ಸಂಸದೆ ಸುಮಲತಾ ಮತ್ತೆ ಪಕ್ಷೇತರರಾಗಿ ಕಣಕ್ಕೆ ?

Team Newsnap
2 Min Read
  • ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕೆ ಇಳಿದರೆ ಸುಮಲತಾ ಅತಂತ್ರ
  • ಸುಮಲತಾ ಏಕಾಂಗಿ ಹೋರಾಟಕ್ಕೆ ಈಗಿನಿಂದಲೇ ಮಾನಸಿಕ ಸಿದ್ದತೆ
  • ಕಾಂಗ್ರೆಸ್ ಮಾತ್ರ ಏಕಾಂಗಿ ಹೋರಾಟ

ಮಂಡ್ಯ :
ಮುಂಬರುವ ಲೋಕಸಭಾ ಚುನಾವಣೆಗೆ ನಾನೇ ಅಭ್ಯರ್ಥಿ ಆಗುತ್ತೇನೆ ಎಂಬ ಗಟ್ಟನ್ನು ಸಂಸದೆ ಸುಮಲತಾ ರಟ್ಟು ಮಾಡಿದ್ದಾರೆ

ಬಿಜೆಪಿಯಿಂದ ಟಿಕೇಟ್ ವಂಚನೆಯಾದರೆ ಮತ್ತೆ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕುವ ಲಕ್ಷಣಗಳು ಸ್ಪಷ್ಟವಾಗಿವೆ. ಬಿಜೆಪಿ ಜೆಡಿಎಸ್ ಅನ್ನು ಬೆಂಬಲಿಸಿದರೆ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಟ ಮಾಡಲಿದೆ. ಸುಮಲತಾ ಕೂಡ ಏಕಾಂಗಿ ಹೋರಾಟಕ್ಕೆ ಟೊಂಕ ಕಟ್ಟಿ ನಿಲ್ಲಬೇಕಾಗುತ್ತದೆ

ಈಗಾಗಲೇ ಬಿಜೆಪಿಗೆ ತಮ್ಮ ಬೆಂಬಲ ಸಂಪೂರ್ಣ ಇದೆ ಎಂದು ಸುಮಲತಾ ಘೋಷಣೆ ಮಾಡಿದ ನಂತರದ ಬೆಳವಣಿಗೆಯಲ್ಲಿ ಜೆಡಿಎಸ್ – ಬಿಜೆಪಿ ಮೈತ್ರಿ ಸುಮಲತಾ ಪಾಲಿಗೆ ಕಂಟಕವಾಗಲಿದೆ.

ಮಂಡ್ಯ ಜಿಲ್ಲೆಯು ಜೆಡಿಎಸ್ ನ ಪಾಲಿನ ಭದ್ರಕೋಟೆ. ಶತಾಯ ಗತಾಯ ಇಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುವ ಟಾಸ್ಕ್ ಅನ್ನು ಪ್ರಧಾನಿ ಮೋದಿ ಎಚ್ ಡಿ ಕೆ ಗೆ ವಹಿಸಿದ್ದಾರೆ.

ಈ ಲೆಕ್ಕಾಚಾರ ನೋಡಿದರೆ ಬಿಜೆಪಿಯಿಂದ ಸುಮಲತಾಗೆ ಟಿಕೆಟ್ ನೀಡುವುದು ಅನುಮಾನ. ಬಿಜೆಪಿ ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆನೂ ಕೂಡ ಸುಮಲತಾ ಏನು ಹೇಳುತ್ತಿಲ್ಲ. ಈ ನಿರ್ಧಾರ ಮೇಡಂ ಪಾಲಿಗೆ ಬಿಸಿ ತುಪ್ಪವಾಗಿದೆ.

ಮಂಡ್ಯದ ಜನ ನನ್ನನ್ನು ಗೆಲ್ಲಿಸಿದ್ದಾರೆ. ಸ್ವಾಭಿಮಾನಕ್ಕೆ ಬೆಲೆ ಕೊಟ್ಟಿದ್ದಾರೆ. ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ. ನಾನು ಸ್ಪರ್ಧೆ ಮಾಡೋದಾದರೆ ಮಂಡ್ಯದಿಂದಲೇ ಎಂದು ಸಂಸದೆ ಸುಮಲತಾ ಹೇಳುತ್ತಲೇ ಇದ್ದಾರೆ.

ಆದರೆ ಈವರೆಗೂ ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಮಾತ್ರ ಹೇಳಿಲ್ಲ. ಕಳೆದ ಶನಿವಾರ ಕಾಟೇರ ಚಿತ್ರದ ಹಾಡು ಬಿಡುಗಡೆ ಸಂದರ್ಭ ನಟ ದರ್ಶನ್ ಕೂಡ ಸಂಸದೆ ಸುಮಲತಾಗೆ ಜಿಲ್ಲೆಯ ಜನ ಆಶೀರ್ವಾದ ಮಾಡಿ ಎಂದು ಮನವಿ ಮಾಡೋ ಮೂಲಕ ಮತ್ತೆ ಸುಮಲತಾ ಸ್ಪರ್ಧೆ ಮಾಡುತ್ತಾರೆ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ.

ಮಂಡ್ಯ ಕ್ಷೇತ್ರ ಬಿಟ್ಟು ಮತ್ತೆ ಬೇರೆ ಕ್ಷೇತ್ರಕ್ಕೆ ಪಲಾಯನ ಮಾಡುವ ಮಾತಿಲ್ಲ. ಅಂಬರೀಷ್ ನನ್ನಿಂದ ದೂರುವಾದ ಮೇಲೆ ಮಂಡ್ಯ ಸ್ವಾಭಿಮಾನಿ ದಾರಿ ತೋರಿ ಕೈ ಹಿಡಿದು ನಡೆಸಿದ್ದಾರೆ. ಜನರನ್ನೇ ನಂಬಿ ರಾಜಕಾರಣ ಮಾಡಿದವಳು ನಾನು ಎಂದು ಸುಮಲತಾ ಪದೇ ಪದೇ ಹೇಳುವ ಧಾಟಿ ನೋಡಿದರೆ ಸೋಲು- ಗೆಲುವು ಇಲ್ಲೇ ಆಗಲಿ ಎನ್ನುವ ಮಾತುಗಳ ಅರ್ಥವೇ ಏಕಾಂಗಿ ಹೋರಾಟದ ದಿಕ್ಕುಗಳನ್ನು ತೋರಿಸುತ್ತದೆ.

Share This Article
Leave a comment