ಅಯ್ಯ ನಾನಯ್ಯ, ನಿಮ್ಮ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿಯಜ್ಜ……
ಹರಪ್ಪ ಮಹೇಂಜೋದಾರೋ ಕಾಲದ ನಿಮ್ಮ ಪೂರ್ವಿಕ.
ನಮ್ಮ ವನ ದೇವತೆಯ ಶಾಪದಿಂದ ಈಗಲೂ ಮುಕ್ತನಾಗದೆ, ದೈಹಿಕ, ಮಾನಸಿಕ ಯಾತನೆಯಿಂದ ನರಳುತ್ತಾ ಜೀವಿಸುತ್ತಿದ್ದೇನೆ.
ಆಗ ನಮ್ಮ ಕಾಲದಲ್ಲಿ ಎಲ್ಲರೂ ನಾಗರೀಕರಾಗಿಯೇ ಇದ್ದರಯ್ಯ.
ಒಮ್ಮೆ ನಮ್ಮ ಕಾಡಿನಲ್ಲಿ ನನ್ನ ಕೆಲ ಜನರು ಜಿಂಕೆಯೊಂದನ್ನು ಬೇಟೆಯಾಡಿ ಸಮವಾಗಿ ಹಂಚಿಕೊಂಡು ತಿನ್ನುತ್ತಿದ್ದರಯ್ಯ. ಆಗ ನಾನು ದುರಾಸೆಯದ ಅವರನ್ನೆಲ್ಲಾ ಕೊಂದು ಇಡೀ ಜಿಂಕೆಯನ್ನು ನಾನೊಬ್ಬನೇ ತಿಂದೆನಯ್ಯ.
ಅದನ್ನು ಕಂಡ ನಮ್ಮ ನಾಡಿನ ವನ ದೇವತೆ
” ಎಲೈ ,ಕಟುಕ ಹಂಚಿ ತಿನ್ನುವ
ನಾಗರೀಕರನ್ನು ಕೊಂದು ಹೊಂಚಿ ಕಿತ್ತು ತಿನ್ನುವ ಅನಾಗರಿಕನಾದೆ. ಇದನ್ನು ಸೃಷ್ಟಿಕರ್ತ ಸಹಿಸುವುದಿಲ್ಲ. ಎಲ್ಲಿಯವರೆಗೆ ಈ ಭರತ ಖಂಡದಲ್ಲಿ ಜನ ನಾಗರಿಕರಾಗುವುದಿಲ್ಲವೋ ಅಲ್ಲಿಯವರೆಗೂ ನೀನು ಈ ಜನರ ಅನಾಗರೀಕ ವರ್ತನೆಗಳನ್ನು ನೋಡುತ್ತಾ, ಅನುಭವಿಸುತ್ತಾ ದೈಹಿಕ ಮಾನಸಿಕ ನರಳಾಟಗಳಲ್ಲಿಯೇ ಜೀವಿಸುತ್ತಿರಬೇಕು. ಎಲ್ಲರೂ ನಾಗರೀಕರಾದ ದಿನ ನೀನು ಶಾಪದಿಂದ ಮುಕ್ತನಾಗಿ ಮೋಕ್ಷ ಪಡೆಯುತ್ತೀಯ. ಅಲ್ಲಿಯವರೆಗೂ ನಿನಗೆ ಸಾವಿಲ್ಲ ” ಎಂದು ಶಾಪ ನೀಡಿತು.
ಅಂದಿನಿಂದ ಇಂದಿನವರೆಗೆ ಶಾಪ ವಿಮೋಚನೆಗಾಗಿ ಕಾಯುತ್ತಾ ಇದ್ದೇನಯ್ಯ.
ಅಯ್ಯ, ಒಮ್ಮೆ ವೇದ ಉಪನಿಷತ್ತುಗಳು ರಚನೆಯಾದಾಗ ಅದರ ಆಧಾರದಲ್ಲಿ ಮನುಷ್ಯ ಬದಲಾಗಿ ಧರ್ಮ ಮಾರ್ಗದಲ್ಲಿ ನಡೆದು ನಾಗರಿಕನಾಗಬಹುದು ಎಂದು ಬಹಳ ಆಸೆಪಟ್ಟೆನಯ್ಯ. ಆದರೆ ಹಾಗಾಗಲಿಲ್ಲವಯ್ಯ.
ವಾಲ್ಮೀಕಿ, ವ್ಯಾಸರು ರಾಮಾಯಣ, ಮಹಾಭಾರತ, ಭಗವದ್ಗೀತೆಗಳೆಂಬ ಪವಿತ್ರ ಗ್ರಂಥಗಳನ್ನು ಬರೆದರಯ್ಯ, ಆಗ ನನ್ನ ಆಸೆ ಮತ್ತೊಮ್ಮೆ ಚಿಗುರಿತಯ್ಯ. ಆದರೆ ಆಗಲೂ ನಮ್ಮವರು ನಾಗರಿಕರಾಗಲಿಲ್ಲವಯ್ಯ. ಅವರವರಲ್ಲೇ ಹೊಡೆದಾಡಿ ಸತ್ತರಯ್ಯ.
ಮತ್ತೊಮ್ಮೆ ಬಂದನಯ್ಯ ನೋಡಿ ಅದ್ಬುತ ದೂರದೃಷ್ಟಿಯ ವ್ಯಕ್ತಿ ಗೌತಮ ಬುದ್ದ. ಆತನ ಪ್ರಕಾಂಡ ಪಾಂಡಿತ್ಯ ದಿವ್ಯ ಜ್ಞಾನ ನೋಡಿ ಇನ್ನು ಮಾನವ ಅನಾಗರಿಕನಾಗಿ ಇರಲಾರ. ನನಗೆ ಮುಕ್ತಿಯ ಕಾಲ ಬಂದಿತೆಂದು ಖುಷಿಪಟ್ಟೆ. ಇಲ್ಲಯ್ಯ ಆಗಲೂ ನಮ್ಮವರು ಬದಲಾಗಲಿಲ್ಲವಯ್ಯ.
ಮಹಾವೀರನಂತ ತೀರ್ಥಂಕರನ ಮಾತಿಗೂ ಇವರು ಕಿವಿಗೊಡಲಿಲ್ಲವಯ್ಯ.
ಅನೇಕ ದಾಸರು, ಆಚಾರ್ಯರ ದಾಸವಾಣಿಗಳು, ಭಕ್ತಿ ಪಂಥಗಳಿಗೂ ಇವರು ಬಗ್ಗಲಿಲ್ಲವಯ್ಯ.
ಒಂದಷ್ಟು ಭರವಸೆ ಮೂಡಿದ್ದು ಸಮಾನತೆಯ ಹರಿಕಾರರಾದ ಅಲ್ಲಮ ಬಸವಣ್ಣ ಮುಂತಾದವರ ವಚನಗಳ ಮುಖಾಂತರ ಕ್ರಾಂತಿಯ ಅತ್ಯದ್ಭುತ ಸಂದೇಶ ಹರಿದಾಡಿದಾಗ. ನನಗಂತೂ ತುಂಬಾ ನಿರೀಕ್ಷೆಯಿತ್ತು.
ಊ ಹೂ ಆಗಲೂ ಆಗಲಿಲ್ಲ. ಬಸವಣ್ಣನನ್ನೇ ಕೊಲ್ಲಲು ಪ್ರಯತ್ನಿಸಿದರಯ್ಯ.
ಬಹಳ ಕಾಲ ಯಾರ ಅಂಕೆಗೂ ಸಿಗಲಿಲ್ಲವಯ್ಯ. ಮೊಘಲ್ ದಾಳಿಕೋರರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತಯ್ಯ. ಧರ್ಮ ಸಂಘರ್ಷವು ಜೋರಾಯಿತಯ್ಯ.
ಮತ್ತೆ ನನಗೆ ಆಸೆ ಚಿಗುರಿದ್ದು ನಾವು ನಾಗರಿಕರೆಂದು ಹೇಳಿಕೊಂಡು ನಮ್ಮನ್ನು ಆಕ್ರಮಿಸಿಕೊಂಡ ಆ ಬಿಳಿ ಚರ್ಮದ ಬ್ರಿಟಿಷರಿಂದ. ಆದರೆ ಅವರು ನಮ್ಮ ಸ್ವಾತಂತ್ರ್ಯ ಕಿತ್ತುಕೊಂಡು ನಮಗಿಂತ ಅನಾಗರಿಕರಾಗಿ ವರ್ತಿಸಿದರಯ್ಯ. ಮೊದಲೇ ಮತಿಗೆಟ್ಟ ನಮ್ಮನ್ನು ಒಡೆದು ಆಳಿ ಪರಿಸ್ಥಿತಿ ಮತ್ತಷ್ಟು ಕೆಡಿಸಿದರಯ್ಯ.
ಮತ್ತೆ ನಿರಾಸೆ ಕಾಡಿತಯ್ಯ. ಆಗ ಬಂದನು ನೋಡಿ,
ವೈಚಾರಿಕ ಪ್ರಜ್ಞೆಯ, ಆಧ್ಯಾತ್ಮಿಕ ಮನೋಭಾವದ ವಿವೇಕಾನಂದನೆಂಬ ಕ್ರಾಂತಿಕಾರಿ ಪುರುಷ ಸಿಂಹ. ದೇಶ ವಿದೇಶಗಳಲ್ಲಿ ಜಾಗೃತಿ ಮೂಡಿಸಿದ. ಆದರೆ ಅದೂ ಸಾಕಾಗಲಿಲ್ಲ. ನಾಗರೀಕ ಪ್ರಜ್ಞೆ ಮೂಡಲೇ ಇಲ್ಲ. ನನ್ನ ಶಾಪ ವಿಮೋಚನೆ ಆಗಲೇ ಇಲ್ಲ.
ಆಗ ಉದಯಿಸಿದನೊಬ್ಬ ಮಹಾತ್ಮ. ಆತನೇ ಮೋಹನ್ ದಾಸ್ ಕರಮಚಂದ್ ಗಾಂಧಿ. ಸತ್ಯ, ಸರಳತೆ, ಅಹಿಂಸೆ ಭೋದಿಸಿದ ಆತನಿಂದ ನಮ್ಮ ಜನ ನಾಗರಿಕರಾಗಿ ನನಗೆ ಮುಕ್ತಿ ಖಚಿತ ಎಂದು ಸಂಭ್ರಮ ಪಟ್ಟೆ. ಇಲ್ಲ ಅದೂ ಆಗಲಿಲ್ಲ. ಮೇಲ್ನೋಟಕ್ಕೆ ಗಾಂಧಿ ಟೋಪಿ ಧರಿಸಿದರು. ಆದರೆ ವಾಸ್ತವವಾಗಿ ಆತ್ಮವಂಚಕ ಪಡೆಗಳೇ ಸೃಷ್ಟಿಯಾದವು ..
ಆ ಸಮಯದಲ್ಲಿಯೇ ಮತ್ತೊಬ್ಬ ಮಹಾನ್ ಮಾನವತಾವಾದಿ ಅಂಬೇಡ್ಕರ್ ಹುಟ್ಟಿ ಬಂದನಯ್ಯ.
ತನ್ನ ವಿದ್ವತ್ ಪೂರ್ಣ ಪ್ರತಿಭೆಯಿಂದ ನಮ್ಮನ್ನೆಲ್ಲಾ ನಾಗರಿಕರನ್ನಾಗಿ ಮಾಡಲು ಸಂವಿಧಾನವೆಂಬ ನೀತಿ ನಿಯಮಗಳ ಬೃಹತ್ ಗ್ರಂಥ ರಚಿಸಿದನಯ್ಯ. ಅದರಲ್ಲಿ ಸಮಾನತೆಗಾಗಿ ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಗಾಗಿ ಹಲವಾರು ಕ್ರಮ ಕೈಗೊಂಡನಯ್ಯ.
ಊ ಹೂ ಆಗಲೂ ಬದಲಾಗಲಿಲ್ಲವಯ್ಯ ಮತ್ತು ಈ ಕ್ಷಣದವರೆಗೂ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಲೇ ಸಾಗುತ್ತಿದೆಯಯ್ಯ. ಈ ಭರತ ಖಂಡ ಒಡೆದು ಭಾಗವಾಗಿ ಭಾರತ ಎಂದಾಗಿದ್ದರೂ ಅನಾಗರಿಕತೆ ಹೆಚ್ಚುತ್ತಲೇ ಇದೆಯಯ್ಯ.
ಅಯ್ಯಾ, ವಿಮಾನ ರಾಕೆಟ್ ಗಳು ಬಂತು, ಮೊಬ್ಯೆಲ್ ಇಂಟರ್ನೆಟ್ ಗಳೂ ಬಂತು, ಬುಲೆಟ್ ಟ್ರೈನ್, ಭವ್ಯ ಬಂಗಲೆಗಳು, ಹೋಟೆಲ್ ಗಳು, ಐಷಾರಾಮಿ ಹಡಗುಗಳು ಎಲ್ಲವೂ ಬಂತು. ಈಗ SMART CITY SMART VILLAGE. ಗಳು ಬರುತ್ತಿವೆಯಯ್ಯ.
ತುಂಬಾ ಸಂತೋಷವಯ್ಯ. ಮಜಾ ಮಾಡಿ.
ಆದರೆ ನಿಜವಾಗಿ ನೀವು ಪ್ರಗತಿ ಎಂದು ಭಾವಿಸುತ್ತಿರುವ ಇದು ಅಭಿವೃದ್ಧಿ ಅಲ್ಲವಯ್ಯ. ಇದೇ ವಿನಾಶವಯ್ಯ. ಸ್ವಾಭಿಮಾನ, ಸ್ವಂತಿಕೆ ಅಡವಿಟ್ಟು ಯಾಂತ್ರಿಕತೆಗೆ ಶರಣಾದ ಗುಲಾಮಗಿರಿಯಯ್ಯ. ಸೃಷ್ಟಿಗೆ ವಿರುದ್ಧವಾಗಿ ನಿಮ್ಮ ಸುಖಲೋಲುಪತೆಗೆ ಬಲಿಯಾಗುತ್ತಿರುವ ಮೂರ್ಖರಯ್ಯ.
ಅತ್ಯಂತ ವಿದ್ಯಾವಂತ, ಅತ್ಯಂತ ಶ್ರೀಮಂತ, ಅತ್ಯಂತ ಆಧುನಿಕ, ಅದ್ಭುತ ತಾಂತ್ರಿಕವಾಗಿ ಮುಂದುವರಿದ ಪರದೇಶ ಅಮೆರಿಕಾದ ಜನರ ಬಂದೂಕಿನ ನಿತ್ಯ ನರಳಾಟ ಕೇಳಿಸುತ್ತಿಲ್ಲವೇನಯ್ಯ. ತಂತ್ರಜ್ಞಾನವನ್ನು ಮನುಷ್ಯ ಆಳಬೇಕೆ ವಿನಹ ಮನುಷ್ಯನನ್ನು ತಾಂತ್ರಿಕತೆ ಆಳಬಾರದು.
ನಿರ್ಜೀವ ವಸ್ತುಗಳ ಅಭಿವೃದ್ಧಿ ನಾಗರೀಕತೆಯಲ್ಲವಯ್ಯ. ಅದು ಅನುಕೂಲತೆ ಮಾತ್ರ.
ಜೀವ ಜೀವಗಳ ಪ್ರೀತಿ, ಸಂಬಂಧ, ಪ್ರಕೃತಿಯೊಂದಿಗಿನ ಆತ್ಮೀಯ ಒಡನಾಟ, ನಿಮ್ಮ ತುಂಬು ವ್ಯಕ್ತಿತ್ವವೇ ನಾಗರಿಕತೆ. ಹೊಡೆದು ತಿನ್ನುವುದು ಅನಾಗರಿಕತೆ. ಹಂಚಿ ತಿನ್ನುವುದು ನಾಗರಿಕತೆ.
ಅಯ್ಯಾ, ಕೈ ಮುಗಿದು ಕೇಳಿಕೊಳ್ಳುತ್ತೇನೆ, ಈ ಬದುಕು ಸಾಕಾಗಿದೆ. ಸರಿಯಾಗಿ ಕಣ್ಣು ಕಾಣದ, ಕಿವಿ ಕೇಳದ ಈ ವಯೋವೃಧ್ಧನಿಗೆ, ನಿಮ್ಮ ಆತ್ಮವಂಚಕ ಮನಸ್ಸುಗಳ ವಿಕೃತ ಬದುಕಿನಾಟ, ಮಲಿನ ಮನಸ್ಸುಗಳ ದೊಂಬರಾಟ ನೋಡಲು ಆಗುತ್ತಿಲ್ಲ.
ದಯವಿಟ್ಟು ಎಲ್ಲರೂ ಬೇಗ ನಾಗರಿಕರಾಗಿರಯ್ಯ.
ನನ್ನನ್ನು ಇನ್ನಷ್ಟು ಶತಮಾನಗಳು ಕಾಯಿಸದೆ ಬೇಗ ಶಾಪ ಮುಕ್ತನನ್ನಾಗಿ ಮಾಡಿ ಮೋಕ್ಷ ಕರುಣಿಸಿರಯ್ಯ.
ನಿಮ್ಮ ದಮ್ಮಯ್ಯ ಬೇಗ ನಾಗರಿಕರಾಗಿ…
- ವಿವೇಕಾನಂದ. ಹೆಚ್.ಕೆ.
- ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
- MUDA ಹಗರಣ: ಜೆಡಿಎಸ್ ಶಾಸಕ ಜಿಟಿಡಿ ವಿರುದ್ಧ ಕಿಕ್ಬ್ಯಾಕ್ ಆರೋಪ, ಲೋಕಾಯುಕ್ತದಲ್ಲಿ ದೂರು
- ನಕಲಿ ಸಿಗರೇಟ್ ತಯಾರಿಸಿ ಮಾರಾಟ – ಕೋಟಿ ಮೌಲ್ಯದ ಸಿಗರೇಟ್ ವಶ
- ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
- ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
More Stories
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ