ಆರ್‌ಎಸ್‌ಎಸ್ ಕಾರ್ಖಾನೆಯಲ್ಲ, ಗರಡಿ ಮನೆ: ಸಿ.ಟಿ.ರವಿ

Team Newsnap
1 Min Read

“ಆರ್‌ಎಸ್‌ಎಸ್ ಕಾರ್ಖಾನೆಯಲ್ಲ. ದೇಶವನ್ನು ಸಂಘಟಿಸಲು, ಸದೃಢ ಭಾರತವನ್ನು ಕಟ್ಟಲು ಕಾರ್ಯಕರ್ತರನ್ನು ರೂಪಿಸುವ ಗರಡಿ ಮನೆ” ಎಂದು ಹೇಳಿದ್ದಾರೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ.


ಆರ್‌ಎಸ್‌ಎಸ್ ಭಾರತದ ತಾಲಿಬಾನ್ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಬುಧವಾರ ಟ್ವೀಟ್‌ನಲ್ಲಿ ಉತ್ತರರೂಪದಲ್ಲಿ ಪ್ರತಿಕ್ರಿಯಿಸಿರುವ ಸಿ.ಟಿ.ರವಿ, ಆರ್‌ಎಸ್‌ಎಸ್ ಅನ್ನು ಹೊರಗಿನಿಂದ ಅರ್ಥಮಾಡಿಕೊಳ್ಳುವುದು ಕಷ್ಟ. ಏಕೆಂದರೆ ಅದು ಕೊಡುವ ಶಿಕ್ಷಣ, ಪ್ರೇರಣೆಯನ್ನು ಹತ್ತಿರದಿಂದ ನೋಡಿದಾಗ ನಿಮಗೆ ಅರ್ಥವಾಗಬಹುದು ಎಂದಿದ್ದಾರೆ.


“ನೀವು ಹತ್ತಿರಕ್ಕೆ ಬರದೇ ಸಂಘವನ್ನು ನೋಡುವುದು ಅಂಧನೊಬ್ಬ ಆನೆಯನ್ನು ಮುಟ್ಟಿ ವರ್ಣಿಸಿದಂತಾಗುತ್ತದೆ” ಎಂದು ಬಣ್ಣಿಸಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದರೇನು ಎಂಬುದು ನಿಮ್ಮ ಘನ ಹೃದಯಕ್ಕೆ ಅರ್ಥವಾಗಬೇಕಾದರೆ ನೀವು ಮೊದಲು ಆರ್‌ಎಸ್‌ಎಸ್ ಶಾಖೆಗೆ ಬರಬೇಕು” ಎಂದು ಆಹ್ವಾನಿಸಿದ್ದಾರೆ.


“ಇತ್ತೀಚಿಗೆ ನಿಮ್ಮ ನಾಲಗೆಯ ಮೇಲೆ ತಾಲಿಬಾನಿ ಪದ ಹೆಚ್ಚು ಬಳಕೆಯಾಗುತ್ತಿದೆ. ನೀವೇನಾದರೂ ಅಲ್ಲಿಗೆ ಹೋಗುವ ಮನಸ್ಸು ಮಾಡಿದ್ದರೆ ಹೇಳಿಬಿಡಿ. ನಿಮ್ಮ ಮನೆಗೆ ಬಂದು ಅಲ್ಲಿಯ ಬಿಕ್ಕಟ್ಟು ಮತ್ತು ಆರ್‌ಎಸ್‌ಎಸ್‌ನ ಸ್ವಾತಂತ್ರ್ಯದ ಬಗ್ಗೆ ಎಳೆ ಎಳೆಯಾಗಿ ವಿವರಿಸುತ್ತೇನೆ” ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.


“ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಮ್ಮ ಜೀವನ ಚರಿತ್ರೆಯಲ್ಲಿ ಆರ್‌ಎಸ್‌ಎಸ್ ಬಗ್ಗೆ ವಿವರಿಸಿದ್ದಾರೆ. ಅದನ್ನು ಓದಿ. ನಿಮ್ಮ ಧೋರಣೆ ಬದಲಾಗಬಹುದು” ಎಂದು ತಿಳಿಸಿದ್ದಾರೆ.

Share This Article
Leave a comment