ಮಂಡ್ಯ – ಬಡವರಿಗೆ ನಿವೇಶನ ನೀಡದ ಜಿಲ್ಲಾಡಳಿತದ ವಿರುದ್ಧ ಆಕ್ರೋಶ

Team Newsnap
2 Min Read

ನಿವೇಶನಕ್ಕೆ ಗುರುತಿಸಿರುವ ಸರ್ಕಾರಿ ಭೂಮಿಯನ್ನು ವಿತರಿಸುವ ಭರವಸೆ ನೀಡಿದ್ದ ಜಿಲ್ಲಾಡಳಿತ ಕಾರ್ಯಗತಗೊಳಿಸದ ಹಿನ್ನಲೆಯಲ್ಲಿ ಬೂದನೂರು ಗ್ರಾಮ ಪಂಚಾಯತಿ ನಿವೇಶನರಹಿತರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಮತ್ತೆ ಅನಿರ್ಧಿಷ್ಠಾವಧಿ ಆಹೋರಾತ್ರಿ ಸತ್ಯಾಗ್ರಹ ಅರಂಭಿಸಿದ್ದಾರೆ.

ಆಕ್ಟೋಬರ್ 12ರಿಂದ 6 ದಿನಗಳ ಕಾಲ ಆಹೋರಾತ್ರಿ ಧರಣಿ ನಡೆಸಿದ್ದ ನಿವೇಶನ ರಹಿತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದ ಜಿಲ್ಲಾಡಳಿತದ ಪ್ರತಿನಿಧಿಯಾಗಿ ಆಗಮಿಸಿದ್ದ ಮಂಡ್ಯ ತಹಶೀಲ್ದಾರ್ ಭರವಸೆ ಈಡೇರಿಸಲಿಲ್ಲ ಎಂದು ನಿವೇಶನರಹಿತರು ಅಳಲು ತೋಡಿಕೊಂಡರು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಅವರು ಜಿಲ್ಲೆಗೆ ಆಗಮಿಸಿದ ಬಳಿಕ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಗುರುತಿಸಿ ಬಡಜನರಿಗೆ ಹಂಚುವ ಕಾರ್ಯಕ್ರಮ ರೂಪಿಸಿದ್ದಾರೆ. ಹಾಗಾಗಿ ಅವರ ಹೆಸರಿನಲ್ಲಿ ನಮ್ಮ ಗ್ರಾಮದಲ್ಲಿ ನಿರ್ಮಾಣವಾಗುವ ಬಡಾವಣೆಗೆ ಡಾ.ಎಂ.ವಿ.ವೆಂಕಟೇಶ್ ಆಶ್ರಯ ಬಡಾವಣೆ ನಾಮಕರಣ ಮಾಡಲಾಗುವುದು ಎಂದು ನಾಮಫಲಕ ಪ್ರದರ್ಶನ ಮಾಡಿದರು.

ಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 50 ಎಕರೆ ಸರ್ಕಾರಿ ಭೂಮಿ‌ ಲಭ್ಯವಿದೆ. ಅದರಲ್ಲಿ ಗ್ರಾಮದ ಸರ್ವೇ ನಂ 190/ಪಿ10 ರ 2 ಎಕರೆ ಭೂಮಿಯನ್ನು ನಿವೇಶನಯೋಗ್ಯ ಭೂಮಿ ಎಂದು ಹಿಂದಿನ ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಗುರುತಿಸಿ ಸರ್ಕಾರಕ್ಕೆ ವರದಿ ಮಾಡಿದ್ದರು.

ಸದ್ಯ ಅಳತೆ, ಹದ್ದುಬಸ್ತ್ ಮಾಡುವ ಬದಲು ಪ್ರಭಾವಿಗಳ ಒತ್ತಡಕ್ಕೆ ಮಣಿದು ದಾಖಲೆಗಳನ್ನು ತಿರುಚುವ ಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿ ದರು.

ಸ್ವಂತಮನೆ ನಮ್ಮ ಹಕ್ಕು ಹೋರಾಟ ಸಮಿತಿ ಸಂಚಾಲಕ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಜಿಲ್ಲಾಡಳಿತ ನೀಡಿರುವ ಗಡುವು ಮುಗಿದಿದೆ. ಹಾಗಾಗಿ ಸರ್ಕಾರಿ ಭೂಮಿ 1-5 ಮಾಡುವ ಮುನ್ನಾ ದಿಶಾಂಕ್ ತಂತ್ರಾಂಶ ಬಳಸಿ ಭೂಮಿ ಗುರುತಿಸಿಕೊಡಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಬೇಡಿಕೆ ಈಡೇರದಿದ್ದಲ್ಲಿ ಗ್ರಾಮಸಭೆಯಲ್ಲಿ ಮುಂದಿನ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕರಿಸುವ ನಿರ್ಣಯ ಕೈಗೊಂಡು ಮನವಿ ನೀಡಿರುವುದಾಗಿ ತಿಳಿಸಿದರು.

ಬೂದನೂರು ಗ್ರಾಮ ಪಂಚಾಯತಿ ಮಾಜಿ‌ ಸದಸ್ಯ ಬಿ.ಕೆ.ಸತೀಶ ಮಾತನಾಡಿ, ಕಳೆದ 4 ವರ್ಷಗಳಿಂದ ನಿವೇಶನರಹಿತರು ಹಲವು ಮನವಿ ನೀಡಿ ಹೋರಾಟ ನಡೆಸುತ್ತಿದ್ದರೂ ಅಧಿಕಾರಿಗಳು ಸ್ಪಂದಿಸದೆ ಅಮಿಷಗಳಿಗೆ ಬಲಿಯಾಗಿ ನಿವೇಶನರಹಿತರನ್ನು ವಂಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ನಾಲ್ಕು ವರ್ಷಗಳಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ತನಿಖೆ ನಡೆಸಿ, ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ನಿವೇಶನರಹಿತರು ಆಗ್ರಹಿಸಿದರು.

ಪ್ರತಿಭಟನಾ ಧರಣಿಯಲ್ಲಿ ಭೀಮ್ ಆರ್ಮಿಯ ಜೆ.ರಾ‌ಮಯ್ಯ, ಕರುನಾಡ ಸೇವಕರು ನಗರಾಧ್ಯಕ್ಷ ಚಂದ್ರಣ್ಣ ಗ್ರಾಪಂ‌ ಮಾಜಿ‌ ಸದಸ್ಯ ಕುಳ್ಳಪ್ಪ. ಸಿಐಟಿಯುನ ಪ್ರೇಮಾ, ಸುಧಾ, ಚೇತನ್, ಎಲ್ಲಮ್ಮ ಕಾಮಾಕ್ಷಿರಜನಿ ಮೊದಲಾದವರಿದ್ದರು.

TAGGED:
Share This Article
Leave a comment