ಶ್ರೀರಂಗಪಟ್ಟಣ ದಸರಾಗೆ ವ್ಯವಸ್ಥಿತ ಸಿದ್ಧತೆ ಮಾಡಿಕೊಳ್ಳಿ: ಡಿಸಿ ಡಾ:ಕುಮಾರ್

Team Newsnap
3 Min Read

ಮಂಡ್ಯ : ಶ್ರೀರಂಗಪಟ್ಟಣ ದಸರಾ ಅಕ್ಟೋಬರ್ 16 ರಿಂದ 18 ವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ಯಾವುದೇ ಲೋಪ ಉಂಟಾಗದಂತೆ ನಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ: ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಶ್ರೀರಂಗಪಟ್ಟಣ ದಸರಾ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ವಿವಿಧ ಉಪಸಮಿತಿಗಳಿಂದ ವೈವಿದ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡಿದರು.

ಗ್ರಾಮ ಪಂಚಾಯಿತಿಗಳಿಗೆ ಆಹ್ವಾನ ಪತ್ರಿಕೆ ತಲುಪಿಸಿ:

ಶ್ರೀರಂಗಪಟ್ಟಣ ದಸರಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳನ್ನು ಸಚಿವರು, ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳಿಗೆ ತಲುಪಬೇಕು. ಮಾಜಿ ಶಾಸಕರು, ಸಂಸದರು, ಗಣ್ಯವ್ಯಕ್ತಿಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಸದಸ್ಯರಿಗೆ ಆಹ್ವಾನ ಪತ್ರ ತಲುಪಿಸಿ. ಇದರೊಂದಿಗೆ ಪ್ರತಿ ಗ್ರಾಮ ಪಂಚಾಯಿತಿಯ ಮುಖ್ಯ ಸ್ಥಳಗಳಲ್ಲಿ ಕಾರ್ಯಕ್ರಮ ಕುರಿತು ಮಾಹಿತಿ ನೀಡಿ ಎಂದರು.

ವೇದಿಕೆ ಸಮಿತಿ ಗಣ್ಯರು ಹಾಗೂ ವೀಕ್ಷಕರಿಗೆ ಆಸನದ ವ್ಯವಸ್ಥೆ, ಬ್ಯಾರಿಕೇಡಿಂಗ್, ಸೌಂಡ್ ಸಿಸ್ಟ್ಂ, ಎಲ್.ಇ.ಡಿ ವಾಲ್, ಮುಂತಾದ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಕುಡಿಯುವ ನೀರು ಒದಗಿಸಲು ಕಾರ್ಯಕ್ರಮ ನಡೆಯುವ ಸುತ್ತಲಿನ ಪ್ರದೇಶದಲ್ಲಿ ಅಲ್ಲಲ್ಲಿ 20 ಲೀಟರ್ ನೀರಿನ ಕ್ಯಾನ್ ಹಾಗೂ ಲೋಟದ ವ್ಯವಸ್ಥೆ ಮಾಡಿ, ಸ್ವಚ್ಛತೆ ಹಾಗೂ ತಾತ್ಕಲಿಕ ಶೌಚಾಲಯಗಳ ನಿರ್ಮಾಣಕ್ಕೆ ಸ್ಥಳ ಗುರುತಿಸಿ ಎಂದರು.

ಮೆರವಣೆಗೆಯಲ್ಲಿ ಆನೆಗಳು ಸಂಚರಿಸುವ ದಾರಿಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕು. ಅಶ್ವದಳ, ಪೊಲೀಸ್ ಬ್ಯಾಂಡ್, ವಿವಿಧ ಕಲಾತಂಡಗಳು, ಸ್ಥಬ್ದ ಚಿತ್ರಗಳು ಸಾಗಲಿದೆ. ಕಿರಂಗೂರು ಬನ್ನಿಮಂಟಪದ ಬಳಿ ಹೂವಿನ ಅಲಂಕಾರದ ವ್ಯವಸ್ಥೆಯಾಗಬೇಕು ಎಂದರು.

ವಸ್ತು ಪ್ರದರ್ಶನ ಮಳಿಗೆ :

ಹೆಚ್ಚು ಜನರನ್ನು ಆಕರ್ಷಿಸುವ ರೀತಿ 50 ವಸ್ತುಪ್ರದರ್ಶನ ಮಳಿಗೆಗಳನ್ನು ತೆರೆಯಿರಿ. ನಿರ್ವಹಣೆಗಾಗಿ ಶುಲ್ಕ ನಿಗಧಿಮಾಡಿ. ಮಹಿಳಾ ಸಂಘಗಳು, ರೈತ ಎಫ್.ಪಿ.ಓ ಗಳು , ಆಹಾರ ತಯಾರಕರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಿ. ವಿವಿಧ ರೀತಿಯ ವಸ್ತುಗಳು ಹಾಗೂ ಆಹಾರ ಗ್ರಾಹಕರಿಗೆ ದೊರಕುವಂತೆ ವೈವಿದ್ಯಮಯವಾಗಿರಲಿ. ಮಾಹಿತಿ ನೀಡುವ ವಸ್ತು ಪ್ರದರ್ಶನ ಮಳಿಗೆಗಳನ್ನು ಇಲಾಖೆ ವತಿಯಿಂದ ತೆರೆಯಲು ವ್ಯವಸ್ಥೆ ಮಾಡಿಕೊಳ್ಳಿ ಎಂದರು.

ಮಕ್ಕಳ ಚಲನಚಿತ್ರೋತ್ಸವ :

ಶ್ರೀರಂಗಪಟ್ಟಣದಲ್ಲಿ ದಸರಾ ನಡೆಯುವ ಮೂರು ದಿನಗಳ ಕಾಲ ನಗರದಲ್ಲಿರುವ ಮೂರು ಚಲನಚಿತ್ರಮಂದಿರಗಳನ್ನು ಗುರುತಿಸಿ ಮಕ್ಕಳಿಗೆ ಮೌಲ್ಯಾಧರಿತ ಸಂದೇಶಗಳನ್ನು ನೀಡುವ ಚಲನಚಿತ್ರಗಳನ್ನು ಪ್ರದರ್ಶನ ಮಾಡಿ ಎಂದರು.

ಲಾಂಛನ ಬಿಡುಗಡೆ: ಶ್ರೀರಂಗಪಟ್ಟಣ ದಸರಾ 2023 ರ ಲೋಗೋ ಸಿದ್ಧವಾಗಿದ್ದು, ಅಕ್ಟೋಬರ್ 5 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಬಿಡುಗಡೆ ಮಾಡಲಿದ್ದಾರೆ ಎಂದರು.

ಯೋಗ ನಡಿಗೆ:

ಅಕ್ಟೋಬರ್ 17 ರಂದು ಬೆಳಿಗ್ಗೆ 6-9 ಗಂಟೆವರೆಗೆ ಕರಿಘಟ್ಟ ಬೆಟ್ಟದ ಪಾದದಿಂದ ದೇವಸ್ಥಾನದವರೆಗೆ ಯೋಗ ನಡಿಗೆ ಹಾಗೂ ದೇವಸ್ಥಾನದ ಆವರಣದಲ್ಲಿ ವೈವಿದ್ಯಮಯ ಯೋಗಾಭ್ಯಾಸ ನಡೆಯಲಿದೆ. ಅದೇ ದಿನ ವೇದಿಕೆಯಲ್ಲಿ ಯೋಗ ನೃತ್ಯರೂಪಕ ನಡೆಯಲಿದ್ದು, ಕಾರ್ಯಕ್ರಮ ಉತ್ತಮವಾಗಿ ಮೂಡಿಬರಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜು ಅವರು ಮಾತನಾಡಿ ಕಲಾವಿದರು ಹಾಗೂ ಕಲಾತಂಡಗಳು ಪ್ರದರ್ಶನ ನೀಡಿದ ನಂತರ ಅವರಿಗೆ ಸ್ಥಳದಲ್ಲೇ ಸಂಭಾವನೆ ನೀಡಿ ಗೌರವಯುತವಾಗಿ ಕಳುಹಿಸಿಕೊಡಿ. ಆಹಾರ ಸಮಿತಿಯೊಂದಿಗೆ ಚರ್ಚಿಸಿ ಅವರಿಗೆ ಊಟದ ವ್ಯವಸ್ಥೆ ಮಾಡಿಕೊಡಿ. ಮೂರು ದಿನಗಳ ಕಾಲ ಮಧ್ಯಾಹ್ನ 3 ಗಂಟೆಯಿಂದ 6.30 ರವರೆಗೆ ಸ್ಥಳೀಯ ಕಲಾವಿದರಿಗೆ ಕಾರ್ಯಕ್ರಮ ನೀಡಲು ವೇದಿಕೆಯಲ್ಲಿ ಅವಕಾಶ ಕಲ್ಪಿಸಿ. ಎಲ್ಲಾ ತಾಲ್ಲೂಕುಗಳ ವಿವಿಧ ಕಲಾ ಪ್ರದರ್ಶನಕ್ಕೆ ಅವಕಾಶ ನೀಡಿ ಎಂದರು.ರಾಜ್ಯದಲ್ಲೂ ಜಾತಿಗಣತಿ ವರದಿಯ ಕೂಗು: ನವೆಂಬರ್ ಮೂರನೇ ವಾರ ವರದಿ ಸಲ್ಲಿಕೆ ಸಾದ್ಯತೆ ? 

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಉಪವಿಭಾಗಾಧಿಕಾರಿ ನಂದೀಶ್, ಆಹಾರ ಇಲಾಖೆ ಉಪನಿರ್ದೇಶಕ ಕೃಷ್ಣಕುಮಾರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರ ಮಣಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂ ಪ್ರಕಾಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಎಸ್.ಹೆಚ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a comment