ಪೌಷ್ಟಿಕ ಆಹಾರ ಸೇವಿಸಿ ಸದೃಢರಾಗಿ: ಆಹಾರ ತಯಾರಿಕಾ ಸ್ಪರ್ಧೆ

Team Newsnap
1 Min Read

ಬೆಳಗಾವಿ: ಹೆಣ್ಣು ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ವಿಷಾದನೀಯ ಎಂದು ವೈದ್ಯಾಧಿಕಾರಿ ಡಾ.ಕೀರ್ತಿ ಹೇಳಿದರು. ಹುಕ್ಕೇರಿ ತಾಲೂಕಿನ ಎರಗಟ್ಟಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬೆಳಗಾವಿಯ ಮಹಿಳಾ ಕಲ್ಯಾಣ ಸಂಸ್ಥೆ ಸುತ್ತಮುತ್ತಲಿನ ಗ್ರಾಮಗಳ ಕಿಶೋರಿಯರಿಗಾಗಿ ಆಯೋಜಿಸಿದ್ದ ಪೌಷ್ಟಿಕಾಂಶ ಅಭಿಯಾನದ ಅಂಗವಾಗಿ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಮತ್ತು ಪೌಷ್ಟಿಕ ಆಹಾರ ತಯಾರಿಕೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ತಾಯಿಂದರು ಮತ್ತು ಹೆಣ್ಣು ಮಕ್ಕಳಲ್ಲಿ ಉತ್ತಮ ಆರೋಗ್ಯಕ್ಕಾಗಿ ಸೇವಿಸಬೇಕಾದ ಆಹಾರದ ಅರಿವಿನ ಕೊರತೆ ಇದೆ. ಇದರಿಂದಲೇ ಅವರಲ್ಲಿ ರಕ್ತಹೀನತೆಯ ವಿವಿಧ ಸಮಸ್ಯೆಗಳು ಉಂಟಾಗುತ್ತಿವೆ. ಹೆಣ್ಣು ಮಕ್ಕಳು ಆರೋಗ್ಯವಾಗಿದ್ದರೆ ಕುಟುಂಬವೂ ಸದೃಢವಾಗಿರುತ್ತದೆ. ಸಮಾಜವೂ ಆರೋಗ್ಯಕರವಾಗಿರುತ್ತದೆ. ಹಾಗಾಗಿ ಹೆಣ್ಣು ಮಕ್ಕಳು ಹಣ್ಣು, ತರಕಾರಿ, ಸೊಪ್ಪು ಸೇರಿದಂತೆ ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕರಗುಪ್ಪಿ, ಭಾರತೀಯ ಕುಟುಂಬ ಯೋಜನಾ ಸಂಘದ ಶ್ರೀದೇವಿ ಮತ್ತಿತರರು ಹಾಜರಿದ್ದರು.

Share This Article
Leave a comment