January 12, 2025

Newsnap Kannada

The World at your finger tips!

boys

ರೌಡಿಸಂ ನಲ್ಲಿ ಹೆಸರು ಮಾಡಲು ಕೊಲೆ ಮಾಡಿದ ಅಪ್ರಾಪ್ತರು

Spread the love

ಸಕ್ಕರೆ ನಾಡು ಮಂಡ್ಯದಲ್ಲಿ ದಿನದಿಂದ ದಿನಕ್ಕೆ ರೌಡಿಗಳ ಆ್ಯಕ್ಟಿವಿಟಿಗಳು ಹೆಚ್ಚಾಗುತ್ತಿದೆ. ಹವಾ ಮೆಂಟೇನ್ ಮಾಡುವ ಉದ್ದೇಶದಿಂದ ಅಪ್ರಾಪ್ತರು ಕೊಲೆ ಮಾಡಿರುವ ಘಟನೆ ನಡೆದಿದೆ.

ಅಕ್ಟೋಬರ್ 30 ರಂದು ಮಂಡ್ಯ ನಗರದ ಗುತ್ತಲು ಬಡಾವಣೆಯ ಬಸವನಗುಡಿಯಲ್ಲಿ ಸುಮಂತ್ ಅಲಿಯಾಸ್ ಕುಳ್ಳಿ ರೌಡಿಶೀಟರ್‍ನನ್ನು ಹಾಡಹಗಲೇ ರಸ್ತೆಯಲ್ಲಿ ಕಣ್ಣಿಗೆ ಖಾರದ ಪುಡಿ ಎರಚಿ ಲಾಂಗ್‍ನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಕೊಲೆಯಿಂದ ಮಂಡ್ಯ ನಗರದ ಜನರು ಸಹ ಬೆಚ್ಚಿ ಬಿದ್ದಿದ್ದರು. ಈ ಕೊಲೆ ಪ್ರಕರಣದ ಆರೋಪಿಗಳ ಬೆನ್ನು ಬಿದ್ದಿದ್ದ ಪೊಲೀಸರು ಎಂಟು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆ ಪ್ರಕರಣದಲ್ಲಿ ಮೂವರು ಅಪ್ರಾಪ್ತರು ಭಾಗಿಯಾಗಿದ್ದಾರೆ. ನಾವು ಮಂಡ್ಯದಲ್ಲಿ ಹವಾ ಮೆಂಟೇನ್ ಮಾಡಲು ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದೇವೆ ಎಂದು ಅಪ್ರಾಪ್ತರು ಪೊಲೀಸರ ಮುಂದೆ ಹೇಳಿದ್ದಾರೆ. ಈ ಸತ್ಯವನ್ನು ಕೇಳಿ ಪೊಲೀಸರೇ ದಂಗಾಗಿದ್ದಾರೆ.

ಈ ಕೊಲೆ ಮಾಡಲು ಮೂಲ ರೂವಾರಿ ಮಂಡ್ಯದಲ್ಲಿ ರೌಡಿಶೀಟರ್ ಆಗಿರುವ ಚಂದನ್. ಈತ 2019ರಲ್ಲಿ ನಡೆದ ನಂದನ್ ಎಂಬ ಯುವಕನ ಕೊಲೆ ಕೇಸ್‍ನಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾನೆ. ಜೈಲಿನಲ್ಲೇ ಇದ್ದುಕೊಂಡು ಈತ ಸುಮಂತ್ ಕೊಲೆಗೆ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಕೊಲೆಯಾಗಿರುವ ಸುಮಂತ್ ಅಲಿಯಾಸ್ ಕುಳ್ಳಿ ಕೂಡ ರೌಡಿಶೀಟರ್ ಆಗಿದ್ದನು.

ಚಂದನ್ ತನ್ನ ಶಿಷ್ಯರಾದ ಮಿಷನ್ ಮಂಜ, ಪವನ್ ಕುಮಾರ್, ಆಫನಾನ್, ದರ್ಶನ್‍ರನ್ನು ಜೈಲಿಗೆ ಕರೆಸಿಕೊಂಡು ಕೊಲೆಗೆ ಸ್ಕೆಚ್ ಹಾಕಿದ್ದಾನೆ. ಈ ನಾಲ್ವರು ತಮ್ಮ ಜೊತೆಗೆ ಮಂಡ್ಯದಲ್ಲಿ ಹೆಸರು ಮಾಡಬೇಕು ಎಂದುಕೊಂಡಿದ್ದ ಮೂವರು ಅಪ್ರಾಪ್ತರನ್ನು ಸೇರಿಸಿಕೊಂಡು ಸುಮಾರು 15 ದಿನಗಳ ಕಾಲ ಸ್ಕೆಚ್ ಹಾಕಿ ಕೊಲೆ ತಂತ್ರವನ್ನು ಮಾಡಿದ್ದಾರೆ.

ಅಕ್ಟೋಬರ್ 30 ರಂದು ಹಾಲು ಹಾಕಲು ಬೈಕಿನಲ್ಲಿ ಹೋಗುತ್ತಿದ್ದ ಸುಮಂತ್ ಮೇಲೆ ಖಾರದ ಪುಡಿ ಎರಚಿ ಲಾಂಗ್‍ನಿಂದ ಕೊಚ್ಚಿ ಕೊಲೆ ಮಾಡಿದ್ದರು. ಕೊಲೆ ಮಾಡಿ ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯ ಸ್ಕೂಟರ್ ಕಿತ್ತುಕೊಂಡು ಪರಾರಿಯಾಗಿದ್ದರು. ಇದೀಗ ಈ ಕೊಲೆ ಸಂಬಂಧ 8 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲು ಮಾಡಿರುವುದಾಗಿ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!