December 22, 2024

Newsnap Kannada

The World at your finger tips!

mental health

ಮಾನಸಿಕ ಖಿನ್ನತೆ :

Spread the love
dr rajashekar nagur
ಡಾ. ರಾಜಶೇಖರ ನಾಗೂರ

ಬದುಕಿನ ಒಂದಲ್ಲ ಒಂದು ಹಂತದಲ್ಲಿ ಪ್ರತಿಯೊಬ್ಬರಿಗೂ ಮಾನಸಿಕ ಖಿನ್ನತೆ (mental depression) ಆವರಿಸಿಯೇ ಇರುತ್ತದೆ. ಕೆಲ ಸಂದರ್ಭಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳೋಣವೆನಿಸುತ್ತದೆ. ಶ್ರೀಮಂತಿಕೆ ಬಡತನವೆನ್ನುವ ಯಾವ ತಾರತಮ್ಯ ಈ ಖಿನ್ನತೆಗೆ ಖಂಡಿತ ಇಲ್ಲ.

ಇತ್ತೀಚಿನ ನಟಿ ದೀಪಿಕಾ ಪಡುಕೋಣೆಯಿಂದ ಹಿಡಿದು ಅಮಿತಾಭಚ್ಚನ್ ವರೆಗೂ, ನನ್ನಿಂದ ಹಿಡಿದು ನಿಮ್ಮೆಲ್ಲರವರೆಗೂ ಈ ಮಾನಸಿಕ ಖಿನ್ನತೆಯ ಅನುಭವ ಖಂಡಿತ ಅನುಭವಿಸಿರುತ್ತೇವೆ. ಇಂದು mental depression ಅನ್ನುವುದು ಸರ್ವೇ ಸಾಮಾನ್ಯವಾಗಿದೆ. ಕೆಲವರು ಇದನ್ನು ಎದುರಿಸಿ ಹೊರಬರುತ್ತಾರೆ. ಇನ್ನು ಕೆಲವರು ಬದುಕನ್ನೇ ಕೊನೆಗೊಳಿಸಿಕೊಳ್ಳುತ್ತಾರೆ ಮತ್ತೆ ಹಲವರು ಕೊನೆಯವರೆಗೆ ಮಾನಸಿಕ ಕೊರೆತದಲ್ಲಿಯೇ ಕೊನೆಯಾಗುತ್ತಾರೆ.

ಈ ಮಾನಸಿಕ ಖಿನ್ನತೆ ಯಾಕೆ ಆವರಿಸುತ್ತದೆ? ಇದರಿಂದ ಹೊರಬರಲು ಆಗಲಾರದೆ? ಮಾನಸಿಕ ಆರೋಗ್ಯ ಸ್ಥಿತಿಯನ್ನು ಯಾರು ನಿರ್ಧರಿಸುತ್ತಾರೆ? ಇದು ಎಷ್ಟು ಮುಖ್ಯ? ಎನ್ನುವ ಹಲವು ಸಂಗತಿಗಳು ಯಶಸ್ವಿ ಬದುಕಿಗೆ ತಿಳಿದಿರಲೇಬೇಕು.

ಮನುಷ್ಯನಿಗೆ ಭೌತಿಕ (phisical ), ಮಾನಸಿಕ( mental ) ಮತ್ತು ಭಾವನಾತ್ಮಕ (emotional) ನೆಲೆಗಳಿವೆ. ಈ ಮೂರು ಹಂತಗಳಲ್ಲಿ ಸೌಹಾರ್ದತೆ ಇಲ್ಲವಾದಾಗ ಖಿನ್ನತೆ ಆಕ್ರಮಿಸಿಕೊಳ್ಳುತ್ತದೆ. ಭಾವನಾತ್ಮಕ ವಲಯವು ಮಾನಸಿಕ ವಲಯವನ್ನು ಪ್ರಭಾವಿತಗೊಳಿಸಬಲ್ಲುದು. ಇವೆರಡೂ ನಂತರ ಭೌತಿಕ ವಲಯವನ್ನು ನಿರ್ಧರಿಸುತ್ತವೆ. ಈ ಮೂರು ನೆಲೆಗಳ ನಡುವಿನ ಸಮ ಸ್ಥಿತಿ( balance) ಮಾತ್ರ ಮಾನಸಿಕ ಆರೋಗ್ಯವನ್ನು ಕೊಡಬಲ್ಲದು.

ಮಾನಸಿಕ ಆರೋಗ್ಯದ ಮೇಲೆ ಭಾವನಾತ್ಮಕ ಪ್ರಭಾವ:

ಮಾನಸಿಕ ಆರೋಗ್ಯವು ಭಾವನಾತ್ಮಕ ಹೊಯ್ದಾಟಗಳನ್ನು ಆದರಿಸಿದೆ. ಉದಾಹರಣೆಯಾಗಿ ಪ್ರೀತಿಸಿದ ಹುಡುಗ ಅಥವಾ ಹುಡುಗಿ ಕೈಕೊಟ್ಟಳು ಎಂದಾಕ್ಷಣ ಬದುಕು ಮುಗಿದೇ ಹೋಯಿತು ಎಂದು ತಿಳಿದು ಆತ್ಮಹತ್ಯೆ ಮಾಡಿಕೊಳ್ಳುವ ಯುವಕ ಯುವತಿಯರು ಅನೇಕರು. ಇಲ್ಲಿ ಭಾವನಾತ್ಮಕ ನೆಲೆಯಲ್ಲಿ ಸಮಸ್ಥಿತಿ ( balance) ಯನ್ನು ಹೊಂದಲಾಗದೇ, ಪ್ರೀತಿಸಿದವರ ಹೊರತುಪಡಿಸಿ ಬೇರೆ ಯಾರೂ ಇವರಿಗೆ ಕಾಣುವುದೇ ಇಲ್ಲ. ಪ್ರೀತಿ ಎಂದರೆ ನಿನ್ನೆ ಮೊನ್ನೆ ಬಂದ ವ್ಯಕ್ತಿ ಎಂದುಕೊಳ್ಳುವವರೆ ಹೆಚ್ಚು.

ಬದುಕನ್ನು ಕೊಟ್ಟವರ( parents ) ನಂತರ ಭಾವನೆಗಳನ್ನು ಕೊಟ್ಟವರು(loved ones) ಬಂದಿರುತ್ತಾರೆ ಎನ್ನುವುದನ್ನು ಅರ್ಥೈಸಿಕೊಳ್ಳದಷ್ಟು ಬುದ್ಧಿ ಹೀನರಾಗಿ, ಬದುಕೆಲ್ಲವೂ ಭಾವನೆಗಳೇ ಎಂದು ನಿರ್ಧರಿಸಿ ಮಾನಸಿಕ ನೆಲೆಯಲ್ಲಿ ಅಚ್ಚೊತ್ತಿಕೊಳ್ಳುತ್ತಾರೆ. ಹೀಗಾಗಿ ಮಾನಸಿಕ ಖಿನ್ನತೆಗೆ ಒಳಗಾಗಿ ಭೌತಿಕ ಶರೀರವನ್ನು ಮಾನಸಿಕ ವಲಯದ ನಿರ್ಧಾರಗಳಿಗೆ ಶರಣಾಗತಿಯಾಗುವಂತೆ ಮಾಡಿ ಚಿಂತೆಗೀಡಾಗಿ ಆತ್ಮಹತ್ಯೆಗೆ ಒಳಗಾಗುತ್ತಾರೆ ಅಥವ ಅಮೂಲ್ಯ ವರ್ತಮಾನವನ್ನು ಚಿಂತೆಯಲ್ಲಿ ಹಾಳುಮಾಡಿಕೊಳ್ಳುತ್ತಾರೆ.

ಕೆಲವೊಮ್ಮೆ ಆಸ್ತಿ ಐಶ್ವರ್ಯಗಳ ವಿಷಯದಲ್ಲಿ ನಮ್ಮವರು ನಮಗೆ ಮೋಸ ಮಾಡಿದರು, ನಂಬಿಕೆ ದ್ರೋಹ ಮಾಡಿದರು ಎಂದು ಖಿನ್ನತೆಗೆ ಜಾರುತ್ತೇವೆ. ನಮ್ಮವರು ಹೀಗೆ ಮಾಡಿದರಲ್ಲ ಎನ್ನುವ ಮಾನಸಿಕ ಕೊರಗು ಅದಾಗಿರುತ್ತದೆ. ಅಲ್ಲಿ ಆಸ್ತಿ, ಹಣ, ಐಶ್ವರ್ಯಕ್ಕೆ ಸೀಮಿತ ವಿಚಾರ ನಮ್ಮದಾಗಿರುತ್ತದೆ.

ಒಂದುಕ್ಷಣ ಇತಿಹಾಸವನ್ನು ಅವಲೋಕಿಸಿ ನೋಡಿ ಬುದ್ಧ, ಬಸವ, ಮಹಾವೀರ ಇವರೆಲ್ಲ ಇರುವ ಭೋಗ, ವೈಭೋಗ, ಐಶ್ವರ್ಯಗಳನ್ನು ಇದ್ದಲ್ಲಿಯೇ ಬಿಟ್ಟು ಬೀದಿಗೆ ನಡೆದು ಬಂದಾಗಲೇ ಮಹಾತ್ಮರಾಗಿದ್ದು. ಐಶ್ವರ್ಯಕ್ಕೆ ಭೋಗವಿಲಾಸಕ್ಕೆ ಅಂಟಿಕೊಂಡಿದ್ದರೆ ಖಂಡಿತ ಖಿನ್ನತೆಯಲ್ಲಿ ಸಾಮಾನ್ಯರಂತೆ ಕಾಲ ಗರ್ಭದಲ್ಲಿ ಐಕ್ಯವಾಗಿರುತ್ತಿದ್ದರು.

ಅಲ್ಲದೇ ನಮ್ಮವರು ಎಂದುಕೊಂಡವರು ನಮಗೆ ಮೋಸ ಮಾಡಲಾರರು. ಮೋಸ ಮಾಡಿದವರು ನಮ್ಮವರಾಗಲಾರರು. ಮೋಸ ಮಾಡಿದ ಸಂಬಂಧಗಳಾಚೆ ಹೊರ ಬಂದರೆ ಸಾಕು. ಚಿಂತಿಸುತ್ತಾ ಮಾನಿಸಿಕ ಆರೋಗ್ಯ ಹಾಳು ಮಾಡಿಕೊಳ್ಳಬೇಕಿಲ್ಲ.

ಮಾನಸಿಕ ಚಿಂತೆ ಚಿಕ್ಕದು ಆದರೆ ಅದರ ನೆರಳು ಮಾತ್ರ ಅತೀ ದೊಡ್ಡದು. ಹೀಗಾಗಿ ಆ ನೆರಳಿಗೆ ಭ್ರಾಂತಿಯ ನೆಲೆಕೊಟ್ಟು ಇನ್ನೂ ದೊಡ್ಡದಾಗಿಸಿಕೊಂಡು ಮಾನಸಿಕ ಖಿನ್ನತೆಗೆ ಒಳಗಾಗಿ ಮಾನಸಿಕ ಆರೋಗ್ಯ ಹಾಳು ಮಾಡಿಕೊಳ್ಳುತ್ತೇವೆ.

ಪರಿಹಾರಗಳು:

  • ಹುಟ್ಟಿದಾಗಿನಿಂದ ಜಾಗೃತಗೊಂಡ ಮಿದುಳು ಸದಾ ವಿಚಾರಗಳನ್ನು ಮಾಡುತ್ತಲೇ ಇರುತ್ತದೆಯೇ ಹೊರತು ಶಾಂತವಾಗಿರುವುದು ಅದಕ್ಕೆ ತಿಳಿದಿರುವುದಿಲ್ಲ. ಅದನ್ನು ಶಾಂತವಾಗಿರಿಸಲು ನಾವು ಏಕಾಂತದಲ್ಲಿದ್ದು ಸ್ವಲ್ಪ ಕಾಲ ಕಳೆಯಬೇಕು. ಪ್ರಾರ್ಥನೆಯಂತಹ ಮಾರ್ಗಗಳಿಗೆ ಮಾರುಹೋಗಬೇಕು. ಮನಸು ಶಾಂತಗೊಳಿಸದಿದ್ದರೆ ಚಿಂತೆಗಳ ನಿರಂತರತೆ ಎಂದೂ ನಿಲ್ಲದು. ಇದು ಅಭ್ಯಾಸ ಮಾಡಿಕೊಂಡರೆ ಮಾತ್ರ ಬರುವಂತದ್ದು.
  • ಕೆಟ್ಟವರ ಗುಂಪುಗಾರಿಕೆಯಲ್ಲಿ ಪಾಲ್ಗೊಳ್ಳದೆ ಸ್ವತಂತ್ರ ಮನೋಭಾವದಲ್ಲಿದ್ದಾಗ ಹೆಚ್ಚು ಸಮರ್ಥ ನಿರ್ಧಾರಗಳು ಕಾಣ ಸಿಗುತ್ತವೆ. ವಿಚಾರಗಳಲ್ಲಿ ಸ್ವತಂತ್ರವಾಗಿರಿ.
  • ಕೆಟ್ಟ ಚಟಗಳಾದ ಕುಡಿತ, ಮಾದಕ ವ್ಯಸನಗಳು ಆಗಿನ ಮಟ್ಟಕ್ಕೆ ತಾತ್ಕಾಲಿಕ ಮರೆವನ್ನು ಕೊಡಬಲ್ಲವಾದರೂ ಸಂಪೂರ್ಣ ಮಾನಸಿಕ ವಲಯವನ್ನು ಹಾಳು ಗೆಡವಿ ಭೌತಿಕ ಶರೀರವನ್ನು ನಿಷ್ಕ್ರೀಯಗೊಳಿಸುತ್ತವೆ. ಚಟಗಳಿಂದ ಪರಿಹಾರ ಕಂಡುಕೊಳ್ಳಬೇಡಿ.
  • ನಾನು ನನ್ನ ವಿಚಾರಗಳಂತೆ ಹೊರ ಹೊಮ್ಮುವವ ಎನ್ನುವ ಸತ್ಯ ತಿಳಿದಿರಲಿ. Believe yourself.
  • ಇನ್ನೊಬ್ಬರನ್ನು ಪ್ರೀತಿಸಿ. ಇನ್ನೊಬ್ಬರ ಸಂತೊಷಕ್ಕೆ ಕಾರಣರಾಗಿ. ಮೂರು ಗಂಟೆ ಸಿನಿಮಾ ನೋಡುವ ನಾವು ಮೂರು ನಿಮಿಷ ಅನಾಥಾಶ್ರಮ, ವೃದ್ಧಾಶ್ರಮದಲ್ಲಿ ಕಾಲ ಕಳೆಯಲಾರೆವು. ಅಲ್ಲಿ ಮಾನಸಿಕ ಆರೋಗ್ಯ ಮತ್ತು ಪ್ರೀತಿಯ ಅಗತ್ಯವಿದ್ದವರೇ ಇರುತ್ತಾರೆ. ಮರೆಯದಿರಿ.
  • ಭಾವನೆ ಎಂದ ಮಾತ್ರಕ್ಕೆ ವ್ಯಕ್ತಿಗೆ ಸೀಮಿತವಾಗಬೇಕಿಲ್ಲ. ದೇಶ, ಭಾಷೆ ಪ್ರಕೃತಿ, ಪ್ರಾಣಿ ಪ್ರಪಂಚದೆಡೆಯೂ ಭಾವನೆಯನ್ನು ಬೆಸೆಯಬಹುದು.
  • ಒಳ್ಳೆಯ ಆಲೋಚನೆಗಳನ್ನು ಹೊಂದಿದವರ ಸಾಂಗತ್ಯ ಬಹುಮುಖ್ಯ. ಒಬ್ಬರ ಒಂದು ಒಳ್ಳೆಯ ಆಲೋಚನೆ, ಒಳ್ಳೆಯ ಕೃತಿ, ಒಳ್ಳೆಯ ಕಾರ್ಯ ಇನ್ನೊಬ್ಬರ ಬದುಕಿನ ದಿಕ್ಕನ್ನೆ ಬದಲಿಸಬಹುದು.
  • ದೇಹವು ಒಂದು ದಿನ ನಿಂತುಹೋಗುವ ಜೈವಿಕ ಯಂತ್ರ. ಹೀಗಿರುವಾಗ ಚಿಂತಿಸಿ ಯಾಕೆ ನಿಂತು ಹೋಗಬೇಕು!! ಏನಾದರೂ ಒಳ್ಳೆಯ ಹೆಜ್ಜೆ ಗುರುತನ್ನು ಮೂಡಿಸಿ ನಿಂತು ಹೋಗೋಣ ಅಲ್ಲವೇ!! ಸಾಲುಮರದ ತಿಮ್ಮಕ್ಕನ ಕೊಡುಗೆ ಕಲ್ಪಿಸಿಕೊಳ್ಳಿ.
  • ನಮ್ಮ ಕಥಾ ಅರಮನೆಯಂತ ಸಾಹಿತ್ಯ ವೇದಿಕೆಯನ್ನು ಆಯ್ಕೆ ಮಾಡಿಕೊಂಡಲ್ಲಿ ಖಿನ್ನತೆ ಎಲ್ಲಿ.!

ಹೀಗೆ ಈ ಮಾನಸಿಕ ಆರೋಗ್ಯ ಹೊಂದಲು ಮತ್ತು ಮಾನಸಿಕ ಖಿನ್ನತೆಯಿಂದ ಹೊರಬರಲು ಹತ್ತು ಹಲವಾರು ದಾರಿಗಳಿವೆ. ಆದರೆ ಅವುಗಳನ್ನು ನಾವೇ ಕಂಡುಕೊಂಡು ಹೊರಬರಬೇಕು. ನಾವೆಲ್ಲ ಸದೃಢ ಮಾನಸಿಕ ಅರೋಗ್ಯವನ್ನು ಹೊಂದೋಣ ಎಂದು ಆಶಿಸುಸೋಣ.

Copyright © All rights reserved Newsnap | Newsever by AF themes.
error: Content is protected !!