November 16, 2024

Newsnap Kannada

The World at your finger tips!

deepa1

ಮತ್ತೊಮ್ಮೆ ಬಾ ನನ್ನ ಮುದ್ದು ಬಾಲ್ಯವೇ…

Spread the love

ತಿಳಿಯಬೇಕಿದೆ ಮುದ್ದು ಕಂದಮ್ಮಗಳಿಂದ ಬದುಕಿನ ನೀತಿಯನ್ನು,

ಅರಿಯಬೇಕಿದೆ ಚಿಂಟುಗಳಿಂದ ಆ ಮುಗ್ಧ ಮನಸ್ಸಿನ ಗುಟ್ಟನ್ನು,

ಕಲಿಯಬೇಕಿದೆ ಪುಟ್ಟಮ್ಮಗಳಿಂದ ಆ ಮನತುಂಬುವ ನಗುವನ್ನು,

ಅರ್ಥ ಮಾಡಿಕೊಳ್ಳಬೇಕಿದೆ ಬಂಗಾರಿಗಳಿಂದ ಕಲೆತು ತಿನ್ನುವುದನ್ನು,

ಗೊತ್ತು ಮಾಡಿಕೊಳ್ಳಬೇಕಿದೆ ಚಿನ್ನುಗಳಿಂದ ಜಗದ ಸಮಾನತೆಯನ್ನು,

ನೋಡಬೇಕಿದೆ ತೆರೆದ ಕಣ್ಣುಗಳಿಂದ ಆ ಹಸುಳೆಗಳ ಚಿಲಿಪಿಯನ್ನು,

ಸವಿಯಬೇಕಿದೆ ಎಳೆಯರಿಂದ ತಿನ್ನುವ ಪರಿಯನ್ನು,

ಬದುಕಬೇಕಿದೆ ಆ ಮುದ್ದುಮರಿಗಳ ಚಟುವಟಿಕೆಯಂತೆ,

ಕುಣಿಯಬೇಕಿದೆ ಆ ಚಿಣ್ಣಾರಿಗಳ ಚಿಗರೆಯಂತೆ,

ಹಿರಿಯರ ಅನುಭವ, ಕಿರಿಯರ ಹೊಸತನ, ಮಕ್ಕಳ ಮುಗ್ಧತೆ,
ನಮಗೆ ಪಾಠವಾಗಬೇಕಿದೆ,…….

ಮುಂದಿನ ಯೋಚನೆಗಳಿಲ್ಲದ,
ಹಿಂದಿನ ನೆನಪುಗಳಿಲ್ಲದ,
ಭವಿಷ್ಯದ ಯೋಜನೆಗಳಿಲ್ಲದ,
ಇಂದಿನ ಕನಸುಗಳಿಲ್ಲದ,

ಅತಿಯಾದ ಆಸೆಗಳಿಲ್ಲದ,
ಹೆಚ್ಚಿನ ನಿರಾಸೆಗಳಿಲ್ಲದ,
ಶ್ರೀಮಂತಿಕೆಯ ಮೋಹವಿಲ್ಲದ, ಬಡತನದ ನೋವೇ ಗೊತ್ತಾಗದ,

ದ್ವೇಷದ ಅರಿವಿಲ್ಲದ,
ಪ್ರೀತಿಯ ಆಳ ಅರಿಯದ,
ಅಹಂಕಾರದ ಸೋಂಕಿಲ್ಲದ,
ಮುಗ್ಧತೆಯ ತಿಳಿವಳಿಕೆ ಇಲ್ಲದ,

ಜಾತಿ ಗೊತ್ತಿರದ,
ಧರ್ಮ ಅರ್ಥವಾಗದ,
ರಾಜಕಾರಣ ತಿಳಿಯದ,
ಆಡಳಿತ ಅರಿವಾಗದ,

ತೆರಿಗೆ ಕಟ್ಟದ,
ದುಡ್ಡು ಮಾಡದ,
ಏಳುವ ಎಚ್ಚರವಿರದ,
ಬೀಳುವ ಭಯವಿರದ,

ಮೋಸ ಗೊತ್ತಾಗದ,
ವಂಚನೆ ತಿಳಿಯದ,
ಕೆಲಸದ ಬಗ್ಗೆ ಯೋಚಿಸದ,
ಆಟದ ಬಗ್ಗೆ ಒಲವಿರುವ,

ನಿದ್ದೆ ಬಂದಾಗ ಮಲಗುವ,
ಎದ್ದಾಗ ಬದುಕುವ,
ನಾಳೆಯ ನಿರೀಕ್ಷೆಗಳಿಲ್ಲದ,
ಇಂದಿನ ಒತ್ತಡಗಳಿಲ್ಲದ,

ಆರೋಗ್ಯದ ಕಾಳಜಿ ಇಲ್ಲದ, ಅನಾರೋಗ್ಯದ ಭೀತಿ ಇಲ್ಲದ,
ಸಂಬಂಧಗಳ ರಗಳೆ ಇಲ್ಲದ,
ನಿಯಮಗಳ ಬಂಧವಿಲ್ಲದ,

ನಗು ಬಂದಾಗ ನಗುವ,
ಅಳು ಬಂದಾಗ ಅಳುವ,
ಮುಖವಾಡವಿಲ್ಲದ,
ಸಹಜ ಸ್ವಾಭಾವಿಕ……

ಆ ನನ್ನ ಬಾಲ್ಯವೇ ಮತ್ತೊಮ್ಮೆ ಬಾ,
ಆ ನಿನ್ನ ಮುಗ್ಧತೆ ನೆನಪಿಸು ಬಾ,

ಈಗ ನನ್ನ ದೇಹ ಮನಸ್ಸುಗಳು
ಕಲ್ಮಷಗೊಂಡಿವೆ,
ಈ ಯಾತನೆ ಸಹಿಸಲಾಗಿತ್ತಿಲ್ಲ.
ನನ್ನರಿವೇ ನನ್ನನ್ನು ಕೊಲ್ಲುತ್ತಿದೆ.
ಅದನ್ನು ತಡೆಯಲಾದರೂ,,,,,

ಮತ್ತೊಮ್ಮೆ ಬಾ ನನ್ನ ಮುದ್ದು ಬಾಲ್ಯವೇ…….

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!