ಮೈಸೂರು ದಸರಾ – ಮನೆ ಮನಗಳಲ್ಲಿ ಗೊಂಬೆಗಳ ಸಡಗರ

Team Newsnap
3 Min Read

ಮೈಸೂರು ದಸರಾ ಎಂದರೆ ಅದು ಬರೀ ಮೈಸೂರಿಗೆ ಸೀಮಿತವಾಗಿಲ್ಲ, ಬದಲಿಗೆ ಕರ್ನಾಟಕದ ನಾಡಹಬ್ಬ. ಈ ನಾಡಹಬ್ಬದಲ್ಲಿ ಹಲವಾರು ವಿಶೇಷತೆಗಳನ್ನು ಕಾಣಬಹುದು. ಅದರಲ್ಲೊಂದು ಗೊಂಬೆ ಕೂರಿಸುವುದು.ಮನೆ ಮನೆಗಳಲ್ಲಿ ಗೊಂಬೆಯನ್ನು ಕೂರಿಸಿ ನಾಡಹಬ್ಬವನ್ನು ಆಚರಿಸುತ್ತಾರೆ. ದಸರಾ ಹಬ್ಬಕ್ಕೆ ಈ ಗೊಂಬೆ ಕೂರಿಸುವ ಪದ್ಧತಿ ಸುಮಾರು 18 ನೇ ಶತಮಾನದಿಂದಲೂ ಜಾರಿಗೆ ಬಂತು ಎಂದು ಹೇಳಲಾಗುತ್ತದೆ.

pattada gombe

ಮೈಸೂರು ಪ್ರಾಂತ್ಯದಲ್ಲಿ ಮೊಟ್ಟಮೊದಲು ಗೊಂಬೆ ಕೂರಿಸುವ ಪದ್ಧತಿ ಆರಂಭವಾಯಿತು ಎನ್ನಲಾಗುತ್ತದೆ. ಮೈಸೂರು ದಸರಾ ಎಂದು ಜಗತ್ ಪ್ರಸಿದ್ಧಿ ಪಡೆದಿರುವ ಆಚರಣೆ ಮೈಸೂರು ಅರಮನೆಯಲ್ಲಿ ನಡೆದರೆ, ಮೈಸೂರು ರಾಜರ ಪ್ರಜೆಗಳೆಲ್ಲರ ಮನೆಯಲ್ಲಿ ಹಬ್ಬದ ಸಂಭ್ರಮವಾಗಿ ಪಟ್ಟದ ಗೊಂಬೆಗಳನ್ನು ಇಟ್ಟು ಪೂಜಿಸುವ ಪದ್ಧತಿ ಬೆಳೆದುಕೊಂಡು ಬಂತು.

gombhe2

ನವರಾತ್ರಿ ಆಚರಿಸುವ ಎಲ್ಲರ ಮನೆಯಲ್ಲೂ ದಸರಾ ಗೊಂಬೆಗಳದ್ದೇ ದರ್ಬಾರು, ಅಂದ ಚೆಂದದ ಗೊಂಬೆಗಳದ್ದೇ ಕಾರುಬಾರು, ನವರಾತ್ರಿಯಲ್ಲಿ ಗೊಂಬೆಗಳ ಶೃಂಗಾರ, ಎಲ್ಲೆಲ್ಲೂ ಗೊಂಬೆ ಹಬ್ಬದ್ದೇ ಸಡಗರ, ಚಿಕ್ಕವರು ದೊಡ್ಡವರು ಭೇದವಿಲ್ಲದೆ ಎಲ್ಲರಿಗೂ ಗೊಂಬೆ ಜೋಡಣೆ ಮಾಡುವ ಖುಷಿ. ದಸರಾ ಹಬ್ಬಕ್ಕೆ ಗೊಂಬೆಗಳು ಸೇರಿ ಹಬ್ಬವನ್ನು ಮತ್ತಷ್ಟು ರಂಗೇರಿಸುತ್ತದೆ.

ದಸರಾ ಅಂದ ಮೇಲೆ ಪಟ್ಟದ ಗೊಂಬೆಗಳು ಇರಲೇಬೇಕು ಅಲ್ವಾ? ಗೊಂಬೆಗಳನ್ನು ಕೂರಿಸುವಾಗ ಮುಖ್ಯವಾಗಿ ರಾಜ, ರಾಣಿ ಎಂಬ ಪಟ್ಟದ ಗೊಂಬೆಗಳನ್ನ ಕೂರಿಸಿ ಅದಕ್ಕೆ ಪೂಜೆ ನೆರವೇರಿಸಲಾಗುತ್ತದೆ. ಮೇಲಿನ ಮೆಟ್ಟಿಲಿನಲ್ಲಿ ರಾಜ-ರಾಣಿ ,ಕೆಳ ಭಾಗದಲ್ಲಿ ಕಳಸ ಇಡುವುದು ಕಡ್ಡಾಯ. ಒಂದೊಂದು ಅಂತಸ್ತಿನಲ್ಲಿ ಒಂದೊಂದು ಗುಂಪುಗಳನ್ನು ವಿಶೇಷವಾಗಿ ಜೋಡಿಸಿ ಅಲಂಕರಿಸುತ್ತಾರೆ.

gombhe1

ಗೊಂಬೆ ಮನೆಯಲ್ಲಿ ಪಟ್ಟದ ಗೊಂಬೆಗಳ ಜೊತೆಗೆ ಸನ್ನಿವೇಶಗಳಿಗೆ ಹೋಲುವ ಗೊಂಬೆಗಳ ಜೋಡಣೆಯಿಂದ ಹಿಡಿದು ನಮ್ಮ ಪರಂಪರೆ, ನೀತಿ ಹಾಗೂ ಅರಮನೆ, ಪ್ರಾಣಿಗಳು, ಹಳ್ಳಿ ಜನರು, ದೇವತೆಗಳಿಂದ ಹಿಡಿದು ಸಾಧು-ಸಂತರು, ಸತ್ಪುರುಷರು, ಸಾಮಾನ್ಯ ಮನುಷ್ಯರು, ಜನರ ಜೀವನಶೈಲಿ, ಹಳ್ಳಿ ಬದುಕು, ವ್ಯಾಪಾರ, ಕೃಷಿ, ಕ್ರೀಡೆ, ಉದ್ಯೋಗ ಪಶು-ಪಕ್ಷಿಗಳು ಹೀಗೆ,ಪ್ರಕೃತಿಯಲ್ಲಿರುವ ಪ್ರತಿಯೊಂದು ಮುಖ್ಯವೇ ಎಂದು ಬಿಂಬಿಸುವ ಗೊಂಬೆ ಹಬ್ಬದ ಸಡಗರ ನವರಾತ್ರಿಯಲ್ಲಿ ಎದ್ದು ಕಾಣುತ್ತದೆ.

ಗೊಂಬೆ ಕೂರಿಸಲು ಸಾಕಷ್ಟು ತಯಾರಿ ಬೇಕಾಗುತ್ತದೆ. ಪ್ರತಿವರ್ಷ ಒಂದು ನಿರ್ದಿಷ್ಟ ವಿಷಯ (ಥೀಮ್) ಇಟ್ಟುಕೊಂಡು ಮನೆಗಳಲ್ಲಿ ಗೊಂಬೆ ಕೂರಿಸುತ್ತಾರೆ, ನಮ್ಮ ದೇಶದ ಪೌರಾಣಿಕ ಹಿನ್ನೆಲೆ ಇದರಲ್ಲಿ ಮುಖ್ಯವಾಗಿ ಅಷ್ಟಲಕ್ಷ್ಮಿಯರು, ದಶಾವತಾರದ ಬೊಂಬೆಗಳು, ಸೀತಾ ಕಲ್ಯಾಣದ ಜೋಡಿಗಳು, ಶಿವ-ಪಾರ್ವತಿಯರ ಕೈಲಾಸ, ಶ್ರೀಕೃಷ್ಣನ ಲೀಲೆಗಳು, ಸಮುದ್ರ ಮಥನ, ವೈಕುಂಠ ಪ್ರದರ್ಶನದ ಬೊಂಬೆಗಳು, ಕಲೆ, ಸಂಪ್ರದಾಯ, ಜನ ಜೀವನವನ್ನು ದಸರಾ ಬೊಂಬೆಗಳು ಸಾರುತ್ತದೆ. ನವರಾತ್ರಿಯಲ್ಲಿ ದೇವಿಯ ಒಂಬತ್ತು ಅವತಾರಗಳು

gombe

ಗೊಂಬೆ ಕೂರಿಸುವವರು ಪ್ರತೀ ವರ್ಷ ಹಳೆಯ ಗೊಂಬೆಯ ಜೊತೆಗೆ ಒಂದು ಜೋಡಿ ಹೊಸ ಗೊಂಬೆಯನ್ನು ಸೇರಿಸಿ ಗೊಂಬೆ ಕೂರಿಸಬೇಕು ಎನ್ನುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ. ಹಾಗಾಗಿ ಪ್ರತಿಯೊಬ್ಬರು ಹಳೆ ಗೊಂಬೆ ಜೊತೆಗೆ ಹೊಸ ಗೊಂಬೆಯನ್ನು ಕೂರಿಸುತ್ತಾರೆ.

ದಸರಾದ ಒಂಭತ್ತು ದಿನಗಳು ಗೊಂಬೆಗಳಿಗೆ ಪೂಜೆ ಜೊತೆಗೆ ದಿನಾ ಒಂದೊಂದು ಸಿಹಿ ತಿಂಡಿ. ಸಂಜೆ ಆದರೆ ಎಲ್ಲರ ಮನೆಗೆ ಗೊಂಬೆ ನೋಡಲು ಹೋಗುವ ಸಂಭ್ರಮ, ಸಡಗರ. ಗುಂಪು ಸೇರಿ ಒಂದು ಮನೆಗೆ ಹೋಗಿ ಆ ಗೊಂಬೆಗಳ ಮುಂದೆ ಗೊತ್ತಿರುವ ಎಲ್ಲ ಹಾಡುಗಳ ಗಾಯನ. ಶಾಲೆಯ ಪದ್ಯಗಳಿಂದ ಹಿಡಿದು ದೇವರನಾಮದವರೆಗೆ ಎಲ್ಲ ಹಾಡುಗಳು ಒಂದೊಂದಾಗಿ ಗುಂಪಿನಲ್ಲಿ ಹಾಡುತ್ತಿದ್ದ ಮಕ್ಕಳು . ಎಲ್ಲರ ಮನೆಯ ಗೊಂಬೆಗಳನ್ನು ಒಂದೊಂದಾಗಿ ನೋಡುತ್ತಾ ಅದು ಚೆನ್ನಾಗಿದೆ , ಇದು ಚೆನ್ನಾಗಿದೆ ಅಲ್ವಾ ಎನ್ನುವ ಸಂಭ್ರಮ. ಎಷ್ಟು ಚಂದವಾಗಿತ್ತು ಆ ದಿನಗಳು. ಈಗಿನ ಮಕ್ಕಳಿಗೆ ಕಂಪ್ಯೂಟರ್, ಲ್ಯಾಪ್ ಟಾಪ್ , ಸ್ಮಾರ್ಟ್ ಫೋನ್ ಗಳೇ ಗೊಂಬೆಗಳು, ಕಾಲಾಯ ತಸ್ಮೈ ನಮಃ .

Share This Article
Leave a comment