December 19, 2024

Newsnap Kannada

The World at your finger tips!

deepa1

ನಮ್ಮ ಬದುಕಿನ ನಿರೀಕ್ಷೆ, ಅತಿ ಆಸೆ, ಹಂಬಲ, ಮಹತ್ವಾಕಾಂಕ್ಷೆಗಳನ್ನು ನನ್ನ ಹಣತೆ ತಣ್ಣಗೆ ಪ್ರಶ್ನಿಸುತ್ತದೆ?

Spread the love

ಪ್ರತಿ ದೀಪಾವಳಿ ದಿನ ಮನೆ ಮನೆಗಳಲ್ಲಿ ಬೆಳಕಿನ ಹಣತೆಗೆ ನೂರಾರು ಅರ್ಥಗಳು.ಬೆಳಕಿನ ಅರ್ಥ‌ ವಿಶಾಲವಾಗಿದೆ. ಬೆಳಕಿನ ನಂಬಿಕೆಯೂ ಭರವಸೆ ಮೂಡಿಸುತ್ತದೆ. ಬದುಕು ಕತ್ತಲಿಗೆ ನೂಕಿದಾಗ ಒಂದು ಸಣ್ಣ ಬೆಳಕು ಭರವಸೆಯನ್ನು ಮೂಡಿಸುತ್ತಲೇ ಇದೆ.

ಅಜ್ಙಾನ ಅಂಧಕಾರದಲ್ಲಿ ಮನುಷ್ಯ ಸಂಕೀರ್ಣವಾಗುತ್ತಾ ಹೋಗುತ್ತಿದ್ದಾನೆ. ಸ್ವಾರ್ಥದ ಕೂಪದಲ್ಲಿ ನಿಸ್ವಾರ್ಥ ಭಾವವನ್ನೇ ಕಳಚಿಕೊಂಡ ಅನುಭವ ಎಲ್ಲರಿಗೂ ಆಗಿದೆ.

ಬದುಕಿಗೆ ಬೇಕಾಗಿರುವ ನಿರೀಕ್ಷೆಗಳಿಲ್ಲದ ನಿಸ್ವಾರ್ಥದ ಆಶ್ರಯ. ಮನುಷ್ಯ ನಿರಾಶೆಯನ್ನು ಮಡಿಲಿನಲ್ಲಿ ಇಟ್ಟು ಕೊಂಡು ಆಶಾವಾದಿಯಾಗಿ ಬದುಕಿ ತೋರಿಸುವ ಜೀವಿ.

ದೀಪಾವಳಿ ಬಂತೆಂದರೆ ನೆನಪಾಗುವುದು ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪನವರ ನನ್ನ ಹಣತೆ ಎಂಬ ಕವನ
ಕವಿ ಜಿಎಸ್ ಎಸ್ ಎಲ್ಲರಂತೆ ನಾನೂ ಹಚ್ಚುತ್ತೇನೆ ಹಣತೆಯನ್ನು . ನನಗೆ ನಾ‌ ಹಚ್ಚುವ ಹಣತೆ ಇಡೀ ಜಗತ್ತಿನ ಕತ್ತಲು ಓಡಿಸುವ ಭ್ರಮೆಯಿಂದಲ್ಲ ಎನ್ನುವ ಕವಿಯ ವಾಸ್ತವಿಕ ಬದುಕಿನ ಅರಿವು ವಿಶಾಲವಾಗಿದೆ.

ಕವಿಗೆ ಚೆನ್ನಾಗಿ ಗೊತ್ತಿದೆ. ಎಷ್ಟೇ ದೀಪಗಳನ್ನು ಹಚ್ಚಿದರೂ ಕೊನೆಗೆ ಗೆಲ್ಲುವುದು ಕತ್ತಲೆಯೇ!

ಈ ಕವನದ ಇನ್ನೊಂದು ವಿಶೇಷತೆಯೆಂದರೆ, ಎಲ್ಲರಂತೆ ‘ನಾನೂ’ ಎಂದು ಕವಿ ಹಣತೆಯನ್ನೇನೋ ಹಚ್ಚುತ್ತಾರೆ. ಆದರೆ ಎಲ್ಲರಂತೆ ಅವರಿಗೆ ತಾವು ಹಚ್ಚುವ ಹಣತೆಯ ಬಗ್ಗೆ ಭ್ರಮೆಯಾಗಲಿ, ಮಹತ್ವಾಕಾಂಕ್ಷೆಯಾಗಲಿ ಇಲ್ಲ!
ಇದು ಈ ಕವನದ ವಿರೋಧಾಭಾಸ. ಯಾಕೆಂದರೆ ಎಲ್ಲರೂ ತಾವು ಹಚ್ಚುವ ಹಣತೆಯ ಬಗ್ಗೆ ಅತೀವ ನಿರೀಕ್ಷೆಗಳನ್ನಿಟ್ಟುಕೊಂಡಿದ್ದರೆ, ಕವಿ ತಾನು ಹಚ್ಚುವ ಹಣತೆಯ ಕಾರಣವೇ ಬೇರೆ ಎನ್ನುತ್ತಾರೆ

ಆ ಕಾರಣವನ್ನು ಕವನದ ಕೊನೆಯ ಸಾಲುಗಳಲ್ಲಿ ಹೇಳುತ್ತಾರೆ. ಓದಲು ತುಂಬಾ ಸರಳವೆನಿಸುವ ಈ ಕವನ ಧ್ವನಿಸುವ ಅರ್ಥ ಮಾತ್ರ ಅನಂತವಾದದ್ದು. ನಮ್ಮ ಬದುಕಿನ ನಿರೀಕ್ಷೆ, ಅತಿ ಆಸೆ, ಹಂಬಲ, ಮಹತ್ವಾಕಾಂಕ್ಷೆಗಳನ್ನು ನನ್ನ ಹಣತೆ ತಣ್ಣಗೆ ಪ್ರಶ್ನಿಸುತ್ತದೆ

ರಾಷ್ಟ್ರಕವಿ‌ ಜಿಎಸ್ ಎಸ್ ಅವರು ಬರೆದಿರುವ ನನ್ನ ಹಣತೆ ಎಂಬ ಕವನವನ್ನು ದೀಪಾವಳಿ ಸಂದರ್ಭದಲ್ಲಿ ಮೆಲುಕು ಹಾಕಲು‌ ಸಂದರ್ಭ ಕೂಡಿದೆ.

ನನ್ನ ಹಣತೆ

ಹಣತೆ ಹಚ್ಚುತ್ತೇನೆ ನಾನೂ,
ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ;
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೆ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ,

j s shivarudrappa
— ಜಿ ಎಸ್ ಶಿವರುದ್ರಪ್ಪ

ಹಣತೆ ಹಚ್ಚುತ್ತೇನೆ ನಾನೂ;
ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ
ಆಸೆಯಿಂದಲ್ಲ.
ಕತ್ತಲಿನಿಂದ ಕತ್ತಲೆಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ
ಶತಮಾನದಿಂದಲೂ.
ನಡು ನಡುವೆ ಒಂದಷ್ಟು ಬೆಳಕು ಬೇಕೆಂದು
ಆಗಾಗ ಕಡ್ಡಿ ಗೀಚಿದ್ದೇವೆ,
ದೀಪ ಮುಡಿಸಿದ್ದೇವೆ,
ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನಗಳ
ಮತಾಪು-ಪಟಾಕಿ-ಸುರುಸುರುಬತ್ತಿ-ಹೂಬಾಣ
ಸುಟ್ಟಿದ್ದೇವೆ.
ತಮಸೋ ಮಾ ಜ್ಯೋತಿರ್ಗಮಯಾ” ಎನ್ನುತ್ತ ಬರೀ
ಬೂದಿಯನ್ನೇ ಕೊನೆಗೆ ಕಂಡಿದ್ದೇವೆ.

ನನಗೂ ಗೊತ್ತು, ಈ ಕತ್ತಲೆಗೆ
ಕೊನೆಯಿರದ ಬಾಯಾರಿಕೆ
ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತೊಟ್ಟರೂ
ತಿಂದರೂ, ಕುಡಿದರೂ, ಇದಕ್ಕೆ ಇನ್ನೂ ಬೇಕು
ಇನ್ನೂ ಬೇಕು ಎನ್ನುವ ಬಯಕೆ.

ಆದರೂ ಹಣತೆ ಹಚ್ಚುತ್ತೇನೆ ನಾನೂ,
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ
ನಾನು ಯಾರೋ.

Copyright © All rights reserved Newsnap | Newsever by AF themes.
error: Content is protected !!