ಮಂಡ್ಯ
ಪೂರಿಗಾಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆಯ ಬಗ್ಗೆ ಎಬಿಸಿಡಿ ಗೊತ್ತಿಲ್ಲದವರು ಜನರ ಮುಂದೆ ಸುಳ್ಳು ಹೇಳಿ ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಶಾಸಕ ಡಾ.ಕೆ.ಅನ್ನದಾನಿ ಹೆಸರು ಹೇಳದೆ ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಬುಧವಾರ ಟಾಂಗ್ ನೀಡಿದರು.
ಮಳವಳ್ಳಿ ಯಲ್ಲಿ
ಸುದ್ದಿಗಾರರೊಂದಿಗೆ ಮಾತನಾಡಿದ ನರೇಂದ್ರ ಸ್ವಾಮಿ, ಹಸಿ ಸುಳ್ಳು ಹೇಳುವುದನ್ನು ನಿಲ್ಲಿಸಲಿ.
580 ಕೋಟಿ ರೂ. ವೆಚ್ಚದ ಪೂರಿಗಾಲಿ ಹನಿ ನೀರಾವರಿ ಯೋಜನೆಗೆ ನನ್ನ ಅವಧಿಯಲ್ಲಿಯೇ ಪ್ರಾಥಮಿಕ ಹಂತದ ಹಣ ಬಿಡುಗಡೆಯಾಗಿತ್ತು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಡಳಿತಾತ್ಮಕ ಮತ್ತು ಆರ್ಥಿಕ ಅನುಮೋದನೆ ಪಡೆದು ನಂತರ ಹಣಕಾಸಿನ ಅನುಮೋದನೆ ನೀಡಲಾಗಿತ್ತು. ನಾನು ಶಾಸಕನಾಗಿದ್ದ ವೇಳೆಯಲ್ಲಿ ಕಾಮಗಾರಿ ಆರಂಭವಾಗಿತ್ತು. ಅದಕ್ಕೆ ಸಾಕ್ಷಿ ಸಾಕಷ್ಟು ಇವೆ. ನೀವು ಶಾಸಕರಾಗಿ ಆಯ್ಕೆಯಾದ ಮೇಲೆ ಮಾಡಿದ್ದಾದರೂ ಏನು ಎಂದು ಪ್ರಶ್ನಿಸಿದರು.
ಒಮ್ಮೆ ಕಾಮಗಾರಿ ಆರಂಭವಾದ ಮೇಲೆ ಯಾವುದೇ ಸರ್ಕಾರ ಇದ್ದರೂ ಹಂತ ಹಂತವಾಗಿ ಹಣ ಬಿಡುಗಡೆಗೊಳ್ಳುತ್ತದೆ. ಮತದಾರರಿಗೆ ಸುಳ್ಳು ಹೇಳುವ ಬದಲು ಕಳೆದ 2 ವರ್ಷಗಳಿಂದ ನೀವು ಮಾಡಿರುವ ಅಭಿವೃದ್ಧಿಯ ಸಾಕ್ಷಿ ಗುಡ್ಡೆ ತೋರಿಸಿ ಎಂದು ಸವಾಲು ಹಾಕಿದರು.
ಯಡಿಯೂರಪ್ಪ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ಮಳವಳ್ಳಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ತವರಿನ ಸನ್ಮಾನದಲ್ಲಿ ಪೂರಿಗಾಲಿ ಹನಿ ನೀರಾವರಿ ಯೋಜನೆಗೆ ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ ಸೇರಿದಂತೆ ಹಲವರ ಸಮ್ಮುಖದಲ್ಲಿ ಮಾಡಿಕೊಂಡಿದ್ದ ಮನವಿ ಮೇರೆಗೆ ಈ ಯೋಜನೆಗೆ ಅನುಮತಿ ನೀಡಿದ್ದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಭೂಮಿಪೂಜೆ ನೆರೆವೇರಿಸಿದ್ದರು. ಆದರೆ ಈಗ
ಯೋಜನೆಗೆ ಹಣ ಬಿಡುಗಡೆ ಮಾಡಿಸಿದ್ದೇನೆ ಎನ್ನುವ ಸುಳ್ಳು ಹೇಳುವುದನ್ನು ಬಿಟ್ಟು ಸರ್ಕಾರದಿಂದ ಹಲವು ಯೋಜನೆಗಳನ್ನು ತಂದು ಕ್ಷೇತ್ರವನ್ನು ಅಭಿವೃದ್ದಿ ಪಡಿಸಲಿ. ಎಂದು ಸಲಹೆ ನೀಡಿದರು.
ಒಂದೂವರೆ ವರ್ಷದಲ್ಲಿ ಮುಗಿಯಬೇಕಿದ್ದ ಪೂರಿಗಾಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆ ಏಕೆ ಮೂರೂವರೆ ವರ್ಷವಾದ್ದರೂ ಪೂರ್ಣಗೊಂಡಿಲ್ಲ ಎಂಬುವುದಕ್ಕೆ ಉತ್ತರ ನೀಡಲಿ. ಪಟ್ಟಣದ ಅಂಬೇಡ್ಕರ್ ಭವನ ನನ್ನ ಅವಧಿಯಲ್ಲಿ ಎನ್ನುತ್ತಿದ್ದವರಿಗೆ ವಿಧಾನ ಪರಿಷತ್ತಿನಲ್ಲಿ ಉತ್ತರ ಸಿಕ್ಕಿದೆ, ಭವನ ನಿರ್ಮಾಣದ ಸಂಬಂಧ ದಾಖಲೆಗಳು ಬಹಿರಂಗವಾಗಿವೆ. ನಿಮಗೆ ಆತ್ಮಸಾಕ್ಷಿ ಇದ್ದರೇ ನಿಮ್ಮದು ಎಂದು ಹಾಕಿರುವ ಕಲ್ಲು ತೆಗೆಯಬೇಕಿತ್ತು. ಸತ್ಯ ಮತ್ತು ಪ್ರಾಮಾಣಿಕತೆ ಬಗ್ಗೆ ಮಾತನಾಡುವ ನೀವು ಏಕೆ ಕಲ್ಲು ತೆಗೆಸಲಿಲ್ಲ ಎಂದು ಪ್ರಶ್ನೆ ಮಾಡಿದರು.
ನಿಮ್ಮ ಅವಧಿಯ ಅಭಿವೃದ್ಧಿಗಳು ಜನರ ಕಣ್ಣೆದುರು ಕಾಣುತ್ತಿವೆ. ಎರಡೂವರೆ ವರ್ಷದ ಅಭಿವೃದ್ಧಿ ರಾಶಿ ಗುಡ್ಡೆ ತಾಲ್ಲೂಕಿನಲ್ಲಿ ಎಲ್ಲಿ ಇವೆ. ಕ್ಷೇತ್ರದ ಜನರು ಸಮೃದ್ಧಿಯಿಂದ ಇದ್ದಾರೆಯೇ ಎಂದು ವ್ಯಂಗ್ಯವಾಡಿದರು.
ಬಂಡಾಯಗಾರರಿಗೆ ಟಾಂಗ್:
ಕೆಲ ಮಾಧ್ಯಮಗಳಲ್ಲಿ ತಾಲೂಕು ಕಾಂಗ್ರೆಸ್ ಬಂಡಾಯಗಾರರ ಬಗ್ಗೆ ಪ್ರತಿಕ್ರಿಯೆ ನೀಡಿ, ನಮ್ಮಲ್ಲಿ ಯಾವುದೇ ಬಂಡಾಯ ಇಲ್ಲ. ಅಧಿಕಾರ ಉಂಡು ಹೋದವರ ಬಗ್ಗೆ ಈಗ ಮಾತು ಬೇಡ. ಮುಂದಿನ ದಿನಗಳಲ್ಲಿ ಮಾತಾಡುವೆ. ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಕಾರ್ಯಕರ್ತರಿಗೆ ನಾನು ಸೇವಕನಾಗಿರುತ್ತೇನೆ. ಪಕ್ಷಕ್ಕೆ ಯಾರು ನಿಷ್ಠವಂತರಾಗಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಪಕ್ಷದ ವರಿಷ್ಟರು ಸೂಚಿಸುವ ಕೆಲಸವನ್ನು ನಿಷ್ಠೆ ಮತ್ತು ಪ್ರಮಾಣಿಕತೆಯಿಂದ ಮಾಡುವುದಷ್ಟೇ ನನ್ನ ಕೆಲಸ. ನನ್ನ ಸ್ವಾಭಿಮಾನ ಬಿಟ್ಟು ಎಂದಿಗೂ ರಾಜಕಾರಣ ಮಾಡುವುದಿಲ್ಲ ಎಂದರು.
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ