December 19, 2024

Newsnap Kannada

The World at your finger tips!

Shiva

ಮಹಾ ಶಿವರಾತ್ರಿಯ ಮಹತ್ವ 2022

Spread the love

ಹಿಂದೂ ಧರ್ಮದಲ್ಲಿ ಶಿವರಾತ್ರಿಗೆ ಅದರದ್ದೇ ಆದ ಮಹತ್ವವಿದೆ. ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು ಶಿವರಾತ್ರಿ , ಈ ದಿನದಂದು ಕೈಲಾಸ ವಾಸ ಪರಶಿವನನ್ನು ಕೋಟಿ ಕೋಟಿ ಜನರು ಭಜಿಸಿ ಪೂಜಿಸುತ್ತಾರೆ.

ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಿ, 4 ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಶಿವರಾತ್ರಿಯನ್ನು ಆಚರಿಸಲಾಗುತ್ತದೆ.

ಶಿವರಾತ್ರಿಯ ದಿನ ರಾತ್ರಿ ಪೂಜೆಯೇ ವಿಶೇಷ. ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿ ಮಾತ್ರ ರಾತ್ರಿಯ ಹೊತ್ತು ಪೂಜೆ, ಭಜನೆ ನಡೆಸುವ ವಿಶೇಷ ಆಚರಣೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ.

ಶಿವರಾತ್ರಿಯ ಆಚರಣೆ

ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯಂದು ಪರಿಗಣಿಸಲಾಗುತ್ತದೆ. ಕೈಲಾಸನಾಥನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಭಕ್ತರಲ್ಲಿದೆ. ಶಿವರಾತ್ರಿಗೆ ಹೆಚ್ಚು ಪಾವಿತ್ರ್ಯತೆ ಪ್ರಾಮುಖ್ಯತೆ ಇರುವುದು ಅಂದು ಆಚರಿಸುವ ಉಪವಾಸದಲ್ಲಿ. ಶುಚಿರ್ಭೂತರಾಗಿ ಶಿವನನ್ನು ಧ್ಯಾನಿಸುತ್ತಾ ದಿನಪೂರ್ತಿ ಭಕ್ತರು ಆಹಾರ ನೀರು ಮುಟ್ಟದೆ ಉಪವಾಸ ಕೈಗೊಳ್ಳುತ್ತಾರೆ.

ಉಪವಾಸವು ಹಗಲಿನಿಂದ ಪ್ರಾರಂಭಗೊಂಡು ರಾತ್ರಿ ಪೂರ್ತಿ ನಡೆದು ಮರುದಿನ ಪ್ರಾತಃ ಕಾಲಕ್ಕೆ ಕೊನೆಗೊಳ್ಳುತ್ತದೆ. ವ್ರತಾಧಾರಿಯು ಹಣ್ಣಿನ ರಸ, ಹಣ್ಣುಗಳು ಮತ್ತು ಅನ್ನ, ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಪದಾರ್ಥಗಳನ್ನು ಸೇವಿಸಬಹುದು. ಮರುದಿನ ಮುಂಜಾನೆ ಲಿಂಗಕ್ಕೆ ಅಭಿಷೇಕವನ್ನು ಪೂರೈಸಿ ಪ್ರಾರ್ಥನೆಗಳನ್ನು ಸಲ್ಲಿಸಿದ ನಂತರವಷ್ಟೇ ವ್ರತವನ್ನು ಸಂಪನ್ನಗೊಳಿಸಬೇಕು. ಸೂರ್ಯಾಸ್ತದ ನಂತರವಷ್ಟೇ ಊಟವನ್ನು ಸೇವಿಸಬೇಕು.

ಶಿವರಾತ್ರಿ ದಿನ ಬೆಳಗ್ಗೆ ಬೇಗ ಎದ್ದು ಅಭ್ಯಂಜನ ಮಾಡಿ ಶಿವನಿಗೆ ಅಭಿಷೇಕ ಮಾಡುವುದು ರೂಢಿ. ಇಲ್ಲಿ ಈ ದಿನವನ್ನು ಮೂರು ಭಾಗಗಳನ್ನಾಗಿ ಮಾಡಿ ರುದ್ರಾಭಿಷೇಕಯುಕ್ತ ಪೂಜೆಯನ್ನು ಮಾಡುವುದು ವಾಡಿಕೆ. ರುದ್ರ ನಮಕ ಚಮಕಗಳನ್ನು ಉಚ್ಚರಿಸುವುದರಿಂದ ಉಸಿರಾಟಕ್ಕೂ ಹೆಚ್ಚಿನ ಶಕ್ತಿ ಬರುವುದು ಮತ್ತು ಬಾಯಿಯಿಂದ ಹೊರ ಹೊಮ್ಮುವ ತರಂಗಗಳಿಂದ ಸುತ್ತ ಮುತ್ತಲಿನ ಪರಿಸರ ಶಕ್ತಿಯುತವಾಗುವುದು.

ಅಭಿಷೇಕಪ್ರಿಯ ಎಂದೇ ಖ್ಯಾತನಾದ ಶಿವನಿಗೆ ದಿನವಿಡಿ ಹಾಲು, ಜೇನುತುಪ್ಪ ಹಾಗೂ ನೀರಿನ ಅಭಿಷೇಕ ನಡೆಯುತ್ತದೆ. ಪ್ರತಿ 3 ಗಂಟೆಗೊಮ್ಮೆ ಶಿವಲಿಂಗಕ್ಕೆ ಅಭಿಷೇಕ ಮಾಡಲಾಗುತ್ತದೆ. ಏಕಬಿಲ್ವಂ ಶಿವಾರ್ಪಣಂ ಎಂದು ಬಿಲ್ವಪತ್ರೆ, ತುಳಸಿ, ಶ್ರೀ ಗಂಧ, ಹಾಲು, ಜೇನುತುಪ್ಪಗಳಿಂದ ಅಭಿಷೇಕ ನಡೆಯುತ್ತದೆ. ಶಿವ ಪಂಚಾಕ್ಷರಿ ಮಂತ್ರ “ಓಂ ನಮ: ಶಿವಾಯ”, ಹರ ಹರ ಮಹಾದೇವ, ಶಂಭೋ ಶಂಕರ…ಶಿವದೇವಾಲಯಗಳಲ್ಲಿ ಮಾರ್ದನಿಸುತ್ತದೆ.

ಶಿವರಾತ್ರಿಯ ಪ್ರಾರಂಭ

ಶಿವರಾತ್ರಿಯ ಜಾಗರಣೆ ಆ ದಿನ ಶಿವನು ಲೋಕ ಕಲ್ಯಾಣಕ್ಕಾಗಿ ವಿಷವನ್ನು ಆಪೋಶನ ಮಾಡಿದ ದಿನ. ಹಿಂದೆ ದೇವಾಸುರರು ಅಮೃತ ಪಡೆಯಲು ಕ್ಷೀರಸಾಗರ ಮಥನಕ್ಕೆ ಮುಂದಾದರು. ಮಂದರಪರ್ವತ ಕಡಗೋಲಾಯಿತು. ವಾಸುಕಿ ಹಗ್ಗವಾಯಿತು. ಮಥನಕಾರ್ಯ ರಭಸವಾಗಿ ನಡೆದಾಗ ಸರ್ಪವಾದ ವಾಸುಕಿಯ ಬಾಯಿಂದ ವಿಷ ಜ್ವಾಲೆ ಹೊರಬಂದು ಕ್ಷೀರ ಸಾಗರವನ್ನು ವ್ಯಾಪಿಸಿತು. ಅದರ ಬಾಧೆಗೆ ಎಲ್ಲರೂ ಓಡಿ ಹೋದಾಗ ಶಿವನು ತನ್ನ ಅಂಗೈಯಲ್ಲಿ ವಿಷವನ್ನು ಶೇಖರಿಸಿ ಕುಡಿದನು. ಕೂಡಲೇ ಪಾರ್ವತಿ ಮಾತೆ ಶಿವನ ಕಂಠ ಒತ್ತಿ ಹಿಡಿಯಲು ವಿಷವು ಅಲ್ಲಿಯೇ ನಿಂತಿತಂತೆ. ಅಲ್ಲಿಂದ ಶಿವನು ವಿಷಕಂಠ ಅಥವಾ ನೀಲಕಂಠ ಎನಿಸಿದನು. ಅಂದಿನಿಂದ ಪ್ರತಿ ವರ್ಷ ಶಿವರಾತ್ರಿಯ ಆಚರಣೆ ಪ್ರಾರಂಭವಾಯಿತು.

Shiva Bilpatre

ಕರ್ನಾಟಕದ ಪ್ರಮುಖ ಶಿವನ ದೇವಾಲಯಗಳು:

  • ಶ್ರೀ ಕ್ಷೇತ್ರ ಧರ್ಮಸ್ಥಳ
  • ಕೋಟಿಲಿಂಗೇಶ್ವರ
  • ಮುರುಡೇಶ್ವರ
  • ಗೋಕರ್ಣದ
  • ಮಹಾಬಲೇಶ್ವರ
  • ನಂಜನಗೂಡು
  • ಕಾಶಿ ವಿಶ್ವನಾಥ,
  • ರಾಮೇಶ್ವರದ ರಾಮೇಶ್ವರ

ಸೇರಿದಂತೆ ರಾಜ್ಯ, ದೇಶ, ವಿದೇಶಗಳ ಶಿವದೇವಾಲಯಗಳಲ್ಲಿ ಶಿವರಾತ್ರಿಯ ವಿಶೇಷ ಪೂಜೆ ನಡೆಯುತ್ತದೆ. ಬಿಲ್ವಾರ್ಚನೆ, ರುದ್ರಾಭಿಷೇಕ, ಶಿವನಾಮ ಧ್ಯಾನಗಳ ಮೂಲಕ ಶಿವನನ್ನು ಆರಾಧಿಸಲಾಗುತ್ತದೆ. ಇಡೀ ರಾತ್ರಿ ಶಿವದೇವಾಲಯಗಳಲ್ಲಿ ರುದ್ರಪಠಣದ ಜೊತೆ ಜಾಗರಣೆ ನಡೆಯುತ್ತದೆ.

ವೈಜ್ಞಾನಿಕವಾಗಿ ಶಿವರಾತ್ರಿಯ ಆಚರಣೆ:

ಸೂರ್ಯ ಮತ್ತು ಚಂದ್ರರ ಚಲನೆಯಿಂದಾಗುವ ಎಲ್ಲಾ ಕಾಲ ವ್ಯತ್ಯಾಸಕ್ಕೆ ಈ ನಮ್ಮ ದೇಹ ಹೊಂದಿಕೊಳ್ಳ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈ ಹಬ್ಬದ ಆಚರಣೆ ಬಹು ಮುಖ್ಯ. ಈ ಸಮಯದಲ್ಲಿ ಛಳಿಗಾಲವು ಮುಗಿದು ಬೇಸಗೆಕಾಲವು ಪ್ರಾರಂಭಗೊಳ್ಳುವುದು. ಅಂದರೆ ಈ ದಿನದಂದು ಚಳಿಗಾಲ ಉತ್ತುಂಗದಲ್ಲಿದ್ದು ಅಂದು ಕೃಷ್ಣ ಪಕ್ಷದ ಕೊನೆಯ ದಿನವೂ ಆಗಿರುತ್ತದೆ. ಈ ದಿನದಲ್ಲಿ ಸೂರ್ಯನ ಶಾಖ ಕಡಿಮೆಯಾಗಿರುತ್ತದೆ ಮತ್ತು ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ನಮ್ಮ ಪೂರ್ವಜರು ಇದನ್ನೆಲ್ಲಾ ಅರಿತೇ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು. ಈ ವ್ಯತ್ಯಯದ ಸಮಯದಲ್ಲಿ ನಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ.

ಈ ಕಾಲ ವ್ಯತ್ಯಾಸದ ಸಮಯದಲ್ಲಿ ನಮ್ಮಲ್ಲಿ ಉಸಿರಾಟದ ತೊಂದರೆ (ನೆಗಡಿ, ಕೆಮ್ಮು, ಶೀತ ಮತ್ತಿತರೆ) ಬರುವುದು. ಈ ದಿನದಂದು ನಾವು ಮಾಡುವ ಶಿವನ ಪೂಜೆ, ಉಪವಾಸಗಳು ನಮಗೆ ತುಂಬಾ ಉಪಯುಕ್ತ. ಅಂದು ಪರಶಿವನಿಗೆ ನೀರಿನ ಅಭಿಷೇಕ ಮತ್ತು ಬಿಲ್ವ ಪತ್ರೆಯ ಪೂಜೆ. ಬಿಲ್ವ ಪತ್ರೆಯಲ್ಲಿ ಉಸಿರಾಟದ ತೊಂದರೆ ನಿವಾರಿಸುವ ಗುಣವಿದೆ. ಬಿಲ್ವವನ್ನು ಲಿಂಗದ ಮೇಲೆ ಹಾಕುವಾಗ ಅದರ ವಾಸನೆ ನಮ್ಮ ದೇಹದ ಒಳಗೆ ಹೋಗುವುದು. ಬಿಲ್ವವನ್ನು ಮೂಸಿ ಎಸೆಯುವುದು ಸರಿಯಾದ ವಿಧಾನ. ಶಿವನ ಲಿಂಗವು ಕಲ್ಲಿನದಾಗಿದ್ದು ಅದರ ಮೇಲೆ ನೀರನ್ನು ಸುರಿಯುವುದರಿಂದ ಬಹಳಷ್ಟು ಶಕ್ತಿ ಹೊರಹೊಮ್ಮುತ್ತದೆ. ಅದೊಂದು ವಿಶಿಷ್ಟ ಕಲ್ಲಿನಿಂದ ಮಾಡಿದ ಲಿಂಗವಾಗಿರುತ್ತದೆ.

ಶಿವ ಮೆಚ್ಚುವ ಹಾಗೂ ಜನಪ್ರಿಯ ಜಾನಪದ ಸೋಜುಮಲ್ಲಿಗೆಯ ಸಾಹಿತ್ಯ

ಜಾನಪದ ಹಾಡಿನ ಸಾಹಿತ್ಯ:

ಸೋಜುಗದ ಸೂಜು ಮಲ್ಲಿಗೆ

ಸೋಜುಗದ ಸೂಜು ಮಲ್ಲಿಗೆ,
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ, ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಮ್ಗೆ
ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿದಳವ ಮಾದಪ್ನ ಪೂಜೆಗೆ ಬಂದು.

ಮಾದೇವ ನಿಮ್ಮ ಸೋ|2|

ತಪ್ಪಳೆ ಬೇಳಗಿವ್ನಿ ತುಪ್ಪವ ಕಾಯ್ಸಿವ್ನಿ , ಕಿತ್ತಳೆ ಹಣ್ಣ ತಂದಿವ್ನಿ ಮಾದೇವ ನಿಮ್ಗೆ
ಕಿತ್ತಳೆ ಹಣ್ಣ ತಂದಿವ್ನಿ, ಮಾದಪ್ಪ. ಕಿತ್ತಡಿ ಬರುವ ಪರಸೆಗೆ, ಮಾದೇವ ನಿಮ್ಮ

ಮಾದೇವ ನಿಮ್ಮ ಸೋ |2|

ಬೆಟ್ಟತ್ಕೋಂಡೋಗೋರ್ಗೆ ಹಟ್ಟಿ ಹಂಬಲವ್ಯಾಕ ಬೆಟ್ಟದ್ಮಾದೇವ ಗತಿಯೆಂದು ಮಾದೇವ ನೀವೆ
ಬೆಟ್ಟದ್ಮಾದೇವ ಗತಿಯೆಂದು ಅವರಿಂದು ಹಟ್ಟಿ ಹಂಬಲವ ಮರೆತಾರೋ. ಮಾದೇವ ನಿಮ್ಮ

ಮಾದೇವ ನಿಮ್ಮ ಸೋ |2|

ಹುಚ್ಚೆಳ್ಳು ಹೂನಂಗೆ ಹೆಚ್ಚೇವೊ ನಿನ್ನ ಪರುಸೆ, ಹೆಚ್ಚಾಳಗಾರ ಮಾದಯ್ಯ ಮಾದಯ್ಯ ನೀನೆ
ಹೆಚ್ಚಳಗಾರ ಮಾದಯ್ಯ ಎಳು ಮಲೆಯ | ಹೆಚ್ಚೇವು ಗೌರಳ್ಳಿ ಕಣಿವೇಲಿ ಮಾದೇವ ನಿಮ್ಮ

ಮಾದೇವ ನಿಮ್ಮ ಸೋ |2|

ಜಾನಪದ

ಶಿವನು ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕ. ಛಲಬಿಡದ ಸಾಧನೆಯ ದ್ಯೋತಕ. ಧ್ಯಾನಪ್ರಿಯ ಶಿವ ಭಕ್ತರಿಂದ ಬಯಸುವುದು ನಿಶ್ಕಲ್ಮಶ ಮತ್ತು ಪ್ರಾಮಾಣಿಕ ಭಕ್ತಿ ಮಾತ್ರ. ತೋರಿಕೆಯ ಮತ್ತು ಆಡಂಬರದ ಪೂಜೆಯನ್ನು ಬಯಸದ ಮಹಾದೇವನನ್ನು ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸ ಭರಿತರಾಗಿ ಶಿವರಾತ್ರಿ ಯಂದು ಧ್ಯಾನಿಸಿದರೆ ಆತ ಪ್ರಸನ್ನಗೊಳ್ಳುತ್ತಾನೆ.

ಎಲ್ಲ ಆಡಂಬರಗಳಿಂದ ಮುಕ್ತರಾಗಿ, ಸರಳ ಮನಸ್ಸಿನಿಂದ ಪರಶಿವನನ್ನು ನೆನದು, ಭಜಿಸಿ ಶಿವರಾತ್ರಿಯನ್ನು ಆಚರಿಸೋಣ.

Copyright © All rights reserved Newsnap | Newsever by AF themes.
error: Content is protected !!