ಮಂಡ್ಯ ಮೂಲದ ದಂಪತಿ ಓದಿದ್ದು SSLC – ನೀಡಿದ್ದು ಬಂಜೆತನದ ಔಷಧಿ : ಮಹಿಳೆ ಸಾವು

Team Newsnap
2 Min Read

ಮಕ್ಕಳಿಲ್ಲದ ದಂಪತಿಗೆ ಮಕ್ಕಳ ಭಾಗ್ಯ ಕಲ್ಪಿಸುವುದಾಗಿ ಹಣ ಪಡೆದು ಮಂಡ್ಯ ಮೂಲದ ನಕಲಿ ವೈದ್ಯ ದಂಪತಿ SSLC ಯನ್ನಷ್ಟೇ ಓದಿ ನೀಡಿದ್ದ ನಕಲಿ ಐವಿಎಫ್ ಚಿಕಿತ್ಸೆಗೆ ಮಹಿಳೆಯೊಬ್ಬಳು ಬಲಿಯಾಗಿದ್ದಾರೆ.

ತಿಪಟೂರು ತಾಲೂಕಿನ ಬೆಳಗರಹಳ್ಳಿ ಗ್ರಾಮದ ಮಮತಾ(32) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ

ಈ ನಕಲಿ ವೈದ್ಯ ದಂಪತಿ ತಿಪಟೂರು, ತುರುವೇಕೆರೆ ಅರಸೀಕೆರೆ ಭಾಗದ ಹಲವಾರು ಗ್ರಾಮಗಳಲ್ಲಿ ಮಕ್ಕಳಿಲ್ಲದ ದಂಪತಿಯಿಂದ ಲಕ್ಷಾಂತರ ರು ಲಪಟಾಯಿಸಿದ್ದಾರೆ.

ಈ ಬಗ್ಗೆ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಜನವರಿ 19 ರಂದು ನಕಲಿ ವೈದ್ಯರಾದ ವಾಣಿ ಮತ್ತು ಮಂಜುನಾಥ್ ವೈದ್ಯದಂಪತಿ ಮೇಲೆ ವಂಚನೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ವಾಣಿ ಮತ್ತು ಮಂಜುನಾಥ್ ಕೇವಲ ಎಸ್‍ಎಸ್‍ಎಲ್‍ಸಿ ಪಾಸಾಗಿದ್ದು ಯಾವುದೇ ವೈದ್ಯಕೀಯ ಪದವಿ ಪಡೆದಿಲ್ಲ ಎನ್ನುವ ವಿಚಾರ ಗೊತ್ತಾಗಿದೆ.

ಪ್ರಕರಣದ ವಿವರ :

ಮಮತಾಗೆ ಮಲ್ಲಿಕಾರ್ಜುನ್ ಜೊತೆ ಕಳೆದ 15 ವರ್ಷಗಳ ಹಿಂದೆ ಮದುವೆಯಾಗಿತ್ತು. ಮಕ್ಕಳಾಗದ ಕಾರಣ ಹಲವು ಆಸ್ಪತ್ರೆ ಸುತ್ತಾಡಿ ತಪಾಸಣೆ ನಡೆಸಿ ಮಕ್ಕಳಾಗುವುದಿಲ್ಲವೆಂದು ನೊಂದಿದ್ದರು.

ಮಂಡ್ಯ ಮೂಲದ ಮಂಜುನಾಥ್ ಹಾಗೂ ಉಡುಪಿ ಮೂಲದ ವಾಣಿ ಎಂಬ ನಕಲಿ ವೈದ್ಯದಂಪತಿ ಸಂಪರ್ಕಿಸಿದಾಗ ಮಮತಾ ಹಾಗೂ ಮಲ್ಲಿಕಾರ್ಜುನ್ ಅವರಿಗೆ ಮಕ್ಕಳಾಗುವಂತೆ ಐವಿಎಫ್ ಚಿಕಿತ್ಸೆ ನೀಡುತ್ತೇವೆ ಎಂದು ನಂಬಿಸಿದ್ದಾರೆ.

ದಂಪತಿಯಿಂದ 4 ಲಕ್ಷ ಹಣ ಪಡೆದು 4 ತಿಂಗಳ ಕಾಲ ಅವೈಜ್ಞಾನಿಕವಾಗಿ ನಕಲಿ ಐವಿಎಫ್ ಚಿಕಿತ್ಸೆ ನೀಡಿದ್ದಾರೆ.

ನಂತರ ನಿಮ್ಮ ಗರ್ಭದಲ್ಲಿ ಮಗು ಬೆಳೆಯುತ್ತಿದೆ ಎಂದು ನಂಬಿಸಿ ಮತ್ತಷ್ಟು ಹಣ ಪಡೆದಿದ್ದಾರೆ. ಆದರೆ ಕೆಲ ದಿನಗಳ ಬಳಿಕ ಮಮತಾ ಹೊಟ್ಟೆ ನೋವಿಗೆ ಒಳಗಾಗಿ ಆಸ್ಪತ್ರೆ ದಾಖಲಾದಾಗ ನಕಲಿಗಳ ಅಸಲಿ ಸತ್ಯ ಬಯಲಾಗಿದ್ದು ಮಮತಾ ಗರ್ಭಿಣಿಯಾಗಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.

ನಂತರ ತೀವ್ರ ಅನಾರೋಗ್ಯಕ್ಕೆ ಒಳಗಾದ ಮಮತಾ ನಕಲಿ ಚಿಕಿತ್ಸೆಯ ಪರಿಣಾಮವಾಗಿ ಗರ್ಭಕೋಶ, ಕಿಡ್ನಿ, ಹೃದಯ ಹಾಗೂ ಮೆದುಳು ಸಂಬಂಧಿಸಿದ ಖಾಯಿಲೆಗೆ ತುತ್ತಾದರು.

ನಂತರ ಬೆಂಗಳೂರು ಸೆಂಟ್ ಜಾನ್ ಆಸ್ಪತ್ರೆ, ತುಮಕೂರಿನ ಶ್ರೀದೇವಿ ಆಸ್ಪತ್ರೆಯಲ್ಲಿ ಸತತ ಮೂರು ತಿಂಗಳು ಸುಮಾರು 23ಲಕ್ಷ ಹಣ ಖರ್ಚು ಮಾಡಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೇಸತ್ತ ಪತಿ, ಮಮತಾಳನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು. ಇಂದು ಬೆಳಗ್ಗೆ ಮಮತಾ ಮೃತಪಟ್ಟಿದ್ದಾರೆ.

Share This Article
Leave a comment