‘ನನ್ನತನ’ದ ನಾಶಕ್ಕೆ ಮೊಬೈಲ್ ಒಂದು ಸಾಧನ

Team Newsnap
3 Min Read

ಡಾ . ಅಮಿತ್ ಶ್ರೀಶಾ
ಬೆಂಗಳೂರು

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ಹಿರಿಯರು ಹೇಳುತ್ತಿದ್ದರು. ಅದು ಅಕ್ಷರಶಃ ಸತ್ಯ ಎಂಬುದು ಯುವ ಪೀಳಿಗೆಗೆ ಈಗ ಅನಿಸುತ್ತಿದೆ. ಅದರಿಂದ ಮೊಬೈಲ್ ಫೋನ್‌ಗಳನ್ನು ನಾವು ಕೈಬಿಟ್ಟು ಜೇಬಿನಲ್ಲಿರಿಸುವುದಿಲ್ಲ ಸಾಮಾಜಿಕ ಜಾಲತಾಣ ನಮ್ಮನ್ನು ಒಂದು ಜಾಲದಲ್ಲಿ ಸಿಲುಕಿಸಿ ವಿಲವಿಲ ವದ್ದಾಡುವಂತೆ ಮಾಡಿದೆ. ಆಲೋಚನೆ-ಯೋಚನೆ- ಒತ್ತಡ ಎಂಬ ವಿಷಚಕ್ರದಲ್ಲಿ ನಮ್ಮನ್ನು ಸಿಲುಕಿಸಿ ನಮ್ಮ ಭಾವನೆಗಳಿಗೆ ಅನುಸಾರವಾದ ಸುದ್ದಿಗಳನ್ನು ನಮ್ಮಲ್ಲಿ ದಿನನಿತ್ಯ ಪುನರುಜ್ಜೀವನಗೊಳಿಸಿ ನಮ್ಮನ್ನು ನಮ್ಮದೇ ಆದ ಆಲೋಚನೆಗೆ ದಾಸರಾಗುವಂತೆ ಮಾಡಿದೆ.

ದಾಸನಾಗು ವಿಶೇಷ ನಾಗು ಎಂಬ ದಾಸರ ನುಡಿಗೆ ವಿರುದ್ಧವಾಗಿ ಇಂದು ನಾವು ಮೊಬೈಲ್ ದಾಸರಾಗಿ ಏನೂ ವಿಶೇಷವಿಲ್ಲದೆ ಒಂದೇ ಬಳಪದಲ್ಲಿ ಬರೆದ ಅಕ್ಷರಗಳಂತೆ ಜೀವಿಸುತ್ತಿದ್ದೇವೆ. ಸಾಮಾಜಿಕ ಜಾಲತಾಣ ಪರಿಪೂರ್ಣವಾಗಿ ಕೆಟ್ಟದ್ದೇನಲ್ಲ. ಕೈಬೆರಳಲ್ಲಿ ಭೂಗೋಳವನ್ನು ತಂದಿಡುವ ಶಕ್ತಿಯುತ ಸಾಧನ. ಆದರೆ ಇಂದು ಎಲ್ಲರ ಕೈಸೇರಿ ನಿಶಸ್ತ್ರವಾಗಿ ವಿಕೃತಿಯ ಸಾಧನವಾಗಿ ಪರಿವರ್ತನೆಗೊಂಡಿದೆ. ಸಾಮಾಜಿಕ ಬೆಳವಣಿಗೆಯ ಮುಖವಾಗಬೇಕಿದ್ದ ಸಾಮಾಜಿಕ ಜಾಲತಾಣಗಳು ಇಂದು ಸಮಾಜವನ್ನು ಒಡೆಯುವ ಹಾಗೂ ವಿಕೃತ ಜನಾಭಿಪ್ರಾಯವನ್ನು ಮೂಡಿಸುವ ಅಸ್ತ್ರವಾಗುತ್ತಿದೆ.

ಶಿಸ್ತುಬದ್ಧ ಜೀವನ ಸಾಮಾಜಿಕ ಜಾಲತಾಣವನ್ನು ನಿಲ್ಲಿಸಬೇಕೆ?

ಜನಸಂಪರ್ಕ ಕಳೆದುಕೊಂಡರೆ ನೆಮ್ಮದಿ ಇರುವುದಿಲ್ಲ. ಆದರೆ ಇದನ್ನು ಬಳಸುವ ವಿಧಾನವನ್ನು ಮರು ಪರಿಶೀಲಿಸುವುದು ಉತ್ತಮವೇ? ಹಲವಾರು ಜನ ಇಂದು ಸಾಮಾಜಿಕ ಜಾಲತಾಣ ಬಳಕೆ ನಿಲ್ಲಿಸಿದ್ದಾರೆ. ವಾಟ್ಸಾಪ್, ಫೇಸ್‌ಬುಕ್, ಟ್ಟಿಟ್ಟರ್ ಗಳಿಂದ ತಮ್ಮ ಖಾತೆಯನ್ನು ಅಳಿಸಿ ಹೊರಬಂದಿದ್ದಾರೆ. ಆದರೂ ಅವರು ಆಲೋಚನೆ- ಯೋಚನೆ- ಒತ್ತಡದಿಂದ ಮುಕ್ತವಾಗಿಲ್ಲ. ಏಕೆಂದರೆ ಮೊಬೈಲ್ ಬಳಕೆ ಅವಶ್ಯಕ. ಕೆಲವರು ತಾವು ಓದುವ ಬರಹ, ಸುದ್ದಿ ನೋಡುವ ದೃಶ್ಯಗಳು ಹಾಗು ಕೇಳುವ ಅಭಿಪ್ರಾಯಗಳನ್ನು ಶೋಧಿಸಿ ದೃಡೀಕರಿಸಿ ನಂತರ ಅಳವಡಿಸಿಕೊಳ್ಳುತ್ತಾರೆ. ಈ ಪ್ರಕ್ರಿಯೆ ಒತ್ತಡ ರಹಿತವಾದಲ್ಲಿ ಅವರಿಗೆ ಉಪಯುಕ್ತವಾಗುತ್ತದೆ. ಆದರೆ ಈ ಪ್ರಕ್ರಿಯೆಯೇ ಒತ್ತಡ ತಂದರೆ ಅದು ಸಮಯೋಚಿತವಲ್ಲ. ಒತ್ತಡಕ್ಕೆ ಇರುವ ಪರಿಹಾರ ಶಿಸ್ತುಬದ್ಧ ಜೀವನ.

ಮಾನವೀಯ ಮೌಲ್ಯಗಳ ಅಭಿವೃದ್ಧಿ ಕಾರ್ಯಗಳು

ಈ ಸಂದರ್ಭದಲ್ಲಿ ನನ್ನಜ್ಜನ ಉದಾಹರಣೆ ಸೂಕ್ತ. ಬುದ್ಧಿಪೂರ್ವಕವಾಗಿ ಕೆಟ್ಟದ್ದನ್ನು ಓದದ ನನ್ನಜ್ಜ ಅಪರಾಧಕ್ಕೆ ಸಂಬಂಧಿಸಿದ ಪತ್ರಿಕೆಗಳ ಪುಟವನ್ನು ಓದುತ್ತಲೇ ಇರಲಿಲ್ಲ. ದಿನಪತ್ರಿಕೆಯನ್ನು ಚಾಚೂತಪ್ಪದೆ ಓದುವ ಅಭ್ಯಾಸ ಇದ್ದರೂ ಸಹ ಮನಸ್ಸಿಗೆ ತಳಮಳ ಉಂಟುಮಾಡುವ ಸಮಾಜದ ಘಾತುಕಶಕ್ತಿಗಳ ಮುಖಸ್ತುತಿ ಮಾಡುವ ಲೇಖನಗಳನ್ನು ತಿರುಗಿ ಸಹ ನೋಡುತ್ತಿರಲಿಲ್ಲ. ೬೦ ವಷ ವಯಸ್ಸಾದ ದಿನದಿಂದಲೇ ಒಳಿತು ಬಯಸುವ ಸುದ್ದಿಗಳನ್ನು ಮಾತ್ರ ಕೇಳಿ, ಒಳ್ಳೆಯದನ್ನೇ ಹೇಳುವ ಹವ್ಯಾಸ ಬೆಳೆಸಿಕೊಂಡವರು ನನ್ನಜ್ಜ.

ಇಂದಿನ ಪೀಳಿಗೆಯವರಾದ ನಾವು ೬೦ ವರ್ಷ ಆಗಲು ಕಾಯಬೇಕಿಲ್ಲ. ಲೋಕಜ್ಞಾನವನ್ನು ತಮ್ಮ ಮಕ್ಕಳಿಗೆ ಅತಿ ವೇಗವಾಗಿ ಮನದಟ್ಟು ಮಾಡಿಕೊಡಬೇಕೆಂಬ ಹಂಬಲ ಇರುವಂತಹ ಯುವ ಪೋಷಕರಿಗೆ ಇದೊಂದು ಪಾಠವೇ ಸರಿ. ಒಳಿತು ಮಾಡು ಮನುಸ ನೀನಿರುವುದು ಮೂರು ದಿನ ದಿವಸ ಎಂಬಂತೆ ಒಳ್ಳೆಯ ನುಡಿ ನಡೆ ಮತ್ತು ಸಂಸ್ಕಾರವನ್ನು ಹೇಳಿಕೊಡುವುದೂ ಕೂಡ ಅಷ್ಟೇ ಮುಖ್ಯ. ಸಮಾಜಮುಖಿ ಕೆಲಸಗಳು, ಮಾನವೀಯ ಮೌಲ್ಯಗಳ ಅಭಿವೃದ್ಧಿ ಕಾರ್ಯಗಳು, ಜಾತ್ಯತೀತ ಹಾಗೂ ಲಿಂಗಬೇಧವಿಲ್ಲದ ಚರಾಚರ ಜೀವಿಗಳ ಬಗ್ಗೆ ಕಾಳಜಿ. ಈ ಎಲ್ಲ ಮೌಲ್ಯಗಳನ್ನು ಎತ್ತಿ ಹಿಡಿದು ಸಾಮಾಜಿಕ ಜಾಲತಾಣಗಳನ್ನು ಸಮಾಜಮುಖಿ ಅಸ್ತ್ರವಾಗಿ ಪರಿವರ್ತನೆ ಮಾಡುವುದರಲ್ಲಿ ವಯೋಬೇಧವಿಲ್ಲದ ನಮ್ಮೆಲ್ಲರ ಪರಿಶ್ರಮ ಅಗತ್ಯ. ‘ಮೋದಿ ಹತ್ಯೆ ಮಾಡಿ’ ಕರೆ ನೀಡಿದ್ದ ಕಾಂಗ್ರೆಸ್ ನಾಯಕ ಪಟೇರಿಯಾ ಬಂಧನ

ಮನಸ್ಸು ತಿಳಿಕೊಳ
ಕೊಳದ ಕೆಳಗೆ ಕೆಸರು ಅಡಗಿ ಕುಳಿತಿರುತ್ತದೆ. ನೀರು ನಿಂತರೆ ಪಾಚಿ ಕಟ್ಟುತ್ತದೆ. ನಿರಂತರ ಹರಿಯುವ ನೀರು ಎಂದೂ ಕೆಡುವುದಿಲ್ಲ. ಮನಸ್ಸು ಕೂಡ ನಿಂತ ನೀರಾಗಬಾರದು. ಅದರೊಂದಿಗೆ ತಳದಲ್ಲಿರುವ ಕೆಸರು ಮೇಲಕ್ಕೆ ಬರಬಾರದು. ಮನಸ್ಸಿನಲ್ಲಿ ಒಳ್ಳೆಯದು ಕೆಟ್ಟ ಅಲೋಚನೆಗಳು ಇರುತ್ತವೆ. ಯಾವ ಮನಸ್ಸು ಕೆಟ್ಟ ಆಲೋಚನೆಗಳನ್ನು ಅದುಮಿಡುತ್ತದೋ ಆ ಮನಸ್ಸಿನಲ್ಲಿ ಸಮಾಜಮುಖಿ ಭಾವನೆಗಳು ಮೂಡುತ್ತವೆ. ಇದಕ್ಕೆ ಶಿಕ್ಷಣ-ಜ್ಞಾನ- ವಿವೇಕ ಆಯಾ ಕಾಲಕ್ಕೆ ತಕ್ಕಂತೆ ಮೂಡಿ ಬರಬೇಕು. ಆ ವಿವೇಕದಿಂದ ಮಾತ್ರ ಮನುಷ್ಯ ದೇವಮಾನವನಾಗಬಲ್ಲ. ನನ್ನಜ್ಜ ೧೦೦ ವರ್ಷ ನಿರ್ಮಲ ಮನಸ್ಸಿನ ಜೀವನ ನಡೆಸಿ ನಿದ್ದೆಯಲ್ಲೇ ಇಹಲೋಕತ್ಯಜಿಸಿದರು.

ನನ್ನ ಕೈಗೆ ಬಂದ ಮೊಬೈಲ್ ಈಗ ಕೇವಲ ಸಂಪರ್ಕ ಸಾಧನವಾಗಿ ಉಳಿದಿಲ್ಲ. ಈಗ ನನ್ನ ಪ್ರತಿಬಿಂಬ, ಪ್ರತಿನಿಧಿ ಮತ್ತು ಪ್ರತಿವ್ಯಕ್ತಿತ್ವ ಹಾಗೂ ಇಂದು ನಾನೇ ಅದಾಗುತ್ತಿದ್ದೇನೆ. ನಾನು ಯಾರು ಎಂದು ಯಾರಾದರೂ ಕೇಳಿದರೆ ನನ್ನ ಮೊಬೈಲ್ ಎಲ್ಲವನ್ನೂ ಹೇಳುತ್ತದೆ. ಅಂದರೆ ಕಾಲಕ್ರಮೇಣ ನನ್ನತನವನ್ನು ಕಳೆದುಕೊಂಡು ನನ್ನ ಮೊಬೈಲ್ ಸರ್ವಸ್ವವಾಗುತ್ತಿದೆ.

Share This Article
Leave a comment