December 23, 2024

Newsnap Kannada

The World at your finger tips!

deepa1

ಮನಸ್ಸು ಬದಲಾವಣೆಗಾಗಿ ತುಡಿಯುತ್ತಿದೆ…..

Spread the love

ಬಡತನವನ್ನು ಆಕರ್ಷಕವಾಗಿ ಕಣ್ಣೀರಾಗುವಂತೆ ವರ್ಣಿಸಬಲ್ಲೆ,

ಭ್ರಷ್ಟತೆಯನ್ನು ಕೋಪ ಉಕ್ಕುವಂತೆ ಚಿತ್ರಿಸಬಲ್ಲೆ,

ದೌರ್ಜನ್ಯಗಳನ್ನು ಕೆಂಡಾಮಂಡಲವಾಗುವಂತೆ ಬರೆಯಬಲ್ಲೆ,

ವೇಶ್ಯಾವಾಟಿಕೆಯನ್ನು ಮನಮಿಡಿಯುವಂತೆ ಹೇಳಬಲ್ಲೆ,

ರೈತರ ಕಷ್ಟ ಕೋಟಲೆಗಳನ್ನು ನಿಮ್ಮ ಮನದಾಳಕ್ಕೆ ಮುಟ್ಟುವಂತೆ ಸೃಷ್ಟಿಸಬಲ್ಲೆ,

ಬಾಲಕಾರ್ಮಿಕರ ಸ್ಥಿತಿಯನ್ನು ಮನಕರಗುವಂತೆ ನಿರೂಪಿಸಬಲ್ಲೆ,

ಧರ್ಮಗಳನ್ನು ಕಟು ಮಾತುಗಳಲ್ಲಿ ಖಂಡಿಸಬಲ್ಲೆ,

ಜಾತಿಗಳ ಅಸ್ತಿತ್ವವನ್ನು ಅಲ್ಲಗಳೆಯಬಲ್ಲೆ,

ಬುದ್ದ, ಬಸವ, ಗಾಂಧಿ, ವಿವೇಕಾನಂದ, ಅಂಬೇಡ್ಕರ್ ಅವರುಗಳನ್ನು ದೇವರಂತೆ ಚಿತ್ರಿಸಬಲ್ಲೆ,

ಪ್ರೀತಿ, ಕರುಣೆ, ಸಮಾನತೆ, ಮಾನವೀಯತೆಯ ಶ್ರೇಷ್ಠತೆಯನ್ನು ಸಾರಬಲ್ಲೆ,

ನಿಮ್ಮನ್ನು ಮೆಚ್ಚಿಸುವ ಸಿನಿಮಾ ನಿರ್ಮಿಸಬಲ್ಲೆ,

ನಿಮ್ಮನ್ನು ರಂಜಿಸುವ ಲೇಖನ ಬರೆಯಬಲ್ಲೆ,

ನಿಮ್ಮನ್ನು ನಗಿಸುವ ಸಾಹಿತ್ಯ ರಚಿಸಬಲ್ಲೆ,

ನಿಮ್ಮನ್ನು ಅಳಿಸುವ ಕಥೆ, ಕಾದಂಬರಿ ಸೃಷ್ಟಿಸಬಲ್ಲೆ,

ನಿಮ್ಮನ್ನು ಭಕ್ತಿಯ ಲೋಕದಲ್ಲಿ ತೇಲಿಸಬಲ್ಲೆ,

ನಿಮ್ಮನ್ನು ಮೌಡ್ಯದ ಆಳಕ್ಕೆ ಸೆಳೆಯಬಲ್ಲೆ,

ನಿಮ್ಮನ್ನು ಮಹಾನ್ ಬುದ್ದಿವಂತರೆಂದು ನಂಬಿಸಬಲ್ಲೆ,

ನಿಮ್ಮನ್ನು ಮಾತಿನ ಮೋಡಿಯಲ್ಲಿ ಬೀಳಿಸಬಲ್ಲೆ,

ಹೌದು,
ಇದನ್ನು ಕೇವಲ ಲೇಖನಿಯಿಂದ ಮಾಡಬಲ್ಲೆ,

ಆದರೆ,…….,

ನಿಮ್ಮನ್ನು ನಾಗರೀಕರನ್ನಾಗಿ ಮಾಡಲು ಸಾಧ್ಯವಾಗುತ್ತಿಲ್ಲ,

ನಿಮ್ಮನ್ನು ನಿಜವಾದ ಮನುಷ್ಯರನ್ನಾಗಿ ಮಾಡಲು ಸಾಧ್ಯವಾಗುತ್ತಿಲ್ಲ,

ನಿಮ್ಮ ಕಷ್ಟ ಕೋಟಲೆಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ,

ನನಗೂ ನನ್ನಂತೆ ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತಿಲ್ಲ,

ಇದೆಲ್ಲಾ ಹೇಳಿದ ನಾನೂ ನಿಮ್ಮೊಳಗೊಬ್ಬನೆ,

ನಿಮ್ಮಂತೆ ನನ್ನ ಮನಸ್ಸೂ ಬದಲಾವಣೆಗಾಗಿ ತುಡಿಯುತ್ತಿದೆ,

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!