January 11, 2025

Newsnap Kannada

The World at your finger tips!

mamatha

ಅಲೆಮಾರಿ ಜನಾಂಗದ ಯುವತಿ ಮಮತಾ ಈಗ ಗ್ರಾಪಂ ಸದಸ್ಯೆ

Spread the love

ಅಲೆಮಾರಿ ಜನಾಂಗದ ಬಿಎಸ್ಸಿ ಪದವೀಧರೆ ಮಮತಾ ಈಗ ಗ್ರಾಮ ಪಂಚಾಯತಿ ಸದಸ್ಯೆ.

ಅದರಲ್ಲಿ ಏನು ವಿಶೇಷ ಅಂತಿರಾ? ಈ ಸ್ಟೋರಿ ಪೂರ್ಣ ಓದಿ……

ಮಮತಾಳ ಬದುಕಿನ ಧಾರುಣ ಕಥೆ ಕರುಣಾಜನಕವಾಗಿದೆ. ಆಕೆ ಕಷ್ಟ ನೋವುಗಳನ್ನು ದಿಟ್ಟವಾಗಿ ಎದುರಿಸಿ ಬಿಎಸ್‌ಸಿ ಪದವಿ ಪಡೆದಳು. ಉದ್ಯೋಗಕ್ಕೆ ಹೋಗದೇ ತನ್ನ ಕರ್ಮಭೂಮಿಯಲ್ಲೇ ರಾಜಕೀಯ ಪ್ರವೇಶಿಸಿ, ರಾಜಕೀಯ ದಲ್ಲಿ ಜನರ ಸಹಕಾರದಿಂದ ಒಂದು ಘಟ್ಟ ತಲುಪಿದ್ದಾರೆ.

ಅಲೆಮಾರಿ ಜನಾಂಗ ಯುವತಿ ಮಮತಾ ಉಡುಪಿ ಮೂಲದವರು. ಮಮತಾ ತಂದೆ ಕೃಷ್ಣಪ್ಪ, ತಾಯಿ ಪ್ರೇಮ ವಲಸೆ ಕಾರ್ಮಿಕರಾಗಿ ಊರುರು ಸುತ್ತಿ ಬೀದಿ ಬದಿ ಡೇರೆ ಹಾಕಿ ಜೀವನ ನಡೆಸುತ್ತಿದ್ದರು.

ತಂದೆ ನಡುನೀರಿನಲ್ಲಿ ಬಿಟ್ಟು ಹೋದ:

1995 ರಂದು ಏಕಾಏಕಿ ಕಾಣೆಯಾದ ತಂದೆಯ ನೆನಪಲ್ಲೇ ತಾಯಿ ಪ್ರೇಮ ಹಾಗೂ ಅವರ ಮೂವರು ಮಕ್ಕಳಾದ ಶಿವ, ಬೋಜ, ಮಮತ ಹೋರಾಟದ ಬದುಕು ಆರಂಭವಾಯಿತು.

ಪಜಿರು ಹಾಗೂ ಪಾವೂರು, ಇನೋಳಿಯ ರಸ್ತೆ ಬದಿ, ಶೌಚಾಲಯ ಕೊಠಡಿ, ದನದ ಹಟ್ಟಿಯಲ್ಲಿ ವಾಸವಾಗಿದ್ದರು. ಶಿವ ಕ್ಯಾನ್ಸರ್ ಕಾಯಿಲೆ ತುತ್ತಾಗಿ ಅನಾರೋಗ್ಯದಿಂದಿದ್ದರೆ, ಬೋಜ ಹಾಗೂ ಮಮತ ಅವರನ್ನು ಸ್ಥಳೀಯ ಶಿಕ್ಷಕ ಮಧು ಮೇಷ್ಟ್ರು ಉಸ್ತುವಾರಿ ಯಲ್ಲಿ ಮಲಾರ್‌ಪದವು ಶಾಲೆಗೆ ಸೇರಿಸಿದ್ದರು. ತಾಯಿಗೆ ಕೋರೆ ಕೆಲಸ, ಪತಿ ನಾಪತ್ತೆಯದ ದುಃಖದ ನಡುವೆಯೂ ತಾಯಿ ಪ್ರೇಮ ಸ್ಥಳೀಯ ಕೋರೆ ಹಾಗೂ ಮನೆ ಮನೆ ತೆರಳಿ ಕಾರ್ಮಿಕರಾಗಿ ದುಡಿದು ವಿದ್ಯಾಭ್ಯಾಸ ನಡೆಸುವ ಮಕ್ಕಳ ಜತೆ ಡೇರೆಯಲ್ಲೇ ದಿನ ಕಳೆದಿದ್ದರು.

2006ರಿಂದ ಮಮತ ಮೊರಾರ್ಜಿ ದೇಸಾಯಿ ವಿದ್ಯಾಸಂಸ್ಥೆಯಲ್ಲಿ ಪ್ರೌಢ ಶಿಕ್ಷಣ, ದೇರಳಕಟ್ಟೆ ಮೊರಾರ್ಜಿ ದೇಸಾಯಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಿಯುಸಿ ಪಾಸಾದರು.

ನಂತರ ಮಂಗಳೂರಿನ ಕೊಲಾಸೋ ವಿದ್ಯಾಸಂಸ್ಥೆಯಲ್ಲಿ 3 ವರ್ಷದ ಲ್ಯಾಬ್ ಟೆಕ್ನಿಷಿಯನ್ ಡಿಪ್ಲೊಮಾ ಪದವಿ ಪೂರೈಸಿದ್ದರು.

ಕೊಳಗೇರಿಯಲ್ಲೇ ವಾಸ ಮಾಡಿ ಮೆಡಿಕಲ್ ಬಿಎಸ್ಸಿ ಪದವಿ :

ಉನ್ನತ ಶಿಕ್ಷಣ ಪಡೆಯಬೇಕೆಂಬ ಕನಸು ಹೊಂದಿದ್ದ ಮಮತಾ ಸ್ಥಳೀಯ ಪತ್ರಕರ್ತರ ಹಾಗೂ ದಾನಿಗಳ ಸಹಕಾರದಿಂದ ಬೆಂಗಳೂರಿಗೆ ತೆರಳಿ
4 ವರ್ಷಗಳ ಕಾಲ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಉನ್ನತ ಶಿಕ್ಷಣಕ್ಕೆ ಸೇರಿದ್ದರು. 2019ರಲ್ಲಿ ಮೆಡಿಕಲ್ ವಿಭಾಗದಲ್ಲಿ ಬಿಎಸ್​ಸಿ ಪದವಿಧರೆಯಾಗಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದರು.

ಲಕ್ಷಾಂತರ ರೂಪಾಯಿ ವೆಚ್ಚಮಾಡಿ ಶಿಕ್ಷಣ ಪಡೆಯುವ ಸಾವಿರಾರು ವಿದ್ಯಾರ್ಥಿಗಳ ಮಧ್ಯೆ ಬೆಂಗಳೂರಿನ ಆನೆಪಾಳ್ಯ ಎಂಬ ಕೊಳೆಗೇರಿ ಪ್ರದೇಶದಲ್ಲೇ ವಾಸಿಸುತ್ತಲೇ ಮಮತಾ, ಈಗ ಮೆಡಿಕಲ್ ಬಿಎಸ್​ಸಿ ಪದವಿಧರೆ. ಹತ್ತಾರು ವರ್ಷಗಳ ಕಾಲ ರಸ್ತೆ ಬದಿಯಲ್ಲಿ ಡೇರೆ ನಿರ್ಮಿಸಿ ಬದುಕು ಸಾಗಿಸಿದ್ದ ಮಮತಾ ಕುಟುಂಬಕ್ಕೆ ಆ ಕಾಲದಲ್ಲಿ ಒಂದು ಮನೆ ಸೌಲಭ್ಯವನ್ನು ಕಲ್ಪಿಸುವ ಜವಾಬ್ದಾರಿಯನ್ನು ಅಂದಿನ ಆಡಳಿತಗಳು ನಡೆಸಿಲ್ಲ.

ನನ್ನ ಬದುಕೇ ನನಗೆ ಪಾಠ – ಮಮತಾ

ನನ್ನ ಜೀವನ ನನಗೆ ಬದುಕುವ ಪಾಠ ಕಲಿಸಿದೆ. ದೇಶದ ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಯಲ್ಲಿ ಸಂಪತ್ತಿನ ಸಮಾನ ಹಂಚಿಕೆ, ಬಳಕೆಯಾಗದಿರುವುದರಿಂದಲೇ ಹಳ್ಳಿಯ ಜನರು ಬಡತನದಲ್ಲೇ ಕಳೆಯುವಂತಾಗಿದೆ. ಜೀವನ ರೂಪಿಸುವಂತಹ ಶಿಕ್ಷಣ ದೊರೆಯದ ಕಾರಣ ಗ್ರಾಮೀಣ ಭಾಗದ ಜನತೆ ಇನ್ನೂ ತಮ್ಮ ಸ್ಟಷ್ಟ ಜೀವನ ರೂಪಿಸಿಕೊಳ್ಳುವ ವ್ಯವಸ್ಥೆಯಾಗಿಲ್ಲ. ಈ ನಿಟ್ಟಿನಲ್ಲಿ ನಾನು ಓಡಾಡಿ ಬೆಳೆದ ಹಳ್ಳಿಗೆ ಮತ್ತೆ ಹಿಂತಿರುಗುವ ಆಲೋಚನೆ ಮಾಡಿ ರಾಜಕೀಯ ಪ್ರವೇಶಕ್ಕೆ ಅಂಬೇಗಾಲು ಇಟ್ಟಿದ್ದೇನೆ ಎನ್ನುತ್ತಾರೆ ಮಮತಾ.

ನಾನು ನಡೆದು ಬಂದ ಅಲೆಮಾರಿ, ಬದುಕು, ಜೀವನ ಹಾಗೂಕಷ್ಟದ ದಾರಿಗಳು ನನಗೆ ನೆನಪಿದೆ, ಅಂತಹ ಕಷ್ಟ ಮುಂದೆ ಯಾರಿಗೂ ಬರಬಾರದು ಎಂಬ ಆಸೆ ಹೊಂದಿದ್ದೇನೆ. ಈಗ ಗ್ರಾಮ ಪಂಚಾಯತಿ ಸದಸ್ಯೆಯಾಗಿ ಬಡವರ ಕಷ್ಟಕ್ಕೆ ನೆರವಾಗಬೇಕು ಎನ್ನುವ ಬಯಕೆ ಇದೆ ಎಂದು ಹೇಳುತ್ತಾರೆ.

ಬಿಜೆಪಿ ಬೆಂಬಲ ಮಮತಾಗೆ:

ಹೊಸದಾಗಿ ಆಯ್ಕೆಯಾದ ಮಮತಾಗೆ ಬಿಜೆಪಿ ಪಕ್ಷವೂ ಬೆಂಬಲ ಸೂಚಿಸಿದ ಕಾರಣ ಮಮತಾ ಇದೀಗ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾಗಲು ಬಲ ಬಂದಿತು.

Copyright © All rights reserved Newsnap | Newsever by AF themes.
error: Content is protected !!