ಸುಭಾಷ್ ಚಂದ್ರ ಬೋಸ್ ಪ್ರತಿಮೆ ನಿರ್ಮಾಣದಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್‌

Team Newsnap
2 Min Read
Mysore sculptor Arun Yogiraj in the construction of the Subhash Chandra Bose statue

ಕೇದಾರನಾಥದಲ್ಲಿ 12 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆ ಕೆತ್ತಿದ್ದ ಮೈಸೂರಿನ 37 ವರ್ಷದ ಶಿಲ್ಪಿ ಅರುಣ್ ಯೋಗಿರಾಜ್ ಕೌಶಲ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾರುಹೋಗಿದ್ದಾರೆ.ಅರುಣ್ ಯೋಗಿರಾಜ್ ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಬೋಸ್‌ರ 2 ಅಡಿ ವಿಗ್ರಹವನ್ನು ಉಡುಗೊರೆಯಾಗಿ ನೀಡಿದ್ದರು. ಪ್ರಧಾನಿ ಈ ಭೇಟಿಯನ್ನು ಪ್ರಸ್ತಾಪಿಸಿ ಯೋಗಿರಾಜ್‌ಗೆ ಧನ್ಯವಾದ ಹೇಳಿದ್ದರು. ಮೈಸೂರಿನ ಶಿಲ್ಪಿಯ ಕೆತ್ತನೆ ಕಲೆಗೆ ಮಾರುಹೋದ ಮೋದಿ ಟ್ವಿಟ್ಟರ್‌ನಲ್ಲಿ ಯೋಗಿರಾಜ್‌ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.

ಇದನ್ನು ಓದಿ –ಗಂಡ, ಮಾವ, ಅತ್ತೆ ಕಿರುಕುಳವೇ ಸ್ಫೂರ್ತಿ; IAS ಪಾಸ್ ಮಾಡಿದ 7 ವರ್ಷದ ಮಗುವಿನ ತಾಯಿ

ಇಂಡಿಯಾ ಗೇಟ್ ಬಳಿ ಸ್ಥಾಪಿಸಬೇಕೆಂದಿರುವ 30 ಅಡಿ ಎತ್ತರದ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಕಡೆಯುವ ಕಾರ್ಯದಲ್ಲಿ ಯೋಗಿರಾಜ್‌ರನ್ನು ನೇಮಿಸಿಕೊಳ್ಳಲಾಗಿದೆ. ಕೇಂದ್ರ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಬರುವ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನ ತಂಡವೊಂದು ನೇತಾಜಿ ಪ್ರತಿಮೆಯ ವಿನ್ಯಾಸ ಮಾಡಿದೆ.

ನೇತಾಜಿಯವರ ಪ್ರತಿಮೆಯನ್ನು ವಿನ್ಯಾಸಗೊಳಿಸಿದ ಎನ್‌ಜಿಎಂಎ ಮಹಾನಿರ್ದೇಶಕ ಅದ್ವೈತ ಗದಾನಾಯಕ್ ನೇತೃತ್ವದ ತಂಡದ ಸಹಯೋಗದಲ್ಲಿ ಯೋಗಿರಾಜ್ ಕೆಲಸ ಮಾಡಲಿದ್ದಾರೆ. ಯೋಗಿರಾಜ್ ಅವರು ಶಿಲ್ಪದಲ್ಲಿ ಮುಖಭಾವ ವ್ಯಕ್ತಪಡಿಸುವ ಕಲೆ ಸಿದ್ದಿಸಿಕೊಂಡಿರುವುದರಿಂದ ನೇತಾಜಿ ಪ್ರತಿಮೆಯ ಮುಖಭಾಗದ ಕೆತ್ತನೆ ಕಾರ್ಯದ ಜವಾಬ್ದಾರಿ ಯೋಗಿರಾಜ್ ಅವರಿಗೆ ವಹಿಸಿದೆ.

ನೇತಾಜಿಯ ಬೃಹತ್ ಪ್ರತಿಮೆಯ ನಿರ್ಮಾಣಕ್ಕಾಗಿ ತೆಲಂಗಾಣದ ದೈತ್ಯ ಕಪ್ಪು ಗ್ರಾನೈಟ್ ಶಿಲೆಯೊಂದನ್ನು ತೆಗೆದಿರಿಸಲಾಗಿದ್ದು, ದೆಹಲಿಗೆ ಶೀಘ್ರದಲ್ಲೇ ಸಾಗಿಸಲಾಗುತ್ತಿದೆ. ಆ ಬಳಿಕ ಕೆತ್ತನೆ ಕೆಲಸ ಆರಂಭಿಸುವ ನಿರೀಕ್ಷೆ ಇದೆ. ಅರುಣ್ ಯೋಗಿರಾಜ್ ಇಂದು ದೆಹಲಿಗೆ ತೆರಳಿದ್ದಾರೆ. ಅರುಣ್ ಯೋಗಿರಾಜ್ ಸೇರಿದಂತೆ ಇಡೀ ಎನ್‌ಜಿಎಂಎ ತಂಡಕ್ಕೆ ಆಗಸ್ಟ್ 15ರೊಳಗೆ ಪ್ರತಿಮೆ ಕೆತ್ತನೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಅರುಣ್ ಯೋಗಿರಾಜ್ ಸೇರಿದಂತೆ 20ಕ್ಕೂ ಹೆಚ್ಚು ಶಿಲ್ಪಿಗಳು ಈ ಕಾರ್ಯದಲ್ಲಿ ತೊಡಗಿದ್ದಾರೆ.

ಬೋಸ್ ಪ್ರತಿಮೆಗಾಗಿ ಕಪ್ಪು ಗ್ರಾನೈಟ್ ಬಂಡೆಗಳನ್ನು ದೇಶದೆಲ್ಲೆಡೆ ಹುಡುಕಲಾಗಿತ್ತು. ಅಂತಿಮವಾಗಿ ಒಡಿಶಾ ಮತ್ತು ತೆಲಂಗಾಣದಲ್ಲಿ ಸೂಕ್ತವಾದ ಶಿಲೆಗಳು ಸಿಕ್ಕಿವೆ.

ಅರುಣ್ ಅವರ ತಂದೆ ಯೋಗಿರಾಜ್ ಶಿಲ್ಪಿ ಮಹಾನ್ ಶಿಲ್ಪಿ ಎಂದು ಹೆಸರುವಾಸಿಯಾಗಿದ್ದವರು,ಮೈಸೂರು ಅರಮನೆಯಲ್ಲಿ ಪ್ರಮುಖ ಶಿಲ್ಪಿಗಳಾಗಿ ಕೆಲಸ ಮಾಡುತ್ತಿದ್ದವರು. 37ವರ್ಷದ ಅರುಣ್ ಯೋಗಿರಾಜ್ ಎಂಬಿಎ ವ್ಯಾಸಂಗ ಮಾಡಿದ್ದರೂ ತಮ್ಮ ಮನೆತನದ ಅತ್ಯಂತ ವಿರಳ ಕಲಾಸಿದ್ದಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ 2008ರಿಂದ ಪೂರ್ಣಾವಧಿ ಶಿಲ್ಪಿಯಾಗಿ ಕೆಲಸ ಮಾಡುತ್ತಿದ್ದಾರೆ.

Share This Article
Leave a comment