themes.
error: Content is protected !!