November 16, 2024

Newsnap Kannada

The World at your finger tips!

naveen2

ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗ ದಾನ – 6 ಜನರ ಬದುಕಿಗೆ ಬೆಳಕಾದ ನವೀನ್‌

Spread the love

ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ನವೀನ್ ದೇಹದ ಅಂಗಾಂಗಳನ್ನು ಕುಟುಂಬಸ್ಥರು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

ಬ್ರಹ್ಮಾವರ ತಾಲ್ಲೂಕಿನ ಕೊಕ್ಕರ್ಣೆ ಬಳಿ ಜೂನ್ 8ರಂದು ರಾತ್ರಿ 10.00 ಗಂಟೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 38 ವರ್ಷದ ನವೀನ್‌ ಗಂಭೀರವಾಗಿ ಗಾಯಗೊಂಡಿದ್ದರು. ಜೂನ್ 9ರಂದು ಬೆಳಿಗ್ಗೆ 9.50ಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತಜ್ಞ ವೈದ್ಯರ ತೀವ್ರ ಪ್ರಯತ್ನದ ಹೊರತಾಗಿಯೂ ಅವರು ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ.ಮಾನವ ಅಂಗಾಂಗ ಕಸಿ ಕಾಯ್ದೆ 1994ರ ಪ್ರಕಾರ ಜೂನ್ 10ರಂದು ಸಂಜೆ 5ಕ್ಕೆ ಹಾಗೂ ರಾತ್ರಿ 11.35ಕ್ಕೆ 6 ಗಂಟೆಗಳ ಅಂತರದಲ್ಲಿ ಎರಡು ಬಾರಿ ಪರಿಶೀಲನೆ ನಡೆಸಿದ ಪರಿಣಿತ ವೈದ್ಯರ ತಂಡ ಮೆದುಳು ನಿಷ್ಕ್ರಿಯವಾಗಿರುವುದಾಗಿ ಘೋಷಿಸಿದರು.

naveen 1

ಈ ಹಂತದಲ್ಲಿ ನವೀನ್ ಅವರ ಪತ್ನಿ ಮಲ್ಲಿಕಾ ಮತ್ತವರ ಕುಟುಂಬ ಸದಸ್ಯರು ಇತರ ರೋಗಿಗಳ ಜೀವ ಉಳಿಸಲು ಸಾಧ್ಯವಾಗುವ ಅಂಗಗಳನ್ನು ದಾನ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದರು.‌

ನವೀನ್ ಅವರ ಎರಡು ಮೂತ್ರ ಪಿಂಡಗಳು, ಯಕೃತ್ತು, ಚರ್ಮ ಹಾಗೂ ಎರಡು ಕಾರ್ನಿಯಾಗಳು/ಕಣ್ಣುಗುಡ್ಡೆ ಗಳನ್ನು ತೆಗೆದು ಒಟ್ಟು 6 ಜನರ ಜೀವ ಉಳಿಸಲು ಹಾಗೂ ಅವರಿಗೆ ಮರು ಬದುಕು ನೀಡಲು ಸಾಧ್ಯವಾಗಿದೆ ಎಂದು ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.

ಜೀವನ ಸಾರ್ಥಕತೆ ಪ್ರೋಟೋಕಾಲ್‌ಗಳು ಹಾಗೂ ನಿರ್ಧಾರಗಳ ಪ್ರಕಾರ ನೋಂದಾಯಿತ ರೋಗಿಗಳಿಗೆ ಎರಡು ಕಾರ್ನಿಯಾಗಳು ಹಾಗೂ ಒಂದು ಮೂತ್ರಪಿಂಡ ಹಾಗೂ ಚರ್ಮವನ್ನು ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ರೋಗಿಗಳಿಗೆ ಬಳಸಲಾಯಿತು. ಯಕೃತ್ತು ಮತ್ತು ಒಂದು ಕಿಡ್ನಿಯನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಯಿತು.

ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಮಾತನಾಡಿ, ಜೀವ ಉಳಿಸುವ ನಿಟ್ಟಿನಲ್ಲಿ ಅಂಗಾಂಗ ದಾನ ಶ್ರೇಷ್ಟ ಕಾರ್ಯವಾಗಿದ್ದು ಸಾರ್ವಜನಿಕರು ಇಂತಹ ಉತ್ತಮ ಕಾರ್ಯಗಳಿಗೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು. ಅಂಗಾಂಗ ದಾನ ಮಾಡಲು ನಿರ್ಧರಿಸಿದ ನವೀನ್ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿದರು.

ಇದನ್ನು ಓದಿ – ಹಾಸ್ಟೆಲ್​​​ ಕೊಠಡಿಯಲ್ಲೇ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೈಸೂರಿನ ಕವಿತಾ ಆತ್ಮಹತ್ಯೆಗೆ ಶರಣು

ಬೋಟ್‌ನಲ್ಲಿ ಕೆಲಸ ಮಾಡಿ ಕುಟುಂಬವನ್ನು ನಡೆಸುತಿದ್ದ ನವೀನ್‌ರದ್ದು ಅತ್ಯಂತ ಬಡ ಕುಟುಂಬ. ಪತ್ನಿ ಮಲ್ಲಿಕಾ ಬೀಡಿ ಕಟ್ಟಿ ಎರಡು ಮಕ್ಕಳ ಕುಟುಂಬ ನಿರ್ವಹಣೆಗೆ ನೆರವಾಗುತಿದ್ದರು. ಇಂಥ ಕುಟುಂಬ ಈಗ ಆಧಾರ ಸ್ಥಂಬವನ್ನೇ ಕಳೆದುಕೊಂಡಿದೆ. ಆದುದರಿಂದ ಸಾರ್ವಜನಿಕರು ಹಾಗೂ ಸಹೃದಯಿಗಳು ಈ ಬಡ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗುವಂತೆ ನವೀನ್ ಕುಟುಂಬದ ಆತ್ಮೀಯರೂ, ಕೊಕ್ಕರ್ಣೆ ಕ್ಷೇತ್ರದ ಜನಪ್ರತಿನಿಧಿ, ಮಾಜಿ ತಾಪಂ ಸದಸ್ಯರಾದ ಡಾ.ಸುನೀತಾ ಶೆಟ್ಟಿ ಅವರು ಮನವಿ ಮಾಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!