ತೀವ್ರ ಹೃದಯಾಘಾತದಿಂದ ಸಚಿವ ಉಮೇಶ್‌ ಕತ್ತಿ ನಿಧನ

Team Newsnap
1 Min Read

ರಾಜ್ಯ ಸಚಿವ ಸಂಪುಟದ ಆಹಾರ ಇಲಾಖೆ ಸಚಿವ ಉಮೇಶ್‌ ಕತ್ತಿ (61) ತೀವ್ರ ಹೃದಯಾಘಾತದಿಂದ ಬೆಂಗಳೂರಿನಲ್ಲಿ ಕಳೆದ ರಾತ್ರಿ ವಿಧಿವಶರಾಗಿದ್ದಾರೆ.

ಬೆಂಗಳೂರಿನ ಡಾಲಾರ್ಸ್‌ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಕತ್ತಿ ಅವರಿಗೆ ಹೃದಯಾಘಾತ ಆಗಿತ್ತು. ಇವರನ್ನು ಚಿಕಿತ್ಸೆಗಾಗಿ ಎಂ.ಎಸ್‌ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಐಸಿಯುನಲ್ಲಿ ಕತ್ತಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದರು. ಚಿಕಿತ್ಸೆ ಫಲಿಸದೇ ಉಮೇಶ್‌ ಕತ್ತಿ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಉಮೇಶ್‌ ಕತ್ತಿಯವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

6 ಬಾರಿ ಶಾಸಕ :

ಉಮೇಶ್‌ ಕತ್ತಿಯವರು 6 ಬಾರಿ ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಬಸವರಾಜ್‌ ಬೊಮ್ಮಾಯಿ ಸರ್ಕಾರದಲ್ಲಿ ಅರಣ್ಯ ಇಲಾಖೆ ಸಚಿವರು ಆಗಿದ್ದರು.

ಹಲವು ಬಾರಿ ತಾನು ರಾಜ್ಯದ ಸಿಎಂ ಆಗಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದರು. ಬಿಜೆಪಿ ಹೈಕಮಾಂಡ್‌ ವಿರುದ್ಧ ಬಂಡಾಯವೂ ಎದ್ದಿದ್ದರು ಉಮೇಶ್‌ ಕತ್ತಿಯವರು.

1961 ಮಾರ್ಚ್‌ 14ರಂದು ಬೆಳಗಾವಿ ಜಿಲ್ಲೆಯಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದ ಕತ್ತಿ, ರಾಜಕಾರಣಿ, ಕೃಷಿಕ, ಉದ್ಯಮಿ ಆಗಿಯೂ ಸಾರ್ಥಕ ಜೀವನ ನಡೆಸಿದ್ದಾರೆ.

Share This Article
Leave a comment