ನಗರಸಭೆ – ಪುರಸಭೆಗಳಿಗೆ ಎರಡು ವರ್ಷಗಳಿಂದಲೂ ಅಧಿಕಾರ ಇಲ್ಲ – ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಏಕಾಂಗಿ ಪ್ರತಿಭಟನೆ ನಡೆಸಿದ ಪುರಸಭಾ ಸದಸ್ಯ

Team Newsnap
2 Min Read

ನ್ಯೂಸ್ ಸ್ನ್ಯಾಪ್
ಮೈಸೂರು
ರಾಜ್ಯದಲ್ಲಿನ ನಗರ ಸಭೆ ಮತ್ತು ಪುರಸಭೆಗಳಿಗೆ ಚುನಾವಣೆಗಳು ನಡೆದು ಬರೋಬರಿ ಎರಡು ವರ್ಷಗಳು ಗತಿಸುತ್ತಿವೆ. ಆಯ್ಕೆಯಾದ ಪುರಪಿತೃಗಳು, ಕೆಲಸವಿಲ್ಲದ ಜನ ಪ್ರತಿನಿಧಿಗಳು ಎಂಬ ಬೋರ್ಡ್ ಹಾಕಿಕೊಂಡು ಕಾಲ ಹರಣ ಮಾಡುವ ಸ್ಥಿತಿ ಬಂದಿದೆ.

ನಗರಸಭೆ ಮತ್ತು ಪುರಸಭೆಯ ಅಧ್ಯಕ್ಷ – ಉಪಾಧ್ಯಕ್ಷರ ಮೀಸಲಾತಿಯಲ್ಲಿ ಸಾಕಷ್ಟು ಲೋಪವಿದೆ ಎನ್ನುವ ಕಾರಣಕ್ಕಾಗಿ ನ್ಯಾಯಾಲಯದ ತಡೆಯಾಜ್ಞೆ ನೀಡಿದೆ. ಹೀಗಾಗಿ ಮುಖ್ಯಸ್ಥರ
ಆಯ್ಕೆಯೇ ಒಂದು ಗೊಂದಲದ ಗೂಡಾಗಿದೆ. ಇತ್ತ ಸರ್ಕಾರವೂ ಕೂಡ ನಗರಸಭೆ ಮತ್ತು ಪುರಸಭೆಗಳ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯ ಬಗ್ಗೆ ಯಾವುದೇ ಆಸಕ್ತಿ ತೋರದೇ ಇರುವುದು ಆಯ್ಕೆಯಾದ ಜನ ಪ್ರತಿನಿಧಿಗಳಿಗೆ ನುಂಗಲಾರದ ತುತ್ತಾಗಿದೆ. ಸರ್ಕಾರದ ವೈಫಲ್ಯ, ಜನ ಪ್ರತಿನಿಧಿಗಳ ವಿರೋಧಿ ನೀತಿ ಖಂಡಿಸಿ ಜಿಲ್ಲೆಯ ಎಚ್ ಡಿ ಕೋಟೆಯ ಪುರಸಭಾ ಸದಸ್ಯ ಮಿಲ್ ನಾಗರಾಜ ಎಂಬುವವರು ಗುರುವಾರ ಏಕಾಂಗಿಯಾಗಿ
ಪುರಸಭೆಯ ಕಟ್ಟಡ ಏರಿ ಪ್ರತಿಭಟನೆ ಮಾಡಿದರು. ಇದು ಈಗ ರಾಜ್ಯದ ಗಮನ ಸೆಳೆದಿದೆ. ಎರಡು ವರ್ಷದಿಂದ ನಮಗೆ ಯಾವುದೇ ಅಧಿಕಾರ ನೀಡಿಲ್ಲ. ನಾಮಕಾವಸ್ತೆ ಸದಸ್ಯರಾಗಿರುವುದು ಬೇಸರ ತರಿಸಿದೆ.

ಪುರಸಭಾ ಅಧಿಕಾರಿಗಳು ನಮ್ಮ ಮಾತು ಕೇಳುವುದಿಲ್ಲ. ಜನರು ಮಾತ್ರ ವಾರ್ಡಗಳ ಸಮಸ್ಯೆಗಳನ್ನು ಪರಿಹಾರ ಮಾಡದೇ ಹೋದರೆ ವಾಚಾಮಗೋಚರವಾಗಿ ಬೈಯುತ್ತಾರೆ. ನಾವು ಏನು ತಪ್ಪು ಮಾಡಿದ್ದೇವೆ ಎನ್ನುವ ಕಾರಣಕ್ಕಾಗಿ ನಮಗೆ ಅಧಿಕಾರ ಕೊಟ್ಟಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ ಪುರಸಭಾ ಸದಸ್ಯ ಮಿಲ್ ನಾಗರಾಜ್.
ಇದು ಕೇವಲ ಎಚ್ ಡಿ ಕೋಟೆ ಪುರಸಭೆಯ ಜನಪ್ರತಿನಿಧಿಗಳ ಸಮಸ್ಯೆ ಮಾತ್ರ ಅಲ್ಲ. ಇಡೀ ರಾಜ್ಯದಲ್ಲೇ ನಗರಸಭೆ ಮತ್ತು ಪುರಸಭೆಯ ಸದಸ್ಯರುಗಳ ಗೋಳು ಇದೇ ಆಗಿದೆ.ನಾವು ಯಾಕಾದರೂ ಸದಸ್ಯರಾಗಿ ಆಯ್ಕೆಯಾಗಿದ್ದೇವೆ ಎನ್ನುವಷ್ಟು ರೋಸಿ ಹೋಗಿದ್ದಾರೆ ಪುರಪಿತೃಗಳು. ಅಧಿಕಾರ ಇಲ್ಲದೇ ಹೋದರೆ ನಮ್ಮ ಮಾತು ಯಾವ ಅಧಿಕಾರಿಗಳೂ ಕೇಳುವುದಿಲ್ಲ. ಹೀಗಾಗಿ ಮೀಸಲಾತಿ ಸಮಸ್ಯೆ ಇರುವ ಸ್ಥಳೀಯ ಸಂಸ್ಥೆಗಳನ್ನು ಬಿಟ್ಟು ಉಳಿದೆಲ್ಲ ನಗರಸಭೆ ಮತ್ತು ಪುರಸಭೆ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆ ನಡೆಸಿ ಸುಸೂತ್ರವಾಗಿ
ಆಡಳಿತ ನಡೆಸಲು ಅವಕಾಶ ಮಾಡಿ ಕೊಟ್ಟರೆ ಸರ್ಕಾರದ ಗಂಟೇನು ಹೋಗುತ್ತದೆ. ಈ ಸಂಗತಿಯನ್ನು ಸಕರ್ಾರವೇ ನ್ಯಾಯಾಲಯಕ್ಕೆ ಮನವರಿಕೆ ಮಾಡಿ, ಚುನಾವಣೆ ಮಾಡಲು
ಅವಕಾಶ ನೀಡಿದರೆ ಪುರಪುತೃಗಳು ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಎನ್ನುವುದು ಬಹುತೇಕ ಜನ ಪ್ರತಿನಿಧಿಗಳ ಅಭಿಮತ.

Share This Article
2 Comments