ಮೈಸೂರು ಡಿಸಿ ರೋಹಿಣಿ ವರ್ಗಾವಣೆ ವಿವಾದ – ಸಿಎಟಿ ತೀರ್ಪು ಪ್ರಕಟ : ಅಡ್ಡಗೋಡೆ ಮೇಲೆ ದೀಪದಂತೆ ಆದೇಶ

Team Newsnap
1 Min Read

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಕುರಿತಂತೆ ಸಿಎಟಿ ಸೋಮವಾರ ತನ್ನ ತೀರ್ಪು ಪ್ರಕಟಿಸಿದೆ.

2 ವಾರದೊಳಗೆ ತೀರ್ಪು ನೀಡಬೇಕೆಂಬ ಹೈಕೋರ್ಟ್ ಆದೇಶದಂತೆ ಸಿಎಟಿ ಕೇವಲ ಮೂರು ದಿನದಲ್ಲೇ ತೀರ್ಪು ನೀಡಿದೆ.

ಮೈಸೂರು ಡಿಸಿಯಾಗಿದ್ದ ಶರತ್ ಅವರನ್ನು ಬೇರೆಡೆ ವರ್ಗಾವಣೆ ಮಾಡಿ. ಆ ಸ್ಥಳಕ್ಕೆ ರೋಹಿಣಿ ಸಿಂಧೂರಿ ಅವರನ್ನು ನೇಮಕ ಮಾಡಲಾಯಿತು. ‌

ರಾಜ್ಯ ಸರ್ಕಾರದ ಆದೇಶವನ್ನು ಸಕ್ಷಮ ಪ್ರಾಧಿಕಾರ ಅಂದರೆ ಸರ್ಕಾರವೇ ಮರು ಪರಿಶೀಲನೆ ಮಾಡಿ ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸಿಎಟಿ ಸೂಚನೆ ನೀಡಿದೆ.

ಸಿಎಟಿ ತನ್ನ 31 ಪುಟಗಳ ಆದೇಶದಲ್ಲಿ ವರ್ಗಾವಣೆ ಮರು‌ ಪರಿಶೀಲನೆ ಮಾಡುವಂತೆ ಸೂಚಿಸಿದೆ.

ತಮ್ಮನ್ನು ಅವಧಿ ಪೂರ್ವ ವರ್ಗಾವಣೆ ಮಾಡಲಾಗಿದೆ ಎಂದು ನಿರ್ಗಮಿತ ಡಿಸಿ ಶರತ್ ಸಿಎಟಿ ಮೊರೆ ಹೋಗಿದ್ದರು. ಆದರೆ ಸಿಎಟಿ ವಾದ- ಪ್ರತಿವಾದ ಆಲಿಸಿದರೂ ಡಿಸೆಂಬರ್ 22, 2020 ರ ನಂತರ ಯಾವುದೇ ತೀರ್ಪು ನೀಡಿರಲಿಲ್ಲ . ಈ ಸಂಬಂಧ ಸಿಎಟಿ ಧೋರಣೆ ವಿರೋಧಿಸಿ ಶರತ್ ಹೈಕೋರ್ಟ್ ಮೊರೆ ಹೋಗಿದ್ದರು.

ಹೈಕೋರ್ಟ್ ನ್ಯಾಯಾಧೀಶ ನ್ಯಾ. ವಿಶ್ವಜಿತ್ ಮತ್ತು ನ್ಯಾ. ಸತೀಶ್ ಚಂದ್ರ ಅವರಿದ್ದ ಪೀಠವು, ಡಿಸೆಂಬರ್ 22 ನಂತರ 3 ವಾರದೊಳಗೆ ತೀರ್ಪು ನೀಡಬೇಕಿತ್ತು. ಆದರೆ ಸಿಎಟಿ ನೀಡಿಲ್ಲ. ಆದ ಕಾರಣ 2 ವಾರದೊಳಗೆ ತೀರ್ಪು ನೀಡುವಂತೆ ಹೈಕೋರ್ಟ್ ಸಿಎಟಿಗೆ ಆದೇಶಿಸಿದರು.

ಸಿಎಟಿ ಎರಡು ವಾರ ಕಾಯದೆ, ಕೇವಲ ಮೂರು ದಿನದಲ್ಲಿ ತೀರ್ಪು ನೀಡಿದೆ. ಆದರೆ ಸಿಎಟಿ ತೀರ್ಪು
ಅಡ್ಡ ಗೋಡೆ ಮೇಲೆ ದೀಪ ಇಟ್ಟಂತಿದೆ. ವರ್ಗಾವಣೆ ಕುರಿತಂತೆ ಹಿಂದಿನ ತೀರ್ಮಾನವನ್ನು ಸರ್ಕಾರವೇ ಮರು ಪರಿಶೀಲನೆ ಮಾಡಬೇಕೆಂದು ಸೂಚನೆ ನೀಡಿದೆ.

ಈಗ ಮತ್ತೆ ವರ್ಗಾವಣೆ ವಿವಾದದ ಪರಿಹಾರದ ಕ್ರಮಗಳು ಸರ್ಕಾರದ ಅಂಗಳದಲ್ಲಿದೆ. ಈಗ ಸರ್ಕಾರ ಯಾವ ತೀರ್ಮಾನ ಮಾಡುತ್ತದೆ ಎಂದು ಕಾದು ನೋಡಬೇಕು.

Share This Article
Leave a comment