ಪಾಂಡವಪುರ : ನಿರಾಣಿ ಕಂಪನಿಯಲ್ಲಿ ದಲಿತ ಮಹಿಳೆಯಿಂದ ಶೌಚ ಗುಂಡಿ ಸ್ವಚ್ಛ ಮಾಡಿಸಿದ ಅಧಿಕಾರಿಗಳು

Team Newsnap
1 Min Read

ಸಚಿವ ಮುರುಗೇಶ್‌ ನಿರಾಣಿ ಗುತ್ತಿಗೆ ಪಡೆದಿರುವ ಎಂಆರ್‌ಎನ್‌ ಸಂಸ್ಥೆ ಹಾಗೂ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಆಡಳಿತದಿಂದ ದಲಿತ ಮಹಿಳೆಯನ್ನು ಶೌಚ ಗುಂಡಿಗೆ ಇಳಿಸಿ ಸ್ವಚ್ಛ ಮಾಡಿಸಿದ ಅಮಾನವೀಯ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನಲ್ಲಿ ನಡೆದಿದೆ.

ಕಾರ್ಖಾನೆಯು ಕೆನ್ನಾಳು ಗ್ರಾಮದ ಆದಿ ದ್ರಾವಿಡ ಜನಾಂಗಕ್ಕೆ ಸೇರಿದ ದಲಿತ ಮಹಿಳೆ ಎಂ. ಮಂಜುಳಾ ಅವರಿಂದ ಅಮಾನವೀಯ ಕೆಲಸ ಮಾಡಿಸಲಾಗಿದೆ.

ಕಾರ್ಖಾನೆ ಆಡಳಿತ ಮಂಡಳಿಯು ತಾಲೂಕಿನ ವಿಶ್ವೇಶ್ವರ ನಗರ ಬಡಾವಣೆಯ ಪಿಎಸ್‌ಎಸ್‌ಕೆ ಕ್ವಾಟ್ರರ್ಸ್‌ನಲ್ಲಿರುವ ಒಣ ಮಲ ತುಂಬಿದಗುಂಡಿ (ಫಿಟ್‌) ಸ್ವಚ್ಛಗೊಳಿಸಲು ಸಂಸ್ಥೆಯ ಸಿವಿಲ್‌ ಎಂಜಿನಿಯರ್‌ ನಾಗೇಶ್‌ ಸೂಚಿಸಿದ್ದರು ಎನ್ನಲಾಗಿದೆ.

ಗುಂಡಿ (ಪಿಟ್‌) ಒಳಗೆ ಇಳಿದು ಸ್ವಚ್ಛಗೊಳಿಸುವಂತೆ ಸಂಸ್ಥೆಯ ಮತ್ತೊಬ್ಬ ಅಧಿಕಾರಿ ರಾಜಶಾಸ್ತ್ರಿ ಮಂಜುಳಾಗೆ ಸೂಚಿದ್ದರು ಎಂದು ಹೇಳಲಾಗಿದೆ.

ನಾನೊಬ್ಬಳು ಹೆಂಗಸು, ನನ್ನ ಬಳಿ ಇಂತಹ ಕೆಲಸ ಮಾಡಿಸುತ್ತೀರಲ್ಲಾ ಎಂದು ಮಂಜುಳಾ ಪ್ರಶ್ನಿಸಿದ್ದಾರೆ. ಆದರೆ ಸ್ಥಳದಲ್ಲಿದ್ದ ಸಂಸ್ಥೆಯವರ ಒತ್ತಡಕ್ಕೆ ಮಣಿದು ಒಣ ಮಲವನ್ನು ಕೈಗೆ ಗ್ಲೌಸ್‌ ಹಾಕಿಕೊಂಡು ಸಂಪೂರ್ಣ ಸ್ವಚ್ಛಗೊಳಿಸಿದ್ದಾರೆ.

ದಲಿತ ಮಹಿಳೆಗೆ ಬೆದರಿಕೆ:

ಘಟನೆ ಬಹಿರಂಗವಾದರೆ ಸಮಸ್ಯೆ ಆಗುತ್ತದೆ ಎಂದು 2 ದಿನದ ಬಳಿಕ ಪಿಎಸ್‌ಎಸ್‌ಕೆ ಹಾಗೂ ಎಂಆರ್‌ಎನ್‌ ಆಡಳಿತ ಸಂಸ್ಥೆಯವರು ಮಂಜುಳಾ ಅವರಿಗೆ ಬೆದರಿಸಿದ್ದಾರೆ. ಬಳಿಕ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗಕ್ಕೆ ಅಧಿಕೃತವಾಗಿ ಸಾಕ್ಷಿ ಸಹಿತ ದೂರು ಸಲ್ಲಿಸಿದ್ದಾರೆ.

ಮುರುಗೇಶ್‌ ನಿರಾಣಿ ಸ್ಪಷ್ಟನೆ :

ಈ ಘಟನ ಮುರುಗೇಶ್‌ ನಿರಾಣಿ ಟ್ವಿಟ್ಟರ್‌ನಲ್ಲಿ ಸ್ಪಷ್ಟನೆ ನೀಡಿ, ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಎಂಆರ್‌ಎನ್ ಸಂಸ್ಥೆಯ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್ ಎಸ್ ಕೆ)ಯ ಹೊರ ಭಾಗದಲ್ಲಿ ನಡೆದಿರುವ ಈ ಘಟನೆ ಅತ್ಯಂತ ಅಮಾನವೀಯವಾದುದು. ನಮ್ಮ ಕಾರ್ಖಾನೆಯ ಹೊರ ಭಾಗದಲ್ಲಿ ನಡೆದಿದೆ ಎಂದಿದ್ದಾರೆ.

ಮೇ 31 ರಂದು ಪಿಎಸ್‌ಎಸ್‌ಕೆ ಹಾಗೂ ಘಟನೆ ನಡೆದ ಸ್ಥಳಕ್ಕೆ ಸಪಾಯಿ ಕರ್ಮಚಾರಿ ಆಯೋಗದ ರಾಜ್ಯಾಧ್ಯಕ್ಷ ಕೋಟೆ ಶಿವಣ್ಣ ಹಾಗೂ ಕಾರ್ಯದರ್ಶಿ ರಮಾ ಆಗಮಿಸಿ ಪರಿಶೀಲಿಸಲಿದ್ದಾರೆ.

Share This Article
Leave a comment