ಸಾಹಿತ್ಯ

ನಾದಬೊಮ್ಮ ಪರಬ್ರಹ್ಮ

ಅರುಣ್ ಕುಲ್ಕರ್ಣಿ, ರಾಣಿಬೆನ್ನೂರು.

ಶಕ್ತಿಸ್ವರೂಪನಾದ ಪರಮಾತ್ಮನು ಅನಾದಿಯೂ ಅನಂತವೂ ಆದ ಸಮಸ್ತ ವಿಶ್ವವನ್ನು ಆವರಿಸಿಕೊಂಡಿದ್ದಾನೆ. ಪ್ರಕೃತಿಯ ಸೃಷ್ಟಿ, ಪರಿಪಾಲನೆ ಹಾಗೂ ಲಯ ಭಗವಂತನ ಇಂಗಿತದಂತೆ ನಡೆಯುತ್ತವೆ. ಸರ್ವತ್ರ ವ್ಯಾಪಿಸಿರುವ ಆ ಭಗವದ್ ತತ್ವವನ್ನು ಋಷಿಗಳು ಮಹತ್ ಬ್ರಹ್ಮ ಎಂದು ಕರೆದಿದ್ದಾರೆ. ಬ್ರಹ್ಮವು ತೇಜಸ್ ಸ್ವರೂಪವಾಗಿ ಅಣು ರೇಣು ತೃಣ ಕಾಷ್ಠಗಳಲ್ಲಿ ಸಮವಾಗಿ ಸದಾಕಾಲವೂ ಹಾಗೂ ಸರ್ವತ್ರವೂ ಸ್ಥಿತವಾಗಿದೆ. ಸಕಲ ಚರಾಚರಗಳ ಉಗಮ, ಜೀವನ ಹಾಗೂ ನಿರ್ಗಮನ ಆ ಭಗವಂತನ ಇಚ್ಛೆಯಂತೆ ನೆರವೇರುತ್ತದೆ. ಹೇಗೆ ಬೆಳ್ಳನೆಯ ಸೂರ್ಯನ ಕಿರಣ ನೀರಿನ ಹನಿಯನ್ನು ಪ್ರವೇಶಿಸಿ ಸಪ್ತವರ್ಣದ ಆಭಾಸಕ್ಕೆ ಕಾರಣವಾಗಿದೆಯೋ ಅದೇ ರೀತಿಯಲ್ಲಿ ಭಗವದ್ ತೇಜಸ್ಸು ಪ್ರಜ್ಞೆಯಲ್ಲಿ ಬೆಳಗಿ ವಿಶ್ವದ ಆಭಾಸವನ್ನು ಉಂಟುಮಾಡುತ್ತದೆ. ಇದನ್ನೇ ಮಾಯೆ ಎನ್ನಬಹುದು. ಪ್ರಕೃತಿ ಹಾಗೂ ಪ್ರಜ್ಞೆ ಈ ಎರಡೂ ಬ್ರಹ್ಮಮಯವಾಗಿವೆ. ಅದನ್ನೇ ಋಷಿಗಳು ಪ್ರಕೃತಿ ಮತ್ತು ಪುರುಷ ಎಂದಿರಬಹುದು.

ಮೂಲದಲ್ಲಿ ಬ್ರಹ್ಮವು ನಾದಸ್ವರೂಪದಲ್ಲಿರುವುದೆಂದು ಶಾಸ್ತ್ರಗಳು ಸಾರಿವೆ. ಇದರಂತೆ ಇಲ್ಲಿ ಪರಬ್ರಹ್ಮ ನಾದಬೊಮ್ಮನಾಗಿರುವುದು. ಮನಸ್ಸಿಗೆ ಗೋಚರಿಸುವ ವಿಷಯಗಳನ್ನು ತ್ರಿಪದಿಗಳಲ್ಲಿ ಪದ್ಯರೂಪದಲ್ಲಿ ಬರೆಯುವ ಪ್ರಯತ್ನ ನನ್ನ ಮೂಲಕ ನಡೆದಿದೆ. ಕೆಲವು ಆಯ್ದ ಪದ್ಯಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ತಪ್ಪಿದ್ದರೆ ಪ್ರೀತಿಯ ಕ್ಷಮೆ ಇರಲಿ.

ಗುಹೆಯಲಿ ಗುಹ್ಯನಾಗಿ ಮನದಲ್ಲಿ ಮಂಜಾಗಿ
ಹೃದಯದಲಿ ನಾದವಾಗಿ ಕಣ್ಣಿಗೆ ಮರೆಯಾಗಿ
ಕುಳಿತು ಕಾಯ್ತಿಹನೇ ನಾದಬೊಮ್ಮ||

ಬಳ್ಳಿಗೂ ಕಣ್ಣಿಕ್ಕಿ ಆಸರೆಯ ತೋರಿಸುವ
ಬಂಗಾರ ಬೆಳಕಲ್ಲಿ ಕಾಯ ಬೇಯಿಸುವ
ಕರುಣಾತೀತನೇ ನಾದಬೊಮ್ಮ||

ತಿನ್ನಲಿಕ್ಕಲು ಬಾನ ಕುಡಿಯಲಿರೆ ಸುರಪಾನ
ಸುರತಿಯಿಂ ಸುಖದ ಸವೆಸುತಿರೆ ಸೋಪಾನ
ಕದದಿ ಕಾಯುವನು ನಾದಬೊಮ್ಮ||

ಕಪ್ಪೆಯಾ ಕಾಯದಲಿ ಹಾವಿನಾ ಮನವಿಟ್ಟು
ಗಿಡುಗನಾ ಅಕ್ಷಿಯಲಿ ದೂರದೃಷ್ಟಿಯನೆಟ್ಟು
ಸೃಷ್ಟಿಯನು ನಡೆಸುವನು ನಾದಬೊಮ್ಮ||

ಒಳಗೆ ಕಂಪನವಿಟ್ಟು ಆಸೆಯನು ಹೊರಗಿಟ್ಟು
ತೊಗಲಿನಾ ತೇವದ ಬಿಸಿ ದಿರಿಸನುಟ್ಟು
ಒಂದಾದ ಕಂಪನದಿ ಬೆಂದು ನಾದಬೊಮ್ಮ||

ಅಲ್ಲಿಯೂ ನಾನು ಇಲ್ಲಿಯೂ ನಾನು
ಎಲ್ಲೆಲ್ಲಿಯೂ ಸಮನಾಗಿ ನಾನು
ಕುರುಡನಲ್ಲವೆ ನೀನು ಅಂದ ನಾದಬೊಮ್ಮ||

ತನುವ ಕಣ್ಣುಗಳಿಂದ ನೋಡಬೇಕೆಂದೆ
ಕಣ್ಣಿಗೆ ಲೋಕದ ರೂಪಬಣ್ಣವದೊಂದೆ
ರಹಿತನೋ ರೂಪಬಣ್ಣ ನಾದಬೊಮ್ಮ||

ಸಂಸಾರ ದುಃಖವನು ನಾ ನಿನ್ನಲ್ಲಿ ನೆಟ್ಟರೆ
ತಿಳಿ ಮೂಡಿತೆಂದು ಸಕ್ಕರೆಯ ಅಕ್ಕರೆ
ತಿರುಗಿ ನೋಡೆಂದ ನಾದಬೊಮ್ಮ||

ರಾವು ತರಿಸಿದ ದುಃಖ ಕರ್ಮಕಳೆಯುವ ಲೆಖ್ಖ
ರಾವಿನಾ ಕಾವು ಬರಡಾಗಿಸಿತೆನಬೇಡ ಬೆಪ್ಪ
ಜೋಳದಾ ರಾವಿಯಾಗಿ ಹಾರಿಸುವನು ನಾದಬೊಮ್ಮ||

ಕೂಡಿಟ್ಟ ವಿಪತ್ತು ಕಾಡುವುದೆನ್ನುವೇಕೆ
ಹರಿಹರಿದು ಹೋಗಲಿ ಹಾಕುತಾ ಕೇಕೆ
ಸಾಗರಾಚೆ ತಣ್ಣಗಿದೆ ಅಂದನಾ ನಾದಬೊಮ್ಮ||

ಸುಖದ ತೇರು ದುಃಖದಾ ಗಾಲಿಯ ಮ್ಯಾಲ
ಎಳೆದಷ್ಟು ಸಾಗುವುದು ಘರ್ಷಿಸುತ ಕೀಲ
ಸವೆತವಿಲ್ಲದೆ ಇಲ್ಲ ಸುಖವೆಂದ ನಾದಬೊಮ್ಮ||

ಕರ್ಮಕಾರಕ ‘ನಾನು’ ದುಃಖ ಕಾರಕ ನೀನು
ನರಕದಾ ವೇದನೆಯ ಕಾರಣನು ನೀನು
ಎಂದೆಣಿಸಿದರೆ ಒಪ್ಪುವನಾ ನಾದಬೊಮ್ಮ||

ಅನ್ನದಾ ಒಂದಗಳಿಗೆ ಕೂಗಿ ಸಾರುವ ಕಾಗೆ
ಸ್ವಾರ್ಥದಲಿ ನನ್ನದೆಲ್ಲವೂ ಎಂಬ ನಿನ್ನ ಬಗೆ
ಹೇಳು ಕಪ್ಪು ಯಾರೆಂದ ನಾದಬೊಮ್ಮ||

ದರ್ಪಣವ ತೊಳೆಯದೇ ದೂರು ಕೊಟ್ಟು
ದುಃಖ ದುಮ್ಮಾನದಿ ಶಪಿಸುವುದ ಬಿಟ್ಟು
ನೀ ದರ್ಪಣಕೆ ನೀರೆರಚು ನಾದಬೊಮ್ಮ||

ಸುಖವೆಂಬುದೊಂದು ಮಳೆಬಿಲ್ಲು ನೋಡ
ಕ್ಷಣಿಕ ಗೋಚರವಹುದು ಇರುವರೆಗೆ ಮೋಡ
ಆನಂದ ಆತ್ಮ ಕೊನೆವರೆಗು ನಾದಬೊಮ್ಮ||

ಕೆಲಕಾಲ ಇದ್ದು ಕಳೆದುಹೋಗುವ ಕಾಲ
ಭಕ್ತಿಯಿಂ ಭರಿಸೋ ಅಂತರಂಗದ ಚೀಲ
ಹೋದರೆ ಬರದು ಕಾಲ ನಾದಬೊಮ್ಮ||

ಕಳ್ಳಾಟವನು ಆಡಿ ಕಣ್ಣು ತಪ್ಪಿಸಲಾರೆ
ಕಣ್ಣಾರೆ ಕಂಡರೂ ಆಟವನು ಬಿಡಲಾರೆ
ಶರಣಾಗಿ ಆಡೆಂದ ನಾದಬೊಮ್ಮ||

ಹೊಲಸು ಹೇಸಿಗೆ ರಜ್ಜಿನಾ ಮಧ್ಯೆ
ತಾಯಿಯಾ ಗರ್ಭದಿ ಜೀವದಾ ಮುದ್ದೆ
ಹೊರಬಂದು ಬರಿ ನಿದ್ದೆ ನಾದಬೊಮ್ಮ||.

ಆಕಸ್ಮಿಕಗಳ ಅಡ್ದೆ ಕುರಿಮಂದೆಯಾ ದೊಡ್ಡೆ
ಎಂದೆಣಿಸಿ ಜೀವನವ ತೋರದಿರು ಅಸಡ್ಡೆ
ಬದುಕು ಕರ್ಮದ ಬಲೆಯು ನಾದಬೊಮ್ಮ||

ಪರರನು ಜರಿಜರಿದು ನೀನು ತಿದ್ದುವಿಯೇಕೆ?
ಉಧ್ಧರಿಸೆ ಆತ್ಮವನು ಜನುಮವು ಸಾಕೆ?
ಎತ್ತಿಕೊ ಮೇಲಕ್ಕೆ ನಿನ್ನನೇ ನಾದಬೊಮ್ಮ||

ಗಜಿಬಿಜಿಯು ಗಿಜಿಗಿಜಿಯು ಲೋಕದಾ ಸಂತೆ
ಚಣಚಣಕು ಪ್ರತಿಚಣಕು ಪಾಪದಾ ಕಂತೆ
ಭ್ರಾಂತಿಯಾ ನೀ ಬಿಡೋ ನಾದಬೊಮ್ಮ||

ಗಾಳಿಗಿಂ ಮಿಗಿಲಾದ ಜೀವಸತ್ವವು ಇಲ್ಲ
ತಾಯಿಗೆ ಮಿಗಿಲಾದ ಪ್ರೀತಿಪರ್ವತವಿಲ್ಲ
ಮಾತೃವಾತ್ಸಲ್ಯವೇ ನಾನು ನಾದಬೊಮ್ಮ||

Team Newsnap
Leave a Comment
Share
Published by
Team Newsnap

Recent Posts

ಹೆಚ್‌.ಡಿ ರೇವಣ್ಣಗೆ ಹೊಟ್ಟೆ ಉರಿ, ಎದೆನೋವು: ದಿಢೀರ್‌ ಆಸ್ಪತ್ರೆಗೆ ಶಿಫ್ಟ್‌!

ಹೆಚ್‌.ಡಿ ರೇವಣ್ಣಗೆ ಮಧ್ಯಾಹ್ನದಿಂದ ಹೊಟ್ಟೆ ಉರಿ, ಎದೆನೋವು ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್‌ ಟೆಸ್ಟ್ ಮಾಡಿಸಿದ್ದ ಎಸ್‌ಐಟಿ ಅಧಿಕಾರಿಗಳು ಎದೆ ಉರಿ… Read More

May 7, 2024

ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಇಬ್ಬರು ಸರ್ಕಾರಿ ನೌಕರರು ಸಾವು

ಬೆಂಗಳೂರು : ಸೋಮವಾರ ಬಾಗಲಕೋಟೆ ಮತ್ತು ಬೀದರ್ ಜಿಲ್ಲೆಗಳಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಹಾಯಕ… Read More

May 7, 2024

Lok Sabha Election 2024 : ಕರ್ನಾಟಕದಲ್ಲಿ ಶೇ. 9.45% ರಷ್ಟು ಮತದಾನ

ನವದೆಹಲಿ : ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದಲ್ಲಿ ಶೇ. 9.45% ರಷ್ಟು ಮತದಾನವಾಗಿದೆ ಎಂದು ಎಂದು ಚುನಾವಣಾ… Read More

May 7, 2024

ಪ್ರಜ್ವಲ್‌ ಮಾತ್ರವಲ್ಲ , ತುಂಬ ರಾಜಕಾರಣಿಗಳ ವಿಡಿಯೋಗಳು ಸದ್ಯದಲ್ಲೇ ಹೊರಬರಲಿದೆ : ಕೆ ಎಸ್‌ ಈಶ್ವರಪ್ಪ

ಶಿವಮೊಗ್ಗ : ರಾಷ್ಟ್ರ ಮಟ್ಟದಲ್ಲಿ ಹಾಸನದ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ ಡ್ರೈ ಪ್ರಕರಣ ಸದ್ದು ಮಾಡುತ್ತಿದ್ದು, ಪ್ರಜ್ವಲ್‌… Read More

May 7, 2024

ರಾಜ್ಯ ಸರ್ಕಾರವೇ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹಾರಲು ಹೊಣೆ : ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೊದಲ ಬಾರಿಗೆ ಪ್ರಜ್ವಲ್ ರೇವಣ್ಣ (Prajwal Revanna) ವಿಡಿಯೋ ಪ್ರಕರಣಕ್ಕೆ… Read More

May 7, 2024

ಮಂಡ್ಯ : ಭಾರಿ ಮಳೆಗೆ ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ದುರ್ಮರಣ

ಮಂಡ್ಯ :ನೆನ್ನೆ ಮಳೆಯಿಂದಾಗಿ ಮರವೊಂದು ಕಾರಿನ ಮೇಲೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ನಗರದ ಜನರಲ್… Read More

May 7, 2024