ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಜಿಲ್ಲೆಯ ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆ ಶಾಸಕ ಮಂಜುನಾಥ್ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಿಡಿದೆದ್ದಿದ್ದರು. ಇಂದು ಮಾಜಿ ಸಚಿವ ಸಾ.ರಾ. ಮಹೇಶ್ ಸುದ್ದಿಗೋಷ್ಠಿ ನಡೆಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಿಎಟಿ ಹಾಗೂ ಡಿಸಿಯ ಜನಸ್ಪಂದನ ಕಾರ್ಯಕ್ರಮದ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರು ಸೇರಿ ಮೇಯರ್ ತಸ್ನೀಂ ಭಾಗಿಯಾಗಿದ್ದಾರೆ.
ಪ್ರಚಾರದ ಹುಚ್ಚಿದ್ದರೆ ಬನ್ನಿ :
ನಿಮಗೆ ಪ್ರಚಾರದ ಹುಚ್ಚು ಇದ್ದರೆ ನಿಮ್ಮ ಹುದ್ದೆಗೆ ರಾಜೀನಾಮೆ ನೀಡಿ ಎಲೆಕ್ಷನ್‌ಗೆ ನಿಂತುಕೊಳ್ಳಿ ಎಂದು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಮಹೇಶ್ ಕಿಡಿಕಾರಿದ್ದಾರೆ.
ನಿಮಗೆ ಅರ್ಧ ದಿನದಲ್ಲಿ ತೀರ್ಪು :
ರೋಹಿಣಿ ಸಿಂಧೂರಿ ಪರವಾದ ವಿಚಾರದಲ್ಲಿ ಕೇವಲ ಅರ್ಧ ದಿನದಲ್ಲಿ ತೀರ್ಪು ಹೊರ ಬರುತ್ತದೆ. ಆದರೆ ಅವರ ನೇಮಕ ಪ್ರಶ್ನಿಸಿ ನಡೆಯುತ್ತಿರುವ ಸಿಎಟಿ ವಿಚಾರಣೆಯೇ ಪದೇ ಪದೇ ಮುಂದಕ್ಕೆ ಹೋಗುತ್ತಿದೆ. ಶರತ್ ಅವರು ತಮ್ಮ ವರ್ಗಾವಣೆ ಪ್ರಶ್ನಿಸಿ ಸಿಎಟಿ ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ವಿಳಂಬದ ಬಗ್ಗೆಯೇ ಸಂಶಯ ವ್ಯಕ್ತವಾಗುತ್ತಿದೆ ಎಂದು ಸಾ.ರಾ.ಮಹೇಶ್ ಸಿಎಟಿ ವಿಚಾರಣೆಯ ಕಾರ್ಯ ಕಲಾಪಗಳ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.
ಇವರೇನು ಮಾಹಾರಾಣಿನಾ?
ರಾಜವಂಶಸ್ಥರಾದ ಯದುವೀರ್ ಅವರಿಗಿಂತ ಮುಂದೆ ನಿಂತು ಡಿಸಿ ರೋಹಿಣಿ ಸಿಂಧೂರಿ ಪುಷ್ಪಾರ್ಚನೆ ಮಾಡಿದ್ದಾರೆ. ಹಾಗಾಗಿ ಅವರನ್ನು ಶಾಸಕ ಮಂಜು ಮಹಾರಾಣಿ ಅಂತ ಹೇಳಿದ್ದಾರೆ. ಆ ಅರ್ಥದಲ್ಲಿ ಶಾಸಕ ಮಂಜುನಾಥ್ ಡಿಸಿ ಅವರಿಗೆ ಮಹಾರಾಣಿ ಅಂತ ಹೇಳಿದ್ದಾರೆ ಎಂದು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ವ್ಯಂಗವಾಡಿದ್ದಾರೆ.
ಡಿಸಿ ಮೈಸೂರು ಜಿಲ್ಲೆಯಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡ್ತಿದ್ದಾರೆ. ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಗಬೇಕು. ಅದನ್ನ ಬಿಟ್ಟು ಶಾಸಕರ ಗಮನಕ್ಕೂ ತರದೆ ನೀವೇ ಮಾಡ್ತಿದ್ದೀರಿ. ಉಸ್ತುವಾರಿ ಸಚಿವರು ನಿಮಗೆ ಏನಾದ್ರು ಜಿಪಿಎ ಮಾಡಿಕೊಟ್ಟಿದ್ದಾರಾ? ಮೈಸೂರು ಜಿಲ್ಲೆಯನ್ನು ನಿಮಗೆ ಜಿಪಿಎ ಮಾಡಿಕೊಟ್ಟಿದ್ದಾರಾ? ಉಸ್ತುವಾರಿ ಸಚಿವರು ಅಷ್ಟೊಂದು ಬ್ಯುಸಿ ಇದ್ದಾರಾ? ಎಂದು ಸಾ.ರಾ.ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಕ್ಕು ಚ್ಯುತಿ ಮಂಡನೆ ಮಾಡುವೆ:
ಸ್ಪಂದನ ಕಾರ್ಯಕ್ರಮ ನಡೆಯಬೇಕು. ಇದು ಉತ್ತಮವಾದ ಕಾರ್ಯಕ್ರಮ, ಆದ್ರೆ ಇದು ಶಾಸಕರ ಗಮನಕ್ಕೆ ಬರಬೇಕು. ಶಾಸಕರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಾರೆ. ಅದನ್ನ ಮಾಡಿ ಅಂತಷ್ಟೇ ನಾವು ಕೇಳ್ತಿರೋದು ಎಂದು ಹೇಳಿದ್ದಾರೆ.
ನೀವು, ನಿಮ್ಮ ತಹಸೀಲ್ದಾರ್ ದಿನಾಂಕ ನಿಗದಿ ಮಾಡಿದರೆ, ಶಾಸಕರು ಆ ಕೂಡಲೇ ಬಂದುಬಿಡ್ತಾರಾ? ಇದನ್ನ ಡಿ.7ರ ವಿಧಾಸಭೆಯಲ್ಲಿ ಮಾತನಾಡುತ್ತೇನೆ. ಕೆಡಿಪಿ ಸಭೆಯಲ್ಲಿ ನೀವೂ ಉತ್ತರ ಕೊಡುವವರು. ನೀವ್ಯಾಕೆ ಮೇಲೆ ಕುಳಿತುಕೊಂಡ್ರಿ.? ಕೆಳಗೆ ಕುಳಿತೆ ಉತ್ತರ ಕೊಡಬೇಕಿತ್ತು.? ಇದನ್ನು ಕೂಡ ವಿಧಾನಸಭೆಯ ಅಧಿವೇಶನದಲ್ಲಿ ಪ್ರಸ್ತಾಪ ಮಾಡ್ತಿನಿ. ನಮಗೂ ಕೂಡ ದಿನಕ್ಕೆ 30 ಮದುವೆ ಇತರೆ ಕಾರ್ಯಕ್ರಮ ಇರುತ್ತೆ.ಆದರೆ ಒಳ್ಳೆ ಕೆಲಸ ಮಾಡುವಾಗ ನಾವು ಕೂಡ ಅದಕ್ಕೆ ಜೊತೆಯಾಗ್ತಿವಿ. ಆದರೆ ನಮಗೆ ಮಾಹಿತಿ ನೀಡದೆ ಕಾರ್ಯಕ್ರಮ ಮಾಡಿದ್ರೆ ಹೇಗೆ? ಎಂದು ಶಾಸಕರು ಪ್ರಶ್ನಿಸಿದ್ದಾರೆ.
ನಾನು ತುಂಬಾ ಜನ ಡಿಸಿಗಳನ್ನು ನೋಡಿದ್ದೇನೆ. ಯಾರು ಈ ರೀತಿ ಮಾಡಿರಲಿಲ್ಲ ನಾನು ಈ ಬಗ್ಗೆ ಹಕ್ಕು ಚ್ಯುತಿ ಮಂಡಿಸುತ್ತೇನೆ. ಸದನದಲ್ಲಿ ನಾನು ಈ ಬಗ್ಗೆ ಹಕ್ಕು ಚ್ಯುತಿ ಮಂಡಿಸುತ್ತೇನೆ ಎಂದು ಹೇಳಿದ್ದಾರೆ.
ಡಿಸಿ ರೋಹಿಣಿ ಸಿಂಧೂರಿಗೆ ಸಾ.ರಾ.ಮಹೇಶ್ ಶಿಷ್ಟಾಚಾರದ ಪಾಠ ಮಾಡಿದರು. ಕೆಡಿಪಿ ಸಭೆಯಲ್ಲಿ ವೇದಿಕೆ ಮೇಲೆ ಡಿಸಿ ಕುಳಿತುಕೊಳ್ಳುವಂತಿಲ್ಲ. ಇದು ಪಾಲಿಸುವ ಹಾಗೂ ಇರುವ ಶಿಷ್ಟಾಚಾರ. ಮೈಸೂರಿನಲ್ಲಿ ಇದು ಪಾಲನೆ ಆಗ್ತಿಲ್ಲ. ಮುಖ್ಯ ಕಾರ್ಯದರ್ಶಿ ಕೂಡ ಸಚಿವರ ಪಕ್ಕದಲ್ಲಿ ಕುಳಿತುಕೊಳ್ಳುವ ಆಗಿಲ್ಲ. ಇದು ಕೆಡಿಪಿ ಸಭೆಯಲ್ಲಿ ಪಾಲನೆಯಾಗಬೇಕಾದ ಶಿಷ್ಟಾಚಾರ ಎಂದು ಹೇಳಿದ್ದಾರೆ.
ಮಾಸ್ಕ್ ದಂಡ ನಿಲ್ಲಿಸಿ:
ಶಾಸಕ ಸಾ.ರಾ.ಮಹೇಶ್ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು. ಸರ್ಕಾರ ಅಧಿಕಾರಿಗಳನ್ನು ಬಿಟ್ಟು ರೋಲ್‌ಕಾಲ್ ಮಾಡಿಸುತ್ತಿದೆ. ನಿತ್ಯವೂ ಮಾಸ್ಕ್ ಹಾಗೂ ತಪಾಸಣೆ ಹೆಸರಲ್ಲಿ ಸುಲಿಗೆ ನಡೆಯುತ್ತಿದೆ. ಸರ್ಕಾರ ಪೊಲೀಸರಿಗೆ ನೀಡಿರುವ ಈ ಟಾರ್ಗೆಟ್ ಹಿಂಪಡೆಯಬೇಕು. ಗೃಹ ಸಚಿವರು ಐಜಿಪಿಗೆ ಇದನ್ನ ನಿಲ್ಲಿಸಲು ಸೂಚನೆ ಕೊಡಬೇಕು. ಇದು ಒಂದು ರೀತಿ ಲೆಸೈನ್ಸ್ ಇಟ್ಟುಕೊಂಡು ರೋಲ್‌ಕಾಲ್ ಮಾಡುವ ರೀತಿಯಾಗಿದೆ. ಕೂಲಿ ಕೆಲಸ ಮಾಡುವವರಿಗೆ 500ರೂ ದಂಡ ವಿಧಿಸಿದ್ರೆ ಹೇಗೆ? ಅವರು ದುಡಿಯುವ ದುಡ್ಡು ನಿಮಗೆ ದಂಡ ಕಟ್ಟಿ ಹೋಗಬೇಕಾ? ಸಾರ್ವಜನಿಕರಿಗೆ ಹಾಗೂ ಕೂಲಿ ಮಾಡುವವರಿಗೆ ಇದು ಸಮಸ್ಯೆಯಾಗಿದೆ. ಈಗಾಗಲೇ ಕೊರೋನಾದಿಂದ ಜನರು ಸಾಕಷ್ಟು ನೊಂದಿದ್ದಾರೆ. ಹಾಗಾಗಿ ಈ ಮಾಸ್ಕ್ ದಂಡ ಹಾಗೂ ತಪಾಸಣೆಯನ್ನು ನಿಲ್ಲಿಸಬೇಕು? ಎಂದು ಆಗ್ರಹಿಸಿದ್ದಾರೆ.
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
- ತುಪ್ಪ ಎಂಬ ಮಹಾ ಔಷಧಿ
- ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
- ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
More Stories
SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
ತುಪ್ಪ ಎಂಬ ಮಹಾ ಔಷಧಿ