November 24, 2024

Newsnap Kannada

The World at your finger tips!

deepa1

ನಿರಾಸೆ, ಬದುಕಿನ ವಿಫಲತೆಯನ್ನು ಹಳಿಯುತ್ತಾ ಜೀವನ ನಡೆಸಿರುವ ಬಹುತೇಕ ಯುವಕರು…..

Spread the love

ಹೊಟ್ಟೆ ಪಾಡಿನ ಕಾರ್ಮಿಕರಿಂದಲೇ ಚಲಿಸುತ್ತಿರುವ ದೇಶ………..

” ಅಣೋ ಏನಾದ್ರು ಕೆಲ್ಸ ಇದ್ರೇ ಹೇಳು “

” ಏನ್ ಓದಿದಿಯಾ ಏನ್ ಕೆಲ್ಸ ಮಾಡ್ತೀಯಾ “

” ಅಣೋ ಏಳನೇ ಕ್ಲಾಸು. ನೀನ್ ಏನ್ ಹೇಳಿದ್ರೂ ಆ ಕೆಲ್ಸ ಮಾಡ್ತೀನಿ “

” ಆಯ್ತು ಅಲ್ಲಿ ಒಂದು ಹೋಟೆಲ್ ಇದೆ. ಸಪ್ಲೈಯರ್ ಕೆಲಸ ಮಾಡಬೇಕು. ನಿಯತ್ತಾಗಿರಬೇಕು. ಗೊತ್ತಾಯ್ತ. ಸಂಬಳ ಅವರು ಎಷ್ಟು ಕೊಟ್ರೆ ಅಷ್ಟು ಇಸ್ಕೋಬೇಕು ಆ “

” ಆಯ್ತಣೋ ನೀನು ನನ್ನ ಪಾಲಿಗೆ ದೇವ್ರು ಕಣಣ್ಣ “

ಇದು ಒಂದು ಸಾಂಕೇತಿಕ ಸಂಭಾಷಣೆಯ ತುಣುಕು ಮಾತ್ರ.

ಹೋಟೆಲ್ ಇರಲಿ, ಕಟ್ಟಡ ರಸ್ತೆ ನಿರ್ಮಾಣದ ಕೆಲವು ವಿಭಾಗಗಳೇ ಇರಲಿ, ಅಂಗಡಿ ವ್ಯಾಪಾರ, ಮನೆಗೆಲಸ, ವಾಚ್ ಮನ್, ಪ್ಯಾಕಿಂಗ್, ಮೂಟೆ ಹೊರುವುದು, ಕಸ ಗುಡಿಸುವುದು ಮುಂತಾದ ಎಲ್ಲಾ ಕೆಲಸಗಳಿಗೆ ಯಾವುದೇ ತರಬೇತಿ ತಾಂತ್ರಿಕತೆ, ಶಿಷ್ಟಾಚಾರ, ಅನುಭವ ಅರ್ಹತೆ ಇರುವುದಿಲ್ಲ. ಹೊಟ್ಟೆ ಪಾಡೇ ಬಹುಮುಖ್ಯ.

ಗಾರ್ಮೆಂಟ್ಸ್, ಅಡುಗೆ, ವಾಹನ ಚಾಲನೆ, ದಲ್ಲಾಳಿ, ಕಚೇರಿ ಸ್ವಾಗತಕಾರ ಮತ್ತು ಸಹಾಯಕ, ಸಿನಿಮಾ ನಾಟಕ ಧಾರಾವಾಹಿ ನಿರ್ಮಾಣದ ಕೆಲವು ವಿಭಾಗಗಳು, ವಿವಿಧ ವಸ್ತುಗಳ ಸಣ್ಣ ಪುಟ್ಟ ರಿಪೇರಿ ಮತ್ತು ವರ್ಕ್ ಶಾಪ್ ಮುಂತಾದ ಕೆಲಸಗಳು ಸ್ವಲ್ಪ ತರಬೇತಿ ಸ್ವಲ್ಪ ಅನುಭವದೊಂದಿಗೆ ಹೇಗೋ ನಿರ್ವಹಿಸುತ್ತಾರೆ.

ಈ ಎಲ್ಲಾ ಕಡೆಯೂ ಬಹುತೇಕ ಹೊಟ್ಟೆ ಪಾಡು ಮುಖ್ಯವಾಗಿರುತ್ತದೆಯೇ ಹೊರತು ಆ ಕೆಲಸದ ಆಸಕ್ತಿ, ವೃತ್ತಿಪರತೆ, ಕ್ರಿಯಾತ್ಮಕತೆ ಇರುವುದಿಲ್ಲ.

ಹಾಗೆಯೇ, ಸಣ್ಣ ಪುಟ್ಟ ಹೋಟೆಲುಗಳು, ಹಣ್ಣು ತರಕಾರಿ ಬಟ್ಟೆ ಚಪ್ಪಲಿಗಳು, ಬೀಡಿ ಸಿಗರೇಟು ಕಾಂಡಿಮೆಂಟ್ಸ್ ಮುಂತಾದ ವ್ಯಾಪಾರಗಳು ಸಹ ಯಾವುದೋ ಅನಿವಾರ್ಯ ಅಥವಾ ಕೌಟುಂಬಿಕ ನಿರ್ವಹಣೆಗೆ ಅದರ ಬಗ್ಗೆ ಹೆಚ್ಚಿನ ತಿಳಿವಳಿಕೆ ಇಲ್ಲದಿದ್ದರೂ ಹಣದ ಆಸೆಯಿಂದ ನಿರ್ವಹಿಸುತ್ತಾರೆ.

ಇಲ್ಲಿ ಎಲ್ಲಿಯೂ ನಿರ್ದಿಷ್ಟ ವಿದ್ಯಾರ್ಹತೆ, ವೃತ್ತಿಪರತೆ, ಆ ಕೆಲಸಗಳ ಮೇಲಿನ ಸಂಪೂರ್ಣ ನಿಯಂತ್ರಣ ಇರುವುದಿಲ್ಲ.

ಇದು ವೈಯಕ್ತಿಕ ವಿಷಯವಾದರೆ ಸಮಾಜದ ಮನಸ್ಥಿತಿ ಇನ್ನೂ ವಿಚಿತ್ರ. ಬಹಿರಂಗವಾಗಿ ಹೇಳುವುದು ಮಾತ್ರ ಯಾವ ಕೆಲಸವೂ ಮೇಲು ಕೀಳಲ್ಲ ಎಲ್ಲವೂ ಅದರದೇ ಪಾವಿತ್ರ್ಯತೆ ಹೊಂದಿದೆ. ಆದರೆ ಡಾಕ್ಟರ್ ಗೆ ಕೊಡುವ ಗೌರವ ಕೂಲಿಯವರಿಗೆ ಕೊಡುವುದಿಲ್ಲ, ವಕೀಲರಿಗೆ ಕೊಡುವ ಗೌರವ ಬಟ್ಟೆ ಇಸ್ತ್ರಿ ಮಾಡುವವರಿಗೆ ಕೊಡುವುದಿಲ್ಲ, ಶಿಕ್ಷಕರಿಗೆ ಕೊಡುವ ಗೌರವ ಚಪ್ಪಲಿ ಹೊಲೆಯುವವರಿಗೆ ಕೊಡುವುದಿಲ್ಲ, ಪೋಲಿಸರಿಗೆ ಕೊಡುವ ಗೌರವ ಬಟ್ಟೆ ಹೊಲಿಯುವವರಿಗೆ ಕೊಡುವುದಿಲ್ಲ, ಸೂಟು ಬೂಟಿನವರಿಗೆ ಕೊಡುವ ಗೌರವ ಪಂಚೆ ಕುರ್ತಾ ಅಥವಾ ಚಡ್ಡಿ ಬನಿಯನ್ ತೊಟ್ಟಿರುವ ರೈತರಿಗೆ ಕೊಡುವುದಿಲ್ಲ. ಧರ್ಮಾಧಿಕಾರಿಗಳಿಗೆ ಕೊಡುವ ಗೌರವ ಮನೆಗೆಲಸದವರಿಗೆ ಕೊಡುವುದಿಲ್ಲ. ಕಾರಿನಲ್ಲಿ ಓಡಾಡುವವರಿಗೆ ಕೊಡುವ ಮರ್ಯಾದೆ ಸೈಕಲ್ಲು ಬಸ್ಸಿನಲ್ಲಿ ಓಡಾಡುವವರಿಗೆ ಕೊಡುವುದಿಲ್ಲ. ಏಕೆ ಈ ಆತ್ಮವಂಚನೆ. ವೃತ್ತಿ ಏನೇ ಆಗಿರಲಿ ಮನುಷ್ಯ ಒಂದೇ ಅಲ್ಲವೇ, ಅರ್ಹತೆ, ಸಂಬಳ, ನಿಪುಣತೆ ಏನೇ ಇರಲಿ ವ್ಯಕ್ತಿ ಗೌರವ ಒಂದೇ ಇರಬೇಕಲ್ಲವೇ ?

ಇದು ಎಲ್ಲರ ಮನಸ್ಸಿನಲ್ಲೂ ಇರುವುದರಿಂದಲೇ ಕೆಲಸಗಳಲ್ಲೂ ಸಹ ಮೇಲು ಕೀಳು ಸೃಷ್ಟಿಯಾಗಿದೆ.

ಇನ್ನು ನಿರುದ್ಯೋಗ ಹೆಚ್ಚಾದಂತೆ ಓದಿಗೂ ವೃತ್ತಿಗೂ ಸಂಬಂಧವೇ ಇಲ್ಲದ ಹೊಟ್ಟೆ ಪಾಡಿಗಾಗಿ ಕಾಟಾಚಾರಕ್ಕೆ ತಾತ್ಕಾಲಿಕವಾಗಿ ಯಾವ ಯಾವುದೋ ಕೆಲಸಗಳನ್ನು ಮಾಡುವ ಮತ್ತೊಂದು ವರ್ಗವೂ ಇದೆ. ಸ್ನಾತಕೋತ್ತರ ಪದವೀಧರರು ಸೇಲ್ಸ್ ಮನ್ ಆಗಿ ಬಟ್ಟೆ ಚಪ್ಪಲಿ ಅಂಗಡಿಗಳಲ್ಲಿ,
ಸಿನಿಮಾ ಟಿಕೆಟ್ ಕೌಂಟರಿನಲ್ಲಿ ಅಥವಾ ಇನ್ನೂ ಕೆಳ ಹಂತದಲ್ಲಿ ಕೆಲಸ ಮಾಡುವುದು ಒಂದು ಕಡೆ,
ಹತ್ತನೇ ತರಗತಿ ಫೇಲ್ ಆದವರು ದುಡ್ಡಿನ ಬಲದಿಂದ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ತೆರೆದು ಅದಕ್ಕೆ ಡಾಕ್ಟರೇಟ್ ಪಡೆದವರನ್ನು ಸಹಾಯಕರಾಗಿ ನೇಮಿಸಿಕೊಂಡು ಅವರಿಗೆ ಪಾಠ ಹೇಳಿಕೊಡುವ ವಿಚಿತ್ರ ಸನ್ನಿವೇಶಗಳು ಇನ್ನೊಂದು ಕಡೆ ಸಹ ಈ ವ್ಯವಸ್ಥೆಯಲ್ಲಿದೆ.

ವೃತ್ತಿ ಪರತೆ, ವೃತ್ತಿ ನೈಪುಣ್ಯತೆ, ತಮಗೆ ಅತ್ಯಂತ ಸಂತೋಷಕರ ವೃತ್ತಿ, ತಮ್ಮ ಸಾಧನೆಯ ಗುರಿ ಹೊಂದಿರುವ ವೃತ್ತಿ ಸಿಗುವುದು ತುಂಬಾ ಅಪರೂಪ.

ನಮ್ಮ ವ್ಯಕ್ತಿತ್ವ ನಾವು ಮಾಡುವ ಕೆಲಸದಲ್ಲಿ ಉಪಯೋಗಕ್ಕೆ ಬಂದರೆ ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಹೊಟ್ಟೆ ಪಾಡಿಗೆ ಮಾಡುವಾಗ ನಿರಾಸಕ್ತಿ,‌ ಅಸಹನೆ, ಬೇಜವಾಬ್ದಾರಿ, ಕಾಮ್ ಚೋರ್ ಸ್ವಭಾವ ಮುಂತಾದ ಗುಣಲಕ್ಷಣಗಳು ಅದರ ಗುಣಮಟ್ಟವನ್ನೇ ಕುಗ್ಗಿಸುತ್ತದೆ. ಇದು ದೇಶದ ಒಟ್ಟು ಉತ್ಪನ್ನಗಳು ಮತ್ತು ಸೇವೆಗಳ ‌ತೃಪ್ತಿದಾಯಕ ಮಟ್ಟ ಮುಟ್ಟದಿರಲು ಕಾರಣವಾಗಿದೆ.

ತಳಮಟ್ಟದಲ್ಲಿ ಬಹಳಷ್ಟು ಯುವಕರನ್ನು ನೋಡಿದ್ದೇನೆ. ಭವಿಷ್ಯದಲ್ಲಿ ಹಲವಾರು ಸಾಧನೆಯ ಕನಸುಗಳನ್ನು ಕಾಣುವ ಅವರು ಕೆಲವೇ ವರ್ಷಗಳಲ್ಲಿ ಯಾವುದೋ ಅನಿವಾರ್ಯತೆಗೆ ಬಲಿಯಾಗಿ ಹೊಟ್ಟೆ ಪಾಡಿಗಾಗಿ ಇನ್ನೇನೋ ಕೆಲಸವನ್ನು ಮಾಡುತ್ತಾ ನಿರಾಸೆಯಿಂದ ಬದುಕಿನ ವಿಫಲತೆಯನ್ನು ಹಳಿಯುತ್ತಾ ಜೀವನ ಮಾಡುತ್ತಿದ್ದಾರೆ.

ಚಪ್ಪಲಿ ಹೊಲೆಯುವುದು ಕನಿಷ್ಠ ಕೆಲಸವಲ್ಲದಿದ್ದರೂ ಪದವೀಧರರೊಬ್ಬರು ಅದನ್ನು ಮಾಡುವಾಗ ಅನುಭವಿಸುವ ಮಾನಸಿಕ ಹಿಂಸೆ ಅದನ್ನು ಅನುಭವಿಸುವವರೇ ಬಲ್ಲರು.

ಹೊಟ್ಟೆ ತುಂಬಿಸಿಕೊಳ್ಳುವುದು ಬಡವರ ಜೀವನದ ಧ್ಯೇಯ, ಸ್ವಂತ ಮನೆ ಕಟ್ಟಿಕೊಳ್ಳುವುದು ಮಧ್ಯಮ ವರ್ಗದವರ ಧ್ಯೇಯ, ಸಾಧನೆಯ ಬಗ್ಗೆ ಯೋಚಿಸುವುದು ಯಾವಾಗ…..

ಕಾರ್ಮಿಕ ದಿನದ ಈ ಸಂದರ್ಭದಲ್ಲಿ ನಮ್ಮ ಇಡೀ ಸಮಾಜ ಈ ನಿಟ್ಟಿನಲ್ಲಿ ಯೋಚಿಸಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಪ್ರಯತ್ನಿಸಲಿ ಎಂದು ಆಶಿಸುತ್ತಾ.

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!