ಜಿ. ಮಾದೇಗೌಡರು ಸಲ್ಲಿಸಿರುವ ಸಾಮಾಜಿಕ ಸೇವೆಯ ಮಜಲುಗಳು ಹತ್ತು ಹಲವು. ರೈತ ಕುಟುಂಬದಲ್ಲಿ ಹುಟ್ಟಿದ ಗೌಡರು, ರೈತರ ಕಷ್ಟ-ಸುಖಗಳನ್ನು ಅರಿತವರು. ಆರೋಗ್ಯ, ಶಿಕ್ಷಣ, ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಅವಿಸ್ಮರಣೀಯ.
ಕಾವೇರಿ ವರ ಪುತ್ರ :
ರೈತರ ಜೀವನದಿ ಕಾವೇರಿ ನೀರಿನ ಹಕ್ಕಿಗಾಗಿ ಹೋರಾಟ ನಡೆಸಿ ಕಾವೇರಿ ವರ ಪುತ್ರ ಎನಿಸಿಕೊಂಡಿದ್ದಾರೆ. ಜಿಲ್ಲೆಯ ರೈತರ ಹಿತರಕ್ಷಣಗಾಗಿ ಕಾವೇರಿ ಹಿತರಕ್ಷಣಾ ಸಮಿತಿಯ ಸ್ಥಾಪಿಸಿ , ಸಮಿತಿ ಅಧ್ಯಕ್ಷ ಸಾಕಷ್ಟು ಹೋರಾಟಗಳನ್ನು ಮಾಡಿದ್ದಾರೆ.
ಕಾವೇರಿ ನದಿ ನೀರಿನ ಹಕ್ಕಿನ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೌಡರು, ರೈತರ ಪ್ರಮುಖ ಬೆಳೆಯಾದ ಕಬ್ಬಿಗೆ ಸೂಕ್ತ ಬೆಲೆ ಕೊಡಿಸಲು ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಭಾರತೀನಗರದಲ್ಲಿ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಆ ಭಾಗದ ರೈತರಿಗೆ ಕಣ್ಮಣಿಯಾಗಿದ್ದರು.
ಗುರುದೇವರಹಳ್ಳಿ ಗುರು :
ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಹೋಬಳಿಯ ಗುರುದೇವರಹಳ್ಳಿ ಎಂಬ ಸಣ್ಣ ಗ್ರಾಮದ ಪುಟ್ಟೇಗೌಡ – ಕಾಳಮ್ಮ ಅವರ ಆರು ಮಕ್ಕಳಲ್ಲಿ ಕೊನೆಯವರಾಗಿ 1928ರ ಜು.14ರಂದು ಮಾದೇಗೌಡರು ಜನಿಸಿದರು.
ಎತ್ತರದ ನಿಲುವು, ಎತ್ತರಕ್ಕೆ ತಕ್ಕ ಮೈಕಟ್ಟು, ಗೋಧಿ ಬಣ್ಣ, ಶ್ವೇತವಸ್ತ್ರ, ಮೊದಲ ನೋಟದಲ್ಲೇ ಗೌರವ ಮೂಡುವಂತಹ ಸುಲಕ್ಷಣ ರೂಪು. ಮಾತು ಕಡಿಮೆ, ಹಿಡಿದ ಕೆಲಸ ಮುಗಿಯುವವರೆಗೂ ಬಿಡದ ಛಲ, ನೇರ ನಡವಳಿಕೆ, ತಮಗೆ ಅನ್ನಿಸಿದ್ದನ್ನು ಯಾವ ಮುಲಾಜಿಗೂ ಒಳಗಾಗದೆ ಹೇಳುವ ಎದೆಗಾರಿಕೆ ಇವು ಗೌಡರ ಗುಣಧರ್ಮ ಲಕ್ಷಣ .
ಮಂಡ್ಯ ಮಣ್ಣಿನ ಹಮ್ಮಿಲ್ಲದ ಗುಣ ಸ್ವಭಾವ. ಕಳಕಳಿ ಜೀವ – ಜೀವನ ನಡೆಸಿದರು. ರೈತರು, ಕಾರ್ಮಿಕರು, ಜ್ಞಾನಿಗಳ ಬಗ್ಗೆ ಅಪಾರ ಪ್ರೀತಿ, ಕೆಲಸ ಕದಿಯುವವರನ್ನು ಕಂಡರೆ ಅಷ್ಟೇ ಸಿಡುಕು, ಮೂಗಿನ ತುದಿಯಲ್ಲೇ ಕೋಪ ಈ ಎಲ್ಲಾ ಗುಣಗಳನ್ನು ಒಂದುಗೂಡಿಸಿದರೆ ಬರುವ ವ್ಯಕ್ತಿತ್ವವೇ ಜಿ. ಮಾದೇಗೌಡರದು.
ಜನಸೇವೆಗೆ ಮುಡಿಪಾದ ಜನ ನಾಯಕ :
ಮಾದೇಗೌಡ ಹುಟ್ಟೂರು ಗುರುದೇವರಹಳ್ಳಿಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಅನುಕೂಲವಿರಲಿಲ್ಲ. ಆದ್ದರಿಂದ ಅವರ ತಾಯಿಯ ತವರೂರು ಮಂಡ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆದು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. ನಂತರ ಬೆಂಗಳೂರಿಗೆ ತೆರಳಿ ವಕೀಲ ಪದವಿ ಪಡೆದರು. ವಕೀಲ ಪದವಿ ಪಡೆದರೂ ವಕೀಲರಾದರೂ ಅಲ್ಲಿ ಸ್ಥಿರವಾಗಿ ನಿಲ್ಲಲಿಲ್ಲ. ಹಣ ಮಾಡುವ ವಕೀಲಿ ಹುದ್ದೆಗಿಂತ ಜನಸೇವೆ ಮಾಡುವ ಜನನಾಯಕ ಹುದ್ದೆ ಅವರನ್ನು ಕೈಬೀಸಿ ಕರೆಯಿತು.
ರಾಜಕೀಯ ಪ್ರವೇಶ:
1959ರಲ್ಲಿ ತಾಲೂಕು ಬೋರ್ಡ್ ಚುನಾವಣೆ ಬಂದಾಗ, ಅಂದು ಮಂಡ್ಯ ಮತ್ತು ಮದ್ದೂರಿನ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಕೆ.ವಿ. ಶಂಕರಗೌಡ ಮತ್ತು ಎಚ್.ಕೆ. ವೀರಣ್ಣಗೌಡರು ಕಾಂಗ್ರೆಸ್ ಪಕ್ಷದಲ್ಲಿ ಚಟುವಟಿಕೆಯಿಂದ ಓಡಾಡುತ್ತಿದ್ದ ಮಾದೇಗೌಡರನ್ನು ಕರೆದು, ತಾಲೂಕು ಬೋರ್ಡ್ ಚುನಾವಣೆಗೆ ನಿಲ್ಲಿಸಿದರು.
ಇದರಲ್ಲಿ ಗೆದ್ದು ಬಂದರು. ಇದು ಗೌಡರ ರಾಜಕೀಯದಲ್ಲಿ ಸಾಮಾನ್ಯವಾದ ಗೆಲುವಲ್ಲ. ಅವರ ಮುಂದಿನ ಗೆಲುವಿನ ಮಾಲೆಗೆ ನಾಂದಿಯಾಯಿತು. ನಂತರ ಮಾದೇಗೌಡರ ಬದುಕು ಮೂರು ದಶಕಗಳ ಕಾಲ ಬರೀ ಗೆಲುವು, ಗೆಲುವ, ಗೆಲುವಾಗಿತ್ತು.
1962 ಮೊದಲ ಬಾರಿಗೆ ಶಾಸಕ :
1962ರಲ್ಲಿ ಎಂ.ಎಲ್.ಎ. ಚುನಾವಣೆ ಬಂದಾಗ, ಮಳವಳ್ಳಿ ಕ್ಷೇತ್ರದ ಶಾಸಕರಾಗಿದ್ದ ಹಿಟ್ಟನಹಳ್ಳಿ ಕೊಪ್ಪಲಿನ ಎಚ್.ವಿ. ವೀರೇಗೌಡರು ಬಿಟ್ಟುಕೊಟ್ಟ ಸ್ಥಾನಕ್ಕೆ ಮಾದೇಗೌಡರು ನಿಂತು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಆಗ ಮಾದೇಗೌಡರಿಗೆ ಕೇವಲ 32 ವರ್ಷ.
ಮಳವಳ್ಳಿ, ಕಿರುಗಾವಲು ಕ್ಷೇತ್ರದ ಕೇಂದ್ರವಾದ ಕುಗ್ರಾಮ ಕಾಳಮುದ್ದನದೊಡ್ಡಿಯನ್ನು ಕೇಂದ್ರವನ್ನಾಗಿಟ್ಟುಕೊಂಡು ಒಂದೊಂದೇ ಜನಪರ ಕೆಲಸಗಳನ್ನು ಮಾಡ ತೊಡಗಿದರು.
ಕೃಷಿ ಕ್ಷೇತ್ರ, ಆರ್ಥಿಕ ಕ್ಷೇತ್ರ, ಶಿಕ್ಷಣ ಕ್ಷೇತ್ರಗಳ ಬಗ್ಗೆ ಗೌಡರು ಕೈಗೊಂಡ ಪ್ರಗತಿಪರ ಕೆಲಸಗಳು ಜನಮೆಚ್ಚುಗೆ ಗಳಿಸಿದ್ದವು. ಇದಕ್ಕೆ ಅವರು ಮತ್ತೆ ಮತ್ತೆ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಿದ್ದುದ್ದೇ ಪ್ರತ್ಯಕ್ಷ ಸಾಕ್ಷಿ.
6 ಬಾರಿ ಗೆಲವು :
ಚುನಾವಣಾ ಸಮಯದಲ್ಲಿ ಖರ್ಚಿಗೆಂದು ಗೌಡರಿಗೆ ಜನರೇ ಕಾಸು ಕೊಟ್ಟು ಮತವನ್ನೂ ಕೊಡುತ್ತಿದ್ದರು. 1962 ರಿಂದ 1989ರ ವರೆಗೆ ಮಾದೇಗೌಡರು ಸತತವಾಗಿ ಆರು ಬಾರಿ ಕಿರುಗಾವಲು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಇದು ಯಾವುದೇ ರಾಜಕಾರಣಿಗಳ ಬದುಕಿನಲ್ಲಿ ಮಹತ್ವದ ದಾಖಲೆಯೂ ಹೌದು. ಜನ ಅವರನ್ನು ಸೋಲಿಲ್ಲದ ಸರದಾರ ಎಂದು ಪ್ರೀತಿಯಿಂದ ಕರೆಯುತ್ತಿದ್ದರು.
ಆರ್. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಾದೇಗೌಡರು ಅರಣ್ಯ ಮತ್ತು ಗಣಿ ಅಭಿವೃದ್ಧಿ ಮಂತ್ರಿಗಳಾಗಿ ಗಮನಾರ್ಹ ಸೇವೆ ಸಲ್ಲಿಸಿದರು.
1989ರಲ್ಲಿ ಗೌಡರ ರಾಜಕೀಯ ಕಿರುಗಾವಲು ಕ್ಷೇತ್ರದಿಂದ ಮಂಡ್ಯ ಜಿಲ್ಲೆಗೆ ವಿಸ್ತರಿಸಿ ಸಂಸದರಾಗಿ ಆಯ್ಕೆಯಾದರು. ಮತ್ತೆ 1991ರಲ್ಲಿ ನಡೆದ ಮರು ಚುನಾವಣೆಯಲ್ಲೂ ಜನತೆ ಗೌಡರನ್ನು ಸಂಸದರಾಗಿ ಆಯ್ಕೆ ಮಾಡಿದರು. ಹೀಗೆ ಮೂರು ದಶಕಗಳ ಕಾಲ ಜನ ಗೌಡರಿಗೆ ಮತ ನೀಡಿ ಗೆಲ್ಲಿಸಿದರು. ಪ್ರತಿಯಾಗಿ ಮಾದೇಗೌಡರು ತಮ್ಮ ಕ್ಷೇತ್ರದ ಜಿಲ್ಲೆಯ ಜನತೆಗೆ ಶಾಲೆ, ಕಾಲೇಜು, ಕಾರ್ಖಾನೆ, ಆಸ್ಪತ್ರೆ, ದೇವಸ್ಥಾನ ಹೀಗೆ ಜನರ ಇಹ ಮತ್ತು ಪರಕ್ಕೆ ಬೇಕಾದುದನ್ನೆಲ್ಲ ಕೊಟ್ಟು ಅವರ ಋಣ ತೀರಿಸಿದ್ದಾರೆ.
ಕೆ.ಎಂ.ದೊಡ್ಡಿಯ ಬೆಳಕು
1962 ರಲ್ಲಿ ಕೆ.ಎಂ. ದೊಡ್ಡಿಯಲ್ಲಿ ಕಾಲೇಜಿರಲಿ ಒಂದು ಪ್ರೌಢಶಾಲೆಯೂ ಇರಲಿಲ್ಲ. ಬೃಹತ್ ಕಾರ್ಖಾನೆಯ ಮಾತಿರಲಿ, ಒಂದು ಒಳ್ಳೆಯ ರಸ್ತೆಯೂ ಇರಲಿಲ್ಲ. ಮಾದೇಗೌಡರ ಕೃಪಾಕಟಾಕ್ಷದಿಂದ ಇಂದು ಶ್ರೀ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ, ಭಾರತೀ ವಿದ್ಯಾ ಸಂಸ್ಥೆ, ನಾಲ್ಕು ಬ್ಯಾಂಕ್‌ಗಳು, ವಿಶಾಲವಾದ ಜೋಡಿ ರಸ್ತೆ, ಸುತ್ತಮುತ್ತಲಿನ ಹಳ್ಳಿಗಳಿಗೆ ಸಂಪರ್ಕ ರಸ್ತೆಗಳಾಗಿವೆ, ಹಳ್ಳಗಳಿಗೆ ಸೇತುವೆಗಳಾಗಿವೆ. ಒಟ್ಟಿನಲ್ಲಿ ಹಳ್ಳಿಗೆ ದಿಲ್ಲಿಯ ರೂಪ ಬಂದಿದೆ.
ಸಾಹಿತ್ಯ ಕ್ಷೇತ್ರದಲ್ಲೂ ಸೇವೆ :
ಜಿ. ಮಾದೇಗೌಡರು 1993 ರಲ್ಲಿ ಸಂಸದರಾಗಿದ್ದರು. ಪ್ರೊ. ಜಿ.ಟಿ. ವೀರಪ್ಪ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದಾಗ ಮಂಡ್ಯದಲ್ಲಿ 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಸಾಹಿತಿ ಚದುರಂಗ ಅವರು ಸಮ್ಮೇಳನಾಧ್ಯಕ್ಷರಾಗಿದ್ದರು. ಎಲ್ಲವು ಅಚ್ಚುಕಟ್ಟಾಗಿ ನಡೆದು, ಮಂಡ್ಯದವರ ಮನಸ್ಸು ಸಕ್ಕರೆಯಷ್ಟು ಸಿಹಿ ಎಂದು ಶ್ಲಾಘಿಸಿದರು.
ಕಾವೇರಿ ಪುತ್ರ
ಕಾವೇರಿ ನದಿ ಮಂಡ್ಯ ಜಿಲ್ಲೆಯ ಉಸಿರು. ಜಿಲ್ಲೆಯ ಬಹುಭಾಗ ಹಸಿರಾಗಿರುವುದೇ ಕಾವೇರಿ ಕೃಪೆಯಿಂದ. ಆದರೆ, ಸುಪ್ರೀಂಕೋರ್ಟ್‌ನ ತೀರ್ಮಾನದಿಂದ ಕಾವೇರಿ ನೀರು ಮಂಡ್ಯ ಜನತೆಗೆ ತಪ್ಪಿ ಹೋಗುವ ಸಾಧ್ಯತೆಯ ಸುಳಿವು ದೊರೆತೊಡನೆ ಜಿಲ್ಲೆಯ ರೈತರು ಕಾವೇರಿ ನೀರಿನ ಹಕ್ಕಿಗಾಗಿ ಮಂಡ್ಯ ರೈತರು ಬೀದಿಗೆ ಬಂದರು.
ತಮ್ಮ ಹೋರಾಟಕ್ಕೆ ಅವರು ನಾಯಕರಾಗಿ ಆಯ್ಕೆ ಮಾಡಿಕೊಂಡಿದ್ದು ಜಿ. ಮಾದೇಗೌಡರನ್ನು. ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಮಾದೇಗೌಡರ ಮೇಲೆ ಕಾವೇರಿ ಹೋರಾಟಕ್ಕೆ ಜನಗಳನ್ನು ಸಜ್ಜುಗೊಳಿಸುವ, ಸರ್ವ ಪಕ್ಷಗಳ ನಾಯಕರನ್ನು ಕಾವೇರಿ ಹೋರಾಟಕ್ಕೆ ಒಂದುಗೂಡಿಸುವ ಗುರುತರ ಜವಾಬ್ದಾರಿ ಗೌಡರ ಹೆಗಲ ಮೇಲೆ ಬಿತ್ತು. ಮಂಡ್ಯ, ಮೈಸೂರು, ಚಾಮರಾಜನಗರದ ರೈತಾಪಿ ಜನಕ್ಕೆ ಮಾದೇಗೌಡರೇ ಏಕಮಾತ್ರ ಆಶಾಕಿರಣವಾಗಿದ್ದರು. ಗೌಡರ ಮಾರ್ಗದರ್ಶನದಲ್ಲಿ 55 ದಿನಗಳ ಕಾಲ ರೈತರು ಪ್ರಚಂಡ ಅಹಿಂಸಾತ್ಮಕ ಪ್ರತಿಭಟನೆಯನ್ನು ಮಾಡಿ, ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.
ತಮ್ಮ ಇಳಿವಯಸ್ಸಿನಲ್ಲೂ ಕಾವೇರಿ ಸೇನೆ ಕಟ್ಟಿ, ಭೀಷ್ಮರಂತೆ ಅದರ ಸಾರಥ್ಯ ವಹಿಸಿ, ಪ್ರಾಮಾಣಿಕವಾಗಿ ರೈತರ ಹಿತ ಕಾಪಾಡುತ್ತಿರುವ ಗೌಡರನ್ನೂ ಜನ ಪ್ರೀತಿಯಿಂದ ಕಾವೇರಿ ಪುತ್ರ ಎಂದು ಕರೆದರು.
ರೈತರಿಗಾಗಿ ಜೈಲಿಗೆ ಹೋಗುವೆ
ಮಾದೇಗೌಡರ ನೇತೃತ್ವದಲ್ಲಿ ಜಿಲ್ಲೆಯ ರೈತರು ಸ್ವಯo ಸ್ಫೂರ್ತಿಯಿಂದ ಬೀದಿಗಿಳಿದಾಗ ಕಾಂಗ್ರೆಸ ಪಕ್ಷ ದಿಕ್ಕೆಟ್ಟು ಹೋಯಿತು. ಒಂದು ಕಡೆ ಸುಪ್ರೀಂಕೋರ್ಟ್ ತೀರ್ಮಾನ. ಇನ್ನೊಂದು ಕಡೆ ರೈತರ ಉಗ್ರ ಹೋರಾಟ. ಈ ಮಧ್ಯೆ ಗೌಡರು ತಮ್ಮ ಪಕ್ಷದ ಮುಖಂಡರನ್ನೇ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಪಕ್ಷಕ್ಕೆ ಗೌಡರು ಬಿಸಿತುಪ್ಪವಾದರು. ಅಂತಿಮವಾಗಿ ಮುಖ್ಯಮಂತ್ರಿಯೇ (ಎಸ್.ಎಂ.ಕೃಷ್ಣ) ಪಾದಯಾತ್ರೆಯಲ್ಲಿ ಮಂಡ್ಯಕ್ಕೆ ಬಂದು ತಮಿಳುನಾಡಿಗೆ ನೀರು ಬಿಡುವುದಿಲ್ಲವೆಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು. ಆದರೆ, ಮರುದಿನ ರಾತ್ರಿಯೇ ನೀರುಬಿಟ್ಟು ರೈತದ್ರೋಹಿ ಎಂಬ ಅಪಕೀರ್ತಿಗೆ ತುತ್ತಾದರು. ಇದರಿಂದ ಕೆಂಡಾಮಂಡಲವಾದ ಮಾದೇಗೌಡರು ರೈತಮಿತ್ರರ ಜೊತೆ ಆಮರಣಾಂತ ಉಪವಾಸ ಕುಳಿತು. ಜಿಲ್ಲೆಯಲ್ಲಿ ಕರ್ಪ್ಯೂ ಜಾರಿಗೆ ಬಂತು. ಅನೇಕರ ಬಂಧನವಾಯಿತು.
ಮಂಡ್ಯ ರೈತರು ಇಲಿಮರಿಗಳಲ್ಲ, ಅವರು ಸಿಂಹದ ಮರಿಗಳು, ರೈತ ವಿರೋಧಿ ಸರ್ಕಾರವನ್ನು ಮಟ್ಟ ಹಾಕುತ್ತಾರೆ ಎಂದು ಗೌಡರು ಮತ್ತೊಮ್ಮೆ ಗುಡುಗಿದರು. ಗೌಡರ ಬಂಧನಕ್ಕೆ ಆಜ್ಞೆಯಾಯಿತು. ರೈತರಿಗಾಗಿ, ನೀರಿಗಾಗಿ ಜೈಲಿಗೆ ಹೋಗಲು ಗೌಡರು ಸಿದ್ಧರಾದರು. ಗೌಡರನ್ನು ಜಾಮೀನಿನ ಮೇಲೆ ಬಿಡಿಸಲು ಮಂಡ್ಯದ ವಕೀಲರು ಮುಂದೆ ಬಂದಾಗ ನಾನು ರೈತರ ಜೊತೆ ಜೈಲಿನಲ್ಲೇ ಇರುತ್ತೇನೆ. ಜಾಮೀನು ಬೇಡ ಎಂದು ಅದನ್ನು ನಿರಾಕರಿಸಿದರು. ಕೋರ್ಟು, ಜೈಲುಗಳು ಗೌಡರ ಜನಪರ ಹೋರಾಟವನ್ನು ಸ್ವಲ್ಪವೂ ಕುಗ್ಗಿಸಲಿಲ್ಲ.
ಗೌಡರಿಗೆ ಸಂದ ಗೌರವ :
ಜಿ. ಮಾದೇಗೌಡರು ಕೆ.ವಿ. ಶಂಕರಗೌಡರ ನಂತರ ಮಂಡ್ಯವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದವರು. ಮಂಡ್ಯ ಜಿಲ್ಲೆಯ ಮರೆಯಲಾಗದ ಮಹಾನುಭಾವರಲ್ಲಿ ಮಾದೇಗೌಡರು ಎದ್ದು ಕಾಣುವ ವ್ಯಕ್ತಿತ್ವ.
ಗೌರವ ಡಾಕ್ಟರೇಟ್
ಜಿ.ಮಾದೇಗೌಡರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಆರೋಗ್ಯ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಣನೀಯ ಸಾಧನೆಗಾಗಿ ಪ್ರತಿಷ್ಠಿತ, ವಿಶ್ವಮಾನ್ಯ ಮೈಸೂರು ವಿಶ್ವವಿದ್ಯಾನಿಲಯವು 2012 ರ ಜನವರಿಯಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.
- ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗಕ್ಕೆ ಅರ್ಹತೆ ಇಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
- ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ವಾರ ಭಾರೀ ಮಳೆಯ ಮುನ್ಸೂಚನೆ
- ಡಿ.9 ರಿಂದ ಬೆಳಗಾವಿಯಲ್ಲಿ ಅಧಿವೇಶನ : ಯು ಟಿ ಖಾದರ್
- ವಯನಾಡಿನ ನೂತನ ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ
- ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನಕ್ಕೆ ಕೋರ್ಟ್ ಅನುಮೋದನೆ
More Stories
ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗಕ್ಕೆ ಅರ್ಹತೆ ಇಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ನವೆಂಬರ್ 28: ರಾಜ್ಯದ ಅಭಿವೃದ್ಧಿಗೆ ಮಹತ್ವದ ಸಚಿವ ಸಂಪುಟ ಸಭೆ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!