ನವರಾತ್ರಿಯ ಸಂಭ್ರಮ

Team Newsnap
2 Min Read
simtha ballal
ಸ್ಮಿತಾ ಬಲ್ಲಾಳ್

ನವರಾತ್ರಿಯ ಸಂಭ್ರಮ ಸಮೀಪಿಸುತ್ತಿದ್ದಂತೆ ಎಲ್ಲರಲ್ಲೂ ಉತ್ಸಾಹವೋ ಉತ್ಸಾಹ. ಹೆಂಗೆಳೆಯರ ಸಡಗರವಂತೂ ಹೇಳತೀರದು. ಹತ್ತುದಿನಗಳ ಕಾರ್ಯಕ್ರಮಗಳಿಗೆ ದಿನಕ್ಕೊಂದರಂತೆ ಉಡಲು ಬಣ್ಣ ಬಣ್ಣದ ಸೀರೆಗಳ ತಯಾರಿಯಲ್ಲಿ ನಿರತರು. ನವರಾತ್ರಿಯಲ್ಲಿ ಶಕ್ತಿಯ ಸಂಕೇತವಾದ ದುರ್ಗಾದೇವಿಯನ್ನು ಭಕ್ತಿಯಿಂದ ಪೂಜಿಸಲಾಗುವುದು.

ಮಹಿಷಾಸುರನೆಂಬ ರಾಕ್ಷಸನನ್ನು ವಧಿಸಿದ ದುರ್ಗಾದೇವಿಯನ್ನು ಈ ಹಬ್ಬದಲ್ಲಿ ಸ್ಮರಿಸುತ್ತೇವೆ. ನವರಾತ್ರಿಯ ಬಗ್ಗೆ ಪುರಾಣಗಳ ಪ್ರಕಾರ, ಬ್ರಹ್ಮದೇವನು ಮಹಿಷಾಸುರನ ತಪಸ್ಸಿಗೆ ಮೆಚ್ಚಿ, ಅವನನ್ನು ಸಂಹರಿಸಲು ಕೇವಲ ಸ್ತ್ರೀಯಿಂದ ಮಾತ್ರ ಸಾಧ್ಯ ಎಂಬ ಅಮರತ್ವದ ವರವನ್ನು ನೀಡುತ್ತಾನೆ. ಯಕಶ್ಚಿತ್ ಒಂದು ಹೆಣ್ಣು ತನ್ನನ್ನು ಏನು ತಾನೇ ಮಾಡಬಲ್ಲಳು ಎಂಬ ಭ್ರಮೆಯಲ್ಲಿದ್ದ ಮಹಿಷಾಸುರನು ಅಟ್ಟಹಾಸದಿಂದ ಮೆರೆಯುತ್ತಾ ತ್ರಿಲೋಕಗಳ ಮೇಲೆ ದಾಳಿ ನಡೆಸಿದಾಗ ಬ್ರಹ್ಮ,ವಿಷ್ಣು,ಮಹೇಶ್ವರರ ತ್ರಿಶಕ್ತಿಗಳು ಸೇರಿ ದುರ್ಗಾದೇವಿಯಾಗಿ ಅವತಾರ ಎತ್ತಿದಳೆನ್ನುವ ಪ್ರತೀತಿ‌.

ಅದೇ ರೀತಿ ಶ್ರೀರಾಮನು ರಾವಣನೊಡನೆ ಯುದ್ಧ ಮಾಡಲು ಹೊರಡುವ ಮೊದಲು ದುರ್ಗಾ ಪೂಜೆಯನ್ನು ಮಾಡಿ, ದೇವಿಯು ಪ್ರತ್ಯಕ್ಷಳಾಗಿ ಯುದ್ಧದಲ್ಲಿ ವಿಜಯಶಾಲಿಯಾಗಲೆಂದು ಹರಸಿದಳು. ದುರ್ಗಾಪೂಜೆಯ ಮಹತ್ವವನ್ನು ಸಾರುವ ಒಂಭತ್ತು ಆಚರಣೆಗಳು ನವರಾತ್ರಿಯ ಹತ್ತನೇ ದಿನ ಶ್ರೀರಾಮನು ರಾವಣನನ್ನು ಸಂಹರಿಸಿದನು ಅಂತಲೂ ಇನ್ನೊಂದು ಕಥೆಯಿದೆ.

ನವರಾತ್ರಿಗಳು ಕಳೆದು ಹತ್ತನೇ ದಿನವೇ ವಿಜಯದಶಮಿ. ವಿಜಯದಶಮಿ ದುಷ್ಟತನದ ಮೇಲೆ ಸತ್ಯದ ವಿಜಯವನ್ನು ಸೂಚಿಸುತ್ತದೆ.

ಮೈಸೂರು ದಸರಾ ಕರ್ನಾಟಕದ ನಾಡ ಹಬ್ಬವಾಗಿದೆ. ಮಹಿಷಾಸುರ ನಿಂದ ಮೈಸೂರು ಹೆಸರು ಬಂದಿದೆ‌. ದೈತ್ಯನಾದ ಆತನು ಮೈಸೂರನ್ನು ಆಳುತ್ತಿದ್ದು, ದೇವತೆಗಳ ಪ್ರಾರ್ಥನೆಗೆ ಓಗೊಟ್ಟು, ಪಾರ್ವತಿ ದೇವಿಯು ಚಾಮುಂಡೇಶ್ವರಿಯಾಗಿ ಜನಿಸಿ, ಚಾಮುಂಡಿ ಬೆಟ್ಟದ ಮೇಲೆ ಈ ರಾಕ್ಷಸನನ್ನು ಕೊಂದಳು. ಆದುದರಿಂದ ಬೆಟ್ಟಕ್ಕೆ ಚಾಮುಂಡಿ ಬೆಟ್ಟವೆಂದೇ ಹೆಸರಾಯಿತು.

ಒಂಬತ್ತು ದಿನಗಳ ವ್ರತಾಚರಣೆಯ ನಂತರ ಹತ್ತನೇ ದಿವಸದ ವಿಜಯದಶಮಿಯಂದೇ ಜಂಬೂಸವಾರಿ. ದುಷ್ಟ ಮಹಿಷನಿಂದ ಮೈಸೂರನ್ನು ರಕ್ಷಿಸಿದ ತಾಯಿ ಚಾಮುಂಡಿ ಮೈಸೂರು ಮಹಾರಾಜರುಗಳ ಕುಲದೈವವಾಗಿ ದಶಮಿಯಂದು ಆನೆಯ ಮೇಲೆ ಸ್ವರ್ಣಖಚಿತ ಅಂಬಾರಿಯಲ್ಲಿ ಕುಳಿತು ಅರಮನೆಯಿಂದ ಬನ್ನಿ ಮಂಟಪದವರೆಗೆ ರಾಜಬೀದಿಯಲ್ಲಿ ಮೆರವಣಿಗೆ ಹೋಗುವ ಚಂದವನ್ನು ನೋಡುವುದೇ ಒಂದು ಸೊಬಗು.

ಶುಭ್ರತೆಯಿಂದ ಕೂಡಿದ ಊರು, ಹೂಗಳಿಂದ ಅಲಂಕೃತಗೊಳ್ಳುವ ಬೀದಿಗಳು, ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ಕುಸ್ತಿ-ಕ್ರೀಡಾ ಪಂದ್ಯಾವಳಿಗಳು, ಯೋಗ, ಕರಕುಶಲಕಲೆ, ಲಲಿತಕಲೆ, ಪುಸ್ತಕ ಮೇಳ, ಕವಿಗೋಷ್ಠಿಯಂತಹ ಸಾಹಿತ್ಯಿಕ ಕಾರ್ಯಕ್ರಮಗಳ ಜೊತೆಗೆ ಬೃಹತ್ ಮೆರವಣಿಗೆ, ಕೊನೆಯಲ್ಲಿ ಪಂಜಿನ ಕವಾಯತು. ವೈಭವದಿಂದ ನಡೆಯುವುದನ್ನು ಕಣ್ತುಂಬಿಸಿಕೊಳ್ಳಬೇಕೆಂದರೆ ನೀವೂ ಮೈಸೂರು ದಸರಾವನ್ನು ವೀಕ್ಷಿಸಲು ಮೈಸೂರಿಗೆ ಭೇಟಿ ಕೊಡಲೇಬೇಕು.

Share This Article
Leave a comment