ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.10 ರಷ್ಟು ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ವಳ – ‌ಆಯುಕ್ತ ಮಂಜುನಾಥ್ ಪ್ರಸಾದ್

Team Newsnap
3 Min Read

ಬೆಂಗಳೂರು
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್-19 ನಿರ್ವಹಣೆಯಲ್ಲಿ ಜುಲೈ ತಿಂಗಳಿಗೆ ಹೋಲಿಕೆ ಮಾಡಿದರೆ ಆಗಸ್ಟ್ ತಿಂಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಪ್ರತಿನಿತ್ಯ ಹೆಚ್ಚು-ಹೆಚ್ಚು ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಜುಲೈ ತಿಂಗಳಲ್ಲಿ ದಿನಕ್ಕೆ 3,000 ಪರೀಕ್ಷೆ ಮಾಡಲಾಗುತ್ತಿತ್ತು. ಇದೀಗ ದಿನಕ್ಕೆ 30,000 ಪರೀಕ್ಷೆ ಮಾಡಲಾಗುತ್ತಿದೆ. ಪಾಸಿಟಿವಿಟಿ ರೇಟ್ ಶೇ.10 ರಷ್ಟಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಬುಧವಾರ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಆಯುಕ್ತ ಮಂಜುನಾಥ್ ಪ್ರಸಾದ್,
ಸೋಂಕು ಪ್ರಕರಣಗಳು ಹೆಚ್ಚಾದರೆ ಯಾವುದೇ ಭಯಪಡುವ ಅಗತ್ಯವಿಲ್ಲ. ಹೆಚ್ಚು ಪರೀಕ್ಷೆ ಮಾಡುವುದರಿಂದ ಸೋಂಕು ದೃಢಪಟ್ಟವರನ್ನು ಮೂಲದಲ್ಲೇ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಸೋಂಕು ಹರಡುವ ಸಂಖ್ಯೆ ಕಡಿಮೆಯಾಗಲಿದೆ. ಇತ್ತೀಚೆಗೆ ಮಾರ್ಟಾಲಿಟಿ ರೇಟ್ ಕೂಡಾ ಕಡಿಮೆ ಆಗುತ್ತಿದೆ. ಆಗಸ್ಟ್ ತಿಂಗಳಲ್ಲಿ ಶೇ. 1.52 ಆಗಿದೆ. ಪಾಲಿಕೆಯು ದಿನಕ್ಕೆ ಇಷ್ಟು ಪರೀಕ್ಷೆ ಮಾಡಬೇಕೆಂಬ ಗುರಿ ನೀಡಿರುವುದರಿಂದ ಪ್ರತಿಯೊಬ್ಬರಿಗೂ ಪರೀಕ್ಷೆ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಆದ್ದರಿಂದ ಖಾಯಿಲೆಗಳಿರುವ 50 ವರ್ಷ ಮೇಲ್ಪಟ್ಟವರಿಗೆ, ಸೋಂಕು ಲಕ್ಷಣಗಳಿರುವ, ILI, SARI ಹಾಗೂ ಪ್ರಾಥಮಿಕ ಸಂಪರ್ಕಿತರು ಮತ್ತು ಕಂಟೈನ್ಮೆಂಟ್ ಪ್ರದೇಶದಲ್ಲಿರುವವರಿಗೆ ಪರೀಕ್ಷೆ ಮಾಡಲಾಗುವುದು. ಇಂತಹವರು ಕೂಡಲೆ ಪರೀಕ್ಷೆ ಮಾಡಿಸಿಕೊಂಡರೆ ಮೂಲದಲ್ಲೇ ಸೋಂಕು ಹರಡುವುದನ್ನು ಹಾಗೂ ಸಾವುಗಳನ್ನು ತಡೆಯಬಹುದು. ಅದಕ್ಕೆ ಸಾರ್ವಜನಿಕರು ಕೂಡಾ ಸಹಕರಿಸಬೇಕಾಗುತ್ತದೆ ಎಂದರು.

  • ಭಿತ್ತಿಪತ್ರ ಅಂಟಿಸದಿರಲು ಕ್ರಮ

ಪಾಲಿಕೆ ವ್ಯಾಪ್ತಿಯ ಕಂಟೈನ್ಮೆಂಟ್ ಪ್ರದೇಶಗಳಲ್ಲಿ 100 ಮೀಟರ್ ವ್ಯಾಪ್ತಿಯಲ್ಲಿ 1/2 ಪ್ರಕ್ರಣಗಳು ಪತ್ತೆಯಾದರೆ ಬ್ಯಾರಿಕೇಡ್ ಅಳವಡಿಸುವುದಿಲ್ಲ. 100 ಮೀಟರ್ ವ್ಯಾಪ್ತಿಯಲ್ಲಿ 3ಕ್ಕಿಂತ ಹೆಚ್ಚು ಪ್ರಕರಣಗಳು ಕಂಡುಬಂದ ಕಂಟೈನ್ಮೆಂಟ್ ಪ್ರದೇಶದಲ್ಲಿ ಮಾತ್ರ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ. ಈ ಪೈಕಿ 17,159 ಕಡೆ 1/2 ಪ್ರಕರಣಗಳಿವೆ, ಅಲ್ಲಿ ಬ್ಯಾರಿಕೇಡ್ ಅಳವಡಿಸಿರುವುದಿಲ್ಲ. 1,018 ಕಡೆ 3ಕ್ಕಿಂತ ಹೆಚ್ಚು ಪ್ರಕರಣಗಳಿರುವ ಪ್ರದೇಶಗಳಲ್ಲಿ ಬ್ಯಾರಿಕೇಡ್ ಮಾಡಲಾಗಿದೆ ಎಂದು ತಿಳಿಸಿದರು.

ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಸೋಂಕು ದೃಢಪಟ್ಟವರ ಮನೆಗಳ ಮುಂದೆ ಭಿತ್ತಿಪತ್ರ(ಪೋಸ್ಟರ್) ಅಂಟಿಸಲಾಗುತ್ತಿತ್ತು. ಇದೀಗ ಪೋಸ್ಟರ್‌ಗಳನ್ನು ಅಂಟಿಸದೆ ಸುತ್ತ-ಮುತ್ತಲಿನ ಮನೆಯವರಿಗೆ ಸೋಂಕು ದೃಢಪಟ್ಟರುವರ ಬಗ್ಗೆ ಮಾಹಿತಿ ನೀಡಲಾಗುವುದು. ಸೋಂಕು ದೃಢಪಟ್ಟ ಮನೆಗಳ ಮುಂದೆ ಭಿತ್ತಿಪತ್ರ ಅಂಟಿಸುವುದು ಮತ್ತು ಬ್ಯಾರಿಕೇಡ್ ಅಳವಡಿಸುವುದರಿಂದ ಸುತ್ತ-ಮುತ್ತಲಿನ ಜನ ಭಯಪಡುವುದು ಹಾಗೂ ಸೋಂಕು ದೃಢಪಟ್ಟವರ ಮನೆಯವರನ್ನು ಕೆಟ್ಟ ದೃಷ್ಟಿಯಲ್ಲಿ ನೋಡುವ ಪರಿಸ್ಥಿತಿ ಇತ್ತು. ಆದ್ದರಿಂದ ಅದನ್ನು ತೆಗೆಯಲು ರಾಜ್ಯ ಸರ್ಕಾರದ ಜೊತೆ ಮಾತನಾಡಿ ಅದನ್ನು ಶೀಘ್ರ ಆದೇಶ ಹೊರಡಿಸಲಿದ್ದಾರೆ ಎಂದು ಹೇಳಿದರು.

  • ಕೆಲ ಕೋವಿಡ್ ಆರೈಕೆ ಕೇಂದ್ರ ಮುಚ್ಚಲು ನಿರ್ಧಾರ

ಕೋವಿಡ್-19 ಸೋಂಕು ದೃಢಪಟ್ಟವರಿಗೆ ಚಿಕಿತ್ಸೆ ನೀಡಲು 12 ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಸೋಂಕು ದೃಢಪಟ್ಟವರು ಹೋಮ್ ಐಸೋಲೇಷನ್ ನಲ್ಲಿರಲು ಹೆಚ್ಚು ಒಲವು ತೋರುತ್ತಿದ್ದಾರೆ. ಈ ಸಂಬಂಧ ಹೋಮ್ ಐಸೋಲೇಷನ್ ನಲ್ಲಿ ಇರಲು ಇಚ್ಛಿಸುವವರು ಅವರ ಮನೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಇದೆಯೇ ಎಂಬುದನ್ನು ಪಾಲಿಕೆಯ ತಂಡ ಪರಿಶೀಲಸಲಿದೆ. ಅಲ್ಲದೆ ಕುಶಾಲ ಪೋರ್ಟನ್‌ನಲ್ಲಿ ನಮೂದಿಸಿ ಸ್ವಸ್ಥ್ ಸಂಸ್ಥೆಯಿಂದ ಅಗತ್ಯ ಸೌಲಭ್ಯಗಳು ಹಾಗೂ ನಿಗಾವಹಿಸಲಾಗುತ್ತಿದೆ. ಹೆಚ್ಚು ಮಂದಿ ಹೋಮ್ ಐಸೋಲೇಷನ್ ನಲ್ಲಿ ಇರುವ ಪರಿಣಾಮ ಕಡಿಮೆ ಜನಸಂಖ್ಯೆಯಿರುವ ಕೋವಿಡ್ ಆರೈಕೆ ಕೇಂದ್ರಗಳನ್ನು ಮುಚ್ಚಲಾಗುವುದು. ಸೋಂಕು ಪ್ರಕರಣಗಳು ಹೆಚ್ಚಾದಲ್ಲಿ ಅವಶ್ಯಕತೆ ಇದ್ದರೆ ಮತ್ತೆ ತೆರೆಯಲಾಗವುದು ಎಂದು ಆಯುಕ್ತರು ತಿಳಿಸಿದರು.

ಬೆಂಗಳೂರು ಅಂತರ್ ರಾಷ್ಟ್ರೀಯ ವಸ್ತುಪ್ರದರ್ಶನದಲ್ಲಿ(BIEC) 6,500 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಿ 1,500 ಮಂದಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಇನ್ನು 1,500 ಹಾಸಿಗೆ, ವೈದ್ಯರು ಹಾಗೂ ಇತರೆ ಸಿಬ್ಬಂದಿಗೆ ಮೀಸಲಿಡಲಾಗಿದೆ. ಉಳಿದ 3,500 ಹಾಸಿಗೆಗಳನ್ನು ಈಗಾಗಲೇ ಖರೀದಿಸಲಾಗಿದೆ. ಅದನ್ನು ಆಸ್ಪತ್ರೆ/ಹಾಸ್ಟೆಲ್‌ಗಳಿಗೆ ವರ್ಗಾಯಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಜೊತೆಗೆ ಬಾಡಿಗೆಗೆ ತೆಗೆದುಕೊಂಡಿರುವವನ್ನು ಹಿಂತಿರುಗಿಸಲಾಗುವುದು ಎಂದು ಹೇಳಿದರು.

  • ಹೆಚ್ಚು ಸಾವಾಗುತ್ತಿರುವ 19 ಆಸ್ಪತ್ರೆ ಗುರುತು

ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚು ಸಾವಾಗುತ್ತಿರುವ 19 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಈ 19 ಆಸ್ಪತ್ರೆಗಳಲ್ಲಿ ಪಾಲಿಕೆ ವತಿಯಿಂದ 24,368 ಮಂದಿ ದಾಖಲಾಗಿದ್ದರು., 1,598 ಮಂದಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಒಂದು ತಂಡವನ್ನು ರಚನೆ ಮಾಡಲಾಗಿದೆ. ಪ್ರತಿಯೊಂದು ಆಸ್ಪತ್ರೆಗೆ ತಂಡವು ಭೇಟಿ ನೀಡಿ ಯಾವ ಕಾರಣಕ್ಕೆ ಹೆಚ್ಚು ಸಾವಾಗುತ್ತಿದೆ ಎಂಬ ಸಂಪೂರ್ಣ ಮಾಹಿತಿ(ಡೆತ್ ಆಡಿಟ್)ಯನ್ನು ಸಂಗ್ರಹಿಸಲಾಗುವುದು. ಇದರಿಂದ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದು ಆಯುಕ್ತರು ತಿಳಿಸಿದರು.

Share This Article
Leave a comment