ಮಲೆಮಹದೇಶ್ವರ ಬೆಟ್ಟ: 25 ದಿನಗಳಲ್ಲಿ 3 ಕೋಟಿ ರೂ. ಅಧಿಕ ಕಾಣಿಕೆ ಸಂಗ್ರಹ

Team Newsnap
1 Min Read

ಚಾಮರಾಜನಗರ: ಜಿಲ್ಲೆಯ ಹನೂರು ತಾಲ್ಲೂಕಿನ ಪ್ರಸಿದ್ಧ ಶ್ರೀ ಮಲೆಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು.

ಈ ಬಾರಿ 25 ದಿನಗಳ ಅವಧಿಯಲ್ಲಿ ದಾಖಲೆಯ 3.13 ಕೋಟಿ ರೂ. ಸಂಗ್ರಹವಾಗಿದೆ ಎಂದು ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ರಘು ಮಾಹಿತಿ ನೀಡಿದ್ದಾರೆ.

ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಬೆಳಿಗ್ಗೆ 8 ಗಂಟೆಗೆ ಸಾಲೂರು ಬೃಹನ್ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮರಾಗಳ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ರಾತ್ರಿ 10:40ರ ಗಂಟೆಯವರೆಗೂ ನಡೆದಿದೆ.

ಮಹಾಶಿವರಾತ್ರಿ ಜಾತ್ರಾ ಮಹೋತ್ಸವ, ಸರ್ಕಾರಿ ರಜಾ ದಿನಗಳು ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಹರಕೆ ರೂಪದಲ್ಲಿ ಹಣ ಚಿನ್ನ ಹಾಗೂ ಬೆಳ್ಳಿಯನ್ನು ಹುಂಡಿಗೆ ಹಾಕಿದ್ದಾರೆ.ರಾಜ್ಯದಲ್ಲಿ 58 ಕಡೆ ಲೋಕಾಯುಕ್ತ ದಾಳಿ

ಹುಂಡಿಗಳ ಎಣಿಕೆಯಲ್ಲಿ ಈ ಸಲ 3,13,00,931 ರೂ. ಸಂಗ್ರಹವಾಗಿದೆ. 47 ಗ್ರಾಂ ಚಿನ್ನ ಮತ್ತು 2.3 ಕೆ.ಜಿ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಭಕ್ತರು ಅರ್ಪಿಸಿದ್ದಾರೆ. ಇದರ ಜೊತೆಗೆ ಯುಎಸ್​ಎ, ಬಾಂಗ್ಲಾದೇಶ, ನೇಪಾಳ, ಮಲೇಶಿಯಾದ 7 ವಿದೇಶಿ ನೋಟುಗಳು, ಚಲಾವಣೆಯಲ್ಲಿಲ್ಲದ 2000 ಮುಖಬೆಲೆಯ 26 ನೋಟುಗಳನ್ನು ಹುಂಡಿಯಲ್ಲಿ ಹಾಕಿದ್ದಾರೆ ಎಂದು ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ತಿಳಿಸಿದರು.

Share This Article
Leave a comment