ಆದರ್ಶ ಪುರುಷ , ಮರ್ಯಾದಾ ಪುರುಷೋತ್ತಮ ಶ್ರೀರಾಮ

Team Newsnap
4 Min Read
ಆದರ್ಶ ಪುರುಷ , ಮರ್ಯಾದಾ ಪುರುಷೋತ್ತಮ ಶ್ರೀರಾಮ maryada puruṣhottama srirama

“ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ, ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ.”

ಶ್ರೀ ರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ಪುಷ್ಯ ನಕ್ಷತ್ರದ ಕಟಕ ಲಗ್ನದಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮನು ಜನಿಸಿದನು.

ಹಿಂದೂ ಪುರಾಣಗಳ ಪ್ರಕಾರ ಮಹಾವಿಷ್ಣುವಿನ ಏಳನೆಯ ಅವತಾರವಾದ ಶ್ರೀರಾಮನು ಜನಿಸಿದ ನವಮಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.

ತ್ರೇತಾಯುಗದಲ್ಲಿ ರಾಣಿ ಕೌಸಲ್ಯೆ ಮತ್ತು ರಾಜ ದಶರಥನಿಗೆ ವಿಷ್ಣುವಿನ ಅವತಾರವಾದ ಭಗವಂತ ಶ್ರೀ ರಾಮನು ಅಯೋಧ್ಯೆಯಲ್ಲಿ ಜನಿಸಿದ ದಿನವೇ ರಾಮನವಮಿ.

ಚೈತ್ರ ಶುಕ್ಲ ಪಾಡ್ಯದಿಂದ ಒಂಬತ್ತು ದಿನಗಳ ಕಾಲ ರಾಮಮಂದಿರಗಳಲ್ಲಿ ರಾಮಾಯಣದ ಪಾರಾಯಣ, ಹರಿಕಥೆ, ಕೀರ್ತನೆಗಳು ಮತ್ತು ರಾಮನ ಮೂರ್ತಿಗೆ ವಿವಿಧ ಶೃಂಗಾರಗಳು, ರಥದಲ್ಲಿ ಮೆರವಣಿಗೆ ಮುಂತಾದ ವಿಧಗಳಲ್ಲಿ ಉತ್ಸವವನ್ನು ಆಚರಿಸುತ್ತಾರೆ.

ರಾಮನ ಅವತಾರ

ಲಂಕೆಯ ರಾಜ ರಾವಣನ ಆಡಳಿತದಲ್ಲಿ ಪ್ರಜೆಗಳೆಲ್ಲ ಬಸವಳಿದು ಹೋಗಿದ್ದರು. ಆತನ ಆಡಳಿತ ಕೊನೆಯಾಗಲಿ ಎಂದು ಬಯಸುತ್ತಿದ್ದರು. ಆದರೆ ರಾವಣನು ಬ್ರಹ್ಮನಿಂದ ತನ್ನನ್ನು ಯಾವ ದೇವರು ಅಥವಾ ಯಕ್ಷರು ಕೊಲ್ಲಲಾಗದಂತೆ ವರ ಪಡೆದಿದ್ದ. ಶಕ್ತಿಶಾಲಿಯಾಗಿದ್ದ ರಾವಣನನ್ನು ಸಂಹರಿಸುವಂತೆ ಏನಾದರೂ ಸಹಾಯ ಮಾಡುವಂತೆ ಕೋರಿ ದೇವಾನುದೇವತೆಗಳು ವಿಷ್ಣುವಿನಲ್ಲಿ ಬೇಡಿಕೊಂಡರು. ಆಗ ವಿಷ್ಣುವು ಅಯೋಧ್ಯೆಯ ರಾಜ ದಶರಥ ಹಾಗೂ ಕೌಸಲ್ಯೆಯ ಪ್ರಥಮ ಪುತ್ರನಾಗಿ ರಾಮನ ಅವತಾರವೆತ್ತಿದ. ಹೀಗೆ ರಾಮನಾಗಿ ವಿಷ್ಣು ಜನಿಸಿದ ದಿನವನ್ನು ರಾಮನವಮಿಯಾಗಿ ಆಚರಿಸಲಾಗುತ್ತದೆ.

ಮರ್ಯಾದಾ ಪುರುಷೋತ್ತಮ ಶ್ರೀರಾಮನ ವೈಶಿಷ್ಟಗಳು:

ಆದರ್ಶ ಪುತ್ರ : ರಾಮನು ತಂದೆ ತಾಯಿಯರ ಆದರ್ಶವನ್ನು ಪಾಲಿಸಿದನು; ಆದರೆ ಸಂದರ್ಭ ಬಂದಾಗ ಹಿರಿಯರಿಗೂ ಉಪದೇಶ ಮಾಡಿದನು. ಉದಾ. ವನವಾಸದ ಪ್ರಸಂಗದಲ್ಲಿ ದುಃಖಿತರಾಗಬೇಡಿ ಎಂದು ತಂದೆತಾಯಿಗೆ ಹೇಳಿದನು. ಹದಿನಾಲ್ಕು ವರ್ಷಗಳ ಕಾಲ ವನವಾಸವನ್ನು ಅನುಭವಿಸಲು ಕಳುಹಿಸಿದ ಕೈಕೇಯಿ ಮಾತೆಯನ್ನು ವನವಾಸದಿಂದ ಹಿಂತಿರುಗಿ ಬಂದ ರಾಮನು ನಮಸ್ಕರಿಸಿ ಪ್ರೇಮದಿಂದ ಮಾತನಾಡಿಸಿದನು.

ಆದರ್ಶ ಸಹೋದರ : ಇಂದಿಗೂ ಆದರ್ಶ ಸಹೋದರರ ಪ್ರೇಮಕ್ಕೆ ರಾಮ-ಲಕ್ಷಣರ ಉಪಮೆಯನ್ನೇ ಕೊಡುತ್ತಾರೆ.

ಆದರ್ಶ ಪತಿ : ಶ್ರೀರಾಮನು ಏಕಪತ್ನಿ ವ್ರತಸ್ಥನಾಗಿದ್ದನು. ಸೀತೆಯನ್ನು ತ್ಯಾಗ ಮಾಡಿದ ನಂತರ ರಾಮನು ವಿರಕ್ತ ಜೀವನವನ್ನು ನಡೆಸುತ್ತಿದ್ದನು. ಮುಂದೆ ಯಜ್ಞವನ್ನು ಮಾಡುವಾಗ ಪತ್ನಿಯ ಅವಶ್ಯಕತೆ ಇದ್ದರೂ ಬೇರೆ ಪತ್ನಿಯನ್ನು ಸ್ವೀಕರಿಸದೇ ಸೀತೆಯ ಪ್ರತಿಮೆಯನ್ನು ತನ್ನ ಪಕ್ಕದಲ್ಲಿ ಸ್ಥಾಪಿಸಿದ್ದನು. ಇದರಿಂದ ರಾಮನ ಏಕಪತ್ನಿ ವ್ರತವು ಕಂಡು ಬರುತ್ತದೆ. ಆ ಕಾಲದಲ್ಲಿ ರಾಜರು ಹಲವಾರು ರಾಣಿಯರನ್ನು ವರಿಸುವ ವಾಡಿಕೆಯಿತ್ತು. ಈ ಹಿನ್ನೆಲೆಯಲ್ಲಿ ರಾಮನ ಏಕಪತ್ನಿ ವ್ರತವು ವಿಶಿಷ್ಟವಾಗಿದೆ.

ಆದರ್ಶ ಮಿತ್ರ : ರಾಮನು ಸುಗ್ರೀವ, ವಿಭೀಷಣ ಮುಂತಾದವರಿಗೆ ಅವರ ಸಂಕಟದ ಸಮಯದಲ್ಲಿ ಸಹಾಯ ಮಾಡಿದನು.

ಆದರ್ಶ ರಾಜ : ಪ್ರಜೆಗಳು ಸೀತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದಾಗ ರಾಮನು ತನ್ನ ವೈಯಕ್ತಿಕ ಸುಖದ ಬಗ್ಗೆ ಚಿಂತಿಸದೇ, ರಾಜನ ಧರ್ಮವೆಂದು ತನ್ನ ಧರ್ಮಪತ್ನಿ ಯನ್ನು ತ್ಯಜಿಸಿದನು. ಇದರ ಬಗ್ಗೆ ಕಾಳಿದಾಸನು ‘ಕೌಲಿನ ಭೀತೇನ ಗೃಹನ್ನಿರಸ್ತಾ ನ ತೇನ ವೈದೇಹ ಸುತಾ ಮನಸ್ತಃ |’ (ಅರ್ಥ : ಜನರ ಆಪಾದನೆಯ ಭಯದಿಂದ ರಾಮನು ಸೀತೆಯನ್ನು ಮನೆಯಿಂದ ಹೊರಗೆ ಹಾಕಿದನು, ಮನಸ್ಸಿನಿಂದ ಅಲ್ಲ.) ಎನ್ನುವಂತಹ ಮಾರ್ಮಿಕ ಶ್ಲೋಕವನ್ನು ರಚಿಸಿದ್ದಾನೆ.

ಆದರ್ಶ ಶತ್ರು : ರಾವಣನ ಮೃತ್ಯುವಿನ ನಂತರ ರಾವಣನ ತಮ್ಮನಾದ ವಿಭೀಷಣನು ಅಣ್ಣನಿಗೆ ಅಗ್ನಿಸಂಸ್ಕಾರವನ್ನು ಮಾಡಲು ನಿರಾಕರಿಸಿದಾಗ, ರಾಮನು ‘ಮರಣದೊಂದಿಗೆ ಶತ್ರುತ್ವವೂ ಮುಗಿದು ಹೋಗುತ್ತದೆ, ನೀನು ರಾವಣನ ಅಂತ್ಯಸಂಸ್ಕಾರವನ್ನು ಮಾಡದಿದ್ದರೆ ನಾನೇ ಮಾಡುತ್ತೇನೆ; ಅವನು ನನಗೂ ಸಹೋದರನೇ ಆಗಿದ್ದಾನೆ’ ಎಂದು ಹೇಳಿದನು.

ಧರ್ಮಪಾಲಕ : ರಾಮನು ಧರ್ಮದ ಎಲ್ಲ ನಿಯಮಗಳನ್ನು ತಪ್ಪದೆ ಪಾಲಿಸುತ್ತಿದ್ದುದರಿಂದ ಅವನನ್ನು ‘ಮರ್ಯಾದಾ ಪುರುಷೋತ್ತಮ’ ಎನ್ನುತ್ತಾರೆ.

ರಾಮನು ನಮ್ಮ ಆತ್ಮವಾದರೆ, ಸೀತೆಯು ನಮ್ಮ ಮನಸ್ಸು, ಹನುಮಾನ್‌ ನಮ್ಮ ಜೀವಶಕ್ತಿಯಾದರೆ ರಾವಣನು ನಮ್ಮ ಅಹಂ. ಅಹಂ ಮನಸ್ಸನ್ನು ಆವರಿಸಿಕೊಂಡಾಗ ನಮ್ಮ ಆತ್ಮವು ಪ್ರಕ್ಷುಬ್ಧಗೊಳ್ಳುತ್ತದೆ. ಮನಸ್ಸು ಮತ್ತು ಆತ್ಮವನ್ನು ಸಮನತ್ವಯಗೊಳಿಸಲು, ಧ್ಯಾನ ಮಾಡಿ, ಉಸಿರಾಟದ ಮೂಲಕ ನಮ್ಮ ಮನಸ್ಸು ಮತ್ತು ಆತ್ಮವನ್ನು ನಿಯಂತ್ರಿಸಬಹುದು. ರಾಮ ಮತ್ತು ಸೀತೆ ಒಂದಾದರೆ ಅಹಂ ನಾಶವಾಗುತ್ತದೆ.

ಸತ್ಯಯುಗದಲ್ಲಿ ವಿವಿಧ ಗ್ರಹಗಳ ದೇವರು ಹಾಗೂ ರಾಕ್ಷಸರ ಮಧ್ಯೆ ಯುದ್ಧ ನಡೆದವು. ತ್ರೇತಾಯುಗದಲ್ಲಿ ಒಂದೇ ಗ್ರಹದಲ್ಲಿ ವಾಸಿಸುತ್ತಿದ್ದ ದೇವರು ಮತ್ತು ಅಸುರರ ಮಧ್ಯೆ ಯುದ್ಧ ನಡೆದವು. ಅಂದರೆ ಅಯೋಧ್ಯೆಯಿಂದ ರಾಮ ಹಾಗೂ ಲಂಕೆಯ ರಾವಣನ ಮಧ್ಯೆ ಯುದ್ಧ ನಡೆಯಿತು. ದ್ವಾಪರ ಯುಗದಲ್ಲಿ ಒಂದೇ ಕುಟುಂಬದಲ್ಲಿರುವ ಜನರ ಮಧ್ಯೆ ಯುದ್ಧಗಳು ನಡೆದವು. ಅಂದರೆ ಪಾಂಡವರು ಮತ್ತು ಕೌರವರ ಮಧ್ಯೆ. ಕಲಿಯುಗದಲ್ಲಿ ಯುದ್ಧಗಳು ನಮ್ಮೊಳಗೇ ನಡೆಯುತ್ತಿವೆ.

“ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ”

ಶ್ರೀವಿಷ್ಣುಸಹಸ್ರನಾಮದ ಫಲಶೃತಿಯಲ್ಲಿ ಬರುವ “ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ” ಎಂಬ ಶ್ಲೋಕವನ್ನು ಮೂರು ಬಾರಿ ಪಠಿಸುವುದರಿಂದ ಇಡೀ ಶ್ರೀವಿಷ್ಣುಸಹಸ್ರನಾಮವನ್ನು ಪಠಿಸಿದಂತಾಗುತ್ತದೆ,

ಮೂರು ಬಾರಿ ಪಠಿಸುವುದು ಸಾವಿರಕ್ಕೆ ಸಮವಾಗಲು ಹೇಗೆ ಸಾಧ್ಯ?

ಈ ಶ್ಲೋಕದಲ್ಲಿ ಬರುವ ರಾಮ ಎಂಬ ಪದವು ಸಂಸ್ಕೃತದ “ರಾ” ಹಾಗೂ “ಮ” ಎಂಬ ಅಕ್ಷರಗಳಿಂದ ಪದವಾಗಿದೆ.

ರ – ಯ,ರ, ಲ, ವ ವ್ಯಂಜನದಲ್ಲಿ ಬರುವ 2 ನೇ ಪದ
ಮ – ಪ, ಫ, ಬ, ಭ, ಮ ವ್ಯಂಜನ 5 ನೇ ಪದ
ಈ ರಾ ಹಾಗೂ ಮ ವನ್ನು ಸೇರಿಸಿದರೆ ಬರುವುದು “ರಾಮ”
ಮೇಲೆ ಹೇಳಿದಂತೆ ರ- ಯ, ರ, ಲ, ವ ದಲ್ಲಿ ಬರುವ 2 ನೇ ವ್ಯಂಜನ ಹಾಗೂ “ಮ” ಪ, ಫ, ಬ, ಭ, ಮ ದ 5 ನೆ ವ್ಯಂಜನ ಈ 2 ಹಾಗೂ 5 ನ್ನು ಗುಣಿಸಿದರೆ ಬರುವುದು ಹತ್ತು.

ಈ ಶ್ಲೋಕದಲ್ಲಿ ರಾಮ ಪದ 3 ಬಾರಿ ಬರುತ್ತದೆ ಅಂದರೆ 2,5,2,5,2,5=10x10x10=1000 ವಾಗುತ್ತದೆ. ರಾಮನಾಮವನ್ನು 3 ಬಾರಿ ಪಠಿಸಿದರೆ ಅದು ಶ್ರೀ ವಿಷ್ಣುವಿನ ಸಹಸ್ರನಾಮ ಪಠಿಸಿದಂತೆ ಆಗುತ್ತದೆ.

ರಾಮ ರಾಮ ರಾಮ ಎನ್ನಿರೋ ಇಂಥ
ಸ್ವಾಮಿಯ ನಾಮವ ಮರೆಯದೆ ಪಾಡಿರೋ.

ಇದನ್ನು ಓದಿ –ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ : ಮೇ 10 ರಂದು ಮತದಾನ – 13 ಕ್ಕೆ ಫಲಿತಾಂಶ

Share This Article
Leave a comment